ಮೈಸೂರು (ಡಿ. 19): ಸಿದ್ದರಾಮಯ್ಯ ಒಳ ಒಪ್ಪಂದಗಳ ಜನಕ ಎಂಬ ಹೆಚ್.ಡಿ. ಕುಮಾರಸ್ವಾಮಿ ಅವರ ಆರೋಪದ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಯಾರು ಒಳ ಒಪ್ಪಂದ ಮಾಡಿಕೊಂಡಿದ್ದರು? ಗೋಪಾಲಯ್ಯನಿಗೆ ಟಿಕೆಟ್ ಕೊಟ್ಟವರು ಯಾರು? ಅವರು ಹೇಳಿದ್ದಕ್ಕೆಲ್ಲ ಉತ್ತರ ಕೊಡೋಕೆ ಆಗುವುದಿಲ್ಲ. ಜೆಡಿಎಸ್, ಬಿಜೆಪಿಯವರು 29 ಕ್ಷೇತ್ರಗಳಲ್ಲಿ ಒಳ ಒಪ್ಪಂದ ಮಾಡಿಕೊಂಡಿದ್ದರು. ಎಲ್ಲಾ ಕ್ಷೇತ್ರಗಳಲ್ಲೂ ಅವರು ಮಾಡಿಕೊಂಡಿರಲಿಲ್ಲ. ನಿನ್ನೆ ನಾನು ಅದನ್ನೇ ಹೇಳಿದ್ದು ಎಂದು ಹೇಳಿದ್ದಾರೆ.
ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಸಿಟ್ಟಿನಿಂದಲೇ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಕುಮಾರಸ್ವಾಮಿ ಹೋಟೆಲ್ನಲ್ಲಿ ಮೊದಲೇ ರೂಂ ಮಾಡಿಕೊಂಡಿದ್ದ. ನಾನು ಮನೆ ಬಿಟ್ಟಿಲ್ಲ ಎಂಬುದೆಲ್ಲ ಸುಳ್ಳು ಎಂದು ಸಾ.ರಾ. ಮಹೇಶ್ ಅವರಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ಕುಮಾರಸ್ವಾಮಿ ಹೋಟೆಲ್ನಲ್ಲಿ ಉಳಿದಿದ್ದು ನಿಜವೋ? ಸುಳ್ಳೋ? ಅದು ನಿಜವಾದ ಮೇಲೆ ಅದರ ಮೇಲೆ ಚರ್ಚೆ ಮಾಡಲು ಏನೂ ಇಲ್ಲ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಕಾಂಗ್ರೆಸ್ನವರು ನನ್ನನ್ನು ಸೋಲಿಸಿದರು ಎಂದು ನಾನು ಹೇಳಿದ್ದು ಚಾಮುಂಡೇಶ್ವರಿ ಕ್ಷೇತ್ರದ ಸ್ಥಳೀಯ ಮುಖಂಡರ ಬಗ್ಗೆ. ನಾನು ಯಾರ ಹೆಸರನ್ನೂ ಹೇಳಿಲ್ಲ. ಸ್ಥಳೀಯರ ಬಗ್ಗೆ ಅಷ್ಟೆ ಹೇಳಿದ್ದು. ನಾನು ಜನಪರಿವಾರದಲ್ಲಿದ್ದಾಗ 60 ಸೀಟು ಗೆಲ್ಲುತ್ತಿದ್ದೆವು. ಈಗ ಅವರು 29 ಸೀಟಿಗೆ ಬಂದಿದ್ದಾರೆ. ಜೆ.ಡಿ.ಎಸ್ ಬಗ್ಗೆ ನಾನು ಹೇಳುವುದು ಇಷ್ಟೆ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇದನ್ನೂ ಓದಿ: ಪ್ರಾದೇಶಿಕ ಪಕ್ಷ ಕಟ್ಟಿ 10 ಸ್ಥಾನ ಗೆದ್ದು ತೋರಿಸಿ: ಸಿದ್ದರಾಮಯ್ಯಗೆ ಕುಮಾರಸ್ವಾಮಿ ಸವಾಲು
ಸಿದ್ದರಾಮಯ್ಯನವರೇ, ತಾವು ರಾಜಕೀಯ ಒಳ ಒಪ್ಪಂದದ ಜನಕ. 2009ರ ಉಪಚುನಾವಣೆ ಮತ್ತು 2013ರ ಚುನಾವಣೆಯಲ್ಲಿ ನೀವು ಒಳ ಒಪ್ಪಂದ ಮಾಡಿಕೊಂಡಿದ್ದು ಮರೆತಿರಾ? ಕೊರಗಟೆರೆಯಲ್ಲಿ ಪರಮೇಶ್ವರ್ ಸೋಲಿಗೆ ಯಾರು ಕಾರಣ ನೆನಪಿಸಿಕೊಳ್ಳಿ ಎಂದು ಸಿದ್ದರಾಮಯ್ಯನವರಿಗೆ ಹೆಚ್ಡಿ ಕುಮಾರಸ್ವಾಮಿ ಟೀಕಿಸಿದ್ದರು. 2009-2010ರ 20 ಉಪಚುನಾವಣೆಗಳನ್ನು ಸಿದ್ದರಾಮಯ್ಯ ಒಮ್ಮೆ ಪರಾಮರ್ಶೆ ಮಾಡಲಿ. ಆ ಹೊತ್ತಿನಲ್ಲಿ ತಮ್ಮನ್ನು ಕಾಂಗ್ರೆಸ್ ಕಡೆಗಣಿಸಿತ್ತು ಎಂಬ ಕಾರಣಕ್ಕೆ ಅವರು ಯಾರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು ಎಂಬುದನ್ನು ಅವರ ಆತ್ಮ ನೆನಪಿಸುತ್ತದೆ. ಅದರ ಪರಿಣಾಮವಾಗಿ ಕಾಂಗ್ರೆಸ್ ಎಷ್ಟು ಸ್ಥಾನ ಗೆದ್ದಿತ್ತು ಎಂಬುದನ್ನೂ ಮನದಟ್ಟು ಮಾಡಿಸುತ್ತದೆ. 2013ರ ಚುನಾವಣೆಯತ್ತ ಅವರು ಒಮ್ಮೆ ನೋಡಲಿ. ಆಗ ಅವರು ಯಾರನ್ನೆಲ್ಲ ಸೋಲಿಸಿದ್ದರು, ಕೊರಟಗೆರೆಯಲ್ಲಿ ಯಾರೊಂದಿಗೆ ಒಳಒಪ್ಪಂದ ಮಾಡಿಕೊಂಡು, ಯಾರ ಭವಿಷ್ಯವನ್ನು ಕತ್ತಲಲ್ಲಿಟ್ಟಿದ್ದರು ಎಂಬುದನ್ನು ಮನನ ಮಾಡಿಕೊಳ್ಳಲಿ. 2013ರ ಚುನಾವಣೆಯನ್ನು ಪರಾಮರ್ಶಿಸಿದರೆ, ಪಕ್ಷದ್ರೋಹದ ಆಧಾರದ ಮೇಲೆ ಅವರು ಕಾಂಗ್ರೆಸ್ ಬಿಡಬೇಕು! ಎಂದು ಹೆಚ್ಡಿ ಕುಮಾರಸ್ವಾಮಿ ಟ್ವಿಟ್ಟರ್ನಲ್ಲಿ ಆಕ್ರೋಶ ಹೊರಹಾಕಿದ್ದರು.
2009-10ರ ಉಪಚುನಾವಣೆ, 2013ರ ಚುನಾವಣೆಗಳಲ್ಲಿ ಒಳ ಒಪ್ಪಂದ ಮಾಡಿಕೊಂಡ ನಿಮ್ಮ ಆತ್ಮವಿಮರ್ಶೆ ಯಾವಾಗ? ಕಾಂಗ್ರೆಸ್ ಬಿಡುವುದು ಯಾವಾಗ? ಈಗಾಗಲೇ ಒಂದು ಬಾರಿ ತಾಯಿಯಂಥ ಪಕ್ಷಕ್ಕೆ ದ್ರೋಹ ಮಾಡಿದ ನಿಮ್ಮ ಉತ್ತರ ಕೇಳಲು ಕಾತುರನಾಗಿದ್ದೇನೆ.
ಸಿದ್ದರಾಮಯ್ಯನವರೇ ಎಂದೂ ರಾಜಕೀಯ ಒಳಒಪ್ಪಂದದ ಬಗ್ಗೆ ಮಾತಾಡಬೇಡಿ. ತಾವು ರಾಜಕೀಯ ಒಳಒಪ್ಪಂದಗಳ ಜನಕ. ಅದು ಯಾವಾಗಲೋ ಸಾಬೀತಾಗಿದೆ ಎಂದು ಹೆಚ್ಡಿ ಕುಮಾರಸ್ವಾಮಿ ಹರಿಹಾಯ್ದಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ