ಬೆಂಗಳೂರು: ಬಿಟ್ ಕಾಯಿನ್ ಹಗರಣ (Bitcoin Scam) ಯಾರ ಕಾಲದಲ್ಲೇ ನಡೆದಿರಲಿ. ಅದರ ಬಗ್ಗೆ ಒಂದು ನ್ಯಾಯಾಂಗ ತನಿಖೆ (Judicial Probe) ಮಾಡಿಸಿ. ನಮ್ಮ ಕಾಲದ ಅವಧಿಯನ್ನೂ ಸೇರಿಸಿಯೇ ನ್ಯಾಯಾಂಗ ತನಿಖೆಗೆ ಕೊಡಿ. ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಎಸ್.ಐ.ಟಿ (SIT) ರಚನೆ ಮಾಡಿ ತನಿಖೆಗೆ ಕೊಡಿ. ತನಿಖೆಯಿಂದ ಯಾರು ತಪ್ಪು ಮಾಡಿದ್ದಾರೆ ಎಂಬುದು ಗೊತ್ತಾಗುತ್ತಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಅವರು ಹೇಳಿದರು.
ಬಿಟ್ ಕಾಯಿನ್ ಹಗರಣ ಸಂಬಂಧ ಇಂದು ಬಿಜೆಪಿ ರಾಕೇಶ್ ಸಿದ್ದರಾಮಯ್ಯ ಕೆಲವು ಸ್ನೇಹಿತರ ಜೊತೆಗೆ ಇರುವ ಫೋಟೋವನ್ನು ಟ್ವೀಟ್ ಮಾಡಿತ್ತು. ಫೋಟೋದಲ್ಲಿ ಇದ್ದವರು ಹ್ಯಾಕರ್ ಶ್ರೀಕಿ ಸ್ನೇಹಿತರಾಗಿದ್ದಾರೆ. ಇದನ್ನೇ ಆಧಾರವಾಗಿಟ್ಟುಕೊಂಡು ಬಿಜೆಪಿ ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡಿತ್ತು. ಈ ವಿಷಯವಾಗಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ ಅವರು,
ರಾಕೇಶ್ ಈಗ ಬದುಕಿಲ್ಲ. ಅದರ ಬಗ್ಗೆ ಮಾತನಾಡಲ್ಲ. ಸತ್ತವರ ಬಗ್ಗೆ ಮಾತನಾಡುವವರಿಗೆ ಮಾನ ಮರ್ಯಾದೆ ಇಲ್ಲ ಎಂದು ಕಟುವಾಗಿ ಹೇಳಿದರು.
ಬಿಜೆಪಿಯವರು ಸುಮ್ಮನೆ ಬಿಟ್ ಕಾಯಿನ್ ಬಗ್ಗೆ ಮಾತಾಡ್ತಿದಾರಾ..? ಯಾಕೆ ಎಲ್ಲರು ರಿಯಾಕ್ಟ್ ಮಾಡ್ತಿದ್ದಾರೆ. ಏನೋ ಇದೆ ಅಂತ ಆಯ್ತಲ್ಲ. ಬೆಂಕಿ ಇಲ್ಲದೆ ಹೊಗೆಯಾಡುತ್ತಾ...? ಬಿಜೆಪಿಯವರು ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿಕೊಳ್ಳುತ್ತಿರುವುದು ಏಕೆ...? ಎಂದು ಪ್ರಶ್ನೆ ಮಾಡಿದ ಸಿದ್ದರಾಮಯ್ಯ ಅವರು, ಹಗರಣದ ಸಂಬಂಧ ಸುಪ್ರಿಂ ಕೋರ್ಟ್ ಹಾಲಿ ನ್ಯಾಯಮೂರ್ತಿಗಳಿಂದ ನ್ಯಾಯಾಂಗ ತನಿಖೆ ಆಗಲಿ. ಎಲ್ಲವೂ ತನಿಖೆ ಆಗಲಿ 2013 ರಿಂದಲೂ ತನಿಖೆ ನಡೆಸಲಿ. ಆದರೆ ಅದು ನ್ಯಾಯಾಂಗ ತನಿಖೆ ಆಗಲೇಬೇಕು ಎಂದು ಆಗ್ರಹಿಸಿದರು.
ಯುವ ಕಾಂಗ್ರೆಸ್ ಚುನಾವಣಾ ವೆಬ್ ಸೈಟ್ ಹ್ಯಾಕ್ ಆಗಿದೆ ಎಂಬ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ಶ್ರೀಕಿ ಬಳಸಿಕೊಂಡು ನಲ್ಪಾಡ್ ಯುವ ಕಾಂಗ್ರೆಸ್ ಚುನಾವಣಾ ವೆಬ್ ಸೈಟ್ ಹ್ಯಾಕ್ ಮಾಡಿಸಿದ್ದರು ಎಂಬ ಗೃಹ ಸಚಿವರ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, ನನಗೆ ಈ ಬಗ್ಗೆ ಮಾಹಿತಿ ಇಲ್ಲ. ಹ್ಯಾಕಿಂಗ್ ಬಗ್ಗೆ ನನಗೆ ಗೊತ್ತಿಲ್ಲ. ತನಿಖೆ ನಡೆಸಲಿ. ಎಲ್ಲ ಸತ್ಯವು ಹೊರಗೆ ಬರಲಿದೆ. ಶ್ರೀಕಿ ಬಂಧಿಸಿದಾಗ ಗೃಹ ಸಚಿವರಾಗಿದ್ದವರು ಬೊಮ್ಮಾಯಿ ಅವರಲ್ಲವೇ..? ಶ್ರೀಕಿಯಿಂದ ಬಿಟ್ ಕಾಯಿನ್ ವರ್ಗಾವಣೆಗೆ ಪೊಲೀಸರು wallet ಮಾಡಿಕೊಂಡಿದ್ರು. Wallet ಗೆ ವರ್ಗಾವಣೆಯಾದ 0.8 ಬಿಟ್ ಕಾಯಿನ್ ಏನಾಯ್ತು. ಇದಕ್ಕೆ ಉತ್ತರ ಕೊಡಬೇಕು ಅವರು. ಅಧಿವೇಶನ ಬರಲಿ. ಪಕ್ಷದಲ್ಲಿ ಚರ್ಚಿಸಿ ಬಿಟ್ ಕಾಯಿನ್ ಹಗರಣದ ಬಗ್ಗೆ ಸದನದಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಹೇಳಿದರು.
ಇದನ್ನು ಓದಿ: Solar Panel Business; 70 ಸಾವಿರ ಹೂಡಿಕೆ ಮಾಡಿ ಮನೆ ಛಾವಣಿ ಮೇಲೆ ಸೌರಫಲಕ ಅಳವಡಿಸಿ 1 ಲಕ್ಷ ರೂ. ಆದಾಯ ಗಳಿಸಿ
ಈ ಚಿತ್ರದಲ್ಲಿ ಇರುವ ವ್ಯಕ್ತಿಗಳನ್ನು ಗುರುತಿಸಿ ಎಂದಿದ್ದ ಬಿಜೆಪಿ
ಬಿಟ್ ಕಾಯಿನ್ ಹಗರಣ ಸಂಬಂಧ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ನಡುವಿನ ಆರೋಪ -ಪ್ರತ್ಯಾರೋಪಗಳು ತಾರಕಕ್ಕೆ ಏರಿವೆ. ಈ ವಿಷಯವಾಗಿ ಇಂದು ಬಿಜೆಪಿ ರಾಕೇಶ್ ಸಿದ್ದರಾಮಯ್ಯ ಹಲವು ಗೆಳಯರೊಂದಿಗೆ ಇರುವ ಫೋಟೋವನ್ನು ಟ್ವೀಟ್ ಮಾಡಿತ್ತು. ಈ ಫೋಟೋದಲ್ಲಿ ಹ್ಯಾಕರ್ ಶ್ರೀಕಿಗೆ ಪರಿಚಯವಿದ್ದ ಕೆಲವು ಗೆಳೆಯರು ಇದ್ದರು. ಈ ಚಿತ್ರದಲ್ಲಿರುವ ವ್ಯಕ್ತಿ ಗಳನ್ನು ಗುರುತಿಸಿ ಎಂದು ದಿವಂಗತ ರಾಕೇಶ್ ಸಿದ್ದರಾಮಯ್ಯ ಇರುವ ಫೋಟೋ ವನ್ನು ಬಿಜೆಪಿ ಟ್ವಿಟರ್ನಲ್ಲಿ ಹರಿಬಿಟ್ಟಿತು.
ರಾಕೇಶ್ ಜೊತೆಯಲ್ಲಿ ಶ್ರೀಕಿಗೆ ಪರಿಚಯವಿರುವ ಹೇಮಂತ ಮುದ್ದಪ್ಪ ಮತ್ತು ಸುನೀಲ್ ಹೆಗಡೆ ಇದ್ದರು. ಈಗ ಈ ಫೋಟೋವನ್ನು ಇಟ್ಟುಕೊಂಡು ಬಿಜೆಪಿ ಸಿದ್ದರಾಮಯ್ಯ ವಿರುದ್ಧ ಟೀಕೆ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ