HOME » NEWS » State » SIDDARAMAIAH MEETING WITH FARMER LEADERS AND DISCUSS ABOUT PROTEST AGAINST KARNATAKA LAND REFORM ACT MAK

ರೈತ ಮುಖಂಡರ ಜೊತೆ ಸಿದ್ದರಾಮಯ್ಯ ಸಭೆ; ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರುದ್ಧದ ಹೋರಾಟಕ್ಕೆ ರೂಪುರೇಷೆ

ಸಿದ್ದರಾಮಯ್ಯ ಅವರ ಮಾತಿಗೆ ಎಲ್ಲಾ ರೈತ ಮುಖಂಡರು ಒಮ್ಮತ ಸೂಚಿಸಿದ್ದು, ಶೀಘ್ರದಲ್ಲೇ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರುದ್ಧ ರಾಜ್ಯವ್ಯಾಪಿ ರೈತ ಹೋರಾಟ ನಡೆಯಲಿದೆ. ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಲಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.

news18-kannada
Updated:July 22, 2020, 12:58 PM IST
ರೈತ ಮುಖಂಡರ ಜೊತೆ ಸಿದ್ದರಾಮಯ್ಯ ಸಭೆ; ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರುದ್ಧದ ಹೋರಾಟಕ್ಕೆ ರೂಪುರೇಷೆ
ಸಿದ್ದರಾಮಯ್ಯ
  • Share this:
ಬೆಂಗಳೂರು (ಜುಲೈ 22); ರಾಜ್ಯ ಸರ್ಕಾರದ ವಿವಾದಾತ್ಮಕ ಭೂ ಸುಧಾರಣಾ ಕಾಯ್ದೆಯ ತಿದ್ದುಪಡಿ ವಿರುದ್ಧ ರಾಜ್ಯ ವ್ಯಾಪಿ ರೈತ ಹೋರಾಟವನ್ನು ರೂಪಿಸುವ ಸಲುವಾಗಿ ಮಾಜಿ ಸಿಎಂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇಂದು ವಿವಿಧ ರೈತ ಮುಖಂಡರನ್ನು ಸಂಪರ್ಕಿಸಿ ಚರ್ಚೆ ನಡೆಸಿದ್ದಾರೆ.

ಇಂದಿನ ಸಿದ್ದರಾಮಯ್ಯ ಅವರ ರೈತ ಮುಖಂಡರ ಸಭೆಯಲ್ಲಿ  ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಬಸವರಾಜಪ್ಪ, ಬಡಗಲಿ ಪುರ ನಾಗೇಂದ್ರ, ವೀರಸಂಗಯ್ಯ, ಚಾಮರಸ ಮಾಲಿಪಾಟೀಲ್, ಬಡಿಗೇಪುರ ನಾಗೇಂದ್ರ ಸೇರಿ ಹಲವರು ಭಾಗಿದ್ದಾರೆ ಎಂದು ತಿಳಿದುಬಂದಿದೆ.

ಭೂ ಸುಧಾಕರಣಾ ಕಾಯ್ದೆಗೆ ರಾಜ್ಯ ಸರ್ಕಾರ ಕಳೆದ ಹಲವು ದಿನಗಳಿಂದ ತಿದ್ದುಪಡಿ ತರಲು ಪ್ರಯತ್ನಿಸುತ್ತಿದೆ. ಆದರೆ, ವಿರೋಧ ಪಕ್ಷಗಳು, ರೈತರು ಈ ಕಾಯ್ದೆಯನ್ನು ತೀವ್ರವಾಗಿ ವಿರೋಧಿಸುತ್ತಲೇ ಇದ್ದಾರೆ. ಆದರೆ, ತೀವ್ರ ವಿರೋಧದ ನಡುವೆಯೂ ಕೊರೋನಾ ಲಾಕ್‌ಡೌನ್ ಸಂದರ್ಭವನ್ನು ಬಳಸಿಕೊಂಡಿದ್ದ ರಾಜ್ಯ ಸರ್ಕಾರ ಜುಲೈ.12ರಂದು ಸುಗ್ರೀವಾಜ್ಞೆ ಮೂಲಕ “ಕರ್ನಾಟಕ ಭೂ ಸುಧಾರಣಾ ಕಾಯ್ದೆ”ಗೆ ಅಂಗೀಕಾರ ಪಡೆದುಕೊಂಡಿತ್ತು.

ರಾಜ್ಯ ಸರ್ಕಾರದ ಈ ನಡೆಯನ್ನು ಇಂದಿನ ರೈತ ಮುಖಂಡರ ಸಭೆಯಲ್ಲಿ ಕಟುವಾಗಿ ಟೀಕೆಗೊಳಪಡಿಸಿರುವ ಸಿದ್ದರಾಮಯ್ಯ, "ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರ ಭೂ ಸುಧಾರಣಾ ಕಾಯ್ದೆಯಲ್ಲಿ ಸೆಕ್ಷನ್ 63ಕ್ಕೆ ತಿದ್ದುಪಡಿ ತಂದು ಒಂದು ಕುಟುಂಬಕ್ಕೆ ಇದ್ದ118ಎಕರೆ ಮಿತಿಯನ್ನು 436 ಎಕರೆಗೆ ಏರಿಸಿದ್ದಾರೆ. 436 ಎಕರೆ ಯಾರು ತೆಗೆದುಕೊಳ್ತಾರೆ.? ರೈತರು ಅಷ್ಟು ಜಮೀನು ತೆಗೆದುಕೊಳ್ತಾರಾ..?

ಈ ತಿದ್ದುಪಡಿಯಿಂದಾಗಿ ಬಂಡವಾಳಶಾಹಿಗಳಿಗೆ ಅನುಕೂಲವಾಗಲಿದೆ. ಈ ಮೂಲಕ ಬಿಎಸ್ವೈ ಸರ್ಕಾರ ಇಡೀ ರೈತ ಸಮುದಾಯವನ್ನು ನಾಶ ಮಾಡಲು ಹೊರಟಿದೆ. ಭವಿಷ್ಯದಲ್ಲಿ ಎಲ್ಲಾ ರೈತರು ಕಾರ್ಪೋರೆಟ್ ಸಂಸ್ಥೆಗಳ ಬಾಗಿಲು ಕಾಯಬೇಕಾದ ಸ್ಥಿತಿ ಬರುತ್ತೆ. ಬಂಡಾವಳಶಾಹಿಗಳು ಭೂಮಿ ತಗೊಂಡು ರಿಯಲ್ ಎಸ್ಟೇಟ್ ಮಾಡ್ತಾರೆ. ಆನಂತರ ಆಹಾರ ಉತ್ಪಾದನೆ ಎಲ್ಲಿ ಆಗುತ್ತೆ..? ಈ ಶಾಸನ ಜಾರಿಯಾದರೆ ರೈತರ ಮರಣ ಶಾಸಕ ಜಾರಿಯಾದಂತೆ” ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

"ರಾಜ್ಯ ಸರ್ಕಾರದ ಈ ನಡೆಯನ್ನು ಕಾಂಗ್ರೆಸ್‌ ತೀವ್ರವಾಗಿ ವಿರೋಧಿಸುತ್ತಿದೆ. ಇಂತಹ ತಿದ್ದುಪಡಿಗಳು ಯಾವುದೇ ಸರ್ಕಾರಕ್ಕೆ  ಶೋಭೆಯಲ್ಲ. ಹೀಗಾಗಿ ಗಣಿ ಅಕ್ರಮದ ಕುರಿತು ಕಾಂಗ್ರೆಸ್‌ ಹೋರಾಟ ರೂಪಿಸಿದ ರೀತಿಯಲ್ಲೇ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರುದ್ಧವೂ ಹೋರಾಟ ನಡೆಸಲು ಚಿಂತನೆ ನಡೆಸಲಾಗಿದೆ. ರಾಜ್ಯದ ಪ್ರತಿ ಹಳ್ಳಿ ಹಳ್ಳಿಯಿಂದಲೂ ರೈತರನ್ನು ಒಗ್ಗೂಡಿಸಿ ಹೋರಾಟವನ್ನು ರೂಪಿಸಲಾಗುವುದು. ಇದಕ್ಕೆ ರೈತ ಸಂಘಗಳ ಸಹಾಯವೂ ಅಗತ್ಯ" ಎಂದು ಸಿದ್ದರಾಮಯ್ಯ ಮನವರಿಕೆ ಮಾಡಿಕೊಟ್ಟಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ : ಮೈತ್ರಿ ಸರ್ಕಾರದ ಪತನ ಮುಗಿದುಹೋದ ಕಥೆ, ಈಗೇಕೆ ಅದರ ರೀಕಾಲ್; ಕುಮಾರಸ್ವಾಮಿಗೆ ಸಿದ್ದರಾಮಯ್ಯ ಟಾಂಗ್
Youtube Video

ಸಿದ್ದರಾಮಯ್ಯ ಅವರ ಮಾತಿಗೆ ಎಲ್ಲಾ ರೈತ ಮುಖಂಡರು ಒಮ್ಮತ ಸೂಚಿಸಿದ್ದು, ಶೀಘ್ರದಲ್ಲೇ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ವಿರುದ್ಧ ರಾಜ್ಯವ್ಯಾಪಿ ರೈತ ಹೋರಾಟ ನಡೆಯಲಿದೆ. ರಾಜ್ಯ ಸರ್ಕಾರಕ್ಕೆ ಬಿಸಿ ಮುಟ್ಟಲಿದೆ ಎಂದೇ ವ್ಯಾಖ್ಯಾನಿಸಲಾಗುತ್ತಿದೆ.
Published by: MAshok Kumar
First published: July 22, 2020, 12:58 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories