news18-kannada Updated:June 18, 2020, 12:08 PM IST
ಹೆಚ್ ವಿಶ್ವನಾಥ್ ಹಾಗೂ ಸಿದ್ದರಾಮಯ್ಯ
ಬೆಂಗಳೂರು (ಜೂ. 18): ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳ ವಿಧಾನ ಪರಿಷತ್ ಚುನಾವಣಾ ಅಭ್ಯರ್ಥಿಗಳ ಪಟ್ಟಿ ಈಗಾಗಲೇ ಅಂತಿಮವಾಗಿದೆ. ಬಿಜೆಪಿಯಿಂದ ಎಂಎಲ್ಸಿ ಟಿಕೆಟ್ ಪಡೆಯುವಲ್ಲಿ ಹೆಚ್. ವಿಶ್ವನಾಥ್ ಸೋತಿದ್ದಾರೆ. ತಮಗೆ ವಿಧಾನ ಪರಿಷತ್ ಟಿಕೆಟ್ ತಪ್ಪಲು ಸಿದ್ದರಾಮಯ್ಯ ಕಾರಣ ಎಂದು ಅವರು ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, 'ವಿಶ್ವನಾಥ್ ಪ್ರಕಾರ ಬಿಜೆಪಿಗೂ ನಾನೇ ಹೈಕಮಾಂಡಾ?' ಎಂದು ವ್ಯಂಗ್ಯವಾಡಿದ್ದಾರೆ.
ಇಂದು ನಡೆದ ಶಾಸಕಾಂಗ ಪಕ್ಷದ ಸಭೆಯ ಬಳಿಕ ಮಾತನಾಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, 'ಹೆಚ್. ವಿಶ್ವನಾಥ್ಗೆ ಬುದ್ಧಿ ಇಲ್ಲ. ಆತ ಬಿಜೆಪಿಗೂ ನಾನೇ ಹೈಕಮಾಂಡ್ ಎಂದುಕೊಂಡಿರಬೇಕು. ಬಿಜೆಪಿ ನಾಯಕರ ನಿರ್ಧಾರದಿಂದ ಆತನಿಗೆ ಎಂಎಲ್ಸಿ ಟಿಕೆಟ್ ತಪ್ಪಿದೆ' ಎಂದು ಟೀಕಿಸಿದ್ದಾರೆ.
'ಕಾಂಗ್ರೆಸ್ನ ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿಗಳಿಗೆ ಬಿ ಫಾರಂ ಕೊಟ್ಟಿದ್ದೇವೆ. ಸುಮಾರು 270 ಅರ್ಜಿಗಳು ಬಂದಿದ್ದವು. ಅವೆಲ್ಲವನ್ನೂ ಹೈಕಮಾಂಡ್ಗೆ ಕಳುಹಿಸಿದ್ದೆವು. ಅಂತಿಮವಾಗಿ ಹೈಕಮಾಂಡ್ ನಜೀರ್ ಅಹಮದ್ ಮತ್ತು ಬಿ.ಕೆ. ಹರಿಪ್ರಸಾದ್ ಅವರನ್ನು ಆಯ್ಕೆ ಮಾಡಿದೆ. ಇಬ್ಬರನ್ನೂ ಒಮ್ಮತದಿಂದ ಚುನಾವಣೆಗೆ ಆಯ್ಕೆ ಮಾಡಲಾಗಿದೆ' ಎಂದಿದ್ದಾರೆ.
ಇದನ್ನೂ ಓದಿ: ಹೆಚ್. ವಿಶ್ವನಾಥ್ಗೆ ಎಂಎಲ್ಸಿ ಟಿಕೆಟ್ ಸಿಗದಿದ್ದಕ್ಕೆ ನನಗೂ ಬೇಸರವಾಗಿದೆ; ಎಂಟಿಬಿ ನಾಗರಾಜ್
ಸಾಮೂಹಿಕವಾಗಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್- ಬಿಜೆಪಿ ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿದ್ದ ವಲಸಿಗರಲ್ಲಿ ಮೂರು ಮಂದಿಗೆ ಸರ್ಕಾರದಲ್ಲಿ ಯಾವುದೇ ಸ್ಥಾನ ಸಿಕ್ಕಿರಲಿಲ್ಲ. ಅವರಲ್ಲಿ ಎಂಟಿಬಿ ನಾಗರಾಜ್ ಮತ್ತು ಆರ್. ಶಂಕರ್ಗೆ ವಿಧಾನ ಪರಿಷತ್ ಚುನಾವಣಾ ಟಿಕೆಟ್ ನೀಡಲಾಗಿದೆ. ಹೆಚ್. ವಿಶ್ವನಾಥ್ ಅವರಿಗೆ ಟಿಕೆಟ್ ನೀಡಲು ಪಕ್ಷದಲ್ಲಿ ವಿರೋಧ ವ್ಯಕ್ತವಾದ ಕಾರಣ ಕೊನೆಕ್ಷಣದಲ್ಲಿ ಅವರ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಈ ಮೂಲಕ ಬಿಜೆಪಿ ಹೈಕಮಾಂಡ್ ಮತ್ತೊಮ್ಮೆ ಹೆಚ್. ವಿಶ್ವನಾಥ್ ಅವರಿಗೆ ಶಾಕ್ ನೀಡಿದೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಹೆಚ್. ವಿಶ್ವನಾಥ್, ನನ್ನ ಜೊತೆಗೆ ಬಿಜೆಪಿ ಸೇರಿದವರೆಲ್ಲರೂ ಈಜಿ ದಡ ಸೇರಿದರು. ಆದರೆ, ನಾನು ಇನ್ನೂ ದಡ ಸೇರಿಲ್ಲ. ಹಿಂದುಳಿದ ವರ್ಗದ ಹಿರಿಯ ನಾಯಕನಾದರೂ ನನಗೆ ಯಾಕೆ ಟಿಕೆಟ್ ತಪ್ಪಿಸಿದ್ದಾರೆ ಎಂದು ಗೊತ್ತಿಲ್ಲ. ಇದರಿಂದ ನನಗೆ ನೋವಾಗಿದೆ. ಆದರೆ, ನಾನಿನ್ನೂ ಹತಾಶನಾಗಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪನವರ ಬಗ್ಗೆ ನನಗೆ ಇನ್ನೂ ನಂಬಿಕೆಯಿದೆ. ರಾಜ್ಯದ ಬಿಜೆಪಿ ನಾಯಕರು ನನ್ನನ್ನೂ ಸೇರಿಸಿ ನಾಲ್ಕು ಜನರ ಹೆಸರನ್ನು ಅಂತಿಮಗೊಳಿಸಿ ದೆಹಲಿಗೆ ಕಳುಹಿಸಿದ್ದರು. ಆದರೆ ಕೊನೆಕ್ಷಣದಲ್ಲಿ ನನ್ನ ಹೆಸರನ್ನು ಕೈ ಬಿಡಲಾಗಿದೆ. ಇದರ ಹಿಂದೆ ಯಾರಿದ್ದಾರೆ ಎಂಬುದು ಗೊತ್ತಿಲ್ಲ ಎಂದಿದ್ದಾರೆ.
ಜೆಡಿಎಸ್ ರಾಜ್ಯಾಧ್ಯಕ್ಷರಾಗಿದ್ದ ಹೆಚ್. ವಿಶ್ವನಾಥ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ರೆಸಾರ್ಟ್ ರಾಜಕಾರಣದ ಬಳಿಕ ಬಿಜೆಪಿ ಸೇರ್ಪಡೆಯಾಗಿದ್ದರು. ಇದಕ್ಕೂ ಮೊದಲು ಹೆಚ್. ವಿಶ್ವನಾಥ್ ಕಾಂಗ್ರೆಸ್ನಲ್ಲಿದ್ದರು. ಜೆಡಿಎಸ್ಗೆ ವಿಶ್ವನಾಥ್ ರಾಜೀನಾಮೆ ನೀಡುವ ಮೊದಲು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವಿದ್ದಾಗಲೂ ಹಾವು-ಮುಂಗುಸಿಯಂತಿದ್ದ ಸಿದ್ದರಾಮಯ್ಯ- ಹೆಚ್. ವಿಶ್ವನಾಥ್ ಅವರ ರಾಜಕೀಯ ವೈಮನಸ್ಸು ಈಗಲೂ ಮುಂದುವರೆದಿದೆ. ತನಗೆ ಎಂಎಲ್ಸಿ ಟಿಕೆಟ್ ತಪ್ಪಲು ಸಿದ್ದರಾಮಯ್ಯನವರೇ ಕಾರಣ ಎಂದು ಹೆಚ್. ವಿಶ್ವನಾಥ್ ಆರೋಪಿಸಿದ್ದರು. ಅದಕ್ಕೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, ಬಿಜೆಪಿಗೆ ನಾನು ಹೈಕಮಾಂಡ್ ಅಲ್ಲ ಎಂದಿದ್ದಾರೆ.
First published:
June 18, 2020, 12:08 PM IST