news18-kannada Updated:June 26, 2020, 11:50 AM IST
ಡಿಕೆಶಿ, ಸಿದ್ದರಾಮಯ್ಯ
ಬೆಂಗಳೂರು (ಜೂ. 26): ಬೆಂಗಳೂರಿನಲ್ಲಿ ಕೊರೋನಾ ಸೋಂಕು ವಿಪರೀತ ಹೆಚ್ಚಾಗಿರುವುದರಿಂದ ಇದರ ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಚರ್ಚಿಸಲು ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಶಾಸಕರ ಸಭೆ ಕರೆದಿದ್ದಾರೆ. ಆದರೆ, ಈ ಸಭೆಯಲ್ಲಿ ಪಾಲ್ಗೊಳ್ಳುವ ಮೊದಲು ಕಾಂಗ್ರೆಸ್ ನಾಯಕರು ತಮ್ಮ ಪಕ್ಷದ ಶಾಸಕರ ಜೊತೆ ಸಭೆ ನಡೆಸಲಿದ್ದಾರೆ.
ಕೊರೋನಾ ಸೋಂಕು ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಿಎಂ ಯಡಿಯೂರಪ್ಪ ಬೆಂಗಳೂರು ಶಾಸಕರ ಸಭೆ ಕರೆದಿದ್ದಾರೆ. ಸಿಎಂ ಸಭೆಗೂ ಮುನ್ನ ಪಕ್ಷದ ಬೆಂಗಳೂರು ಶಾಸಕರ ಜೊತೆಗೆ ಸಭೆ ನಡೆಸಲಿದ್ದಾರೆ. ಶಾಸಕರ ಜೊತೆಗೆ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಸಭೆ ನಡೆಸಲಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಕೂಡ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಪಕ್ಷದ ನಿಲುವನ್ನು ಸಿಎಂ ಯಡಿಯೂರಪ್ಪನವರ ನೇತೃತ್ವದ ಸಭೆಯಲ್ಲಿ ವ್ಯಕ್ತಪಡಿಸುವ ಹಿನ್ನೆಲೆಯಲ್ಲಿ ಕೈ ನಾಯಕರು ಚರ್ಚೆ ನಡೆಸಲಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಮತ್ತೆ ಲಾಕ್ಡೌನ್ ಮಾಡುವ ಪ್ರಶ್ನೆಯೇ ಇಲ್ಲ - ಸಿಎಂ ಯಡಿಯೂರಪ್ಪ ಸ್ಪಷ್ಟನೆ
ಕೊರೋನಾ ಸೋಂಕು ತಡೆಗಟ್ಟಲು ಪಕ್ಷ ನಿಲುವು ಏನು ಎಂಬುದನ್ನು ಕೈ ನಾಯಕರು ಸಭೆಯಲ್ಲಿ ತಿಳಿಸಲಿದ್ದಾರೆ. ಕಾಂಗ್ರೆಸ್ ಶಾಸಕರಿಗೆ ಕೊರೋನಾ ವಿಚಾರದಲ್ಲಿ ಪಕ್ಷದ ನಿಲುವಿನ ಬಗ್ಗೆ ವಿವರಿಸಲಿದ್ದಾರೆ. ಸರ್ಕಾರದ ವಿಳಂಬ ಧೋರಣೆ ಬಗ್ಗೆ ಮಾಹಿತಿ ನೀಡಲಿದ್ದಾರೆ. ಈಗ ಬೆಂಗಳೂರು ಭಾಗದ ಶಾಸಕರ ನೆನಪಾಯಿತೆ? ಪಡಿತರ ಕಿಟ್ ವಿತರಣೆಯಲ್ಲಿ ನಮ್ಮ ನೆನಪಾಗಲಿಲ್ವ? ಲಾಕ್ಡೌನ್ ಹೇರಿಕೆ ನಂತರ ಸಡಿಲಿಕೆ ವಿಚಾರದಲ್ಲಿ ನಮ್ಮನ್ನು ವಿಶ್ವಾಸಕ್ಕೆ ತಗೆದುಕೊಳ್ಳದ ಬಗ್ಗೆ ಸಿಎಂ ಜೊತೆಗಿನ ಸಭೆಯಲ್ಲಿ ಕಾಂಗ್ರೆಸ್ ಶಾಸಕರು ಅಸಮಾಧಾನ ಹೊರಹಾಕಲಿದ್ದಾರೆ.
ಇಂದಿನ ಸಿಎಂ ಜೊತೆಗಿನ ಸಭೆಯಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲು ಬೆಂಗಳೂರಿನ ಕಾಂಗ್ರೆಸ್ ಶಾಸಕರು ಸಜ್ಜಾಗಿದ್ದಾರೆ. ಸರ್ಕಾರಕ್ಕೆ ಯಾವ ರೀತಿಯ ಸಲಹೆ ಕೊಡಬೇಕು ಎಂಬ ಬಗ್ಗೆ ಕಾಂಗ್ರೆಸ್ ನಾಯಕರು ತಮ್ಮ ಶಾಸಕರಿಗೆ ಮಾಹಿತಿ ನೀಡಲಿದ್ದಾರೆ. ಕಾಂಗ್ರೆಸ್ ಶಾಸಕರಾದ ಜಮೀರ್ ಅಹಮದ್ ಖಾನ್, ರಿಜ್ವಾನ್ ಹರ್ಷದ್, ಕೃಷ್ಣ ಬೈರೇಗೌಡ, ಅಖಂಡ ಶ್ರೀನಿವಾಸ ಮೂರ್ತಿ, ಸೇರಿದಂತೆ ಬೆಂಗಳೂರು ನಗರ ಶಾಸಕರು ಭಾಗಿಯಾಗುವ ಸಾಧ್ಯತೆಯಿದೆ.
First published:
June 26, 2020, 11:49 AM IST