ಯಾದಗಿರಿ: ಇಂದು ಕಾಂಗ್ರೆಸ್ ಪಕ್ಷದ ಪ್ರಜಾಧ್ವನಿ ಯಾತ್ರೆ (Congress Praja Dhwani Yatre) ಯಾದಗಿರಿ ಜಿಲ್ಲೆಯ ಸುರಪುರ ಕ್ಷೇತ್ರದಲ್ಲಿ (Surapura) ಭರ್ಜರಿಯಾಗಿ ನಡೆದಿದೆ. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು, ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಅವರಿಗೆ ಹೂಮಳೆ ಸುರಿಸಿ ಸ್ವಾಗತ ಕೋರಿದ್ದಾರೆ. ಅಲ್ಲದೇ ಜೈಕಾರದೊಂದಿಗೆ ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಇನ್ನು ಕ್ಷೇತ್ರದಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಅಭಿಮಾನಿಗಳಾಗಿದ್ದ (Fans) ಪರಮಪ್ಪ, ಮಲ್ಲಮ್ಮ ದಂಪತಿಯ 4 ತಿಂಗಳ ಮಗುವಿಗೆ ತಮ್ಮ ಹೆಸರನ್ನು (Naming Ceremony ) ಇಟ್ಟು ಶುಭ ಕೋರಿದ್ದಾರೆ. ತಮ್ಮ ಮಗುವಿಗೆ ಹೆಸರನ್ನು ಇಟ್ಟ ಮಾಜಿ ಸಿಎಂಗೆ ದಂಪತಿ ಧನ್ಯವಾದ ತಿಳಿಸಿದ್ದಾರೆ.
ಮಗುವಿಗೆ ಸಿಹಿ ತಿನ್ನಿಸಿ ಶುಭ ಕೋರಿದ ಸಿದ್ದರಾಮಯ್ಯ
ಈ ಕುರಿತಂತೆ ಟ್ವೀಟ್ ಮಾಡಿ ಸಂತಾಸ ಹಂಚಿಕೊಂಡಿರುವ ಸಿದ್ದರಾಮಯ್ಯ ಅವರು, ನನ್ನ ಮೇಲಿನ ಪ್ರೀತಿ, ಅಭಿಮಾನದಿಂದ ಯಾದಗಿರಿ ಜಿಲ್ಲೆಯ ಶೋರಾಪುರದ ಬಾಚಿಮಟ್ಟಿ ಗ್ರಾಮದವರಾದ ಪರಮಪ್ಪ, ಮಲ್ಲಮ್ಮ ದಂಪತಿಗಳು ಕೆಲವು ದಿನದ ಹಿಂದೆ ತಮ್ಮ ಮಗುವಿಗೆ ಸಿದ್ದರಾಮಯ್ಯ ಎಂದು ಹೆಸರನ್ನಿಟ್ಟಿದ್ದರು, ಇಂದು ಸುರಪುರದ ದೇವತ್ಕಲ್ ನಲ್ಲಿ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ ಈ ದಂಪತಿಗಳನ್ನು ಭೇಟಿಯಾಗಿ, ಮಗುವಿಗೆ ಸಿಹಿ ತಿನ್ನಿಸಿ ಶುಭ ಕೋರಿದೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: HD Revanna: ಕಣ್ಣು ಬಿಟ್ಟರೆ ಭಸ್ಮ! -ನಿಂಬೆಹಣ್ಣು ವರ್ಕೌಟ್ ಆಗಲ್ಲ ಎಂದ ಡಿಕೆ ಸುರೇಶ್ಗೆ ಹೆಚ್ಡಿ ರೇವಣ್ಣ ಕೌಂಟರ್
ಕಾರ್ಯಕ್ರಮದ ವೇಳೆ ವೇದಿಕೆ ಮೇಲೆಯೇ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿಂಗಣ್ಣ ಬಾಚಿಮಟ್ಟಿ ಅವರ ಸಹೋದರ ಮಗನಿಗೆ ಸಿದ್ದರಾಮಯ್ಯ ಎಂದು ನಾಮಕರಣ ಮಾಡಿದ್ದಾರೆ.
ಪರಮಪ್ಪ ಅವರು ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಅಭಿಮಾನಿಯಾಗಿದ್ದು, ಇಂದು ಕ್ಷೇತ್ರಕ್ಕೆ ಬಂದಿದ್ದ ಸಿದ್ದರಾಮಯ್ಯ ಅವರನ್ನು ನೋಡಲು ದಂಪತಿ ತಮ್ಮ 4 ತಿಂಗಳ ಮಗುವಿನೊಂದಿಗೆ ಆಗಮಿಸಿದ್ದರು. ಅಲ್ಲದೇ ಪ್ರಜಾಧ್ವನಿ ವೇದಿಕೆಯಲ್ಲಿ ಮಗುವಿಗೆ ಸಿದ್ದರಾಮಯ್ಯ ಎಂದು ತಮ್ಮ ನೆಚ್ಚಿನ ನಾಯಕರಿಂದಲೇ ನಾಮಕರಣ ಮಾಡಿಸಿದ್ದಾರೆ. ತಮ್ಮ ಮನವಿಗೆ ಮೇರೆಗೆ ಹೆಸರು ಇಡಲು ಒಪ್ಪಿಕೊಂಡ ಸಿದ್ದರಾಮಯ್ಯ ಅವರಿಗೆ ದಂಪತಿ ಧನ್ಯವಾದ ತಿಳಿಸಿದ್ದಾರೆ.
ಉಳಿದಂತೆ ರಾಜ್ಯದ ಜನರಿಗೆ ಅನ್ನಭಾಗ್ಯ ಯೋಜನೆ ಜಾರಿಗೆ ತಂದಿದ್ದ ಹಿನ್ನಲೆಯಲ್ಲಿ ಕಲಾವಿದ ಸಿದ್ದರಾಮ ಎನ್ನುವವರು ಅಕ್ಕಿಯಲ್ಲಿ ಸಿದ್ದರಾಮಯ್ಯ ಭಾವಚಿತ್ರ ಬಿಡಿಸಿ ಕಾಣಿಕೆ ನೀಡಿದ್ದರು. ಅಷ್ಟೇ ಅಲ್ಲ ಇಲ್ಲೂ ಕೂಡ ಸಿದ್ದರಾಮಯ್ಯಗೆ ಗ್ರಾಮಸ್ಥರು ಟಗರು ನೀಡುವ ಮೂಲಕ ಅಭಿಮಾನ ಮೆರೆದರು. ಮತ್ತೆ ಮಾಜಿ ಶಾಸಕ ರಾಜಾವೆಂಕಟಪ್ಪ ನಾಯಕ ಅವರನ್ನು ಗೆಲ್ಲಿಸಬೇಕೆಂದು ಜನರಲ್ಲಿ ವಿನಂತಿ ಮಾಡಿದ್ದಾರೆ.
ಅಶೋಕ್ ಗ್ರಾಮವಾಸ್ತವ್ಯ ಮಾಡಿದ್ದ ದೇವತ್ಕಲ್ ಗ್ರಾಮದಲ್ಲೇ ಪ್ರಜಾಧ್ವಿನಿ ಯಾತ್ರೆ
ಇನ್ನು, ಸುರಪುರ ಕ್ಷೇತ್ರದಿಂದ ಆಗಮಿಸಿದ್ದ ಸಿದ್ದರಾಮಯ್ಯ ಅವರು ಕ್ಷೇತ್ರದಲ್ಲಿ ಚುನಾವಣೆಯ ಕಾವು ಹೆಚ್ಚಿಸಿದರು. ಅದರಲ್ಲೂ ಕಂದಾಯ ಸಚಿವ ಆರ್.ಅಶೋಕ್ ಗ್ರಾಮವಾಸ್ತವ್ಯ ಮಾಡಿದ್ದ ದೇವತ್ಕಲ್ ಗ್ರಾಮದ ಸರ್ಕಾರಿ ಪ್ರೌಢಶಾಲಾ ಆವರಣದಲ್ಲೇ ಕೈ ನಾಯಕರ ಪ್ರಜಾಧ್ವನಿ ಯಾತ್ರೆಯ ಮೂಲಕ ಶಕ್ತಿ ಪ್ರದರ್ಶನ ನಡೆಸಿದ್ದರು.
ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ನಾನು ಸಿಎಂ ಆಗಿದ್ದ ಅವಧಿಯಲ್ಲಿ ಸಾಕಷ್ಟು ಯೋಜನೆಗಳು ಜಾರಿಗೆ ತಂದಿದ್ದೇನೆ. ಕೊಟ್ಟ ಮಾತಿನಂತೆ ಭರವಸೆ ಈಡೆರಿಸಿದ್ದೇನೆ. ಬಸವರಾಜ್ ಬೊಮ್ಮಾಯಿ ಸರ್ಕಾರ ಸುಳ್ಳಿನ ಸರ್ಕಾರವಾಗಿದೆ ಭ್ರಷ್ಟಾಚಾರದ ಸರ್ಕಾರವಾಗಿದೆ.
ಇಂದು ವಿಧಾನಸಭೆ ಅಧಿವೇಶನದಲ್ಲಿ ರಾಜ್ಯಪಾಲರು ಸರ್ಕಾರದ ಕೆಲಸದ ಬಗ್ಗೆ ಹೇಳಿದ್ದಾರೆ ಅವರ ಭಾಷಣದಲ್ಲೂ ಬಿಜೆಪಿ ಸುಳ್ಳು ಹೇಳಿಸಿದೆ ಇದನ್ನು ನಾನು ಓದಿದ್ದೇನೆ. ಬೊಮ್ಮಾಯಿ ಅವರಿಗೆ ನಾನು ನೇರವಾಗಿ ಕರೆದಿದ್ದೇನೆ, ನಿಮಗೆ ತಾಕತ್ತಿದ್ದರೆ ಬನ್ನಿ ಯಾರು ಎಷ್ಟು ಕೆಲಸ ಮಾಡಿದ್ದಾರೆ ಎಂದು ಒಂದೇ ವೇದಿಕೆ ಮೇಲೆ ಚರ್ಚೆ ಮಾಡೋಣಾ. ನಿಮ್ಮಿಂದ ಸಾಬೀತು ಮಾಡಲು ಆಗಲಿಲ್ಲ ಎಂದರೆ ರಾಜೀನಾಮೆ ಕೊಟ್ಟು ಹೋಗಿ, ಒಂದು ವೇಳೆ ಸಾಬೀತು ಮಾಡಿದರೆ ನಾನು ರಾಜೀನಾಮೆ ಕೊಡುತ್ತೇನೆ ಎಂದು ಸವಾಲು ಎಸೆದರು.
ರಾಜುಗೌಡ ನಿನಗೆ ಬುದ್ಧಿ ಇದೆಯಾ?
ನಮ್ಮ ಸರ್ಕಾರದ ಅವಧಿಯಲ್ಲಿ ಆಗಿದ್ದ ಸ್ಕಾಡಾ ಗೇಟ್ ಯೋಜನೆ ಈಗಾಗಲೇ ಚಾಲನೆಯಲ್ಲಿದೆ, ಐದು ವರ್ಷದ ಹಿಂದೆಯೆ ಗೇಟ್ ಓಪನ್ ಆಗಿದೆ. ರಾಜುಗೌಡ ನಿನಗೆ ಬುದ್ಧಿ ಇದೆಯಾ? ಪ್ರಧಾನಿ ಅವರನ್ನು ಕರೆತಂದು ಅದನ್ನು ಉದ್ಘಾಟನೆ ಮಾಡಿಸಿದ್ದೀರಿ, ಮಾನ ಮರ್ಯಾದೆ ಇದೆಯಾ ಎಂದು ಕಿಡಿಕಾರಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ