ರೈತ ಮಹಿಳೆಯರನ್ನು ಸಾರ್ವಜನಿಕವಾಗಿ ನಿಂದಿಸಿದ ಸಚಿವ ಮಾಧುಸ್ವಾಮಿ; ಕ್ಷಮೆ-ತಲೆದಂಡಕ್ಕೆ ಸಿದ್ದರಾಮಯ್ಯ ಆಗ್ರಹ

ಅನ್ಯಾಯಕ್ಕೊಳಗಾಗಿರುವ ರೈತ ಮಹಿಳೆಯನ್ನು ನಿಂಧಿಸಿರುವುದು ದುರ್ವರ್ತನೆ ಮತ್ತು ಅಕ್ಷಮ್ಯ. ಹೀಗಾಗಿ ಸಚಿವರು ತಕ್ಷಣ ಆ ರೈತ ಮಹಿಳೆಯ ಕ್ಷಮೆ‌ ಯಾಚಿಸಬೇಕು. ಅವರನ್ನು‌ ಸಂಪುಟದಿಂದ ಕೈ ಬಿಟ್ಟು‌‌ ಸರ್ಕಾರದ ಮಾನ‌ ಉಳಿಸಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ರೈತ ಮಹಿಳೆಯನ್ನು ಒತ್ತಾಯಪೂರ್ವಕವಾಗಿ ಹೊರ ಹಾಕುತ್ತಿರುವ ಪೊಲೀಸರು.

ರೈತ ಮಹಿಳೆಯನ್ನು ಒತ್ತಾಯಪೂರ್ವಕವಾಗಿ ಹೊರ ಹಾಕುತ್ತಿರುವ ಪೊಲೀಸರು.

  • Share this:
ಕೋಲಾರ ಬೆಂಗಳೂರು (ಮೇ 20); ಕಾನೂನು ಸಚಿವ ಪಿ. ಮಾಧುಸ್ವಾಮಿ ವಿರುದ್ಧ ಟ್ವಿಟರ್‌ನಲ್ಲಿ ಕಿಡಿಕಾರಿರುವ ಮಾಜಿ ಸಿಎಂ ಸಿದ್ದರಾಮಯ್ಯ, "ಅಹವಾಲು ಸಲ್ಲಿಸಲು ಬಂದಿದ್ದ ಅನ್ಯಾಯಕ್ಕೊಳಗಾಗಿರುವ ರೈತ ಮಹಿಳೆಯನ್ನು ನಿಂದಿಸಿದ ಸಚಿವ ಮಾಧುಸ್ವಾಮಿಯವರ ದುರ್ವರ್ತನೆ ಅಕ್ಷಮ್ಯ" ಎಂದು ಕಿಡಿಕಾರಿದ್ದಾರೆ. ಅಲ್ಲದೆ, ಸಚಿವರ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲೂ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.

ಈ ಕುರಿತು ಟ್ವೀಟ್‌ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಸಿದ್ದರಾಮಯ್ಯ, "ಅನ್ಯಾಯಕ್ಕೊಳಗಾಗಿರುವ ರೈತ ಮಹಿಳೆಯನ್ನು ನಿಂಧಿಸಿರುವುದು ದುರ್ವರ್ತನೆ ಮತ್ತು ಅಕ್ಷಮ್ಯ. ಹೀಗಾಗಿ ಸಚಿವರು ತಕ್ಷಣ ಆ ರೈತ ಮಹಿಳೆಯ ಕ್ಷಮೆ‌ ಯಾಚಿಸಬೇಕು. ಅವರನ್ನು‌ ಸಂಪುಟದಿಂದ ಕೈ ಬಿಟ್ಟು‌‌ ಸರ್ಕಾರದ ಮಾನ‌ ಉಳಿಸಬೇಕು" ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಕೆಪಿಸಿಸಿ ಕಿಸಾನ್‌ ಘಟಕ ಸಹ ಮಾಧುಸ್ವಾಮಿ ರಾಜೀನಾಮೆಗೆ ಆಗ್ರಹಿಸಿದೆ.

ನಡೆದದ್ದೇನು?

ಕೆಸಿ ವ್ಯಾಲಿ ಯೋಜನೆಯಿಂದ ತುಂಬಿದ ಕೆರೆಗಳನ್ನು ವೀಕ್ಷಣೆ ಮಾಡುವ ಸಲುವಾಗಿ ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಮಾಧುಸ್ವಾಮಿ ಇಂದು ಕೋಲಾರಕ್ಕೆ ಆಗಮಿಸಿದ್ದರು.  ಇದೇ ವೇಳೆ ಅವರು ಅಗ್ರಹಾರ ಕೆರೆ ವೀಕ್ಷಣೆಗಾಗಿಯೂ ಸ್ಥಳಕ್ಕೆ ಆಗಮಿಸಿದ್ದರು.

ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘದ ಕೋಲಾರ ಜಿಲ್ಲಾದ್ಯಕ್ಷೆ ನಳಿನಿ ಗೌಡ ಹಾಗೂ ಮತ್ತೊರ್ವ ಮಹಿಳಾ ಹೋರಾಟಗಾರ್ತಿ ಸಚಿವರಿಗೆ ಮನವಿ ನೀಡಲು ಮುಂದಾದರು. ಅಲ್ಲದೆ, "ದಯವಿಟ್ಟು ಅಗ್ರಹಾರ ಕೆರೆಯಲ್ಲಿನ ಒತ್ತುವರಿಯನ್ನು ತೆರವುಗೊಳಿಸಿ" ಎಂದು ಸಚಿವರ ಬಳಿ ವಿನಂತಿಸಿಕೊಂಡಿದ್ದರು. ಆದರೆ, ಈ ವೇಳೆ ಗರಂ ಆದ ಸಚಿವರು "ನೀನು ತೆರವು ಮಾಡ್ತೀಯೇನಮ್ಮ" ಎಂದು ಗದರಿಸಲು ಶುರು ಮಾಡಿದ್ದರು.ಸಚಿವರ ಮಾತಿಗೆ ಉತ್ತರಿಸಿದ್ದ ರೈತ ಮಹಿಳಾ, "ಅದು ನಮ್ಮ ಕೆಲಸ ಅಲ್ಲಾ ಸಾರ್‌..! ನಿಮ್ಮ ಕೆಲಸ ಅದನ್ನು ನೀವು ಮಾಡಿ" ಎಂದದ್ದೇ ತಪ್ಪಾಯಿತೇನೋ? ಕೂಡಲೇ ತಾಳ್ಮೆ ಕಳೆದುಕೊಂಡು ಕೆಂಡಾಮಂಡಲವಾದ ಸಚಿವ ಮಾಧುಸ್ವಾಮಿ, "ನಾನು ಬಾರಿ ಕೆಟ್ಟ ಮನುಷ್ಯ ಇದ್ದಿನಿ.. ಬಾಯಿ ಮುಚ್ಚು ರಾಸ್ಕಲ್" ಎಂದು ಮಹಿಳೆಯರನ್ನು ಗದರಿಸಿದ್ದಾರೆ. ಅಲ್ಲದೆ, ಪೊಲೀಸ್‌ ಅಧಿಕಾರಿಗಳನ್ನು ಕರೆದು ಕೂಡಲೇ ಇಬ್ಬರೂ ಮಹಿಳೆಯರನ್ನೂ ಅಲ್ಲಿಂದ ಒತ್ತಾಯಪೂರ್ವಕವಾಗಿ ಹೊರಹಾಕಿಸಿದ್ದಾರೆ.

ನೂರಾರು ಜನ ಹಾಗೂ ಸ್ವತಃ ಪೊಲೀಸರ ಎದುರು ಕಾನೂನು ಸಚಿವ ರೈತ ಮಹಿಳೆಯರ ವಿರುದ್ಧ ನಾಲಿಗೆ ಹರಿಬಿಟ್ಟಿರುವುದು ಇದೀಗ ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಭಾರೀ ವಿರೋಧ ವ್ಯಕ್ತವಾಗುತ್ತಿದೆ. ರಾಜ್ಯ ಕಾಂಗ್ರೆಸ್‌ ಘಟಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು ಕೂಡಲೇ ಸಚಿವ ಮಾಧುಸ್ವಾಮಿ ಕ್ಷಮೆ ಕೇಳಬೇಕು, ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಹೀಗಾಗಿ ಈ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ಘಟಕ ಮತ್ತು ಸಿಎಂ ಯಡಿಯೂರಪ್ಪ ಯಾವ ತೀರ್ಮಾನ ತೆಗೆದುಕೊಳ್ಳಲಿದ್ದಾರೆ? ಎಂಬುದನ್ನು ಕಾದುನೋಡಬೇಕಿದೆ.

(ವರದಿ - ರಘುರಾಜ್ ಕೋಲಾರ)

ಇದನ್ನೂ ಓದಿ : Amphan Cyclone: ಪಶ್ಚಿಮ ಬಂಗಾಳದಲ್ಲಿ ಆಂಫಾನ್ ಆರ್ಭಟ; 160-170 ಕಿ.ಮೀ ವೇಗದಲ್ಲಿ ಬೀಸುತ್ತಿರುವ ಚಂಡಮಾರುತ; ಮೂವರು ಬಲಿ
First published: