ಕೋಲಾರ: ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ (Former CM Siddaramaiah) ಅವರು ನಾಳೆ ಕೋಲಾರ ಕ್ಷೇತ್ರಕ್ಕೆ ಭೇಟಿ ನೀಡಲಿದ್ದು, ಪಕ್ಷದ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. (Assembly Election 2023) ಸಿದ್ದರಾಮಯ್ಯ ಅವರ ಆಗಮನ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ರಾಜಕೀಯ ಬೆಳವಣಿಗೆಗಳು ಗರಿಗೆದರಿದೆ. ಕೋಲಾರ ನಗರದ ಮಿನಿ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ದತೆಗಳು ಈಗಾಗಲೇ ಪೂರ್ಣಗೊಳಿಸಲಾಗಿದೆ. ಕೋಲಾರ ಜಿಲ್ಲಾ ಕಾಂಗ್ರೆಸ್ (Congress) ನಿಂದ ಹಮ್ಮಿಕೊಂಡಿರುವ ಕಾರ್ಯಕರ್ತರ ಸಭೆಯಲ್ಲಿ ಸಿದ್ದರಾಮಯ್ಯ ಭಾಗಿಯಾಗಲಿದ್ದು, ಮಿನಿ ಕ್ರೀಡಾಂಗಣದಲ್ಲಿ 40*60 ಅಗಲದ ವೇದಿಕೆ ನಿರ್ಮಾಣ ಮಾಡಲಾಗಿದೆ. ಅಲ್ಲದೇ ಸಾರ್ವಜನಿಕರಿಗಾಗಿ 7 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಸುಮಾರು 10 ಸಾವಿರ ಕಾಂಗ್ರೆಸ್ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಾಧ್ಯತೆ ಇದೆ.
ಕೋಲಾರದಿಂದ ಸ್ಫರ್ಧೆ ಬಗ್ಗೆ ನಾಳೆ ಘೋಷಣೆ ಆಗುತ್ತಾ?
ನಾಳೆ ಕೋಲಾರಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ಹಿನ್ನಲೆಯಲ್ಲಿ ನ್ಯೂಸ್18 ಕನ್ನಡದೊಂದಿಗೆ ಮಾತನಾಡಿದ ಶಾಸಕ ಶ್ರೀನಿವಾಸಗೌಡ, ಸಿದ್ದರಾಮಯ್ಯ ನಾಳೆ ಕೋಲಾರ ಕ್ಷೇತ್ರದಲ್ಲಿ ಸ್ಪರ್ಧೆ ಮಾಡುವುದಾಗಿ ಘೋಷಿಸಲಿದ್ದಾರೆ. ರಾಜ್ಯಕ್ಕೆ ಮೊದಲ ಸಿಎಂ ಕೆ.ಸಿ ರೆಡ್ಡಿ ಅವರನ್ನ ಕೊಟ್ಟದ್ದು ಕೋಲಾರ ಜಿಲ್ಲೆ. ಈಗ ಕೋಲಾರದಿಂದ ಸಿದ್ದರಾಮಯ್ಯ ಗೆದ್ದು, ಮತ್ತೊಮ್ಮೆ ಸಿಎಂ ಆಗಲಿದ್ದಾರೆ ಎಂದು ಭವಿಷ್ಯ ನುಡಿದರು.
ಕುತೂಹಲ ಮೂಡಿಸಿರುವ ಸಿದ್ದರಾಮಯ್ಯ ನಡೆ
2023ರ ವಿಧಾನಸಭಾ ಚುನಾವಣೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ಎಲ್ಲಿಂದ ಮಾಡ್ತಾರೆ ಅನ್ನೋ ಚರ್ಚೆಗಳು ನಿರಂತರವಾಗಿ ನಡೆಯುತ್ತಲೇ ಇದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡು ಕ್ಷೇತ್ರಗಳಿಂದ ಸ್ಪರ್ಧೆ ಮಾಡಿದ್ದ ಸಿದ್ದರಾಮಯ್ಯ ಅವರು ಬಾದಾಮಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಆದರೆ ಬಾದಾಮಿ ಕ್ಷೇತ್ರ ಬೆಂಗಳೂರಿನಿಂದ ದೂರ ಇರುವ ಕಾರಣ ಈಗ ಮತ್ತೆ ಕ್ಷೇತ್ರ ಬದಲಾವಣೆಗೆ ಸಿದ್ದರಾಮಯ್ಯ ಮುಂದಾಗಿದ್ದಾರೆ.
ಆರಂಭದಲ್ಲಿ ಸಿದ್ದರಾಮಯ್ಯ ಅವರು ಪುತ್ರ ಯತೀಂದ್ರ ಸಿದ್ದರಾಮಯ್ಯ ಅವರ ವರುಣಾ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತಾರೆ ಎನ್ನಲಾಗಿತ್ತು. ಅಲ್ಲದೇ ಯತೀಂದ್ರ ಅವರು ಕೂಡ ಕ್ಷೇತ್ರ ಬಿಟ್ಟುಕೊಡಲು ಸಿದ್ಧ ಎಂಬ ಹೇಳಿಕೆ ನೀಡಿದ್ದರು. ಆದರೆ ಬಾದಾಮಿ ಕ್ಷೇತ್ರದ ಜನತೆ ಮಾತ್ರ ತಮ್ಮ ಕ್ಷೇತ್ರದಿಂದ ಮತ್ತೆ ಸ್ಪರ್ಧೆ ಮಾಡಬೇಕು ಎಂಬ ಒತ್ತಡ ಹಾಕುತ್ತಿದ್ದಾರೆ.
ಈ ಎಲ್ಲಾ ಬೆಳವಣಿಗೆ ನಡುವೆ ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡೋದು ಬಹುತೇಕ ಪಕ್ಕಾ ಎಂದು ಕಾಂಗ್ರೆಸ್ ಮೂಲಗಳು ಹೇಳುತ್ತಿವೆ. ಏಕೆಂದರೆ ಈಗಾಗಲೇ ಸಿದ್ದರಾಮಯ್ಯ ಅವರು ಬಾದಾಮಿಯಿಂದ ನಾನು ಸ್ಪರ್ಧೆ ಮಾಡೋದಿಲ್ಲ ಎಂದು ಖಚಿತ ಪಡಿಸಿದ್ದಾರೆ. ಆದರೆ ಮೂರು ಕ್ಷೇತ್ರಗಳಿಗೆ ಟಿಕೆಟ್ಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದೀನಿ. ಹೈಕಮಾಂಡ್ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ರೆ, ಅಲ್ಲಿಂದ ಸ್ಪರ್ಧೆ ಮಾಡ್ತೀನಿ ಎಂದು ಹೇಳಿಕೊಂಡೆ ಬರುತ್ತಿದ್ದಾರೆ.
ಎರಡನೇ ಬಾರಿಗೆ ಕೋಲಾರ ಕ್ಷೇತ್ರಕ್ಕೆ ಬರ್ತಿದ್ದಾರೆ ಸಿದ್ದರಾಮಯ್ಯ
ಕ್ಷೇತ್ರ ಬದಲಾವಣೆ ಚರ್ಚೆ ಜೋರಾಗುತ್ತಿದ್ದಂತೆ ಸಿದ್ದರಾಮಯ್ಯ ಅವರು ಕೋಲಾರ ಕ್ಷೇತ್ರಕ್ಕೆ ಭೇಟಿ ನೀಡಿದ್ದರು. ನಾಳೆ ಎರಡನೇ ಬಾರಿಗೆ ಸಿದ್ದರಾಮಯ್ಯ ಅವರು ಭೇಟಿ ನೀಡುತ್ತಿದ್ದಾರೆ. ನವೆಂಬರ್ 13ರಂದು ಕೋಲಾರಕ್ಕೆ ಸಿದ್ದರಾಮಯ್ಯ ಬರ್ತಿದ್ದಂತೆ ಭರ್ಜರಿ ಸ್ವಾಗತ ಸಿಕ್ಕಿತ್ತು. ಕೋಲಾರಮ್ಮ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಸಿದ್ದರಾಮಯ್ಯ ಮೆಥೋಡಿಸ್ಟ್ ಚರ್ಚ್ಗೆ ಸಿದ್ದರಾಮಯ್ಯ ಭೇಟಿ ನೀಡಿದ್ದರು. ಚಿನ್ನದ ಗಣಿ ನಾಡಿಗೆ ಬಂದ ಬಂದ ಸಿದ್ದರಾಮಯ್ಯರಿಗೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಕ್ರೇನ್ ಮೂಲಕ 300 ಕೆಜಿ ತೂಕದ ಸೇಬಿನ ಹಾರ ಹಾಕಿ, ಅಭಿಮಾನಿಗಳು ಜೈಕಾರ ಹಾಕಿ ಸ್ವಾಗತಿಸಿದ್ದರು.
ಈ ವೇಳೆ ಮಾತನಾಡಿದ್ದ ಸಿದ್ದರಾಮಯ್ಯ ಅವರು, ನಾನು ಕೋಲಾರದ ಜನತೆಗೆ ಆಭಾರಿಯಾಗಿದ್ದೇನೆ. ನಾನು 5 ವರ್ಷ ಮುಖ್ಯ ಮಂತ್ರಿ ಆಗಿದ್ದೆ. ಎಲ್ಲಾ ಜನತೆಯನ್ನ ಸಮಾನವಾಗಿ ಕಂಡಿದ್ದೆ, ಬಡವರ ಪರವಾಗಿದ್ದೆ. ನಾನು ಧರ್ಮದ ಆಧಾರದಲ್ಲಿ ಕೆಲಸ ಮಾಡಿಲ್ಲ. ಈ ದೇಶ ಬಹುತ್ವದ ದೇಶ, ಮನುಷ್ಯರ ಮತ್ತೊಬ್ಬ ಮನುಷ್ಯರನ್ನ ಪ್ರೀತಿಸಬೇಕು. ಬಿಜೆಪಿ ಧರ್ಮದ ಆಧಾರದಲ್ಲಿ ರಾಜಕೀಯ ಮಾಡ್ತಿದೆ. ಕಾಂಗ್ರೆಸ್ ಪಕ್ಷ ಭಾರತದಲ್ಲಿ ಸರ್ವಧರ್ಮ ಸಮಾನತೆ ಕಾಣುತ್ತಿದೆ. ನನ್ನ ಸರ್ಕಾರದಲ್ಲಿ ನಾನು ಎಂದೂ ಭೇದಭಾವ ಮಾಡಿಲ್ಲ, ಮುಂದೆಯೂ ಮಾಡಲ್ಲ.
ಇದನ್ನೂ ಓದಿ: H D Kumarswamy: ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ದಲಿತರಿಗೆ ಡಿಸಿಎಂ ಪಟ್ಟ; ಕೋಲಾರದಲ್ಲಿ ಎಚ್ಡಿಕೆ ಭರವಸೆ
ನನ್ನ 5 ವರ್ಷ ಆಡಳಿತ ನೋಡಿದ್ದೀರಿ, ಸಂವಿಧಾನದ ಅಡಿ ನಾವೆಲ್ಲ ಕೆಲಸ ಮಾಡಬೇಕು. ಕ್ರಿಶ್ಚಿಯನ್ ಸಮುದಾಯದ ಅಭಿವೃದ್ಧಿ ಪರವಾಗಿ ನಾವಿರುತ್ತೇನೆ. ನಾನು ನಾಮಿನೇಷನ್ ಹಾಕಬೇಕು ಅಂದಾಗ ಮತ್ತೆ ಚರ್ಚ್ ಗೆ ಬರ್ತೀನಿ. ಸ್ಪರ್ಧೆ ಮಾಡಲೇಬೇಕು ಎಂದು ಮುಖಂಡರು ಒತ್ತಾಯಿಸಿದ್ದಾರೆ ಎಂದು ಹೇಳಿದ್ದರು.
ಏನು ಹೇಳ್ತಿದೆ ಸರ್ವೆ ರಿಪೋರ್ಟ್?
ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ರೆ ಒಳಿತು ಎಂಬುದರ ಬಗ್ಗೆ ಆತಂರಿಕ ಸಮೀಕ್ಷೆ ನಡೆಸಿದ್ದಾರೆ ಎನ್ನಲಾಗಿದೆ. ಕೋಲಾರದಿಂದ ಸ್ಪರ್ಧೆ ಮಾಡಿದ್ರೆ ಗೆಲುವು ಸುಲಭವಾಗಲಿದೆ. ಇದರ ಜೊತೆ ಸುತ್ತಲಿನ ನಾಲ್ಕರಿಂದ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರು ಗೆಲ್ಲಬಹುದು ಎಂದು ಆಂತರಿಕ ಸಮೀಕ್ಷೆ ಹೇಳುತ್ತಿದೆ ಎಂದು ತಿಳಿದು ಬಂದಿದೆ.
ಮಾಜಿ ಸಚಿವರಾಗಿರುವ ಕೃಷ್ಣ ಬೈರೇಗೌಡ ಅವರು ಕ್ಷೇತ್ರದಲ್ಲಿ ಹಲವು ಸಭೆಗಳನ್ನು ನಡೆಸಿದ್ದು, ಪಕ್ಷ ಸಂಘಟನೆ ಸೇರಿದಂತೆ ನಾಳಿನ ಕಾರ್ಯಕ್ರಮ ಬಗ್ಗೆ ಪೂರ್ವಭಾವಿ ಸಭೆಗಳನ್ನು ಮಾಡಿದ್ದಾರೆ. ಕೋಲಾರ ಹಾಗೂ ಗ್ರಾಮಾಂತರ ಭಾಗದಲ್ಲಿ ಜನರ ಸಂಘಟನೆಯನ್ನು ಮಾಡುವ ಕಾರ್ಯ ಮಾಡಿದ್ದಾರೆ. ನಾಳಿನ ಎಲ್ಲಾ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಲಾಗಿದೆ. ಎಲ್ಲಾ ಕಾಂಗ್ರೆಸ್ ನಾಯಕರು ಸಭೆಗೆ ಆಗಮಿಸಲಿದ್ದಾರೆ. ತಾಲೂಕು ಮಟ್ಟದಲ್ಲಿ ಮಾತ್ರ ಕಾರ್ಯಕ್ರಮ ಮಾಡಲಾಗುತ್ತಿದ್ದು, ಸಿದ್ದರಾಮಯ್ಯ ಅವರು ಕ್ಷೇತ್ರದಿಂದ ಸ್ಪರ್ಧೆ ಮಾಡಲಿ ಎಂಬ ಅಭಿಪ್ರಾಯ ಜನರಲ್ಲಿ ಮೂಡಿದೆ ಎಂದು ಸ್ಥಳೀಯ ಮುಖಂಡರು ತಿಳಿಸಿದ್ದಾರೆ.
ಸಿದ್ದರಾಮಯ್ಯ ಅವರನ್ನು ಸೋಲಿಸಲು ಕಾಂಗ್ರೆಸ್-ಜೆಡಿಎಸ್ ಸಿದ್ಧತೆ
2023ರ ಚುನಾವಣೆ ನನ್ನ ಕೊನೆ ಎಲೆಕ್ಷನ್ ಎಂದು ಹೇಳಿಕೆ ನೀಡಿರುವ ಸಿದ್ದರಾಮಯ್ಯರನ್ನು ಸೋಲಿಸಲು ಬಿಜೆಪಿ ತನ್ನದೇ ಪ್ಲಾನ್ ಮಾಡಿಕೊಳ್ಳುತ್ತಿದೆ. ಕೊನೆಯ ಚುನಾವಣೆಯಲ್ಲಿ ಸಿದ್ದರಾಮಯ್ಯರನ್ನು ಸೋಲಿಸಲು ಬಿಜೆಪಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇತ್ತ ಕೋಲಾರ ಜಿಲ್ಲೆಗೆ ಪದೇ ಪದೇ ಭೇಟಿ ನೀಡುತ್ತಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ