ಬಿಎಸ್​ವೈ ಮಾತಾಡಿದರೆ ವಿಧಾನಸೌಧ ನಡುಗುತ್ತೆ ಎಂಬ ಮಾತಿತ್ತು, ಈಗ ಗುಡುಗೂ ಇಲ್ಲ ಮಿಂಚೂ ಇಲ್ಲ; ಕಾಲೆಳೆದ ಸಿದ್ದರಾಮಯ್ಯ

ಮೊದಲೆಲ್ಲ ಯಡಿಯೂರಪ್ಪ ಅಧಿವೇಶನದಲ್ಲಿ ಮಾತನಾಡಿದರೆ ಗುಡುಗು, ಮಿಂಚು ಬರುತ್ತದೆ, ವಿಧಾನಸೌಧ ನಡುಗುತ್ತದೆ ಎಂದು ಹೇಳುತ್ತಿದ್ದರು. ಈಗ ಗುಡುಗೂ ಇಲ್ಲ, ಮಿಂಚೂ ಇಲ್ಲ. ಯಡಿಯೂರಪ್ಪ ಜಬರ್ದಸ್ತ್​ ಆಗಿಯೇ ಇರಬೇಕು ಎಂದು ಹೇಳಿದ ಸಿದ್ದರಾಮಯ್ಯನವರಿಗೆ ಯಡಿಯೂರಪ್ಪ ಮುಗುಳ್ನಗೆಯಲ್ಲೇ ಉತ್ತರ ನೀಡಿದರು.

Sushma Chakre | news18-kannada
Updated:October 12, 2019, 4:34 PM IST
ಬಿಎಸ್​ವೈ ಮಾತಾಡಿದರೆ ವಿಧಾನಸೌಧ ನಡುಗುತ್ತೆ ಎಂಬ ಮಾತಿತ್ತು, ಈಗ ಗುಡುಗೂ ಇಲ್ಲ ಮಿಂಚೂ ಇಲ್ಲ; ಕಾಲೆಳೆದ ಸಿದ್ದರಾಮಯ್ಯ
ಸಿದ್ದರಾಮಯ್ಯ- ಬಿಎಸ್​ ಯಡಿಯೂರಪ್ಪ
  • Share this:
ಬೆಂಗಳೂರು (ಅ.12): ವಿಧಾನಸಭಾ ಅಧಿವೇಶನದ ಕೊನೆಯ ದಿನವಾದ ಇಂದು ಕೂಡ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೇ ಸದನದವನ್ನು ಆವರಿಸಿಕೊಂಡರು. ಮೌನವಾಗಿ ಕುಳಿತ ಸಿಎಂ ಯಡಿಯೂರಪ್ಪ ಮತ್ತು ಆಡಳಿತ ಪಕ್ಷದ ನಾಯಕರ ಕಾಲೆಳೆದ ಸಿದ್ದರಾಮಯ್ಯ ಬಿಎಸ್​ವೈ ಅವರನ್ನು ಪ್ರಚೋದಿಸಲು ಪ್ರಯತ್ನಿಸಿದರು. ಆದರೆ, ಅದಕ್ಕೆ ಜಗ್ಗದ ಯಡಿಯೂರಪ್ಪ ಯಾವುದೇ ಪ್ರತಿಕ್ರಿಯೆ ನೀಡದೆ ಕಲಾಪ ಮುಂದುವರೆಯಲು ಅನುವು ಮಾಡಿಕೊಟ್ಟರು. 

ಸದನದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪನವರನ್ನೂ ಬಿಡದ ಮಾಜಿ ಸಿಎಂ ಸಿದ್ದರಾಮಯ್ಯ, 'ಯಡಿಯೂರಪ್ಪ ಮೊದಲು ಬಹಳ ಜಬರ್ದಸ್ತಾಗಿದ್ದರು. ನೀವು ಹಿರಿಯರಿದ್ದೀರಿ. ನಿಮಗೆ ಭಾರೀ ಶಕ್ತಿಯಿದೆ ಈಗ. 25 ಸಂಸದರನ್ನು ದೆಹಲಿಗೆ ಕಳುಹಿಸಿದ್ದೀರಿ. ಜನ ನಿಮ್ಮನ್ನು ಗೆಲ್ಲಿಸಿದ್ದಾರೆ. ನೀವು ಗೆಲ್ಲಬಾರದು ಎಂದು ನಾವು ಬಯಸಿದ್ದೆವು. ಆದರೆ, ರಾಜ್ಯದ ಜನ ನಿಮ್ಮನ್ನು ಗೆಲ್ಲಿಸಿದ್ದಾರೆ. ಹೀಗಿರುವಾಗ ನೀವು ಎಷ್ಟೆಲ್ಲ ಜಬರ್ದಸ್ತ್​ ಮಾಡಿಕೊಂಡು ಓಡಾಡಬೇಕು. ಆದರೆ, ನನಗೆ ಹಿಂದಿನ ಯಡಿಯೂರಪ್ಪ ಈಗ ಕಾಣುತ್ತಿಲ್ಲ. ನಿಮ್ಮ ಪಕ್ಷದವರೆಲ್ಲ ಸೇರಿ ನಿಮ್ಮನ್ನು ಮೆತ್ತಗೆ ಮಾಡಿದ್ದಾರೆ' ಎಂದು ರೇಗಿಸಿದರು.

'ಮೊದಲೆಲ್ಲ ಯಡಿಯೂರಪ್ಪ ಅಧಿವೇಶನದಲ್ಲಿ ಮಾತನಾಡಿದರೆ ಗುಡುಗು, ಮಿಂಚು ಬರುತ್ತದೆ, ವಿಧಾನಸೌಧ ನಡುಗುತ್ತದೆ ಎಂದು ಹೇಳುತ್ತಿದ್ದರು. ಈಗ ಗುಡುಗೂ ಇಲ್ಲ, ಮಿಂಚೂ ಇಲ್ಲ. ಯಡಿಯೂರಪ್ಪ ಮೆತ್ತಗಾಗಬಾರದು. ಅವರು ಜಬರ್ದಸ್ತ್​ ಆಗಿಯೇ ಇರಬೇಕು' ಎಂದು ಹೇಳಿದ ಸಿದ್ದರಾಮಯ್ಯನವರಿಗೆ ಯಡಿಯೂರಪ್ಪ ಮುಗುಳ್ನಗೆಯಲ್ಲೇ ಉತ್ತರ ನೀಡಿದರು. ಆದರೆ, ಯಡಿಯೂರಪ್ಪ ಬದಲು ಬಿಜೆಪಿಯ ಬೇರೆ ನಾಯಕರು ಸಿದ್ದರಾಮಯ್ಯನವರ ಕಾಲೆಳೆಯಲು ಮುಂದಾದರು.

ನೀವು ಯಡಿಯೂರಪ್ಪ ಪರ ಬ್ಯಾಟಿಂಗ್ ಮುಂದುವರೆಸಿ, ನನ್ನ ಬೆಂಬಲವೂ ಇದೆ; ಯತ್ನಾಳ್​ ಕಾಲೆಳೆದ ಸಿದ್ದರಾಮಯ್ಯ

'ನಮ್ಮ ಯಡಿಯೂರಪ್ಪನವರ ಗುಡುಗು ಸ್ವಲ್ಪ ಕಡಿಮೆಯಾಗಿರಬಹುದು, ಆದರೆ ಮಿಂಚು ಕಡಿಮೆಯಾಗಿಲ್ಲ. ನೀವು ಮೊದಲು ಜೆಡಿಎಸ್​ನಲ್ಲಿದ್ದಾಗ ಗಡ್ಡ ಬಿಟ್ಟುಕೊಂಡು, ಎಲ್ಲರ ಮೇಲೆ ಕೂಗಾಡುತ್ತಾ ಎಷ್ಟು ರೆಬೆಲ್ ಆಗಿದ್ದಿರಿ. ಆದರೆ, ಕಾಂಗ್ರೆಸ್​ಗೆ ಹೋದಮೇಲೆ ನೀವೂ ಮೆತ್ತಗಾಗಿಲ್ಲವೇ? ಕಾಲವೆಂಬುದು ಎಂಥವರನ್ನೂ ಮೆತ್ತಗಾಗಿಸುತ್ತದೆ' ಎಂದು ರೇಗಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಾತಿಗೆ ವಿಚಲಿತರಾಗದ ಸಿದ್ದರಾಮಯ್ಯ 'ಕಾಲ ಎಲ್ಲರನ್ನೂ ಬದಲಿಸುತ್ತದೆ. ಆದರೆ ನೀನು ಮೆತ್ತಗೂ ಆಗಿಲ್ಲ, ರೆಬೆಲ್ಲೂ ಆಗಿಲ್ಲವಲ್ಲ ಎಂಬುದೇ ನನಗೆ ನೋವು 'ಎಂದು ತಿರುಗೇಟು ನೀಡಿದರು.

ಕಾಗೇರಿ ಅತಿ ಬುದ್ಧಿವಂತಿಕೆ ಪ್ರಕಟಿಸುವುದು ಬೇಡ:

ಬಜೆಟ್ ಲೇಖಾನುದಾನದ ಮೇಲೆ ಸಿದ್ದರಾಮಯ್ಯ ಮಾತನಾಡುತ್ತಿದ್ದಾಗ ಮಧ್ಯ ಪ್ರವೇಶಿಸಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸಿದ್ದರಾಮಯ್ಯನವರಿಗೆ ನೀವು ಚಿಕ್ಕಮಗಳೂರಿಗೆ ಪ್ರವಾಸ ಹೋಗಬೇಕಿತ್ತಲ್ಲ ಎಂದು ಹೇಳಿ ಭಾಷಣ ನಿಲ್ಲಿಸಲು ಪರೋಕ್ಷವಾಗಿ ಹೇಳಿದರು. ಇದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ನಿಮಗೆ ನನ್ನ ಮಾತು ಕೇಳಲು ಇಷ್ಟವಿಲ್ಲದಿದ್ದರೆ ನೀವೇ ಮಾತನಾಡಿಕೊಳ್ಳಿ. ನಾನು ಕುಳಿತುಕೊಳ್ಳುತ್ತೇನೆ ಎಂದು ಹೇಳಿದರು. ಅದಕ್ಕೆ ಸಮಾಧಾನಪಡಿಸಿದ ಸ್ಪೀಕರ್ ಕಾಗೇರಿ, ನಿಮ್ಮ ಧ್ವನಿಯೂ ಸರಿಯಲ್ಲದ ಕಾರಣ ನಿಮಗೇಕೆ ತೊಂದರೆ ನೀಡಬೇಕೆಂಬುದು ನಮ್ಮ ಕಾಳಜಿ ಎಂದು ತೇಪೆ ಹಚ್ಚಿದರು. ಅದಕ್ಕೆ ಉತ್ತರಿಸಿದ ಸಿದ್ದರಾಮಯ್ಯ, ನೀವು ಬುದ್ದಿವಂತರು ಎಂದು ಗೊತ್ತಿದೆ. ಆದರೆ, ಅತಿ ಬುದ್ದಿವಂತಿಕೆ ಬೇಡ ಎಂದು ತಿರುಗೇಟು ನೀಡಿದರು.ಸ್ಪೀಕರ್ ಕಾಗೇರಿ ಟೀಚರ್ ಅಲ್ಲ ನಾವು ಪ್ರೈಮರಿ ಸ್ಕೂಲ್ ಮಕ್ಕಳೂ ಅಲ್ಲ; ಬಿಜೆಪಿಗೆ ಸಿದ್ದರಾಮಯ್ಯ ತಿರುಗೇಟು

ಮಾಧ್ಯಮ ನಿರ್ಬಂಧಕ್ಕೆ ಸಿದ್ದರಾಮಯ್ಯ ವಿರೋಧ:

ಅಧಿವೇಶನದಲ್ಲಿ ಮಾಧ್ಯಮಗಳನ್ನು ನಿರ್ಬಂಧ ಮಾಡಿದ್ದೀರಿ. ಇಲ್ಲಿ ನಡೆಯುವ ಎಲ್ಲ ವಿಚಾರಗಳೂ ಪಾರದರ್ಶಕವಾಗಿರಬೇಕೆಂಬ ಕಾರಣಕ್ಕೆ ಮಾಧ್ಯಮಗಳನ್ನು ಒಳಗೆ ಬಿಡಲಾಗುತ್ತಿತ್ತು. ಎಷ್ಟೋ ಶಾಸಕರು ಕ್ಯಾಮೆರಾಗಳನ್ನು ನೋಡಿದ ಕೂಡ ಇನ್ನಷ್ಟು ಉತ್ಸಾಹಿತರಾಗಿ ಮಾತನಾಡುತ್ತಿದ್ದರು.ಈಗ ಕ್ಯಾಮೆರಾಗಳೂ ಇಲ್ಲ, ಸದನದಲ್ಲಿ ಕಳೆಯೂ ಇಲ್ಲ. ಮಾಧ್ಯಮಗಳಿಂದಲೇ ಜನರಿಗೆ ಎಲ್ಲ ವಿಚಾರಗಳೂ ತಲುಪುತ್ತವೆ. ಆದರೆ, ಹಾಗೆ ತಲುಪುವುದು ಬಿಜೆಪಿ ಪಕ್ಷದವರಿಗೂ ಬೇಕಾಗಿಲ್ಲ. ಹಾಗಾಗಿಯೇ ಆ ಬಗ್ಗೆ ಟ್ವೀಟ್ ಮಾಡಿ ಅದನ್ನು ಈಗ ಡಿಲೀಟ್ ಮಾಡಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ ಎಷ್ಟು ಮುಖ್ಯವೋ ಮಾಧ್ಯಮ ಕ್ಷೇತ್ರವೂ ಅಷ್ಟೇ ಮುಖ್ಯ. ನಾವು ಕೂಡ ಅಧಿಕಾರದಲ್ಲಿದ್ದಾಗ ನಮ್ಮದೇ ಸ್ವಂತ ಚಾನೆಲ್ ತರಬೇಕೆಂದು ಯೋಚನೆ ಮಾಡಿದ್ದೆವು. ಆದರೆ, ಆಮೇಲೆ ಅದನ್ನು ಕೈಬಿಟ್ಟೆವು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಅದಕ್ಕೆ ಉತ್ತರಿಸಿದ ಸಚಿವ ಮಾಧುಸ್ವಾಮಿ, ಹಲವು ರಾಜ್ಯಗಳಲ್ಲಿ ಅಧಿವೇಶನಕ್ಕೆ ಮಾಧ್ಯಮಗಳಿಗೆ ನಿರ್ಬಂಧವಿದೆ. ನಮ್ಮದು ಮೊದಲ ರಾಜ್ಯವೇನಲ್ಲ. ನಮ್ಮನ್ನೆಲ್ಲ ಕೇಳಿಯೇ ಸ್ಪೀಕರ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಿದಾಗ ಮಧ್ಯಪ್ರವೇಶಿಸಿದ ಸಿದ್ದರಾಮಯ್ಯ, ಆಡಳಿತ ಪಕ್ಷದವರನ್ನು ಮಾತ್ರ ಕೇಳಿ ನಿರ್ಧಾರ ತೆಗೆದುಕೊಂಡಿರಬಹುದು. ವಿರೋಧಪಕ್ಷದವರಿಗೆ ಈ ಬಗ್ಗೆ ಮಾಹಿತಿ ಇರಲಿಲ್ಲ ಎಂದಿದ್ದಾರೆ.

First published:October 12, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading