• Home
  • »
  • News
  • »
  • state
  • »
  • Siddaramaiah: ಜಾತ್ಯತೀತತೆಯ ಮೇಲಿನ ನನ್ನ ನಂಬಿಕೆಯನ್ನು BJP ಪುರಸ್ಕರಿಸಿದೆ; ಸಿದ್ರಾಮುಲ್ಲಾ ಖಾನ್ ಟೀಕೆಗೆ ಪ್ರತಿಕ್ರಿಯೆ

Siddaramaiah: ಜಾತ್ಯತೀತತೆಯ ಮೇಲಿನ ನನ್ನ ನಂಬಿಕೆಯನ್ನು BJP ಪುರಸ್ಕರಿಸಿದೆ; ಸಿದ್ರಾಮುಲ್ಲಾ ಖಾನ್ ಟೀಕೆಗೆ ಪ್ರತಿಕ್ರಿಯೆ

ಸಿದ್ದರಾಮಯ್ಯ, ಮಾಜಿ ಸಿಎಂ

ಸಿದ್ದರಾಮಯ್ಯ, ಮಾಜಿ ಸಿಎಂ

ಪರೇಶ್ ಮೇಸ್ತಾ ಎಂಬ ಯುವಕನ ಸಾವು ಹತ್ಯೆಯಲ್ಲ ಎಂದು ಸಿಬಿಐ ಇತ್ತೀಚೆಗೆ ಹೇಳಿದೆ. ಉಳಿದ ಹತ್ಯೆಗಳು ನಡೆದಿದ್ದು ವೈಯಕ್ತಿಕ ದ್ವೇಷ-ಜಗಳಗಳಿಂದ ಎಂದು ತನಿಖೆಯಿಂದ ಗೊತ್ತಾಗಿದೆ ಎಂದು ಬಿಜೆಪಿಗೆ ಸಿದ್ದರಾಮಯ್ಯ ಚಾಟಿ ಬೀಸಿದ್ದಾರೆ.

  • Share this:

ತಮ್ಮ ವಿರುದ್ಧ ಸಿದ್ರಾಮುಲ್ಲಾ ಖಾನ್ ಹೆಸರು ಬಳಸಿ ಬಿಜೆಪಿ (BJP) ಟೀಕೆ ಮಾಡುತ್ತಿರುವ ಸಂಬಂಧ ವಿಪಕ್ಷ ನಾಯಕ ಸಿದ್ದರಾಮಯ್ಯ (Former CM Siddaramaiah) ಮಾಧ್ಯಮ ಪ್ರಕಟನೆ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಭಾರತೀಯ ಜನತಾ ಪಕ್ಷ ನನ್ನ ಹೆಸರಿಗೆ ಮುಸ್ಲಿಂ ಹೆಸರು (Muslim Name) ಸೇರಿಸಿ ನಡೆಸುತ್ತಿರುವ ಅಪ ಪ್ರಚಾರದಲ್ಲಿ ಅಚ್ಚರಿಪಡುವಂತಹದ್ದೇನಿಲ್ಲ. ಇಂತಹ ಅಪ ಪ್ರಚಾರವಲ್ಲದೆ ಅವರಾದರೂ ಬೇರೆ ಏನು ಮಾಡಲು ಸಾಧ್ಯ?  ಶೂನ್ಯ ಸಾಧನೆ, ಭ್ರಷ್ಟಾಚಾರ, ಅನಾಚಾರಗಳನ ಮಸಿ ಬಳಿದುಕೊಂಡ ಮುಖವನ್ನು ತೋರಿಸಿ ಮತಯಾಚನೆ ಮಾಡಲಿಕ್ಕಾಗುತ್ತದೆಯೇ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.


ಮೈತುಂಬ ಕಪ್ಪು ಬಳಿದುಕೊಂಡ ದುಷ್ಟರಿಗೆ ಬಿಳಿ ಬಟ್ಟೆ ನೋಡಿದಾಕ್ಷಣ ಕಪ್ಪು ಬಳಿಯೋಣ ಎಂದು ಮನಸ್ಸಾಗುವುದು ಸಹಜ ಗುಣ. ಇದು ಅವರ ಸೋಲು, ಹತಾಶೆ ಮತ್ತು ಅಸಹಾಯಕತೆಯನ್ನು ಸೂಚಿಸುತ್ತದೆ. ನೈತಿಕ ಅಧ:ಪತನಕ್ಕೆ ಬಿದ್ದಿರುವುದರ ಬಗ್ಗೆ ನಾವೆಲ್ಲ ಸಾಮೂಹಿಕವಾಗಿ ಸಂತಾಪ ಸೂಚಿಸೋಣ ಎಂದು ವ್ಯಂಗ್ಯ ಮಾಡಿದ್ದಾರೆ.


ಬಿಜೆಪಿಗೆ ತಿರುಗೇಟು


ಸಿದ್ರಮುಲ್ಲಾಖಾನ್ ಎಂದು ನನ್ನ ಹೆಸರಿಗೆ ಮುಸ್ಲಿಂ ಹೆಸರು ಸೇರಿಸಿರುವ ಬಗ್ಗೆ ನನಗೇನು ಬೇಸರವಿಲ್ಲ. ಮುಸ್ಲಿಂ ಕುಟುಂಬದಲ್ಲಿ ಹುಟ್ಟಿ ಗೋವಿಂದ ಭಟ್ಟರ ಶಿಷ್ಯನಾಗಿ ಈಗಲೂ ನಮ್ಮ ಆತ್ಮಸಾಕ್ಷಿಯನ್ನು ಎಚ್ಚರಿಸುತ್ತಲೇ ಇರುವ ಸಂತ ಶಿಶುನಾಳ ಷರೀಫರ ಪರಂಪರೆ ನಮ್ಮದು. ಮುಸ್ಲಿಂ ಕುಟುಂಬದಲ್ಲಿ ಹುಟ್ಟಿ ಸಂತ ರಮಾನಂದರ ಶಿಷ್ಯತ್ವವನ್ನು ಒಪ್ಪಿಕೊಂಡು ಜಗಮೆಚ್ಚಿದ ಸೂಫಿ ಕವಿ ಕಬೀರನೂ ನಮ್ಮದೇ ಪರಂಪರೆಯವರು.


siddaramaiah give befitting reply for bjp calling him sidramulla khan mrq
ಸಿದ್ದರಾಮಯ್ಯ, ಮಾಜಿ ಸಿಎಂ


ಆದ್ದರಿಂದ ಮುಸ್ಲಿಂ ಹೆಸರನ್ನು ನನ್ನ ಹೆಸರಿಗೆ ಜೋಡಿಸುವ ಮೂಲಕ  ಜಾತ್ಯತೀತತೆಯ ಮೇಲಿನ ನನ್ನ ನಂಬಿಕೆಯನ್ನು ಅವರು ಪುರಸ್ಕರಿಸಿದ್ದಾರೆಂದು ಎಂದು ತಿಳಿದುಕೊಳ್ಳುವೆ ಎಂದು ತಿರುಗೇಟು ನೀಡಿದ್ದಾರೆ.


ಸಿದ್ರಮುಲ್ಲಾಖಾನ್ ಕರೆದ್ರೆ ಖುಷಿ ಪಡುವೆ


ಮುಖ್ಯಮಂತ್ರಿಯಾಗಿ ಜನರಿಗಾಗಿ ಮಾಡಿರುವ ಸೇವೆಯನ್ನು ಗುರುತಿಸಿದ್ದಾರೆ. ಬಹಳಷ್ಟು ಜನ ನನ್ನನ್ನು ‘ಅನ್ನರಾಮಯ್ಯ’, ರೈತರಾಮಯ್ಯ, ಕನ್ನಡ ರಾಮಯ್ಯ, ದಲಿತರಾಮಯ್ಯ ಎಂದೆಲ್ಲಾ ಕರೆಯುತ್ತಾರೆ. ಅದೇ ರೀತಿ ಮುಸ್ಲಿಂ ಸಮುದಾಯಕ್ಕೆ ನಾನು ಮಾಡಿರುವ ಕೆಲಸವನ್ನು ಗುರುತಿಸಿ ನನ್ನನ್ನು ‘ಸಿದ್ರಮುಲ್ಲಾ ಖಾನ್’ ಎಂದು ಕರೆದರೆ ಅದಕ್ಕೂ ಖುಷಿಪಡುವೆ ಎಂದಿದ್ದಾರೆ.


ಹಿಂದೂ ಕೋಮುವಾದದಷ್ಟೇ ಮುಸ್ಲಿಂ ಮತ್ತಿತರ ಧರ್ಮಗಳ ಕೋಮುವಾದವನ್ನೂ ವಿರೋಧಿಸುತ್ತಾ ಬಂದಿದ್ದೇನೆ. ಟಿಪ್ಪು ಸುಲ್ತಾನ ಜಯಂತಿ ಆಚರಣೆಯನ್ನೇ ನೆಪವಾಗಿಟ್ಟುಕೊಂಡು ಕಳೆದ ಕೆಲವು ವರ್ಷಗಳಿಂದ ಬಿಜೆಪಿ ಮತ್ತು ಸಂಘ ಪರಿವಾರ ಹುಟ್ಟು ಹಾಕಿದ ವಿವಾದ ಮತ್ತು ಗಲಭೆಗಳು ರಾಜಕೀಯ ಪ್ರೇರಿತವಾದುದು ಎಂದು ರಾಜ್ಯದ ಜನರಿಗೆ ಈಗ ಮನದಟ್ಟಾಗಿದೆ.


400 ಪುಟಗಳ ಪುಸ್ತಕ ಬಿಜೆಪಿಗೆ ಕಳುಹಿಸುವೆ


ಬಿಜೆಪಿಯ ಮುಖ್ಯಮಂತ್ರಿಗಳಿಂದ ಹಿಡಿದು ಸಚಿವ-ಶಾಸಕರವರೆಗೆ ಎಲ್ಲರೂ ಬಗೆಬಗೆಯ ವೇಷಧರಿಸಿ ಟಿಪ್ಪು ಜಯಂತಿ ಆಚರಿಸಿರುವುದು ಮಾತ್ರವಲ್ಲ ಟಿಪ್ಪುವನ್ನು ಹಾಡಿ ಹೊಗಳಿದ್ದಕ್ಕೆ ಸಾಕ್ಷಿಗಳಿವೆ. ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಟಿಪ್ಪುವಿನ ಬಗ್ಗೆ 400 ಪುಟಗಳ ಪುಸ್ತಕ ಬರೆಸಿದ್ದು ಮಾತ್ರವಲ್ಲ ಟಿಪ್ಪುವನ್ನು ಕೊಂಡಾಡಿ ಮುನ್ನುಡಿಯನ್ನೂ ಬರೆದಿದ್ದರು.


siddaramaiah give befitting reply for bjp calling him sidramulla khan mrq
ಸಿದ್ದರಾಮಯ್ಯ, ಮಾಜಿ ಸಿಎಂ


ಶೋಭಾ ಕರಂದ್ಲಾಜೆ ಪತ್ರ


ನಾನು ಮುಖ್ಯಮಂತ್ರಿಯಾಗಿದ್ದಾಗ ಹಿಂದೂ ಯುವಕರ ಕೊಲೆ ನಡೆದಿತ್ತು ಎಂಬ ಸುಳ್ಳು ಪ್ರಚಾರವನ್ನೂ ಬಿಜೆಪಿ ನಾಯಕರು ನಡೆಸುತ್ತಿದ್ದಾರೆ. ಶೋಭಾ ಕರಂದ್ಲಾಜೆಯವರು ರಾಜ್ಯದಲ್ಲಿ 24 ಹಿಂದೂಗಳ ಹತ್ಯೆಗಳು ನಡೆದಿವೆ ಎಂದು ಕೇಂದ್ರ ಗೃಹಸಚಿವರಾದ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದರು. ಅದರಲ್ಲಿ ಜೀವಂತವಿದ್ದ ವ್ಯಕ್ತಿಯ ಹೆಸರನ್ನೂ ಸೇರಿಸಲಾಗಿತ್ತು ಎಂಬ ವಿಷಯವನ್ನು ಸಿದ್ದರಾಮಯ್ಯ ಪ್ರಸ್ತಾಪಿಸಿದ್ದಾರೆ.


ಇದನ್ನೂ ಓದಿ:  C T Ravi: ನನ್ನನ್ನು ಹಿಂದೂ ಹುಲಿ ಅಂತ ಕರೆಯಬೇಕೇ ವಿನಃ ಮುಲ್ಲಾ ಅಂತಲ್ಲ; ಸಿ ಟಿ ರವಿ


ಬಿಜೆಪಿಗೆ ಸಿದ್ದರಾಮಯ್ಯ ಚಾಟಿ


ಅದರಲ್ಲಿ ಹನ್ನೊಂದು ಹಿಂದೂಗಳ ಹತ್ಯೆಯಲ್ಲಿ ಆರೋಪಿಗಳಾಗಿದ್ದವರು ಎಸ್​ಡಿಪಿಐ ಮತ್ತು ಪಿಎಫ್​​ಐ ಸದಸ್ಯರು. ಅವರ ವಿರುದ್ಧ ನಮ್ಮದೇ ಸರ್ಕಾರ ಪ್ರಕರಣ ದಾಖಲಿಸಿ ಆರೋಪ ಪಟ್ಟಿ ಸಲ್ಲಿಸಿತ್ತು. ಅವರಲ್ಲಿ ಪರೇಶ್ ಮೇಸ್ತಾ ಎಂಬ ಯುವಕನ ಸಾವು ಹತ್ಯೆಯಲ್ಲ ಎಂದು ಸಿಬಿಐ ಇತ್ತೀಚೆಗೆ ಹೇಳಿದೆ. ಉಳಿದ ಹತ್ಯೆಗಳು ನಡೆದಿದ್ದು ವೈಯಕ್ತಿಕ ದ್ವೇಷ-ಜಗಳಗಳಿಂದ ಎಂದು ತನಿಖೆಯಿಂದ ಗೊತ್ತಾಗಿದೆ ಎಂದು ಬಿಜೆಪಿಗೆ ಸಿದ್ದರಾಮಯ್ಯ ಚಾಟಿ ಬೀಸಿದ್ದಾರೆ.


11 ಮುಸ್ಲಿಂ ಯುವಕರ ಹತ್ಯೆ


ಇದೇ ಅವಧಿಯಲ್ಲಿ 11 ಮುಸ್ಲಿಂ ಯುವಕರ ಹತ್ಯೆಯೂ ನಡೆದಿತ್ತು. ಈ ಹತ್ಯೆಗಳ ಎಲ್ಲ ಆರೋಪಿಗಳು ಬಜರಂಗದಳ ಮತ್ತಿತರ ಸಂಘಪರಿವಾರದ ಸಂಘಟನೆಗಳ ಕಾರ್ಯಕರ್ತರಾಗಿದ್ದಾರೆ. ಅವರ ವಿರುದ್ದವೂ ನಮ್ಮ ಸರ್ಕಾರ ಪ್ರಕರಣಗಳನ್ನು ದಾಖಲಿಸಿತ್ತು. ಈ ಪ್ರಕರಣಗಳ ಸಮಗ್ರ ಮಾಹಿತಿಯನ್ನು ನಮ್ಮ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ರಾಮಲಿಂಗ ರೆಡ್ಡಿಯವರು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ. ಅದನ್ನು ಬಿಜೆಪಿ ಕಚೇರಿಗೆ ಕಳಿಸಿಕೊಡುವ ವ್ಯವಸ್ಥೆ ಮಾಡುತ್ತೇನೆ ಎಂದಿದ್ದಾರೆ.


ಇದನ್ನೂ ಓದಿ:  Maharashtra Villages: ನಮ್ಮ ಗ್ರಾಮಗಳನ್ನು ಕರ್ನಾಟಕಕ್ಕೆ ಸೇರಿಸಿ; ಜಿಲ್ಲಾಧಿಕಾರಿ ಪತ್ರ ಬರೆದ ಗ್ರಾಮಸ್ಥರು


ಅಪಪ್ರಚಾರ ನಡೆಸಿದವರು ಜನರ ಮುಂದೆ ಬೆತ್ತಲಾಗ್ತಾರೆ


ಅಪಪ್ರಚಾರ ನಡೆಸಿದಷ್ಟು ಅಪಪ್ರಚಾರ ನಡೆಸಿದವರು ರಾಜ್ಯದ ಜನರ ಮುಂದೆ ಬೆತ್ತಲಾಗುತ್ತಾರೆ. ನನ್ನ ವಿರುದ್ಧದ ಅಪಪ್ರಚಾರವನ್ನು ನಿಲ್ಲಿಸಬೇಕೆಂದು ನಾನೇನು ಮನವಿ ಮಾಡುವುದಿಲ್ಲ. ಇಂತಹ ಅಪಪ್ರಚಾರಗಳಿಗೆ ಹೆದರಿ ರಾಜ್ಯ ಸರ್ಕಾರದ ದುರಾಡಳಿತ, ಭ್ರಷ್ಟಾಚಾರ ಮತ್ತು ಕೋಮುವಾದದ ರಾಜಕಾರಣದ ವಿರುದ್ಧ ನನ್ನ ಹೋರಾಟವನ್ನು ನಾನು ನಿಲ್ಲಿಸುತ್ತೇನೆ ಎಂದು ತಿಳಿದುಕೊಂಡರೆ ಅದು ಮೂರ್ಖತನ ಅಷ್ಟೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

Published by:Mahmadrafik K
First published: