ಬೆಂಗಳೂರು (ಮೇ 14): ಕರ್ನಾಟಕದಲ್ಲಿ ಕೊರೋನಾ ಲಸಿಕೆಯ ಸಮಸ್ಯೆ ಎದುರಾಗಿದ್ದು, ಈಗಾಗಲೇ ಎರಡನೇ ಡೋಸ್ನವರಿಗೆ ಮಾತ್ರ ಲಸಿಕೆ ವಿತರಿಸುವುದಾಗಿ ಸರ್ಕಾರ ಘೋಷಿಸಿದೆ. ಇದರಿಂದ 18ರಿಂದ 45 ವರ್ಷದೊಳಗಿನವರಿಗೆ ಉಚಿತ ಲಸಿಕೆ ನೀಡಲು ಕೇಂದ್ರ ಸರ್ಕಾರ ಘೋಷಿಸಿದ್ದರೂ ಕರ್ನಾಟಕದಲ್ಲಿ ಆ ಅವಕಾಶವಿಲ್ಲದಂತಾಗಿದೆ. ಕರ್ನಾಟಕಕ್ಕೆ ಹೆಚ್ಚುವರಿ ಕೊರೋನಾ ಲಸಿಕೆ ಮತ್ತು ಆಕ್ಸಿಜನ್ ಪೂರೈಕೆ ಮಾಡುವಂತೆ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದೆ. ಆದರೂ ಸರ್ಕಾರ ಕೊರೋನಾ ಲಸಿಕೆ ನೀಡದ ವಿಷಯವಾಗಿ ಅಸಹಾಯಕತೆ ತೋಡಿಕೊಂಡಿದ್ದ ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ, ಕೋವಿಡ್ ಲಸಿಕೆ ಉತ್ಪಾದನೆಯಾಗದಿದ್ದರೆ ನಾವು ನೇಣು ಹಾಕಿಕೊಳ್ಳೋಕಾಗುತ್ತಾ? ಎಂದು ಸಿಡಿಮಿಡಿಗೊಂಡಿದ್ದರು. ಇದಕ್ಕೆ ತಿರುಗೇಟು ನೀಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ನೇಣು ಹಾಕಿಕೊಳ್ಳುವುದೇನೂ ಬೇಡ, ಮರ್ಯಾದೆಯಿಂದ ರಾಜೀನಾಮೆ ಕೊಟ್ಟು ಹೋದರೆ ಸಾಕು ಎಂದಿದ್ದಾರೆ.
ಕೇಂದ್ರ ಸಚಿವ ಸದಾನಂದ ಗೌಡರೇ, ನೇಣು ಹಾಕಿಕೊಳ್ಳುವುದು ಮಹಾಪಾಪ ಮಾತ್ರವಲ್ಲ ಕಾನೂನಿಗೆ ವಿರುದ್ಧವಾದುದು. ಸುಮ್ಮನೆ ಆ ಕೆಲಸವನ್ನೆಲ್ಲ ಮಾಡಲು ಹೋಗಬೇಡಿ. ನಿಮ್ಮ ಕೈಯಲ್ಲಿ ಆಡಳಿತ ನಡೆಸಲು ಸಾಧ್ಯವಿಲ್ಲ. ಹೀಗಾಗಿ, ಮರ್ಯಾದೆಯಿಂದ ರಾಜೀನಾಮೆ ಕೊಟ್ಟು ಹೊರಟುಬಿಡಿ. ದೇಶಕ್ಕಾಗಿ ಅಷ್ಟಾದರೂ ಮಾಡಿ ಪುಣ್ಯ ಕಟ್ಟಿಕೊಳ್ಳಿ ಎಂದು ಸಿದ್ದರಾಮಯ್ಯ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
ಸಚಿವ @DVSadanandGowda ಅವರೇ,
ನೇಣು ಹಾಕಿಕೊಳ್ಳುವುದು ಮಹಾಪಾಪ ಮಾತ್ರವಲ್ಲ ಕಾನೂನಿಗೆ ವಿರುದ್ಧವಾದುದು ಕೂಡಾ,
ಅದನ್ನೆಲ್ಲ ಮಾಡಲು ಹೋಗಬೇಡಿ,
ಆಡಳಿತ ನಡೆಸುವುದು ನಿಮಗಾಗದ ಕೆಲಸ, ಮರ್ಯಾದೆಯಿಂದ ರಾಜೀನಾಮೆ ಕೊಟ್ಟು ಹೊರಟುಬಿಡಿ,
ದೇಶಕ್ಕಾಗಿ ಅಷ್ಟು ಮಾಡಿ ಪುಣ್ಯ ಕಟ್ಕೊಳ್ಳಿ. pic.twitter.com/LM6sHJ5cWp
— Siddaramaiah (@siddaramaiah) May 13, 2021
ನಾವು ನಿರೀಕ್ಷಿಸಿದಂತೆ ಸಾಕಷ್ಟು ಪ್ರಮಾಣದಲ್ಲಿ ಉತ್ಪಾದನೆ ಆಗಲಿಲ್ಲ. ಅದು ನಮ್ಮ ಪ್ರಯತ್ನ ಮೀರಿದ್ದಾಗಿದೆ. ಕಳೆದ ಬುಧವಾರದವರೆಗೆ ಕರ್ನಾಟಕದಲ್ಲಿ ಇನ್ನು 98,000ಡೋಸ್ ವ್ಯಾಕ್ಸಿನ್ ಸಂಗ್ರಹವಿದೆ. ಕೇಂದ್ರದಿಂದ ಇನ್ನು 75,000 ಡೋಸ್ ಬರಬೇಕಾಗಿದೆ. ಇದುವರೆಗೆ 1.18 ಕೋಟಿಗೂ ಹೆಚ್ಚು ಲಸಿಕೆ ನೀಡಲಾಗಿದೆ. ನೇರವಾಗಿ ಪ್ರಧಾನಿಯವರೇ ವ್ಯಾಕ್ಸಿನೇಷನ್ ಅಭಿಯಾನದ ಉಸ್ತುವಾರಿ ವಹಿಸಿದ್ದಾರೆ. ಇನ್ನು ಒಂದು ವಾರದೊಳಗೆ ಗೊಂದಲಗಳು ಬಗೆ ಹರಿಯುತ್ತದೆ ಎಂದಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ