ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸಿದ್ದರಾಮಯ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್; ಹೌದು ಹುಲಿಯಾ ಎಂದು ಜೈಕಾರ ಹಾಕಿದ ಅಭಿಮಾನಿಗಳು

ಎದೆನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದ ಸಿದ್ದರಾಮಯ್ಯ ಅವರಿಗೆ ಆಂಜಿಯೋಗ್ರಾಂ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಇಂದು ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

news18-kannada
Updated:December 15, 2019, 10:47 AM IST
ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಸಿದ್ದರಾಮಯ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್; ಹೌದು ಹುಲಿಯಾ ಎಂದು ಜೈಕಾರ ಹಾಕಿದ ಅಭಿಮಾನಿಗಳು
ಸಿದ್ದರಾಮಯ್ಯ
  • Share this:
ಬೆಂಗಳೂರು (ಡಿ. 15): ತೀವ್ರ ಎದೆನೋವಿನಿಂದ ಕಳೆದ ಬುಧವಾರ ಮಲ್ಲೇಶ್ವರಂನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 

ಎದೆನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ದಾಖಲಾಗಿದ್ದ ಸಿದ್ದರಾಮಯ್ಯ ಅವರಿಗೆ ಆಂಜಿಯೋಗ್ರಾಂ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಸಿದ್ದರಾಮಯ್ಯ ಅವರನ್ನು ಭೇಟಿಯಾಗಲು ಸಿಎಂ ಯಡಿಯೂರಪ್ಪ, ಸಚಿವರಾದ ಬಸವರಾಜ ಬೊಮ್ಮಾಯಿ, ಕೆ.ಎಸ್. ಈಶ್ವರಪ್ಪ, ಮಾಜಿ ಸಚಿವರಾದ ಜಿ.ಟಿ. ದೇವೇಗೌಡ, ರಮೇಶ್ ಜಾರಕಿಹೊಳಿ, ಎಚ್​. ವಿಶ್ವನಾಥ್ ಸೇರಿದಂತೆ ರಾಜಕೀಯ ಶತ್ರುಗಳು ಕೂಡ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಈ ಮೂಲಕ ರಾಜಕೀಯವೇ ಬೇರೆ, ಸ್ನೇಹ ಸಂಬಂಧವೇ ಬೇರೆ ಎಂಬುದನ್ನು ಸಾಬೀತುಪಡಿಸಿದ್ದರು.

ನೀನೊಬ್ನೇ ಲಾಭದ ನಿರೀಕ್ಷೆ ಇಲ್ಲದೆ ಬರೋನು; ಆರೋಗ್ಯ ವಿಚಾರಿಸಲು ಬಂದ ಪ್ರಥಮ್ ಬೆನ್ನು ಸವರಿದ​ ಸಿದ್ದರಾಮಯ್ಯ

ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಸುದ್ದಿಗೋಷ್ಠಿ ನಡೆಸಿರುವ ಸಿದ್ದರಾಮಯ್ಯ, 2000 ರ ಜುಲೈ ತಿಂಗಳಲ್ಲಿ ನನ್ನ ಎರಡು ರಕ್ತನಾಳಗಳು ಬ್ಲಾಕ್​ ಆಗಿದ್ದವು. ದೆಹಲಿ ಎಸ್ಕಾರ್ಟ್​ ಆಸ್ಪತ್ರೆಯಲ್ಲಿ ಸ್ಟಂಟ್​ ಹಾಕಿಸಿದ್ದೆ. 19 ವರ್ಷಗಳಿಂದ ಯಾವುದೇ ಸಮಸ್ಯೆ ಆಗಿರಲಿಲ್ಲ. ಇದೀಗ ಆ ಸ್ಟಂಟ್ ಹಾಕಿದ್ದ ಎರಡು ನಾಳಗಳಲ್ಲಿ ಒಂದು ಬ್ಲಾಕ್ ಆಗಿತ್ತು. ಅಂಜಿಯೋಗ್ರಾಂ ಮಾಡಿ, ಬ್ಲಾಕ್ ಆಗಿದ್ದ ನಾಳದಲ್ಲಿ ಮತ್ತೊಂದು ಸ್ಟಂಟ್ ಹಾಕಿದ್ದಾರೆ. ಅದು ಬಿಟ್ಟರೇ ಯಾವುದೇ ತೊಂದರೆ ಇಲ್ಲ. ನಾನು ಆರೋಗ್ಯವಾಗಿದ್ದೇನೆ. ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಡಾಕ್ಟರ್ ನಾರಾಯಣಸ್ವಾಮಿ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿರುವ ಸಿದ್ದರಾಮಯ್ಯ, ನನ್ನನ್ನು ಚೆನ್ನಾಗಿ ನೋಡಿಕೊಂಡ ವೈದ್ಯರಿಗೆ ಧನ್ಯವಾದ ತಿಳಿಸುತ್ತೇನೆ. ನಾನು ಇನ್ನು ಮೊದಲಿನ ರೀತಿಯೇ ಆರಾಮಾಗಿ ಕೆಲಸ ಮಾಡಬಹುದು. ಒಂದು ವಾರ ವಿಶ್ರಾಂತಿಗೆ ವೈದ್ಯರು ಸಲಹೆ ನೀಡಿದ್ದಾರೆ. ವೈದ್ಯರ ಸಲಹೆಯಂತೆ ಒಂದು ವಾರ ವಿಶ್ರಾಂತಿ ಪಡೆಯುತ್ತೇನೆ.ಬಳಿಕ ರಾಜ್ಯ ರಾಜಕಾರಣದ ಬಗ್ಗೆ ಗಮನ ಕೊಡುತ್ತೇನೆ. ಈಗ ಯಾವುದೇ ರಾಜಕಾರಣದ ಬಗ್ಗೆ ಮಾತನಾಡಲ್ಲ ಎಂದಿದ್ದಾರೆ.

ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ:

ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಶಾಶ್ವತ ಮಿತ್ರರಲ್ಲ.ಪಕ್ಷಾತೀತವಾಗಿ ಎಲ್ಲರೂ ಬಂದು ನನ್ನ ಆರೋಗ್ಯ ವಿಚಾರಿಸಿದರು. ಅವರೆಲ್ಲರಿಗೂ ಕೂಡ ನಾನು ಧನ್ಯವಾದ ಹೇಳುತ್ತೇನೆ. ರಾಜಕೀಯಕ್ಕಿಂತ ಮನುಷ್ಯತ್ವ ಮುಖ್ಯ ಅಲ್ವಾ? ಆ ಮನುಷ್ಯತ್ವದಿಂದಲೇ ಎಲ್ಲರೂ ಬಂದು ನನ್ನ ಆರೋಗ್ಯ ವಿಚಾರಿಸಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.'ಹೌದು ಹುಲಿಯಾ' ಎಂದ ಅಭಿಮಾನಿಗಳು:

ಕೆಲವು ದಿನಗಳ ಹಿಂದೆ ಸಿದ್ದರಾಮಯ್ಯ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡುತ್ತಿದ್ದಾಗ ಕುಡಿದ ಮತ್ತಿನಲ್ಲಿ ಅಭಿಮಾನಿಯೊಬ್ಬ ಹೌದು ಹುಲಿಯಾ ಎಂದು ಘೋಷಣೆ ಕೂಗಿದ್ದ. ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಇಂದು ಸಿದ್ದರಾಮಯ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಕಾರನ್ನೇರುತ್ತಿದ್ದಂತೆ ಅಭಿಮಾನಿಗಳು 'ಹೌದು ಹುಲಿಯಾ' ಎಂದು ಘೋಷಣೆ ಕೂಗುತ್ತಾ ಜೈಕಾರ ಹಾಕಿದ್ದಾರೆ. ಅಭಿಮಾನಿಗಳ ಜೈಕಾರ ಕೇಳಿ ಅವರತ್ತ ಕೈಬೀಸಿ ನಕ್ಕ ಸಿದ್ದರಾಮಯ್ಯ ಆಸ್ಪತ್ರೆಯಿಂದ ಮನೆಗೆ ನಿರ್ಗಮಿಸಿದ್ದಾರೆ.

 

 
First published:December 15, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ