Siddaramaiah: ಆಕ್ಸಿಜನ್ ಕೊಡದ ಮೋದಿ, ಈಗ ಯೋಗ ಮಾಡೋಕೆ ಬಂದಿದ್ದಾರೆ: ಸಿದ್ದರಾಮಯ್ಯ ಕಿಡಿ

ಮೋದಿ ಈಗ ಬಂದಿದ್ದಾರೆ. ಕೊರೊನಾ ಕಾಲದಲ್ಲಿ ಆಕ್ಸಿಜನ್ ಕೊಡೋಕೆ ‌ಆಗದವರು. ಈಗ ಯೋಗ ಮಾಡೋಕೆ ಬಂದಿದ್ದಾರೆ. ಆಕ್ಸಿಜನ್ ಬಗ್ಗೆ ಪ್ರಧಾನಿಯವರು ಹೇಳಬೇಕು.

ಸಿದ್ದರಾಮಯ್ಯ (ಸಂಗ್ರಹ ಚಿತ್ರ)

ಸಿದ್ದರಾಮಯ್ಯ (ಸಂಗ್ರಹ ಚಿತ್ರ)

  • Share this:
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Modi) 2 ದಿನಗಳ ಕರ್ನಾಟಕ ಪ್ರವಾಸವನ್ನು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಟೀಕಿಸಿದರು. ಕುಮಾರಕೃಪಾದ ಸರ್ಕಾರಿ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕೊರೊನಾ (Corona) ಸಮಯದಲ್ಲಿ ಆಕ್ಸಿಜನ್​​ ನೀಡದ ಮೋದಿ ಈಗ ಯೋಗ ಮಾಡಲಿಕ್ಕೆ ಬರ್ತಿದ್ದಾರೆ ಎಂದು ಕಿಡಿಕಾರಿದರು. ಇವತ್ತು ಮೋದಿ ಅವರು ಅಂಬೇಡ್ಕರ್ ವಿವಿ ಕಟ್ಟಡವನ್ನು ಉದ್ಘಾಟನೆ ಮಾಡ್ತಿದ್ದಾರೆ. ಇದನ್ನ ಜಾರಿಗೆ ತಂದಿದ್ದು ಯಾರು? ನಾವು. ನಮ್ಮ ಅವಧಿಯಲ್ಲೇ ಜಮೀನು ‌ಕೊಟ್ಟು ತಂದಿದ್ದು, ಈಗ ಅದನ್ನು ಉದ್ಘಾಟನೆ ಮಾಡ್ತಿದ್ದಾರೆ. ಮೈಸೂರು ಬೆಂಗಳೂರು ಅಷ್ಟಪಥದ ರಸ್ತೆ ಮಾಡಿದ್ದು ಯಾರು? ನಾನು ನಾನು ಅಂತ ಸಂಸದ ಪ್ರತಾಪ್ ಸಿಂಹ ಓಡಾಡ್ತಿದ್ದಾರೆ. ಪ್ರಾಜೆಕ್ಟ್ ಅಪ್ರೂವ್ ಮಾಡಿದ್ದು ಆಸ್ಕರ್ ಫರ್ನಾಂಡಿಸ್. ಎಚ್ ಸಿ ಮಹದೇವಪ್ಪ ಕಾಳಜಿಯಿಂದ ರಸ್ತೆ ಆಗ್ತಿದೆ. ಈಗ ಪ್ರತಾಪ್ ಸಿಂಹ ನನ್ನದು ಅಂತ ಓಡಾಡ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಆಕ್ಸಿಜನ್ ಕೊಡೋಕೆ ‌ಆಗದವರು

ಮೋದಿ ಈಗ ಬಂದಿದ್ದಾರೆ. ಕೊರೊನಾ ಕಾಲದಲ್ಲಿ ಆಕ್ಸಿಜನ್ ಕೊಡೋಕೆ ‌ಆಗದವರು. ಈಗ ಯೋಗ ಮಾಡೋಕೆ ಬಂದಿದ್ದಾರೆ. ಆಕ್ಸಿಜನ್ ಬಗ್ಗೆ ಪ್ರಧಾನಿಯವರು ಹೇಳಬೇಕು. ೪೦% ಕಮೀಷನ್ ಬಗ್ಗೆ ದೂರು ಕೊಟ್ರು. ಗುತ್ತಿಗೆದಾರರ ಸಂಘ ಪ್ರಧಾನಿಗೆ ದೂರು ನೀಡಿತ್ತು. ಯಾಕೆ ‌ಚೌಕಿದಾರ್ ಇಲ್ಲಿಯವರೆಗೆ ಉತ್ತರ ಕೊಟ್ಟಿಲ್ಲ. ಸಬರಬನ್ ಯೋಜನೆ ಹೇಳುತ್ತಲೇ ಬರ್ತಿದ್ದಾರೆ. ಅನಂತ್ ಕುಮಾರ್ ಕಾಲದಿಂದ ಹೇಳ್ತಿದ್ದಾರೆ, ಆದರೆ ಯೋಜನೆ ಮಾತ್ರ ಏನೂ ಆಗಿಲ್ಲ. ಮೋದಿಯವರಿಂದ ರಾಜ್ಯಕ್ಕೆ ದೊಡ್ಡ ಅನ್ಯಾಯವಾಗಿದೆ. ಅವರ ಸರ್ಕಾರ ಕರ್ನಾಟಕದಲ್ಲಿದೆ. ಲೂಟಿ ಹೊಡೆಯುತ್ತಿದೆ, ಭ್ರಷ್ಟಾಚಾರ ಹೆಚ್ಚಾಗಿದೆ. ಇದಕ್ಕೆಲ್ಲ ಪ್ರಧಾನಿಯವರು ಅನುಮತಿ ಕೊಟ್ಟಿದ್ದಾರಾ? ಈ ನಮ್ಮ ಪ್ರಶ್ನೆಗೆ ಅವರು ಉತ್ತರ ಕೊಡಲಿ ಎಂದು ಸಿದ್ದರಾಮಯ್ಯ ಸವಾಲೆಸೆದರು.

ಇದನ್ನೂ ಓದಿ: PM Modi: ಕಾಂಗ್ರೆಸ್ ಸಾಧನೆ ಹೇಳಿ ಪ್ರಧಾನಿಗಳನ್ನು ಸಿದ್ದರಾಮಯ್ಯ ಸ್ವಾಗತಿಸಿದ್ದು ಹೀಗೆ ನೋಡಿ

ಹಠ ಹಿಡಿಯೋದು ಯಾಕೆ, ಅಗ್ನಿಪಥ ಯೋಜನೆ ಕೈಬಿಡಿ

ಕೇಂದ್ರದ ಅಗ್ನಿಪಥ್ ಯೋಜನೆ ವಿಚಾರವಾಗಿ ಪ್ರತಿಕ್ರಿಯಿಸಿದ್ದ ಸಿದ್ದರಾಮಯ್ಯನವರು, ನಾಲ್ಕು ವರ್ಷದವರೆಗೆ ಸೇರಿಸಿಕೊಳ್ತೇವೆ ಅಂತಾರೆ. ನಾಲ್ಕು ವರ್ಷದ ನಂತರ ಪಿಂಚಣಿ ಸಿಗಲ್ಲ, ಮುಂದೆ ನಮ್ಮ ಕಥೆ ಹೇಗೆ ಅಂತ ದೇಶದ ಯುವಕರು ಕೇಳ್ತಿದ್ದಾರೆ. ಇವರು ಯೋಜನೆ ಬಗ್ಗೆ ಹಠ ಹಿಡಿದು ಕೂತಿದ್ದೇಕೆ. ನಾಲ್ಕು ವರ್ಷದ ನಂತರ ತೆಗೆದುಬಿಡ್ತಾರೆ, ಆ ನಂತರ ಅವರಿಗೆ ಕೆಲಸ ಕೊಡಲ್ಲ. ಸೇನೆಗೆ ಸೇರುವವರು ಏನು ಮಾಡಬೇಕು. ನಾಲ್ಕು ವರ್ಷ ಮಾತ್ರ ಕೊಡ್ತಾರೆ, ೬ ತಿಂಗಳು ತರಬೇತಿಗೆ ಮುಗಿಯುತ್ತೆ. ಉಳಿಯೋದು ಮೂರುವರೆ ವರ್ಷ ಮಾತ್ರ. ಉದ್ಯೋಗಿಗಳು ಆಮೇಲೆ ಏನು ಮಾಡ್ಬೇಕು. ರಿಟೈರ್ಡ್ ಬೆನಿಫಿಟ್ ಏನೂ ಸಿಗಲ್ಲ. ಅದಕ್ಕೆ ಹಠ ಹಿಡಿಯೋದು ಯಾಕೆ, ಕೈಬಿಡಿ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ನಾಳೆ ಮೈಸೂರಿಗೆ ಮೋದಿ

ಪ್ರಧಾನಿ ನರೇಂದ್ರ ಮೋದಿ ಸ್ವಾಗತಕ್ಕೆ  ಅರಮನೆ ನಗರಿ ಮೈಸೂರು ರೆಡಿಯಾಗುತ್ತಿದ್ದು, ಸಾಂಸ್ಕೃತಿಕ ನಗರಿಯಲ್ಲಿ ಭಾರಿ ಪೊಲೀಸ್​ ಭದ್ರತೆ (Police Security) ಮಾಡಲಾಗುತ್ತಿದೆ. ಪ್ರಧಾನಿ ಮೋದಿ ಸಂಚರಿಸುವ ರಸ್ತೆಯಲ್ಲಿ ಪೊಲೀಸ್​ ಹೈಅಲರ್ಟ್​ ಮಾಡಿದ್ದಾರೆ. ಕೇಂದ್ರ ವಿಶೇಷ ಭದ್ರತಾ ಪಡೆಯಿಂದ ಭಾರಿ ಬಂದೋಬಸ್ತ್ ಮಾಡಲಾಗುತ್ತಿದೆ. ಮೋದಿ ನಾಳೆ ಬೆಂಗಳೂರಿಗೆ ಹಾಗೂ ಮೈಸೂರಿಗೆ ಆಗಮಿಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆ ಜೂ.20ರಂದು ಚಾಮುಂಡಿ ಬೆಟ್ಟಕ್ಕೆ (Chamundi hills) ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ. ಅಂದು ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 9ರವರೆಗೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಪ್ರಕಟಣೆ ಹೊರಡಿಸಿದ್ದಾರೆ. ಸಾರ್ವಜನಿಕ ನಿಷೇಧಿತ ಅವಧಿಯಲ್ಲಿ ಮೆಟ್ಟಿಲು ಮಾರ್ಗದಿಂದ ಚಾಮುಂಡಿ ಬೆಟ್ಟಕ್ಕೆ ಭಕ್ತರು ಮತ್ತು ಸಾರ್ವಜನಿಕರು ಬರುವುದು ನಿಷೇಧ. ಈ ಮೇಲ್ಕಂಡ ಪ್ರವೇಶ ನಿಷೇಧಿತ ಅವಧಿಯಲ್ಲಿ ತುರ್ತು ಸೇವಾ ವಾಹನಗಳನ್ನು ಹೊರತುಪಡಿಸಿ ಇತರೆ ಸಾರ್ವಜನಿಕ ಹಾಗೂ ಖಾಸಗಿ ವಾಹನಗಳ ಪ್ರವೇಶ ನಿರ್ಬಂಧ ಏರಲಾಗಿದೆ.
Published by:Kavya V
First published: