ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ನಾಯಿಮರಿಗೆ ಹೋಲಿಕೆ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಎರಡು ಪಕ್ಷಗಳ ನಡುವಿನ ನಾಯಕರ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಈ ನಡುವೆ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ ಅವರು, ಇದನ್ನು ಅನವಶ್ಯಕವಾಗಿ ವಿವಾದ ಮಾಡಲಾಗಿದೆ. ಪುಕ್ಕಲು ಸ್ವಭಾವದವರು, ಧೈರ್ಯ ಇಲ್ಲದವರು ಎನ್ನುವ ಅರ್ಥದಲ್ಲಿ ಹಳ್ಳಿ ಭಾಷೆಯಲ್ಲಿ ನಾಯಿ ಮರಿ ಎಂದಿದ್ದೇ ಹೊರತು ಮುಖ್ಯಮಂತ್ರಿ ಅವರನ್ನು ವ್ಯಕ್ತಿಗತವಾಗಿ ನಿಂದಿಸುವ ದುರುದ್ದೇಶ ಖಂಡಿತಾ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಟ್ವಿಟರ್ನಲ್ಲಿ ಸರಣಿ ಟ್ವೀಟ್ ಮಾಡಿ ಸ್ಪಷ್ಟನೆ ನೀಡಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಪ್ರಧಾನಿ ಮೋದಿ ಅವರೆದುರು ಮಾತನಾಡುವ ಧೈರ್ಯ ಇಲ್ಲ, ಬೇರೆಯವರ ಧಮ್, ತಾಕತ್ ಪ್ರಶ್ನಿಸುವ ಬೊಮ್ಮಾಯಿಯೇ ಸ್ವತಃ ಮೋದಿಯವರನ್ನು ಕಂಡ್ರೆ ಹೆದರುತ್ತಾರೆ ಎಂಬರ್ಥದಲ್ಲಿ ಮಾತನಾಡಿದ್ದೆ. ಇದನ್ನು ಅನವಶ್ಯಕವಾಗಿ ವಿವಾದ ಮಾಡಲಾಗಿದೆ. ಪುಕ್ಕಲು ಸ್ವಭಾವದವರು, ಧೈರ್ಯ ಇಲ್ಲದವರು ಎನ್ನುವ ಅರ್ಥದಲ್ಲಿ ಹಳ್ಳಿ ಭಾಷೆಯಲ್ಲಿ ನಾಯಿ ಮರಿ ಎಂದಿದ್ದೇ ಹೊರತು ಮುಖ್ಯಮಂತ್ರಿ ಅವರನ್ನು ವ್ಯಕ್ತಿಗತವಾಗಿ ನಿಂದಿಸುವ ದುರುದ್ದೇಶ ಖಂಡಿತಾ ಇರಲಿಲ್ಲ.
ನನ್ನನ್ನು ಟಗರು ಟಗರು ಅಂತಾರೆ
ಪ್ರಾಣಿ-ಪಕ್ಷಿ-ಹೂ-ಹಣ್ಣುಗಳನ್ನು ಅವುಗಳ ಸ್ವಭಾವಗಳ ಸಾಮ್ಯತೆಗೆ ಅನುಗುಣವಾಗಿ ಮನುಷ್ಯರಿಗೆ ಹೋಲಿಸುವುದು ಜನಪದ ಸಂಸ್ಕೃತಿ. ಯಾವ ಪ್ರಾಣಿ-ಪಕ್ಷಿಯೂ ಕೀಳೂ ಅಲ್ಲ, ಮೇಲೂ ಅಲ್ಲ. ಹುಲಿ ಮನುಷ್ಯರನ್ನು ಕೊಂದು ತಿನ್ನುವ ಪ್ರಾಣಿ.
ಬಿಜೆಪಿ ನಾಯಕರೇ ಬಿಎಸ್ ಯಡಿಯೂರಪ್ಪ ಅವರನ್ನು "ರಾಜಾ ಹುಲಿ" ಎಂದು ಬಣ್ಣಿಸುತ್ತಾರೆ. ಇದನ್ನೂ ಅವಮಾನ ಎಂದು ತಿಳಿದುಕೊಳ್ಳಬಹುದಲ್ಲಾ? ಟಿವಿ ಚಾನೆಲ್ನವರು ಪ್ರತಿದಿನ ನನ್ನನ್ನು 'ಟಗರು' 'ಟಗರು' ಎಂದು ಹಾಡು ಕಟ್ಟಿ ತೋರಿಸುತ್ತಾರೆ. ಟಗರು ಗುಮ್ಮುತ್ತೆ, ನಾನು ಯಾರಿಗೆ ಗುಮ್ಮಿದ್ದೇನೆ? ನಾನೂ ಅವಮಾನ ಮಾಡಿದ್ದಾರೆ ಎಂದು ಕೋಪಮಾಡಿಕೊಳ್ಳಬಹುದಲ್ಲಾ?
ಸಾವಿರಾರು ಮಂದಿ ಹತ್ಯೆಗೀಡಾದ ಗುಜರಾತ್ ಗಲಭೆ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ "ಕಾರಿಗೆ ಅಡ್ಡಬಂದು ನಾಯಿಮರಿ ಸತ್ತರೆ ಏನು ಮಾಡೋಣ?" ಎಂದು ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಹೇಳಿದ್ದರು. ಇದೂ ವಿವಾದವಾಗಿತ್ತಲ್ಲವೇ?
Dog is known for its loyalty and puppy is know for its cowardness.
Can we call @BSBommai a lion or tiger even when he is silent despite @narendramodi's injustice to Karnataka?
— Siddaramaiah (@siddaramaiah) January 5, 2023
ವಿಶೇಷ ಅನುದಾನ ತರಲು ಬೊಮ್ಮಾಯಿ ವಿಫಲರಾಗಿದ್ದರು
ಬಸವರಾಜ ಬೊಮ್ಮಾಯಿ ಅವರು ನಮ್ಮ ಒಡನಾಟದವರು, ಅವರೇನು ಬೇಸರ ಮಾಡಿಕೊಂಡಿರಲಾರರು. ಸುತ್ತಲಿನ ವಂದಿ-ಮಾಗದರು ಅವರನ್ನು ಓಲೈಸಲಿಕ್ಕಾಗಿ ಖಂಡಿಸಿ, ಮಂಡಿಸಿ ವಿವಾದ ಮಾಡುತ್ತಿದ್ದಾರೆ. ಇಂತಹವರ ಬಗ್ಗೆ ಬೊಮ್ಮಾಯಿ ಅವರು ಜಾಗರೂಕರಾಗಿರುವುದು ಒಳ್ಳೆಯದು.
ಇದನ್ನೂ ಓದಿ: Janardhan Reddy: ಜನಾರ್ದನ ರೆಡ್ಡಿ ಆಸ್ತಿ ಜಪ್ತಿಗೆ ಮೀನಮೇಷ ಎಣಿಸ್ತಿದ್ಯಾ ಸರ್ಕಾರ? ಹೈ ಕೋರ್ಟ್ ಮೊರೆ ಹೋದ ಸಿಬಿಐ
ನಮಗೆ ನಾಡಿನ ಹಿತ ಮುಖ್ಯ. 15ನೇ ಹಣಕಾಸು ಆಯೋಗ ಕರ್ನಾಟಕಕ್ಕೆ ಶಿಫಾರಸು ಮಾಡಿದ್ದ 5,495 ಕೋಟಿ ವಿಶೇಷ ಅನುದಾನವನ್ನು ನೀಡಲು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನಿರಾಕರಿಸಿದರು, ಅವರೊಂದಿಗೆ ಮಾತನಾಡಿ ಈ ಅನುದಾನ ತರಲು ಬೊಮ್ಮಾಯಿ ಅವರಿಂದ ಸಾಧ್ಯವಾಗಿಲ್ಲ. ಇದರಿಂದ ನಷ್ಟವಾಗಿದ್ದು ರಾಜ್ಯಕ್ಕಲ್ಲವೇ?
ರಾಜ್ಯಕ್ಕೆ ಸಿಗಬೇಕಾದ ಅನುದಾನ ಸರಿಯಾದ ಪ್ರಮಾಣದಲ್ಲಿ ಸಿಕ್ಕಿಲ್ಲ, ಪೂರ್ಣಪ್ರಮಾಣದ ಜಿಎಸ್ಟಿ ಪರಿಹಾರ ಬಂದಿಲ್ಲ, ಬರ, ನೆರೆ ಪರಿಹಾರದ ಹಣ ಬಂದಿಲ್ಲ. ರಾಜ್ಯದ ಮುಖ್ಯಮಂತ್ರಿಗಳು ಸ್ಥಾನದಲ್ಲಿರೋರು ಇದನ್ನೆಲ್ಲ ಗಟ್ಟಿ ಧ್ವನಿಯಲ್ಲಿ ಕೇಳದೆ ಹೆದರಿ ಸುಮ್ಮನಿದ್ರೆ ನಾಡಿಗೆ ಅನ್ಯಾಯವಾಗಲ್ವಾ ಅಂತ ಪ್ರಶ್ನೆ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ