ಬೆಂಗಳೂರು: ಯುವತಿಯ ವಿಡಿಯೋ ಹೇಳಿಕೆ ಆಧರಿಸಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸುವಂತೆ ಕಾಂಗ್ರೆಸ್ ಧರಣಿ ಮಾಡುತ್ತಿರುವುದನ್ನು ನಾವು ಒಪ್ಪುವುದಿಲ್ಲ ಎಂದು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಬಾಲಚಂದ್ರ ಜಾರಕಿಹೊಳಿ, ನಾನು ನಿನ್ನೆ ಸದನದಲ್ಲಿ ಮಾತನಾಡಬೇಕು ಅಂತ ನಿರ್ಧರಿಸಿದ್ದೆ. ಆದರೆ ಕೆಲವರು ಮಾತನಾಡುವುದು ಬೇಡ ಎಂದು ಸಲಹೆ ನೀಡಿದರು. ಯುವತಿಯ 34 ಸೆಕೆಂಡ್ ವಿಡಿಯೋ ಬಗ್ಗೆ ಸಿದ್ದರಾಮಯ್ಯ ಪ್ರಸ್ತಾಪ ಮಾಡಿದ್ದಾರೆ. ಆದರೆ ಯುವತಿ ಸ್ವಂತ ಇಚ್ಛೆಯಿಂದ ಮಾತನಾಡಿದ್ದಾಳಾ ಅಥವಾ ಒತ್ತಾಯಪೂರ್ವಕವಾಗಿ ಮಾಡಿಸಿದ್ದಾರಾ ಗೊತ್ತಿಲ್ಲ. ಆ ವಿಡಿಯೋ ಆಧರಿಸಿ ರೇಪ್ ಕೇಸ್ ಹಾಕಲು ಒತ್ತಾಯ ಮಾಡುತ್ತಿದ್ದಾರೆ. ಈ ಬಗ್ಗೆ ಎಸ್ಐಟಿ ತನಿಖೆ ಮಾಡುತ್ತಿದೆ. ಸಿಡಿ ರಿಲೀಸ್ ಆದ ನಂತರ ಗೃಹ ಸಚಿವರು ಯುವತಿಗೆ ರಕ್ಷಣೆಗೆ ನೀಡಲು ಸಿದ್ಧರಿದ್ದಾರೆ. ಯುವತಿಯ ಪತ್ತೆಗೂ ಪೊಲೀಸ್ ಅಧಿಕಾರಿಗಳು ಪ್ರಯತ್ನ ನಡೆಸುತ್ತಿದ್ದಾರೆ. ಆದರೆ ಯುವತಿ ಎಲ್ಲಿದ್ದಾಳೆ ಎಂದು ಯಾರಿಗೂ ಗೊತ್ತಿಲ್ಲ ಅಂತ ಹೇಳಿದರು.
ಒತ್ತಾಯಪೂರ್ವಕ ವಿಡಿಯೋ ಹೇಳಿಕೆ?
ಯುವತಿ ನೇರವಾಗಿ ಬಂದು ಹೇಳಿಕೆ ನೀಡಬಹುದಿತ್ತು. ತನಗಾದ ಅನ್ಯಾಯದ ಬಗ್ಗೆ ತಿಳಿಸಬಹುದಿತ್ತು. ಆದರೆ ಕಾಣದ ಸ್ಥಳದಲ್ಲಿ ಕುಳಿತು ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಇದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಯಾರೋ ಬಲವಂತದಿಂದ ವಿಡಿಯೋ ಮಾಡಿರಬಹುದಲ್ಲ ಅಂತ ಬಾಲಚಂದ್ರ ಜಾರಕಿಹೊಳಿ ಶಂಕೆ ವ್ಯಕ್ತಪಡಿಸಿದರು. ದಿನೇಶ್ ಕಲ್ಲಹಳ್ಳಿ ದೂರು ನೀಡಿ ವಾಪಸ್ ಪಡೆದರು. ಯುವತಿ ಕೂಡ ಎಲ್ಲೂ ದೂರು ನೀಡಿಲ್ಲ. ಬಲವಂತದಿಂದ ವಿಡಿಯೋ ಮಾಡಿಸಿರುವ ಸಾಧ್ಯತೆಯೂ ಇರಬಹುದು. ಈ ವಿಡಿಯೋ ಆಧರಿಸಿ ರೇಪ್ ಕೇಸು ಹಾಕಿ ಎಂದು ಸಿದ್ದರಾಮಯ್ಯ ಒತ್ತಾಯ ಮಾಡುತ್ತಿರುವುದು ಅವರಿಗೆ ಶೋಭೆ ತರುವುದಿಲ್ಲ ಎಂದರು.
ಇದನ್ನು ಓದಿ: ಸದನದಲ್ಲಿ ಭುಗಿಲೆದ್ದ ಗದ್ದಲ; ಬ್ಲೂ ಬಾಯ್ಸ್ ಎಂದು ಘೋಷಣೆ ಕೂಗಿದ ಕೈ ಸದಸ್ಯರು; ನಾಳೆಗೆ ಸದನ ಮುಂದೂಡಿಕೆ
ಯುವತಿಯ ಪೋಷಕರು ಬೆಳಗಾವಿಯಲ್ಲೇ ವಾಸ:
ಯುವತಿಯ ಪೋಷಕರು ಬೆಳಗಾವಿಗೆ ಬಂದು ಯಾಕೆ ದೂರು ನೀಡಿದರು? ಈ ಬಗ್ಗೆಯೂ ತನಿಖೆಯಾಗಲಿ ಎಂದು ಕಾಂಗ್ರೆಸ್ ಸದನದಲ್ಲಿ ಒತ್ತಾಯಿಸಿದೆ. ನಮಗಿರುವ ಮಾಹಿತಿ ಪ್ರಕಾರ ಯುವತಿಯ ಪೋಷಕರು ಬೆಳಗಾವಿಯ ಎಪಿಎಂಸಿ ವ್ಯಾಪ್ತಿಯಲ್ಲಿ ಎರಡು ವರ್ಷಗಳಿಂದ ಅಲ್ಲೇ ವಾಸ ಇದ್ದಾರೆ. ಅವರಿರುವ ಮನೆ ಎಪಿಎಂಸಿ ಯಾರ್ಡ್ ಪೊಲೀಸ್ ವ್ಯಾಪ್ತಿಗೆ ಬರುತ್ತದೆ. ಹೀಗಾಗಿಯೇ ಯುವತಿ ನಾಪತ್ತೆ ಬಗ್ಗೆ ಪೋಷಕರು ದೂರು ನೀಡಿರಬಹುದು. ಈಗಾಗಲೇ ಎಸ್ಐಟಿ ತನಿಖೆ ನಡೆಸುತ್ತಿದೆ. ಈ ಬಗ್ಗೆಯೂ ಕೂಲಂಕಷವಾಗಿ ತನಿಖೆಯಾಗಲಿ ಎಂದು ಬಾಲಚಂದ್ರ ಜಾರಕಿಹೊಳಿ ಒತ್ತಾಯಿಸಿದರು.
ಯುವತಿಯ ವಿಡಿಯೋ ಆಧರಿಸಿ ರೇಪ್ ಕೇಸು ಹಾಕಲು ಸಿದ್ದರಾಮಯ್ಯ ಒತ್ತಾಯ ಮಾಡುವುದು ಸರಿಯಲ್ಲ. ಎಸ್‌ಐಟಿ ತನಿಖೆ ಈಗಾಗಲೇ ನಡೆಯುತ್ತಿದೆ. ಹಾಲಿ ನ್ಯಾಯಾಧೀಶರ ತನಿಖೆ ಅಗತ್ಯ ಇಲ್ಲ. ಎಸ್ಐಟಿ ತನಿಖೆ ಬೇಗ ಮುಗಿಯುತ್ತದೆ. ವಿಡಿಯೋ ನಕಲಿ ಎಂದು ನಾವು ಹೇಳಿದ್ದೇವೆ. ಆದರೆ ಕಾಂಗ್ರೆಸ್ ಇದರಲ್ಲಿ ರಾಜಕಾರಣ ಮಾಡುತ್ತಿದೆ. ಮುಂಬರುವ ಚುನಾವಣೆ ಲಾಭ ಪಡೆದುಕೊಳ್ಳಲು ಹೊರಟಿದೆ. ಸದನದ ಸಮಯವನ್ನೂ ವ್ಯರ್ಥ ಮಾಡುತ್ತಿದೆ. ಜನರ ಸಮಸ್ಯೆಯನ್ನು ಚರ್ಚೆ ಮಾಡುವ ಬದಲು, ಇಂತಹ ವಿಚಾರಕ್ಕೆ ಸದನವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಎಂತಲೂ ಅವರು ಆರೋಪಿಸಿದರು.
ವರದಿ: ದಶರಥ್ ಸಾವೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ