ಬಾಗಲಕೋಟೆ: ಅಯ್ಯೋ ನನಗೆ ನಾಮ ಕಂಡರೆ ಭಯ, ನಾನು ನಾಮ ಹಚ್ಚಿಕೊಳ್ಳಲ್ಲ ಎನ್ನುತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ಹಣೆಗೆ ನಾಮ ಇಡಿಸಿಕೊಂಡಿದ್ದಾರೆ. ಈ ಹಿಂದೆ ಯಾವುದೇ ಸಮಾರಂಭ, ಪೂಜೆ ಅಥವಾ ಜಾತ್ರಾ ಮಹೋತ್ಸವಗಳಲ್ಲಿ ಭಾಗಿಯಾದರೆ ನಾಮ ಹಾಕಿಕೊಳ್ಳುವುದಿಲ್ಲ ಎನ್ನುವ ಮೂಲಕ ಮೂಲಭೂತವಾದ ಮತ್ತು ಕಠೋರ ಹಿಂದುತ್ವದ ವಿರುದ್ಧ ನಿಲುವು ತಾಳುತ್ತಿದ್ದ ಸಿದ್ದರಾಮಯ್ಯ ಈಗ ಬದಲಿಗಾದ್ದಾರ? ಎಂಬ ಪ್ರಶ್ನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿದೆ.
ಪ್ರತಿಬಾರಿ ಕ್ಷೇತ್ರದ ಕಾಮಗಾರಿ, ಭೂಮಿ ಪೂಜೆ ವೇಳೆ ನಾಮ ಹಚ್ಚಿಸಿಕೊಳ್ಳೋದನ್ನು ನಿರಾಕರಿಸುತ್ತಿದ್ದ ಸಿದ್ದರಾಮಯ್ಯ ಅವರು ಇಂದು ಬಾದಾಮಿಯಲ್ಲಿ ನಡೆದ ಬೃಹತ್ ಕುಡಿಯುವ ನೀರಿನ ಯೋಜನೆ ಶಂಕುಸ್ಥಾಪನೆ ವೇಳೆ ನಾಮ ಹಚ್ಚಿಸಿಕೊಂಡಿದ್ದಾರೆ. ಈ ಮೂಲಕ ಇಷ್ಟು ದಿನ ಸಾರ್ವಜನಿಕವಾಗಿ ಸಿದ್ದರಾಮಯ್ಯ ಅವರ ಮೇಲಿದ್ದ ಅಭಿಪ್ರಾಯಕ್ಕೊಂದು ಇತಿಶ್ರೀ ಹಾಕಿದ್ದಾರೆ.
ಇಂದು ನಡೆದ ಸಮಾರಂಭದಲ್ಲಿ ಅರ್ಚಕರಿಂದ ನಾಮ ಹಚ್ಚಿಸಿಕೊಳ್ಳುವ ಮೂಲಕ ಸಿದ್ದರಾಮಯ್ಯ ಅಚ್ಚರಿಮೂಡಿಸಿದರು ಎಂದರೆ ಅತಿಶಯೋಕ್ತಿಯಾಗದು. ಬಾದಾಮಿ ಪಟ್ಟಣದ ಕಾಳಿದಾಸ ಶಿಕ್ಷಣ ಸಂಸ್ಥೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಿದ್ದರು. ಈ ವೇಳೆ ಅರ್ಚಕರು ಅವರ ಮುಂದೆ ಬಂದು ನಾಮ ಹಚ್ಚಲು ಮುಂದಾದರು. ಈ ಹಿಂದಿನಂತೆ ನಾಮ ಹಚ್ಚಬೇಡ ಅನ್ನುತ್ತಾರೆ ಎಂದು ಎಲ್ಲರೂ ಅಂದುಕೊಂಡಿದ್ದರೆ ಸಿದ್ದರಾಮಯ್ಯ ಹಣೆ ಮುಂದೆ ಮಾಡಿದರು.
ಇದನ್ನೂ ಓದಿ: ಕನ್ನಡ ರಾಜ್ಯೋತ್ಸವ ವಿರೋಧಿಸುವ ನಾಡದ್ರೋಹಿಗಳ ವಿರುದ್ಧ ದೇಶದ್ರೋಹ ಕೇಸ್ ದಾಖಲಿಸಬೇಕು: ನ್ಯಾ. ಮಂಜುನಾಥ್
ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಸಿಟಿ ರವಿಯವರಿಗೆ ತಿರುಗುಬಾಣವಾಗಿ ಸಿದ್ದರಾಮಯ್ಯ ಉದ್ದ ನಾಮದ ವಿರುದ್ಧ ಮಾತನ್ನಾಡಿದ್ದರು. "ಉದ್ದ ನಾಮ ಹಾಕುವವರು ನನಗೆ ರಾಕ್ಷಸರ ರೀತಿ ಕಾಣಿಸ್ತಾರೆ. ಉದ್ದನಾಮ ಇಟ್ಟುಕೊಂಡವರನ್ನು ಕಂಡರೆ ನಮಗೆ ಭಯ. ಆ ರವಿ ಇಟ್ಟುಕೊಳ್ಳುತ್ತಾನಲ್ಲ, ಆ ರೀತಿ ನಾಮ ಇಟ್ಟುಕೊಳ್ಳುವವರು," ಎಂದು ಸಿದ್ದರಾಮಯ್ಯ ಹೇಳಿದ್ದರು.
ಇದನ್ನೂ ಓದಿ: ಬದಲಾದ ಬಿಜೆಪಿಯಲ್ಲಿ ಸಿಎಂ ಯಡಿಯೂರಪ್ಪ ‘ವಿಜಯ’ ಯಾತ್ರೆ?
ಸಿದ್ದರಾಮಯ್ಯ ಈ ಬೆಳವಣಿಗೆ ಸಹಜವೋ ಅಥವಾ ಸಾಫ್ಟ್ ಹಿಂದುತ್ವ ಪ್ರದರ್ಶನವೋ ಎಂಬುದನ್ನು ಅವರೇ ಹೇಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ