ಬೆಂಗಳೂರು(ಜ.19): ಸದಾ ಪರಸ್ಪರ ಸೆಣಸಾಡುವ ಮೂಲಕ ಹಾವು ಮುಂಗುಸಿಯಂತಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಎಚ್. ವಿಶ್ವನಾಥ್ ಹಾಗೂ ಸಚಿವ ಕೆ.ಎಸ್ ಈಶ್ವರಪ್ಪ ಬರೋಬ್ಬರಿ ದಶಕದ ನಂತರ ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಹೌದು, ಮೈಸೂರು ಜಿಲ್ಲೆಯ ಕೆಆರ್ ನಗರದ ದೊಡ್ಡಕೊಪ್ಪಲು ಗ್ರಾಮದಲ್ಲಿ ಮೂವರು ಒಂದೇ ವೇದಿಕೆ ಕಾಣಸಿಕೊಂಡ ವಿಶೇಷ ಬೆಳವಣಿಗೆ ನಡೆದಿದೆ.
ಇಂದು ಕೆಆರ್ ನಗರದ ದೊಡ್ಡಕೊಪ್ಪಲು ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮ ಆಜೋಜಿಸಲಾಗಿತ್ತು. ಇಲ್ಲಿನ ವೇದಿಕೆ ಮೇಲೆ ಮಾಜಿ ಸಿಎಂ ಸಿದ್ಧರಾಮಯ್ಯ, ಸಚಿವ ಕೆ.ಎಸ್. ಈಶ್ವರಪ್ಪ, ಮಾಜಿ ಸಚಿವ ಎಚ್. ವಿಶ್ವನಾಥ್ ಸೇರಿದ್ದರು. ಸಿದ್ದರಾಮಯ್ಯ ಎಡ-ಬಲದಲ್ಲೇ ಕೂತಿದ್ದ ವಿಶ್ವನಾಥ್ ಮತ್ತು ಈಶ್ವರಪ್ಪ ಆತ್ಮೀಯವಾಗಿ ಮಾತನಾಡತೊಡಗಿದರು.
ರಾಜಕೀಯ ವೈಷ್ಯಮ ಮರೆತು ಒಂದೇ ಸಮುದಾಯದ ಮೂವರು ನಾಯಕರು ವೇದಿಕೆ ಹಂಚಿಕೊಂಡಿರುವುದು ಸಾರ್ವಜನಕರಿಗೆ ಭಾರೀ ಖುಷಿ ತಂದಿತ್ತು. ಅಲ್ಲದೇ ಸಿದ್ದರಾಮಯ್ಯ ಮತ್ತು ಈಶ್ವರಪ್ಪ ಒಂದೇ ಕಾರಿನಲ್ಲಿ ತೆರಳಿದ್ದರು. ಇಡೀ ಕಾರ್ಯಕ್ರಮದ ಉದ್ದಕ್ಕೂ ಮೂವರು ನಾಯಕರು ನಗುನಗುತಾ ಮಾತನಾಡಿಕೊಂಡು ಸಮಾರಂಭದಲ್ಲಿ ಭಾಗಿಯಾಗಿಯಾಗಿದ್ದರು.
ಇನ್ನು ಕಾರ್ಯಕ್ರಮವನ್ನುದ್ದೇಶಿಸಿ ಮಾತಾಡಿದ ಮಾಜಿ ಸಚಿವ ಎಚ್. ವಿಶ್ವನಾಥ್ ಸಿದ್ದರಾಮಯ್ಯ ಜೊತೆಗಿನ ಗೆಳೆತನದ ಬಗ್ಗೆ ಮಾತಾಡಿದರು. ನಾವು ಹಲವು ವರ್ಷಗಳಿಂದ ಸ್ನೇಹಿತರು. ಇಬ್ಬರೂ ಆಗ್ಗಾಗ ರಾಜಕೀಯ ವಿಚಾರವಾಗಿ ಪರಸ್ಪರ ವಿರುದ್ಧ ಮಾತುಗಳನ್ನಾಡುತ್ತೇವೆ. ಆದರೆ, ಗೆಳೆತನ ಮಾತ್ರ ಎಂದಿಗೂ ಹೀಗೆ ಇದೆ ಎಂದರು.
ಇದನ್ನೂ ಓದಿ: ‘ಪೌರತ್ವ ಕಾಯ್ದೆ ಭಾರತದ ಆಂತರಿಕ ವಿಚಾರವಾದರೂ ಅನಗತ್ಯ‘: ಬಾಂಗ್ಲಾ ಪ್ರಧಾನಿ ಶೇಖ್ ಹಸೀನಾ
ಇನ್ನೊಂದೆಡೆ ನಾವು ರಾಜಕೀಯವಾಗಿ ಬೇರೆಯಾಗಿರಬಹುದು. ಆದರೆ, ನಾವು ಉತ್ತಮ ಗೆಳೆಯವರು. ನಮ್ಮನ್ನು ಯಾರು ಬೇರೆ ಮಾಡಲು ಸಾಧ್ಯವಿಲ್ಲ ಎಂದರು ಸಚಿವ ಕೆ.ಎಸ್ ಈಶ್ವರಪ್ಪ. ಸಿದ್ದರಾಮಯ್ಯ ಅವರಿಗೆ ಹಾರ್ಟ್ ಇಲ್ಲ ಅಂತ ನಾನು ರೇಗಿಸಿದ್ದೆ. ಇಂತಹ ಒಳ್ಳೆಯ ಹಾರ್ಟ್ ಇದ್ದವರಿಗೆ ಹಾರ್ಟ್ ಕೆಡುತ್ತಾ ಎಂದು ಪ್ರಶ್ನಿಸಿದರು.
ಸಿದ್ದರಾಮ ಎಂದರೆ ಈಶ್ವರ. ವಿಶ್ವನಾಥ ಎಂದರೂ ಈಶ್ವರ. ನಾನುಂತೂ ಹೆಸರಿನಲ್ಲೇ ಈಶ್ವರ. ಈಶ್ವರ ಅಂದರೆ ಕಲ್ಮಶ ಇಲ್ಲದವರು ಎಂದರ್ಥ. ಒಂದೇ ವೇದಿಕೆಯಲ್ಲಿ ನಾವುಗಳು ಸೇರಿರುವುದು ಇಡೀ ರಾಜ್ಯಕ್ಕೆ ಗೊತ್ತಾಗುತ್ತೆ. ರಾಜಕೀಯವಾಗಿ ಸಿದ್ದರಾಮಯ್ಯ ಬೇರೆಲ್ಲರಿಗಿಂತ ನನಗೆ ಹೆಚ್ಚು ಬೈದಿದ್ದಾರೆ. ನಾನೂ ಬಂಡ, ನಾನು ಕೂಡ ಅವರಿಗೆ ಬೇರೆಯವರಿಗಿಂತ ಹೆಚ್ಚು ಬೈದಿದ್ದೇನೆ. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನಾನು ವಿರೋಧ ಪಕ್ಷದ ನಾಯಕನಾಗಿದ್ದೆ. ಆಗಲೂ ಸದನದಲ್ಲಿ ದೊಡ್ಡ ಜಗಳದಿಂದ ಸದನ ಮುಂದೂಡಿದ್ದರು. ಆಗ ನಾವಿಬ್ಬರೂ ಸಭಾಪತಿ ಕೊಠಡಿಯಲ್ಲಿ ಒಟ್ಟಿಗೆ ಟೀ ಕುಡಿಯುತ್ತಿದ್ದೆವು. ಮೋಟಮ್ಮ ನಮ್ಮನ್ನು ನೋಡಿ, ಈ ಜನ್ಮದಲ್ಲಿ ನೀವಿಬ್ಬರೂ ಒಂದಾಗಲ್ಲ ಎಂದಿದ್ದರು. ಇದೆಲ್ಲವೂ ಪಕ್ಷ ನಿಷ್ಠೆ ಹೊಂದಿದ್ದಾಗ ಮಾತ್ರ ಸಾಧ್ಯ. ನಮ್ಮಲ್ಲಿ ದ್ವೇಷದ ರಾಜಕಾರಣ ಇಲ್ಲ. ಅಧಿಕಾರದಲ್ಲಿ ಇರುವಾಗಲೆಲ್ಲ ಪರಸ್ಪರ ಕೆಲಸ ಮಾಡಿಕೊಟ್ಟಿದ್ದೇವೆ ಎಂದು ಹೇಳಿದ್ದರು. ಇನ್ನೂ ಸಿದ್ದರಾಮಯ್ಯ ಕೂಡ ತಮ್ಮ ಮೂವರು ಗೆಳೆತನದ ಬಗ್ಗೆ ಎರಡು ಮಾತುಗಳನ್ನಾಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ