ಸೋನಿಯಾ ಗಾಂಧಿ ವಿರುದ್ಧದ ಕೇಸ್​ ಬಗೆಹರಿಸದಿದ್ದರೆ ರಾಜಕೀಯ ಹೋರಾಟ ಅನಿವಾರ್ಯ; ಸಿಎಂಗೆ ಸಿದ್ದರಾಮಯ್ಯ ಎಚ್ಚರಿಕೆ

Siddaramaiah: ಕೇಸ್ ದಾಖಲಿಸುವ ಮೂಲಕ ನಮ್ಮ ಬಾಯಿ ಮುಚ್ಚಿಸಬಹುದು ಎಂದು ತಿಳಿದುಕೊಂಡಿದ್ದರೆ ಅದು ನಿಮ್ಮ ಮೂರ್ಖತನ. ಮುಂದಿನ ದಿನಗಳಲ್ಲಿ ನಮ್ಮ ಪ್ರಶ್ನೆಗಳು ಇನ್ನಷ್ಟು ಹರಿತವಾಗಲಿದೆ ಎಂದು ಬಿಜೆಪಿ ವಿರುದ್ಧ ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.

Sushma Chakre | news18-kannada
Updated:May 21, 2020, 8:16 PM IST
ಸೋನಿಯಾ ಗಾಂಧಿ ವಿರುದ್ಧದ ಕೇಸ್​ ಬಗೆಹರಿಸದಿದ್ದರೆ ರಾಜಕೀಯ ಹೋರಾಟ ಅನಿವಾರ್ಯ; ಸಿಎಂಗೆ ಸಿದ್ದರಾಮಯ್ಯ ಎಚ್ಚರಿಕೆ
ಸಿದ್ದರಾಮಯ್ಯ, ಬಿ.ಎಸ್​. ಯಡಿಯೂರಪ್ಪ.
  • Share this:
ಬೆಂಗಳೂರು (ಮೇ 21): ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಶಿವಮೊಗ್ಗದ ಸಾಗರ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಕಾರ್ಯಕರ್ತ ನೀಡಿದ್ದ ದೂರು ಇದೀಗ ಚರ್ಚೆಯ ವಿಷಯವಾಗಿದೆ. ರಾಜಕೀಯ ದುರುದ್ದೇಶದಿಂದ ಈ ರೀತಿ ದೂರು ನೀಡಿ ಕಾಂಗ್ರೆಸ್ ನಾಯಕಿಯ ಮೇಲೆ ಎಫ್​ಐಆರ್ ದಾಖಲಿಸಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಹಾಗೂ ಕೇಸ್ ಹಿಂಪಡೆಯಲು ಸೂಚಿಸಬೇಕೆಂದು ಡಿ.ಕೆ. ಶಿಕುಮಾರ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿಯಾಗಿದ್ದರು. ಅದರ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಸೋನಿಯಾ ಗಾಂಧಿ ವಿರುದ್ಧದ ಕೇಸಿನ ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸದಿದ್ದರೆ ರಾಜಕೀಯ ಹೋರಾಟ ಮಾಡಬೇಕಾಗುತ್ತದೆ ಎಂದು ಯಡಿಯೂರಪ್ಪನವರಿಗೆ ಎಚ್ಚರಿಕೆ ನೀಡಿದ್ದಾರೆ.

ವಿರೋಧ ಪಕ್ಷದ ನಾಯಕಿಯಾಗಿ ಜನರ ಅಭಿಪ್ರಾಯವನ್ನು ಸರ್ಕಾರದ ಮುಂದಿಡುವುದು ಸೋನಿಯಾ ಗಾಂಧಿ ಅವರ ಕರ್ತವ್ಯ. ಇತ್ತೀಚೆಗೆ ಬಿಜೆಪಿ ವಿನಾಕಾರಣ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಮೊಕದ್ದಮೆ ದಾಖಲಿಸುತ್ತಿದೆ. ಈ ಕೂಡಲೆ ಸೋನಿಯಾ ಗಾಂಧಿ ವಿರುದ್ಧದ ಎಫ್​ಐಆರ್ ರದ್ದುಗೊಳಿಸಿ, ಆ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.


ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದ ಆರೋಪದಲ್ಲಿ ಕಾಂಗ್ರೆಸ್ ಪಕ್ಷದ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಶಿವಮೊಗ್ಗದ ಸಾಗರ ತಾಲೂಕಿನ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಲಾಗಿತ್ತು. ಪ್ರಧಾನಿ ಮೋದಿ ಪಿಎಂ ಕೇರ್ ಫಂಡ್ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮೇ 11ರಂದು ಟ್ವೀಟ್ ಮಾಡಲಾಗಿತ್ತು.

ಪ್ರಧಾನಮಂತ್ರಿ ಮೋದಿಯವರನ್ನು ಅವಹೇಳನ ಮಾಡಿದ ಆರೋಪದಲ್ಲಿ ಸಾಗರದ ವಕೀಲ ಹಾಗೂ ಬಿಜೆಪಿ ಕಾರ್ಯಕರ್ತ ಪ್ರವೀಣ್ ಎಂಬುವವರು ಸೋನಿಯಾ ಗಾಂಧಿ ವಿರುದ್ಧ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ವಿರುದ್ಧ ಕೇಸ್ ದಾಖಲಿಸಿಕೊಳ್ಳಲಾಗಿತ್ತು. ಇದೀಗ ಕಾಂಗ್ರೆಸ್​ನವರಿಗೆ ಮಾತ್ರವಲ್ಲದೆ ಬಿಜೆಪಿ ನಾಯಕರಿಗೂ ತಲೆನೋವಾಗಿ ಪರಿಣಮಿಸಿದೆ.

ಇದನ್ನೂ ಓದಿ: ಸೋನಿಯಾ ಗಾಂಧಿ ವಿರುದ್ಧ ಶಿವಮೊಗ್ಗದ ಸಾಗರದಲ್ಲಿ ಕೇಸ್ ದಾಖಲು; ಪೊಲೀಸ್ ಅಧಿಕಾರಿಯ ಅಮಾನತಿಗೆ ಕಾಂಗ್ರೆಸ್ ಒತ್ತಾಯ

ಕೊರೋನಾ ಹಿನ್ನೆಲೆಯಲ್ಲಿ ಕೆಲವು ದಿನಗಳಿಂದ ಶಾಂತವಾಗಿ ರಾಜ್ಯ ರಾಜಕಾರಣ ಈ ಘಟನೆಯಿಂದಾಗಿ ಮತ್ತೆ ಚುರುಕು ಪಡೆದಿದೆ. ಇಂದು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿಯಾಗಿದ್ದ ಕಾಂಗ್ರೆಸ್ ನಾಯಕರಾದ ಸಲೀಂ ಅಹಮದ್, ಮಾಜಿ ಸಂಸದ ಉಗ್ರಪ್ಪ, ವಿ.ಆರ್. ಸುದರ್ಶನ್ , ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಪ್ಪು ಮಾಹಿತಿ ನೀಡಿ ದೂರು ನೀಡಿದ ವಕೀಲನ ಮಾತು ಕೇಳಿ ಕೇಸ್ ದಾಖಲಿಸಿರುವ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿದ್ದರು.

ಸಿಎಂ ಭೇಟಿಯ ಬಳಿಕ ಮಾತನಾಡಿದ್ದ ಡಿ.ಕೆ. ಶಿವಕುಮಾರ್, ಸಾಗರ ಪೊಲೀಸ್ ಠಾಣೆಯಲ್ಲಿ ನಡೆದಿರುವ ಘಟನೆಯಿಂದ ಇಡೀ ದೇಶಕ್ಕೆ ಆಶ್ಚರ್ಯವಾಗಿದೆ. ನಮ್ಮ ನಾಯಕಿ ತಮ್ಮ ಮಾಹಿತಿ ಏನಿದೆಯೋ ಅದನ್ನು ಟ್ವಿಟ್ಟರ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಅವರ ಬಳಿಯಿರುವ ನಿಖರ ಮಾಹಿತಿಯನ್ನು ಟ್ವೀಟ್ ಮಾಡಿದ್ದಾರೆ. ಪ್ರವೀಣ್ ಎಂಬ ಯುವಕ ತನ್ನ ಸಂಬಂಧಿ ಪೊಲೀಸ್ ಮೂಲಕ ಎಫ್ಐಆರ್ ದಾಖಲಿಸಿದ್ದಾನೆ. ಈ ಬಗ್ಗೆ ನಾನು ಗೃಹ ಸಚಿವರ ಜೊತೆ ಮಾತಾಡಿದ್ದೇನೆ. ಮುಖ್ಯಮಂತ್ರಿಗಳನ್ನೂ ಭೇಟಿಯಾಗಿದ್ದೇವೆ. ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆಯನ್ನು ಸಿಎಂ ಯಡಿಯೂರಪ್ಪ ನೀಡಿದ್ದಾರೆ. ಈ ಬಗ್ಗೆ ಕೂಡಲೇ ಬಿ ರಿಪೋರ್ಟ್ ಮಾಡಲು‌ ಸೂಚಿಸಿದ್ದಾರೆ ಎಂದು ಹೇಳಿದ್ದರು.

ಇದನ್ನೂ ಓದಿ: ಸೋನಿಯಾ ಗಾಂಧಿ ವಿರುದ್ಧ ಎಫ್​ಐಆರ್​ ಹಿನ್ನೆಲೆ; ಯಡಿಯೂರಪ್ಪರನ್ನು ಭೇಟಿಯಾದ ಕಾಂಗ್ರೆಸ್ ನಾಯಕರು

ಈ ಕುರಿತು ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದ ಸೋನಿಯಾ ಗಾಂಧಿಯವರ ವಿರುದ್ಧ ದುರುದ್ದೇಶದಿಂದ ಎಫ್ಐಆರ್ ದಾಖಲಿಸಿದ ಸಾಗರದ ಪೊಲೀಸ್ ಅಧಿಕಾರಿ ಹದ್ದು ಮೀರಿ ವರ್ತಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪನವರೇ, ಅನಗತ್ಯ ರಾಜಕೀಯ ಸಂಘರ್ಷಕ್ಕೆ ಅವಕಾಶ ನೀಡದೆ ತಕ್ಷಣ ಈ ಎಫ್ಐಆರ್ ರದ್ದುಪಡಿಸಿ ಮತ್ತು ಅಧಿಕಾರಿಯನ್ನು ಅಮಾನತ್​ನಲ್ಲಿರಿಸಿ ಎಂದು ಎಚ್ಚರಿಕೆ ನೀಡಿದ್ದಾರೆ.


ದೇಶದ ಜನರ ದೇಣಿಗೆಯ PMCaresFund ಯಾರೊಬ್ಬರ ಮನೆಯ ಆಸ್ತಿಯೂ ಅಲ್ಲ. ಅದು ಈ ದೇಶದ ಪ್ರಜೆಗಳ ದುಡ್ಡು, ಅದು ಸದುಪಯೋಗವಾಗಬೇಕು ಎಂದು ಹೇಳುವ ಅಧಿಕಾರ ಪ್ರತಿಯೊಬ್ಬರಿಗೂ ಇದೆ. ಅದನ್ನೇ ಕಾಂಗ್ರೆಸ್ ಅಧ್ಯಕ್ಷರಾದ ಸೋನಿಯಾ ಗಾಂಧಿಯವರು ಹೇಳಿದ್ದಾರೆ. ಅದರಲ್ಲಿ ತಪ್ಪೇನಿದೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.



ಇತ್ತೀಚೆಗೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮೇಲೆ ಅಲ್ಲಲ್ಲಿ ಪೊಲೀಸರು ಮೊಕದ್ದಮೆ ದಾಖಲಿಸುತ್ತಿರುವುದು ಹೆಚ್ಚಾಗಿದೆ. ಈ ರೀತಿ‌ ನಮ್ಮ ಬಾಯಿ ಮುಚ್ಚಿಸಬಹುದು ಎಂದು ತಿಳಿದುಕೊಂಡಿದ್ದರೆ ಅದು ನಿಮ್ಮ ಮೂರ್ಖತನ. ಮುಂದಿನ ದಿನಗಳಲ್ಲಿ ನಮ್ಮ ಪ್ರಶ್ನೆಗಳು ಇನ್ನಷ್ಟು ಹರಿತವಾಗಲಿದೆ, ಸಂಘರ್ಷ ಇನ್ನಷ್ಟು ಬಿರುಸು ಪಡೆಯಲಿದೆ ಎಂದು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.



ಇದನ್ನೂ ಓದಿ: ಸೋನಿಯಾ ಗಾಂಧಿ ವಿರುದ್ಧದ FIR ಹಿಂತೆಗೆದುಕೊಳ್ಳುವ ಭರವಸೆ ನೀಡಲಾಗಿದೆ; ಡಿ.ಕೆ. ಶಿವಕುಮಾರ್‌

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಮ್ಮ ಸಮಯ ಮತ್ತು ಶ್ರಮವನ್ನು ಕೊರೋನಾ ಸೋಂಕನ್ನು ಎದುರಿಸಲು ಮತ್ತು ನೊಂದವರಿಗೆ ನೆರವಾಗಲು ವ್ಯಯ ಮಾಡಲಿ. ಈ ಕಷ್ಟದ ದಿನಗಳ ಅವಕಾಶವನ್ನು ದುರುಪಯೋಗ ಮಾಡಿಕೊಂಡು ವಿರೋಧ ಪಕ್ಷಗಳ ನಾಯಕರನ್ನು ಕಾರ್ಯಕರ್ತರನ್ನು ಹಣಿಯಲು ದುರುಪಯೋಗ ಮಾಡಿಕೊಳ್ಳಬೇಡಿ ಎಂದು ಸಿದ್ದರಾಮಯ್ಯ ಕಿವಿಮಾತು ಹೇಳಿದ್ದಾರೆ.



ಸೋನಿಯಾ ಗಾಂಧಿಯವರು ವಿರೋಧ ಪಕ್ಷದ ನಾಯಕಿಯಾಗಿ ಜನಾಭಿಪ್ರಾಯವನ್ನು ಸರ್ಕಾರದ ಮುಂದಿಟ್ಟಿದ್ದಾರೆ. ಇದಕ್ಕೆ ಸ್ಪಂದಿಸುವುದು ಜವಾಬ್ದಾರಿಯುತ ಸರ್ಕಾರದ ಕರ್ತವ್ಯ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.



ಸೋನಿಯಾ ಗಾಂಧಿಯವರ ವಿರುದ್ಧ ದೂರು ನೀಡಿದವನು ಬಿಜೆಪಿ ಕಾರ್ಯಕರ್ತನಾಗಿದ್ದು, ರಾಜಕೀಯ ದುರುದ್ದೇಶದಿಂದಲೇ ಇದನ್ನು ಮಾಡಲಾಗಿದೆ ಎಂಬ ಬಗ್ಗೆ ಅನುಮಾನ ಇಲ್ಲ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸದಿದ್ದರೆ ರಾಜಕೀಯ ಹೋರಾಟ ಅನಿವಾರ್ಯವಾಗಬಹುದು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.


First published: May 21, 2020, 8:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading