ಸಿದ್ದರಾಮಯ್ಯ
ಬೆಂಗಳೂರು(ಫೆ.20): ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ಜಂಟಿ ಅಧಿವೇಶನ ಶುರುವಾಗಿ ಇಂದಿಗೆ ನಾಲ್ಕು ದಿನ. ಸದನದಲ್ಲಿ ಒಂದು ವಿಚಾರದ ಸುತ್ತ ಚರ್ಚೆ ನಡೆಯುತ್ತಿರುವಾಗ ವಿರೋಧ ಪಕ್ಷಗಳು ಆಡಳಿತರೂಢ ಪಕ್ಷದವರ ಕಾಲೆಳೆಯುವುದು ಸಾಮಾನ್ಯ. ಇವತ್ತು ಇಂತಹದ್ದೇ ಪ್ರಸಂಗವೊಂದು ಅಧಿವೇಶನದಲ್ಲಿ ನಡೆದಿದೆ. ವಿಧಾನಸಭಾ ಕಲಾಪದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಸಚಿವ ಪ್ರಭು ಚವ್ಹಾಣ್ಗೆ ಏನ್ರಿ ಕನ್ನಡ ಬರುತ್ತಾ? ಎಂದು ಪ್ರಶ್ನಿಸಿದ ಪ್ರಸಂಗ ನಡೆದಿದೆ.
ಅಧಿವೇಶನದಲ್ಲಿ ಹಾಲು ಉತ್ಪಾದನೆ ಕುರಿತಂತೆ ಮಾತಾಡುವ ವೇಳೆ
ಮಾಜಿ ಸಿಎಂ ಸಿದ್ದರಾಮಯ್ಯ ಹೀಗೆ ಸಚಿವ ಪ್ರಭು ಚವ್ಹಾಣ್ ಕಾಲೆಳೆದಿದ್ದಾರೆ. ರಾಜ್ಯದಲ್ಲಿ ಒಂದು ದಿನಕ್ಕೆ 80 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಇದಕ್ಕೆ ಕಾರಣ ನಾವು ಒಂದು ಲೀಟರ್ ಹಾಲಿಗೆ 5 ರೂ. ಪ್ರೋತ್ಸಾಹ ಧನ ನೀಡುತ್ತಿರುವುದು. ಏನ್ರೀ ಅನಿಮಲ್ ಹಸ್ಬೆಂಡರಿ ಮಿನಿಸ್ಟರ್, ನಾನು ಹೇಳುತ್ತಿರುವುದು ಅರ್ಥವಾಗುತ್ತಿದೆಯಾ? ಈಗ ನಿಮಗೆ ಕನ್ನಡ ಸರಿಯಾಗಿ ಬರುತ್ತಾ? ಎಂದು ಸಚಿವ ಪ್ರಭು ಚವ್ಹಾಣ್ಗೆ ಪ್ರಶ್ನಿಸಿದರು.
ಈಗ ಕರ್ನಾಟಕದವರು ಆಗಿದ್ದೀರಿ. ಇದಕ್ಕೂ ಮೊದಲು ಎಲ್ಲಿದ್ರಿ? ಈಗಾಗಲೇ ಬಾಂಬೆಗೆ ಬೇರೆ ಹೋಗಿ ಬಂದಿದ್ದೀರಿ. ಮತ್ತೆ ಕನ್ನಡ ಯಾಕೇ ಕಲಿಯಲಿಲ್ಲಾ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಚವ್ಹಾಣ್, ನಿಮಗೆ ತಪ್ಪು ಮಾಹಿತಿ ಇದೆ ಸರ್. ನಾನು ಮೂಲತ 'ಕರ್ನಾಟಕ್'ದವನು ಹಿಂದಿಯಲ್ಲೇ ಹೇಳಿದರು. ಆಗ ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನೋಡಿ ಅದು ಕರ್ನಾಟಕ್ ಅಲ್ಲ, ನಮ್ಮದು ಕರ್ನಾಟಕ. ನೀವು 'ಕರ್ನಾಟಕ' ಎಂದು ಉಚ್ಛರಿಸಬೇಕು ಎಂದು ಸದನದಲ್ಲೇ ಕನ್ನಡ ಪಾಠ ಕಲಿಸಿದರು ಸಿದ್ದರಾಮಯ್ಯ.
ಇದನ್ನೂ ಓದಿ: ‘ಒಂದು ಕಾಲದಲ್ಲಿ ಬೆಳಗಾವಿಯ 18 ಕ್ಷೇತ್ರಗಳ ಪೈಕಿ ಜೆಡಿಎಸ್ 14ರಲ್ಲಿ ಗೆದ್ದಿತ್ತು‘: ಎಚ್.ಡಿ ದೇವೇಗೌಡ
ಸಿದ್ದರಾಮಯ್ಯ ಪ್ರಭು ಚವ್ಹಾಣ್ ಕಾಲೆಳೆದ ವಿಚಾರದ ಸುತ್ತ ಕೆಲ ಕಾಲ ಚರ್ಚೆ ನಡೆಯಿತು. ಈ ವೇಳೆ ಮಧ್ಯಪ್ರವೇಶಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ಗೂ ಸಿದ್ದರಾಮಯ್ಯ ಹೀಗೆ ಪ್ರತಿಕ್ರಿಯಿಸಿದರು, ನೋಡ್ರಿ ನಾನು ಒಮ್ಮೆ ಬೀದರ್ಗೆ ಹೋಗಿದ್ದೆ. ಅವಲೋಕನ ಸಭೆ ಮಾಡುತ್ತಿದೆ. ಆಗ ಪ್ರಭು ಚವ್ಹಾಣ್ ಮಾತಾಡ್ತಿದ್ದರು, ಆದರೆ ನನಗೆ ಇವರ ಭಾಷೆ ಸರಿಯಾಗಿ ಅರ್ಥವಾಗದೇ ಹೋಯ್ತು. ಹಿಂದಿ, ಬಂಜಾರಾ ಭಾಷೆ, ಕನ್ನಡ ಎಲ್ಲಾ ಸೇರಿಸಿ ಮಾತಾಡುತ್ತಿದ್ದರು. ಹಾಗಾಗಿ ಈ ಪ್ರಶ್ನೆ ಕೇಳಿದೆ ಹೊರತು, ಬೇರೆ ಉದ್ದೇಶದಿಂದಲ್ಲ ಎಂದರು.
First published:
February 20, 2020, 4:03 PM IST