ಬೆಂಗಳೂರು (ಮೇ.14): ಸಿದ್ದರಾಮಯ್ಯ ಸರ್ಕಾರದ ಸಾಧನೆ ಪ್ರಶ್ನಿಸಿ ಮಾತನಾಡಿದ ವಿಶ್ವನಾಥ್ ಹೇಳಿಕೆ ಮೈತ್ರಿ ಧರ್ಮದಲ್ಲಿ ಕಿಡಿ ಹೊತ್ತಿಸುವ ಜೊತೆಗೆ, ಮೈಸೂರು ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ನಾಯಕರ ಒಳಬೇಗುದಿಗಳು ಮತ್ತೊಮ್ಮೆ ಬಹಿರಂಗಗೊಳ್ಳುವಂತೆ ಮಾಡಿದೆ.
ಮೈತ್ರಿ ಮೂಲಕ ಲೋಕಸಭಾ ಚುನಾವಣೆ ಎದುರಿಸಿದ್ದರೂ ಮೈಸೂರು, ಮಂಡ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ನಾಯಕರ ನಡುವಿನ ತಿಕ್ಕಾಟ ಸ್ಪೋಟವಾಗುತ್ತಲೆ ಇದ್ದವು. ಈಗ ಮತ್ತೊಮ್ಮೆ ವಿಶ್ವನಾಥ್ ಹೇಳಿಕೆ ಮೂಲಕ ಜಿಟಿಡಿ, ಸಿದ್ದರಾಮಯ್ಯ, ವಿಶ್ವನಾಥ್ ನಡುವಿನ ಮುನಿಸು ರಾಜ್ಯ ರಾಜಕೀಯದಲ್ಲಿ ಕಿಡಿ ಹೊತ್ತಿಸಿದೆ.
ವಿಶ್ವನಾಥ್ ಹೇಳಿಕೆಗೆ ಸೋಮವಾರ ಟ್ವೀಟ್ ಮೂಲಕ ಕಿಡಿಕಾರಿದ್ದ ಸಿದ್ದರಾಮಯ್ಯ, ಸಚಿವ ಜಿಟಿ ದೇವೇಗೌಡ ವಿರುದ್ದ ಕೂಡ ಅಸಮಾಧಾನ ಹೊರಹಾಕಿದ್ದರು. ಈ ಮೊದಲು ನನ್ನ ವಿರುದ್ಧ ಜಿಟಿ ದೇವೇಗೌಡ ನಂತರ ವಿಶ್ವನಾಥ್ ಹೊಟ್ಟೆ ಕಿಚ್ಚಿನ ಮಾತು ಆಡುತ್ತಿದ್ದಾರೆ ಎಂದು ತಿವಿದಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಡಿ ದೇವೇಗೌಡ , "ಸಿದ್ದರಾಮಯ್ಯ ವಿರುದ್ದ ನಾನು ಯಾವತ್ತು ಮಾತನಾಡಿಲ್ಲ. ಅವರ ಮೇಲೆ ಯಾವಾಗಲೂ ಗೌರವ ಇದೆ. ಅವರು ನನ್ನ ಬಗ್ಗೆ ಟ್ವೀಟ್ ಮಾಡಿದ್ದಾರಂತೆ. ಅದನ್ನ ನಾನು ನೋಡಿಲ್ಲ. ಅವರು ಮೊದಲು ಜಿಟಿಡಿ ಮಾತನಾಡಿದ್ರು ಈಗ ವಿಶ್ವನಾಥ್ ಮಾತನಾಡಿದ್ದಾರೆ ಎಂದು ಹೇಳಿದ್ದಾರಂತೆ. ಅವರು ಯಾಕೆ ನನ್ನ ಹೆಸರು ಹೇಳಿದ್ದಾರೋ ಗೊತ್ತಿಲ್ಲ," ಎಂದಿದ್ದರು.
ಜಿಟಿಡಿ ಹೇಳಿಕೆಗೆ ಇಂದು ಉತ್ತರಿಸಿರುವ ಮಾಜಿ ಸಿಎಂ ಈ ಎಲ್ಲಾ ಗೊಂದಲ, ಆರೋಪ-ಪ್ರತ್ಯಾರೋಪಗಳಿಗೆ ಮುನ್ನಡಿ ಬರೆದಿದ್ದು ಜಿಟಿ ದೇವೇಗೌಡ ಅವರ ಹೇಳಿಕೆ ಎಂದು ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.
ಇತ್ತೀಚೆಗೆ ಜಿಟಿಡಿ ನನ್ನ ವಿರುದ್ಧ ಮಾತನಾಡದಿದ್ದರೂ, ಈ ಹಿಂದೆ ಲೋಕಸಭಾ ಚುನಾವಣಾ ಮತದಾನದ ಬಳಿಕ ಮಾತನಾಡಿದ ಅವರು, ಜೆಡಿಎಸ್ನ ಕೆಲವು ಮತಗಳು ಬಿಜೆಪಿಗೆ ಬಿದ್ದಿದೆ ಎಂದಿದ್ದರು. ಈ ಹೇಳಿಕೆ ಅನಗತ್ಯವಾಗಿದ್ದು, ಇದರಿಂದಾಗಿ ನಮ್ಮ ಕಾರ್ಯಕರ್ತರು ಕೆರಳಿ, ಜೆಡಿಎಸ್ ವಿರುದ್ಧ ಮಾತನಾಡಲು ಶುರು ಮಾಡಿದರು ಎಂದು ಟ್ವೀಟ್ನಲ್ಲಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಮೈತ್ರಿ ನಾಯಕರ ಈ ರೀತಿ ಹೇಳಿಕೆಗಳೆ ಅನಗತ್ಯ ಗೊಂದಲ ಸೃಷ್ಟಿಸುತ್ತಿರುವುದು. ಈ ರೀತಿಯ ಕೆಲಸ ಸಮ್ಮಿಶ್ರ ಸರ್ಕಾರದಲ್ಲಿ ಮಾಡಬಾರದು ಎಂದಿದ್ದಾರೆ.
ಇದನ್ನು ಓದಿ: 'ಮೈತ್ರಿ ಧರ್ಮ ನನ್ನ ಬಾಯಿ ಕಟ್ಟಿಹಾಕಿದೆ'; ವಿಶ್ವನಾಥ್ ಹೇಳಿಕೆಗೆ ಸಿದ್ದರಾಮಯ್ಯ ಆಕ್ರೋಶ, ಮತ್ತೆ ತಿರುಗೇಟು ನೀಡಿದ ಜೆಡಿಎಸ್ ರಾಜ್ಯಾಧ್ಯಕ್ಷ
ಇದರ ಜೊತೆ ತಮ್ಮ ಸರ್ಕಾರದ ಸಾಧನೆಗಳ ಕುರಿತು ಟೀಕಿಸಿದ ಜೆಡಿಎಸ್ ರಾಷ್ಟ್ರಧ್ಯಕ್ಷರಿಗೆ ಮತ್ತೊಮ್ಮೆ ತಮ್ಮ ಆಡಳಿತಾವಧಿಯ ಯೋಜನೆಗಳನ್ನು ನೆನಪಿಸಿದ್ದಾರೆ. ನಮ್ಮ ಸರ್ಕಾರದಲ್ಲಿ ಜಾರಿಗೆ ತಂದ ಭಾಗ್ಯ ಯೋಜನೆಗಳು ತಾತ್ಕಲಿಕವಲ್ಲದ ಯೋಜನೆಗಳು. ಯಾವುದೇ ಸರ್ಕಾರ ಬಂದರೂ ನಿಲ್ಲಿಸದಂತಹ ಜನಪ್ರಿಯ ಯೋಜನೆಗಳು ಅವು. ನಮ್ಮ ಸರ್ಕಾರದ ವಿರುದ್ಧ ಟೀಕೆ ಮಾಡುವ ಮುನ್ನ ಈ ಯೋಜನೆಗಳು ನೆನಪಿನಲ್ಲಿಟ್ಟುಕೊಂಡು ಮಾತನಾಡಬೇಕು ಎಂದು ಎಚ್ಚರಿಸಿದ್ದಾರೆ.
ಸಿಎಂ ಯಾರೆಂಬ ಚರ್ಚೆಗೆ ತೆರೆ
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಒಟ್ಟಾಗಿ ಸರ್ಕಾರ ರಚಿಸಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ. ಕುಮಾರಸ್ವಾಮಿ ಐದು ವರ್ಷಗಳ ಕಾಲ ಸಿಎಂ ಆಗುವ ಕುರಿತು ಈಗಾಗಲೇ ನಿರ್ಧಾರವಾಗಿದೆ.
ಈಗ ಮತ್ತೆ ಲೋಕಸಭಾ ಚುನಾವಣೆ ಬಳಿಕ ಸಿಎಂ ಯಾರಾಗಲಿದ್ದಾರೆ ಎಂಬ ಚರ್ಚೆ ನಡೆಸುತ್ತಿರುವುದು ಅಪ್ರಸ್ತುತ. ನಮ್ಮ ಮೇಲಿನ ಅಭಿಮಾನದಿಂದ ಕಾರ್ಯಕರ್ತರು ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಲಿ ಎಂದು ಆಸೆ ಪಟ್ಟಿದ್ದಾರೆ. ಆದರೆ, ಅದು ಮುಂದಿನ ಸರ್ಕಾರದ ಅವಧಿಗೆ ಈಗಲ್ಲ. ಈ ಐದು ವರ್ಷಗಳ ಕಾಲ ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿರಲಿದ್ದಾರೆ ಎನ್ನುವ ಮೂಲಕ ಹುಟ್ಟು ಹಾಕಿರುವ ಚರ್ಚೆಗೆ ತೆರೆ ಎಳೆದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ