ಜಿಂದಾಲ್​ನಲ್ಲೇ ಕೂತು ರಣತಂತ್ರ ಹೆಣೆಯುತ್ತಿರುವ ಸಿದ್ದರಾಮಯ್ಯ; ಅಹಿಂದ ಚಳವಳಿಯಾ, ಇಲ್ಲಾ ಬೇರೆ ಹೋರಾಟಗಳಾ?

2023 ಕ್ಕೆ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರೋಕೆ ಸಿದ್ದರಾಮಯ್ಯ ಅಹಿಂದ ಜಪ ಮಾಡೋಕೆ ಹೊರಟಿದ್ದಾರೆ. ಅಹಿಂದ ಸಮಾವೇಶ ಕುರಿತು ತಮ್ಮ ಆಪ್ತರಿಗೆ ಸಿದ್ಧತೆ ಆರಂಭಿಸುವಂತೆ ಅವರು ಸೂಚಿಸಿದ್ದಾರೆನ್ನಲಾಗಿದೆ.

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ಇತರ ಕಾಂಗ್ರೆಸ್ ಮುಖಂಡರು

ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಹಾಗೂ ಇತರ ಕಾಂಗ್ರೆಸ್ ಮುಖಂಡರು

  • Share this:
ಬೆಂಗಳೂರು, ಆ. 28: ಕರ್ನಾಟಕದಲ್ಲಿ 2013ರಿಂದ 2018 ತನಕ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿದ್ದ  ಸಿದ್ದರಾಮಯ್ಯ, ಈಗ ಮತ್ತೆ  ಕಾಂಗ್ರೆಸ್ ಪಕ್ಷವನ್ನ ಕರ್ನಾಟಕದಲ್ಲಿ ಅಧಿಕಾರಕ್ಕೆ ತರಲು‌ ಅಹಿಂದ ಜಪ ಮಾಡ್ತಿದ್ದಾರೆ. ಅಧಿಕಾರಕ್ಕೆ ಬರಬೇಕು ಅಂತ ಹೇಳಿದ್ರೆ ರಾಜ್ಯದಲ್ಲಿ ಚದುರಿಹೋಗಿರುವ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ದಲಿತರನ್ನ‌ಒಗ್ಗೂಡಿಸಬೇಕಾಗಿದೆ. ಈಗ ಆ ಪ್ರಯತ್ನಕ್ಕೆ ಸಿದ್ದರಾಮಯ್ಯ ಕೈಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಅಹಿಂದ ಸಮಾವೇಶಗಳನ್ನ ನಡೆಸೋಕೆ ಮುಂದಾಗಿದ್ದಾರೆ. ಸದ್ಯ ಬೆಂಗಳೂರಿನ ಹೊರವಲಯದಲ್ಲಿ ಪ್ರಕೃತಿ ‌ಚಿಕಿತ್ಸೆಗೆಂದು ಜಿಂದಾಲ್ ಸೇರಿರುವ ಸಿದ್ದರಾಮಯ್ಯ, ಅಲ್ಲಿಯೇ ಸಮಾವೇಶದ ರೂಪುರೇಷೆಗಳ ಬಗ್ಗೆ ಸಿದ್ಧತೆ ಮಾಡ್ತಾಯಿದ್ದಾರೆ ಎನ್ನಲಾಗಿದೆ. ಅಹಿಂದದ ಸಣ್ಣ ಸಣ್ಣ ಸಮುದಾಯಗಳನ್ನ ಪ್ರತಿನಿಧಿಸುವ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ. ಜಿಲ್ಲಾ ಮಟ್ಟದಲ್ಲಿ ತಮ್ಮ ಸಮುದಾಯಗಳ ಮುಖಂಡರ ಸಭೆಗಳನ್ನ ನಡೆಸಿ ಅವರ ಸಲಹೆ,ಅಭಿಪ್ರಾಯಗಳನ್ನ ಪಡೆಯುವಂತೆ ಈ ನಾಯಕರಿಗೆ ಸಿದ್ದರಾಮಯ್ಯ ಸೂಚಿಸಿದ್ದಾರೆ.

ಹೆಚ್‌.ಸಿ. ಮಹದೇವಪ್ಪ, ಜಮೀರ್ ಅಹ್ಮದ್, ಹೆಚ್.ಎಂ. ರೇವಣ್ಣ, ಪುಟ್ಟರಂಗ ಶೆಟ್ಟಿ, ಎಂಡಿ ಲಕ್ಷ್ಮೀನಾರಾಯಣ, ಹೆಚ್. ಆಂಜನೇಯ ಸೇರಿದಂತೆ ವಿವಿಧ ಸಮುದಾಯಗಳ ನಾಯಕರಿಗೆ ಈ ಬಗ್ಗೆ ವಿವರಿಸಿದ್ದಾರೆ. ಜಿಂದಾಲ್​ನಿಂದ ಹೊರಬರುತ್ತಲೇ ಇದಕ್ಕೊಂದು ಸ್ಪಷ್ಟ ರೂಪನೀಡೋಕೆ ಸಿದ್ದರಾಮಯ್ಯ ತುದಿಗಾಲಲ್ಲಿ ನಿಂತಿದ್ದಾರೆ. 2013ರಲ್ಲಿ ಅಹಿಂದ ಹೋರಾಟದ ಮೂಲಕವೇ ಕಾಂಗ್ರೆಸ್ ಅಧಿಕಾರ ಹಿಡಿದಿತ್ತು. ಪಕ್ಷದೊಳಗೆ ಅಹಿಂದ ಸಮಾವೇಶ ನಡೆಸೋಕೆ ವಿರೋಧವಿತ್ತು. ಆದರೂ ಸಿದ್ದರಾಮಯ್ಯ ಸೈಲೆಂಟಾಗಿ ಅಹಿಂದ ಸಮಾವೇಶಗಳನ್ನ ಆಯೋಜಿಸಿ‌ ಅಹಿಂದ ನಾಯಕರಾಗಿ ‌ಹೊರಹೊಮ್ಮಿದ್ದರು. ಬಿಜೆಪಿಯಲ್ಲಿನ ಕೆಲ ಬೆಳವಣಿಗೆಗಳು ಪೂರಕವಾದ್ದರಿಂದ ಅಹಿಂದ ವರ್ಗಗಳು ಒಟ್ಟುಗೂಡಿದ್ದರಿಂದ ಅಧಿಕಾರ ಹಿಡಿದಿದು ಕರ್ನಾಟಕದ ಸಿಎಂ ಕೂಡ ಆದ್ರು. ತದ ನಂತರ 2018 ರಲ್ಲಿ ಅಹಿಂದ ಪುನರಾವರ್ತನೆಗೆ ಸಿದ್ದರಾಮಯ್ಯ ಮನಸ್ಸು ಮಾಡಿದ್ರೂ ಹಲವಾರು ಕಾರಣಗಳಿಂದ ಆ ಕೆಲಸ ಆಗಲಿಲ್ಲ.

2018ರಲ್ಲಿ ಕಾಂಗ್ರೆಸ್​ನ ಚುನಾವಣಾ ಸೋಲಿನ ಬಳಿಕ ಅಹಿಂದ ಸಮುದಾಯಗಳೂ ವಿಭಜನೆಯಾದವು. ಕಾಂಗ್ರೆಸ್ ಪರವಾಗಿದ್ದ ದಲಿತರಲ್ಲಿ ಎಡಗೈ ಸಮುದಾಯಗಳು ಬಿಜೆಪಿಯತ್ತ ವಾಲಿದವು. ಒಬಿಸಿಯಲ್ಲಿನ ನೇಕಾರರು, ಎಸ್​ಟಿ ಸಮುದಾಯ ಕೂಡ ಅತ್ತಲೇ ತಿರುಗಿತು. ಯಾದವ, ಹೂಗಾರ, ಕುಂಬಾರ, ಉಪ್ಪಾರ ಸೇರಿದಂತೆ ಸಣ್ಣ ಸಮುದಾಯಗಳು ಬಿಜೆಪಿಯತ್ತ ವಾಲಿಕೊಂಡವು. ಕಾಂಗ್ರೆಸ್ ತನ್ನ ಮತ ಬ್ಯಾಂಕನ್ನ ಕಳೆದುಕೊಳ್ಳಬೇಕಾಯ್ತು. ಹಾಗಾಗಿ‌ ಚದುರಿರುವ ಸಮುದಾಯಗಳನ್ನ ಒಟ್ಟುಗೂಡಿಸೋಕೆ ಸಿದ್ದರಾಮಯ್ಯ ಮತ್ತೆ ಪ್ರಯತ್ನ ನಡೆಸಿದ್ದಾರೆ. ಈಗಾಗಲೇ ಪಕ್ಷದ ವರಿಷ್ಠ ನಾಯಕ ರಾಹುಲ್ ಗಾಂಧಿ ಜೊತೆಯೂ ಚರ್ಚಿಸಿದ್ದಾರೆ. ಅಲ್ಲಿಂದ ಅನುಮತಿಗಾಗಿ ಕಾದು ಕುಳಿತಿದ್ದಾರೆ. ಆದರೆ ರಾಜ್ಯದ ಕೆಲವು ನಾಯಕರು ಅಹಿಂದ ಸಮಾವೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಹಿಂದ ಸಮಾವೇಶ ನಡೆಸಿದರೆ ಮೇಲ್ವರ್ಗಗಳಾದ ಲಿಂಗಾಯತ, ಒಕ್ಕಲಿಗರನ್ನ ಸೆಳೆಯುವುದು ಕಷ್ಟ. ಪ್ರಸ್ತುತ ಯಡಿಯೂರಪ್ಪ ಬಿಜೆಪಿಯಲ್ಲಿ‌ಮೂಲೆ ಗುಂಪಾಗ್ತಿರೋದ್ರಿಂದ ಲಿಂಗಾಯತ ಸಮುದಾಯ ಕಾಂಗ್ರೆಸ್​ನತ್ತ ವಾಲುತ್ತಿದೆ. ಇಂತಹ ವೇಳೆ ಅಹಿಂದ ನಡೆಸಿದರೆ ಆ ಸಮುದಾಯದ ಮತಗಳನ್ನ ಕಳೆದುಕೊಳ್ಬೇಕಾಗುತ್ತದೆ ಎಂದು ಹೈಕಮಾಂಡ್​ಗೆ ದೂರು ಸಲ್ಲಿಸಿದ್ದಾರೆ. ಹೀಗಾಗಿ ವರಿಷ್ಠರು ಕೂಡ ಅಹಿಂದ ಸಮಾವೇಶ ನಡೆಸೋಕೆ ಸದ್ಯ ಅನುಮತಿ ನೀಡಿಲ್ಲ.

ಇದನ್ನು ಓದಿ: Mysuru Gang Rape Case: ರೇಪ್​ ಕೇಸ್ ಸಂಬಂಧ ನಾಲ್ವರು ಶಂಕಿತರು ವಶಕ್ಕೆ; ಅಜ್ಞಾತ ಸ್ಥಳದಲ್ಲಿ ವಿಚಾರಣೆ

ಆದ್ರೆ ಸಿದ್ದರಾಮಯ್ಯ ಅಹಿಂದ ಸಮಾವೇಶದ ಅನಿವಾರ್ಯತೆ ಕಾಂಗ್ರೆಸ್​ಗೆ ಇದೆ ಮನವರಿಕೆ ಮಾಡಿಕೊಡುವ ಸಲುವಾಗಿ ಜಿಂದಾಲ್​ನಿಂದ ವಾಪಸಾಗುತ್ತಲೇ ದೆಹಲಿಗೆ ಭೇಟಿ ನೀಡೋಕೆ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ. ಸಮಾವೇಶಗಳನ್ನ ನಡೆಸೋಕೆ ಹೈಕಮಾಂಡ್ ಒಪ್ಪಿಗೆಗೆ ಪ್ರಯತ್ನ ನಡೆಸಿ ಈ ಕುರಿತು ಕೈ ನಾಯಕರ ಜೊತೆಗೆ ಮಾತುಕತೆ ನಡೆಸಲಿದ್ದಾರೆ. ಒಂದು ವೇಳೆ ಹೈ ಕಮಾಂಡ್ ಒಪ್ಪಿಗೆ ನೀಡಲಿಲ್ಲವಾದ್ರೆ, ಜಿಂದಾಲ್ ನಿಂದ ಹೊರಬರುತ್ತಲೇ ಅಹಿಂದ ಹೆಸರಿನಡಿ ಅಲ್ಲವಾದರೂ ಬೇರೆ ಹೆಸರಿನಲ್ಲಿ ಸಮಾವೇಶ ನಡೆಸೋಕೆ ಹೈಕಮಾಂಡ್ ಒಪ್ಪಿಗೆ ಪಡೆಯೋಕೆ ನಿರ್ಧರಿಸಿದ್ದಾರೆ. ಆದ್ರೆ ಪ್ರಸ್ತುತ ಕೋವಿಡ್ ಇರೋದ್ರಿಂದ ಸಮಾವೇಶ ನಡೆಸೋದು ಸ್ವಲ್ಪ ಆಡಚಣೆ ಆಗಬಹುದು. ಆದ್ರೆ ಜಿಲ್ಲಾಮಟ್ಟದಲ್ಲಿ ಮುಖಂಡರ ಸಭೆ ನಡೆಸೋಕೆ ಚಿಂತನೆ ನಡೆಸಿದ್ದಾರೆ.

ಒಟ್ನಲ್ಲಿ ಸಿದ್ದರಾಮಯ್ಯ ಮತ್ತೊಮ್ಮೆ ಅಹಿಂದ ಜಪ ಮಾಡ್ತಿದ್ದಾರೆ. ಸಮಾವೇಶ ಗಳನ್ನ ನಡೆಸೋಕೆ ಚಿಂತನೆ ನಡೆಸಿದ್ದಾರೆ. ಜಿಂದಾಲ್ ನಲ್ಲಿ ಕುಳಿತೇ ಸ್ಕೆಚ್ ರೆಡಿಮಾಡಿಕೊಳ್ತಿದ್ದಾರೆ. ಆದ್ರೆ ಹೈಕಮಾಂಡ್ ಸಿದ್ದರಾಮಯ್ಯನವರ ಆಸೆಗೆ ಒಪ್ಪಿಗೆ ನೀಡುತ್ತಾ..? ಏಕೆಂದರೆ ಅಹಿಂದ ನಾಯಕ ಸಿದ್ದರಾಮಯ್ಯ ಈ ಸಮಾವೇಶಗಳಿಂದ ಮೇಲ್ವರ್ಗದ ಮತಗಳನ್ನ ಕಳೆದುಕೊಳ್ಳೋಕೆ ರಾಜ್ಯ ನಾಯಕರಿಗೂ ಇಷ್ಟವಿಲ್ಲ. ಹೀಗಾಗಿ ಜಿಂದಾಲ್ ನಿಂದ ವಾಪಸ್ ಆದ ಬಳಿಕ ಏನ್ಮಾಡ್ತಾರೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ಅಹಿಂದಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡುತ್ತಾ..? ಒಂದು ವೇಳೆ ಅಹಿಂದ ಸಮಾವೇಶ ನಡೆಸೋಕೆ ಕಾಂಗ್ರೆಸ್ ಹೈ ಕಮಾಂಡ್ ಒಪ್ಪಿಗೆ ನೀಡಿದ್ರೂ ಪಕ್ಷದಲ್ಲಿನ ರಾಜ್ಯ ನಾಯಕ ಸಹಕಾರ ಸಿಗುತ್ತಾ..? ಕಾದು ನೋಡಬೇಕು.

ವರದಿ: ಸಂಜಯ್ ಎಂ ಹುಣಸನಹಳ್ಳಿ
Published by:Vijayasarthy SN
First published: