ಬುರುಡೆ ಬೊಮ್ಮಾಯಿ..ಕೊರೊನಾ ವೇಳೆ ಜನ ಬದುಕಿದ್ದು ಅನ್ನಭಾಗ್ಯದಿಂದ ನಿಮ್ಮಿಂದ ಅಲ್ಲ: Siddaramaiah ತಿರುಗೇಟು

Siddaramaiah defence anna bhagya scheme: ಕೊರೊನಾ ಸೋಂಕಿನಿಂದ ಉದ್ಯೋಗ ಕಳೆದು ಕೊಂಡ ಜನ ಬದುಕಿದ್ದು ಅನ್ನಭಾಗ್ಯ ಅಕ್ಕಿಯಿಂದ, ಇಂದಿರಾ ಕ್ಯಾಂಟೀನ್​ನಿಂದ. ಪ್ರಧಾನಿ ಮೋದಿ ಅವರು ಹೇಳಿದಂತೆ ನೀವು ಬಡಿದ ತಟ್ಟೆ, ಹಚ್ಚಿದ ದೀಪದಿಂದ ಅಲ್ಲ. ನೀವು ನಿರ್ದಯಿಗಳು ನಾವು ಕೊಟ್ಟ ಅಕ್ಕಿಯನ್ನು ಕಸಿದುಕೊಳ್ಳಲು ಹೊರಟಿದ್ದೀರಿ.

ಸಿದ್ದರಾಮಯ್ಯ

ಸಿದ್ದರಾಮಯ್ಯ

  • Share this:
ಬೆಂಗಳೂರು: ಉಪ ಚುನಾವಣಾ (By election) ಪ್ರಚಾರ ಕಣದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರ(BJP Govt) ಹಾಗೂ ವಿಪಕ್ಷ ಕಾಂಗ್ರೆಸ್(congress)​ ಮಧ್ಯೆ ಮಾತಿನ ಸಮರ ಬಿರುಸುಗೊಂಡಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ವಿರುದ್ಧ ವಾಗ್ದಾಳಿ ನಡೆಸಿದ್ದ ಸಿಎಂ ಬಸವರಾಜ ಬೊಮ್ಮಾಯಿ(cm basavaraj bommai), ಮಾತು ಮಾತಿಗೂ ಸಿದ್ದರಾಮಯ್ಯ ಅನ್ನಭಾಗ್ಯ.. ಅನ್ನಭಾಗ್ಯ (anna bhagya) ಎನ್ನುತ್ತಾರೆ. ಅವರ ಸರ್ಕಾರಕ್ಕೂ ಮೊದಲೂ ಸ್ವಾತಂತ್ರ್ಯ ಬಂದ ಬಳಿಕ ಯಾರೂ ಪಡಿತರದಲ್ಲಿ ಅಕ್ಕಿಯನ್ನೇ ಕೊಟ್ಟಿಲ್ಲವೇ ಎಂದು ವ್ಯಂಗ್ಯ ಮಾಡಿ ಪ್ರಶ್ನಿಸಿದ್ದರು. ಇದಕ್ಕೆ ಇಂದು ಸರಣಿ ಟ್ವೀಟ್​ ಮೂಲಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಪ್ರತಿ ಟ್ವೀಟ್​ ಕೊನೆಯಲ್ಲಿ #ಬುರುಡೆಬೊಮ್ಮಾಯಿ ಎಂದು ಹ್ಯಾಷ್​ಟ್ಯಾಗ್​ ನೀಡುವ ಮೂಲಕ ಸಿಎಂ ವಿರುದ್ಧ ಚಾಟಿ ಬೀಸಿದ್ದಾರೆ.

ಜನ ಬದುಕಿದ್ದು ಅನ್ನಭಾಗ್ಯ ಅಕ್ಕಿಯಿಂದ

ನಮ್ಮ ಸರ್ಕಾರದ ಯಾವ ಭಾಗ್ಯ ಯಾರಿಗೆ ಮುಟ್ಟಿದೆ ಎಂಬ ಲೆಕ್ಕಬೇಕಾ ಸಿಎಂ ಬೊಮ್ಮಾಯಿ ಅವರೇ? ಅಕ್ಕಿ ಪಡೆದ 1.10 ಕೋಟಿ ಕುಟುಂಬಗಳ 4 ಕೋಟಿ ಬಡವರ ಮನೆಗೆ ಹೋಗಿ ಕೇಳಿ ಉತ್ತರ ಕೊಟ್ಟಾರು. ಕೊರೊನಾ ಸೋಂಕಿನಿಂದ ಉದ್ಯೋಗ ಕಳೆದು ಕೊಂಡ ಜನ ಬದುಕಿದ್ದು ಅನ್ನಭಾಗ್ಯ ಅಕ್ಕಿಯಿಂದ, ಇಂದಿರಾ ಕ್ಯಾಂಟೀನ್​ನಿಂದ. ಪ್ರಧಾನಿ ಮೋದಿ ಅವರು ಹೇಳಿದಂತೆ ನೀವು ಬಡಿದ ತಟ್ಟೆ, ಹಚ್ಚಿದ ದೀಪದಿಂದ ಅಲ್ಲ. ನೀವು ನಿರ್ದಯಿಗಳು ನಾವು ಕೊಟ್ಟ ಅಕ್ಕಿಯನ್ನು ಕಸಿದುಕೊಳ್ಳಲು ಹೊರಟಿದ್ದೀರಿ ಎಂದು ಟ್ವೀಟ್​ ಮೂಲಕ ಸಿಎಂ, ಪಿಎಂ ಇಬ್ಬರಿಗೆ ಸಿದ್ದರಾಮಯ್ಯ ಕುಟುಕಿದ್ದಾರೆ.

ಬಿಸಿಯೂಟವನ್ನು ಕಿತ್ತುಕೊಂಡವರು ನೀವೇ ಅಲ್ಲವೇ?

ಕ್ಷೀರಭಾಗ್ಯ ಯೋಜನೆಯ ಲೆಕ್ಕ ಬೇಕಾ ಬೊಮ್ಮಾಯಿ ಅವರೇ, ಕ್ಷೀರಭಾಗ್ಯದ ಹಾಲು ಕುಡಿದ ರಾಜ್ಯದ 1.07 ಕೋಟಿ  ಶಾಲಾ ಮಕ್ಕಳನ್ನು ಕೇಳಿ. ಕೊರೊನಾ ನೆಪದಲ್ಲಿ ಅವರು ಕುಡಿಯುತ್ತಿದ್ದ ಹಾಲನ್ನು, ಮಧ್ಯಾಹ್ನದ ಬಿಸಿಯೂಟವನ್ನು ಕಿತ್ತುಕೊಂಡವರು ನೀವೇ ಅಲ್ಲವೇ? ನಮ್ಮ ಸರ್ಕಾರ ಜಾರಿಗೆ ತಂದಿದ್ದ ಕೃಷಿಭಾಗ್ಯ, ಕ್ಷೀರಧಾರೆ, ಪಶುಭಾಗ್ಯ, ಶೂ ಭಾಗ್ಯ, ಶಾದಿಭಾಗ್ಯ, ವಿದ್ಯಾಸಿರಿ, ಮಾತೃಪೂರ್ಣ ಹೀಗೆ ಹಲವು ಜನಪರ ಯೋಜನೆಗಳನ್ನು ನಿಲ್ಲಿಸಿದವರು ನೀವೇ ಅಲ್ಲವೇ  ಬೊಮ್ಮಾಯಿ  ಅವರೇ? ಇದೇನಾ ನಿಮ್ಮ ಅಭಿವೃದ್ಧಿ? ನಾವು ಜಾರಿ ಮಾಡಿದ್ದ ಅನುಗ್ರಹ ಯೋಜನೆಯನ್ನು ನಿಲ್ಲಿಸುವ ಮೂಲಕ ಬಡ ರೈತರ, ಹೈನುಗಾರರ, ಕುರಿಗಾಹಿಗಳ ಬದುಕನ್ನು ಸಂಕಷ್ಟಕ್ಕೀಡು ಮಾಡಿದವರು ಬಿಜೆಪಿ ಅವರು. ಈ ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿ ಇದೆಯೇ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಮಾತುಮಾತಿಗೂ ಅನ್ನಭಾಗ್ಯ ಅಂತಾರೆ, ಅದಕ್ಕೂ ಮೊದಲು ಯಾರೂ ಅಕ್ಕಿ ಕೊಟ್ಟಿರಲಿಲ್ವಾ: CM Bommai

ನಿಮ್ಮ ಸರ್ಕಾರ ಇದ್ದರೆಷ್ಟು ಹೋದರೆಷ್ಟು?

ಲಾಕ್ ಡೌನ್ ಇದ್ದಾಗ ಬಡವರಿಗೆ ಉಚಿತವಾಗಿ 10 ಕೆಜಿ ಅಕ್ಕಿ ಕೊಡಿ, ಪ್ರತಿ BPL ಕುಟುಂಬಕ್ಕೆ 10 ಸಾವಿರ ಧನಸಹಾಯ ಮಾಡಿ ಎಂದು ಸದನದಲ್ಲಿ ಒತ್ತಾಯಿಸಿದರೆ, ರಾಜ್ಯ ಸರ್ಕಾರದ ಬಳಿ ಹಣವಿಲ್ಲ ಎಂದವರು ನಿಮ್ಮವರೇ ಅಲ್ಲವೇ ಬೊಮ್ಮಾಯಿ ಅವರೆ. ಜನರ ಕಷ್ಟಕಾಲದಲ್ಲಿ ನೆರವಿಗೆ ಧಾವಿಸದ ನಿಮ್ಮ ಸರ್ಕಾರ ಇದ್ದರೆಷ್ಟು ಹೋದರೆಷ್ಟು? ಕೊರೊನಾದಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ಕೊಡ್ತೀವಿ ಎಂದು ಹೇಳಿ ಇವತ್ತಿನವರೆಗೆ ನಯಾಪೈಸೆ ಪರಿಹಾರ ನೀಡಿಲ್ಲ. ನಿಮ್ಮ ಸರ್ಕಾರದ ನಿಷ್ಕ್ರಿಯತೆಯಿಂದಾಗಿ ತಂದೆ, ತಾಯಿ ಕುಟುಂಬವನ್ನು ಕಳೆದುಕೊಂಡ ಸಾವಿರಾರು ಮಕ್ಕಳು ಅನಾಥವಾಗಿವೆ. ಈ ಅನಾಥ ಕಂದಮ್ಮಗಳ ಭವಿಷ್ಯಕ್ಕೆ ಯಾರು ದಿಕ್ಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉದಾಹರಣೆ ಇದ್ದರೆ ತೋರಿಸಿ, ನಾನು ರಾಜಕೀಯ ನಿವೃತ್ತಿ ಪಡೆಯುವೆ

ನಮ್ಮ ಸರ್ಕಾರ ವಾರ್ಷಿಕ 3 ಲಕ್ಷ ಮನೆಗಳಂತೆ 5 ವರ್ಷಗಳಲ್ಲಿ 15 ಲಕ್ಷ ಮನೆಗಳನ್ನು ನಿರ್ಮಾಣ ಮಾಡಿತ್ತು, ನಿಮ್ಮ  ಬಿಜೆಪಿ ಸರ್ಕಾರ ಒಂದೇ ಒಂದು ಮನೆ ಕಟ್ಟಿ ಕೊಟ್ಟ ಉದಾಹರಣೆ ಇದ್ದರೆ ತೋರಿಸಿ, ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲೆಸೆದಿದ್ದಾರೆ. ಉದ್ಯೋಗ ಖಾತ್ರಿ ಯೋಜನೆ, ಆಹಾರ ಸುರಕ್ಷತಾ ಕಾಯಿದೆ, ಮಾಹಿತಿ ಹಕ್ಕು ಕಾಯಿದೆ ಜಾರಿಗೆ ತಂದಿದ್ದು ಮನಮೋಹನ್ ಸಿಂಗ್ ಅವರ ಯುಪಿಎ ಸರ್ಕಾರ. ಹಾಗಾದರೆ ದೇಶಕ್ಕೆ  ಮೋದಿ  ಅವರ ಕೊಡುಗೆ ಏನು ಎಂದು ಬೊಮ್ಮಾಯಿ ಅವರನ್ನು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.





ಮೋದಿ ಎದುರು ಬಾಯಿ ಬಿಟ್ಟು ಮಾತನಾಡಲ್ಲ

14ನೇ ಹಣಕಾಸು ಆಯೋಗದ ಶಿಫಾರಸಿನ ಪ್ರಕಾರ ರಾಜ್ಯಕ್ಕೆ 38,000 ಕೋಟಿ ರೂಪಾಯಿ ತೆರಿಗೆ ಪಾಲು ಬರುತ್ತಿತ್ತು. ಈಗದು 20,000 ಕೋಟಿ ರೂಪಾಯಿಗೆ ಬಂದು ನಿಂತಿದೆ. ಕೇಂದ್ರದ ಸಹಾಯಧನ, ಜಿ.ಎಸ್.ಟಿ ಪರಿಹಾರದ ಹಣ ಇವೆಲ್ಲಾ ಕಡಿಮೆಯಾಗಿ ರಾಜ್ಯಕ್ಕೆ ಕನಿಷ್ಟ ರೂ.40,000 ಕೋಟಿ ನಷ್ಟವಾಗ್ತಿದೆ. ರಾಜ್ಯಕ್ಕೆ ಕೇಂದ್ರ ಸರ್ಕಾರದಿಂದ ಇಷ್ಟೆಲ್ಲಾ ಅನ್ಯಾಯವಾಗುತ್ತಿದ್ದರೂ ಮುಖ್ಯಮಂತ್ರಿ  ಬೊಮ್ಮಾಯಿ  ಆಗಲಿ, ರಾಜ್ಯದಿಂದ ಆಯ್ಕೆಯಾದ 25 ಮಂದಿ ಸಂಸದರಾಗಲಿ  ಮೋದಿ ಅವರೆದುರು ಬಾಯಿ ಬಿಟ್ಟು ಮಾತನಾಡಲ್ಲ ಎಂದು ಕಿಡಿಕಾರಿದರು.

ಬೈ ಎಲೆಕ್ಷನ್​ನಲ್ಲಿ ಗೆಲುವು ನಮ್ಮದೆ..

ಹಾನಗಲ್ ಮತ್ತು ಸಿಂಧಗಿ ಎರಡೂ ಕ್ಷೇತ್ರಗಳಲ್ಲಿ ನಮ್ಮ ನಿರೀಕ್ಷೆಗೂ ಮೀರಿದ ಜನಸ್ಪಂದನೆ ವ್ಯಕ್ತವಾಗುತ್ತಿದ್ದು, ಕಾಂಗ್ರೆಸ್ ಪರವಾದ ವಾತಾವರಣ ಇದೆ. ನಮ್ಮ ಸರ್ಕಾರ ಮತ್ತು ಕೇಂದ್ರದ ಮನಮೋಹನ್ ಸಿಂಗ್ ಅವರ ಸರ್ಕಾರ ಅಧಿಕಾರದಲ್ಲಿ ಇದ್ದಾಗ ನೀಡಿದ್ದ ಕಾರ್ಯಕ್ರಮಗಳನ್ನು ಜನ ಇಂದಿಗೂ ಮರೆತಿಲ್ಲ. ಕಳೆದ ಎರಡೂಕಾಲು ವರ್ಷಗಳ ರಾಜ್ಯ  ಬಿಜೆಪಿ  ಸರ್ಕಾರದ ಮತ್ತು ಏಳು ವರ್ಷಗಳ  ಮೋದಿ  ಸರ್ಕಾರದ ವೈಫಲ್ಯಗಳು ಜನರನ್ನು ಭ್ರಮನಿರಸನಗೊಳಿಸಿದೆ. 2014 ರಲ್ಲಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮೊದಲು ನೀಡಿದ್ದ ಯಾವುದೇ ಭರವಸೆಯನ್ನು ಈಡೇರಿಸಿಲ್ಲ ಎಂದು ಸಿದ್ದರಾಮಯ್ಯ ಟ್ವೀಟ್​ ಮಾಡಿದ್ದಾರೆ.
Published by:Kavya V
First published: