• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Budget 2023: ಇದು 'ಅಮೀರ್ ಕೆ ಸಾಥ್, ಗರೀಬ್ ಕಾ ವಿನಾಶ್' ಬಜೆಟ್! ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯ

Budget 2023: ಇದು 'ಅಮೀರ್ ಕೆ ಸಾಥ್, ಗರೀಬ್ ಕಾ ವಿನಾಶ್' ಬಜೆಟ್! ವಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯ

ಕೇಂದ್ರ ಬಜೆಟ್ ಟೀಕಿಸಿದ ಸಿದ್ದರಾಮಯ್ಯ

ಕೇಂದ್ರ ಬಜೆಟ್ ಟೀಕಿಸಿದ ಸಿದ್ದರಾಮಯ್ಯ

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಿದ 2023-24ನೇ ಸಾಲಿನ ಕೇಂದ್ರ ಬಜೆಟ್ ಅತ್ಯಂತ ನಿರಾಶದಾಯಕವಾಗಿದೆ. ಬಹುತೇಕ ಕ್ಷೇತ್ರದಲ್ಲಿ ಕಳೆದ ವರ್ಷಕ್ಕಿಂತಲೂ ಕಡಿಮೆ ಅನುದಾನ ನೀಡಲಾಗಿದೆ. ರೈತರಿಗೆ ಯಾವುದೇ ಉತ್ತಮ ಯೋಜನೆಯಿಲ್ಲ, ಕರ್ನಾಟಕವನ್ನು ಮತ್ತೆ ಕಡೆಗಣಿಸಲಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಮುಂದೆ ಓದಿ ...
  • News18 Kannada
  • 3-MIN READ
  • Last Updated :
  • Bangalore [Bangalore], India
  • Share this:

    ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ (Finance Minister) ನಿರ್ಮಲಾ ಸೀತಾರಾಮನ್ (Nirmala Sitharaman)​ ಬುಧವಾರ ಬಹುನಿರೀಕ್ಷಿತ 2023-24ರ ಬಜೆಟ್ (Budget)​ ಮಂಡಿಸಿದ್ದಾರೆ. ಬಿಜೆಪಿ ಪಕ್ಷದವರು ಈ ಬಜೆಟ್​ ಅನ್ನು ಬಡವರ, ಮಧ್ಯಮ ವರ್ಗದವರ ಕನಸಿನ ಬಜೆಟ್​ ಎಂದು ಶ್ಲಾಘಿಸಿದರೆ, ವಿಪಕ್ಷಗಳು ನಿರಾಶಾದಾಯಕ ಬಜೆಟ್​ ಎಂದು ಟೀಕಿಸಿವೆ. ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಕೇಂದ್ರದ ಟ್ರಬಲ್ ಎಂಜಿನ್ ಸರ್ಕಾರ ಕಳೆದ 8 ವರ್ಷಗಳಿಂದ ಪಾಲಿಸಿಕೊಂಡು ಬಂದಿರುವ 'ಅಮೀರ್ ಕೆ ಸಾಥ್, ಗರೀಬ್ ಕಾ ವಿನಾಶ್' (ಶ್ರೀಮಂತರ ಪೋಷಣೆ ಮತ್ತು ಬಡವರ ವಿನಾಶ) ಎಂಬ ಜನವಿರೋಧಿ ನೀತಿಯ ಮುಂದುವರಿದ ಭಾಗವಾಗಿ ಕೇಂದ್ರದ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ 2023-2024ನೇ ಸಾಲಿನ ಬಜೆಟ್ ಮಂಡಿಸಿದ್ದಾರೆ ಎಂದು ಟೀಕಿಸಿದ್ದಾರೆ.


    ಕೃಷಿಕ್ಷೇತ್ರದ ಅನುದಾನ ಕಡಿತ


    ಕೇಂದ್ರ ಸರ್ಕಾರದ ದುರಾಡಳಿತ ಮತ್ತು ಕೊರೊನಾ ರೋಗದಿಂದಾಗಿ ದೇಶದ ಆರ್ಥಿಕ ಸ್ಥಿತಿ ಹದಗೆಟ್ಟುಹೋಗಿದೆ. ಬಹಳ ಮುಖ್ಯವಾಗಿ ದೇಶದ ಬೆನ್ನೆಲುಬು ಎಂದು ಭಾಷಣದಲ್ಲಿ ಎಲ್ಲರೂ ಕೊಂಡಾಡುವ ರೈತರ ಬದುಕು ನೆಲ ಹಿಡಿದಿದೆ. 2022-23ರ ಬಜೆಟ್ ಗೆ ಹೋಲಿಸಿದರೆ ಈ ಬಜೆಟ್ ನಲ್ಲಿ ಕೃಷಿಕ್ಷೇತ್ರಕ್ಕೆ ರೂ.8,468.21 ಕೋಟಿ ಹಣ ಕಡಿಮೆ ನೀಡಲಾಗಿರುವುದೇ ಈ ನಿರ್ಲಕ್ಷ್ಯಕ್ಕೆ ಸಾಕ್ಷಿ. ಸಣ್ಣ ಮತ್ತು ಮಧ್ಯಮ ರೈತರನ್ನು ಕೂಡಾ ಕಡೆಗಣಿಸಲಾಗಿದೆ.


    ನಿರುದ್ಯೋಗದ ಪ್ರಮಾಣ ಹೆಚ್ಚಾಗಿದೆ. ಅತ್ಯಂತ ಹೆಚ್ಚು ಸಂಖ್ಯೆಯಲ್ಲಿ ಅಂದರೆ ಸುಮಾರು ಶೇಕಡಾ 54ರಷ್ಟು ಉದ್ಯೋಗವನ್ನು ಸೃಷ್ಟಿಸುವ ಮತ್ತು ದೇಶದ ಆರ್ಥಿಕತೆಗೆ ದೊಡ್ಡ ಕೊಡುಗೆಯನ್ನು ನೀಡುವ ಕೃಷಿ ಕ್ಷೇತ್ರವನ್ನು ಬಜೆಟ್ ನಲ್ಲಿ ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಆರೋಪಿಸಲಾಗಿದೆ.


    ಇದನ್ನೂ ಓದಿ:  Budget 2023: ಕೇಂದ್ರ ಬಜೆಟ್ ಮೂಲಕ ಮೂಗಿಗೆ ತುಪ್ಪ ಸವರುವ ಕೆಲಸ ಆಗಿದೆ; ಹೆಚ್​ಡಿ ಕುಮಾರಸ್ವಾಮಿ ಟೀಕೆ


    ರೈತರ ಸಾಲಾ ಮನ್ನಾ ನಿರೀಕ್ಷೆ ಸುಳ್ಳಾಗಿದೆ


    ಕನಿಷ್ಠ ಬೆಂಬಲ ಬೆಲೆಯಲ್ಲಿನ ಅನ್ಯಾಯ, ಅವೈಜ್ಞಾನಿಕ ಬೆಳೆ ವಿಮೆ, ಸಾಲದ ಹೊರೆ, ನೆರೆ ಮತ್ತು ಬರಪರಿಹಾರದಲ್ಲಿನ ಕೊರತೆಗಳ ಬಗ್ಗೆ ಬಜೆಟ್ ನಲ್ಲಿ ಪ್ರಸ್ತಾಪವೇ ಇಲ್ಲ. ರೈತರ ಆದಾಯವನ್ನು ದುಪ್ಪಟ್ಟು ಮಾಡಲಾಗುವುದು ಎಂಬ ಘೋಷಣೆ ಪೊಳ್ಳಾಗಿದೆ. ಕನಿಷ್ಠ ಸಣ್ಣ ಹಿಡುವಳಿದಾರ ರೈತರ ಸಾಲವನ್ನಾದರೂ ಮನ್ನಾ ಮಾಡಬಹುದೆಂಬ ನಿರೀಕ್ಷೆ ಸುಳ್ಳಾಗಿದೆ. ರೈತರಿಗೆ ಸಾಲ ನೀಡಲು ಎರಡು ಲಕ್ಷ ಕೋಟಿ ರೂಪಾಯಿಗಳನ್ನು ನಿಗದಿಪಡಿಸಲಾಗಿದೆ. ರೈತರನ್ನು ಋಣಮುಕ್ತಗೊಳಿಸಬೇಕಾಗಿರುವ ಸರ್ಕಾರ ಅವರನ್ನು ಇನ್ನಷ್ಟು ಸಾಲದ ಬಲೆಗೆ ನೂಕಲು ಹೊರಟಿದೆ ಎಂದು ಟೀಕಿಸಿದ್ದಾರೆ.


    ಇದನ್ನೂ ಓದಿ: Budget 2023: ಈ ಬಾರಿ ಬಜೆಟ್‌ನಲ್ಲಿ ಕೃಷಿಕರಿಗೆ ಖುಷಿ, ಸ್ವಾವಲಂಬಿ ಮಹಿಳೆಯರಿಗೆ ಸಹಾಯ! ಅಮೃತಕಾಲದ ಬಜೆಟ್ ಅಂತ ಬಣ್ಣಿಸಿದ ಮೋದಿ

     ಕಮಿಷನ್ ಕಳೆದರೆ ಉಳಿಯುವುದೇ 3000 ಕೋಟಿ


    ಭದ್ರ ಮೇಲ್ದಂಡೆ ಯೋಜನೆಗೆ ಬಜೆಟ್​ನಲ್ಲಿ ರೂ.5300 ಕೋಟಿ ರೂಪಾಯಿಯನ್ನು ನಿಗದಿಪಡಿಸಲಾಗಿದೆ. ಈ ಯೋಜನೆ ಪೂರ್ಣಗೊಳ್ಳಬೇಕಾದರೆ ರೂ.23,000 ಕೋಟಿ ಅವಶ್ಯಕತೆಯಿದೆ. ಕೇಂದ್ರ ಸರ್ಕಾರ ನೀಡಲು ಒಪ್ಪಿರುವುದು ಯೋಜನಾ ವೆಚ್ಚದ ಕಾಲುಭಾಗ ಮಾತ್ರ. ಈ ಹಣದಲ್ಲಿ 40% ಕಮಿಷನ್ ಕಳೆದರೆ ಕೊನೆಗೆ ಯೋಜನೆಗೆ ಸಿಗಲಿರುವುದು ರೂ.3000 ಕೋಟಿಗಿಂತಲೂ ಕಡಿಮೆ. ನಿಗದಿ ಪಡಿಸಿರುವ ಹಣ ಕೂಡಾ ಒಂದು ವರ್ಷಕ್ಕೋ ಐದು ವರ್ಷಕ್ಕೋ ಎನ್ನುವುದನ್ನೂ ಸ್ಪಷ್ಟಪಡಿಸಿಲ್ಲ.


    ಬಹಳ ಮುಖ್ಯವಾಗಿ ಕೃಷ್ಣಾ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿರುವ ಈ ಯೋಜನೆ ಅನುಷ್ಠಾನಗೊಳ್ಳಬೇಕಾದರೆ 'ಬಿ ಸ್ಕೀಮ್' ಗೆ ಸಂಬಂಧಿಸಿದ ವ್ಯಾಜ್ಯ ಇತ್ಯರ್ಥವಾಗಬೇಕು. ಅಲ್ಲಿಯ ವರೆಗೆ ಈ ಹಣವನ್ನು ಖರ್ಚು ಮಾಡುವಹಾಗಿಲ್ಲ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.




    ಹಲವು ಯೋಜನೆಗಳ ಅನುದಾನ ಕಡಿತ


    ಕೃಷ್ಣಾ ಮೇಲ್ದಂಡೆ, ಮಹದಾಯಿ, ಮೇಕೆದಾಟು ಯೋಜನೆಗಳಿಗೆ ಪೈಸೆ ಹಣವನ್ನೂ ನೀಡಿಲ್ಲ. ಉಪನಗರ ರೈಲ್ವೆ ಮತ್ತು ಮೆಟ್ರೋ ರೈಲು ಯೋಜನೆಗೆ ಹೆಚ್ಚಿನ ಅನುದಾನ ನೀಡಬಹುದೆಂಬ ನಿರೀಕ್ಷೆ ಇತ್ತು ಅದೂ ಸುಳ್ಳಾಗಿದೆ. ಆಹಾರ ಸಬ್ಸಿಡಿಯನ್ನು ಶೇಕಡಾ 31ರಷ್ಟು ಕಡಿಮೆ ಮಾಡಲಾಗಿದೆ. 2022-23ರಲ್ಲಿ ರೂ.2,87,194 ಕೋಟಿಯಷ್ಟು ಆಹಾರ ಸಬ್ಸಿಡಿ ನೀಡಲಾಗಿತ್ತು. ಈ ಬಾರಿ ಅದನ್ನು ರೂ.1,97,350 ಕೋಟಿಗೆ ಇಳಿಸಲಾಗಿದೆ. ನರೇಗಾ ಯೋಜನೆಗೆ ಶೇಕಡಾ 32ರಷ್ಟು ಕಡಿಮೆ ಅನುದಾನ ನಿಗದಿಪಡಿಸಲಾಗಿದೆ. 2022-23ರಲ್ಲಿ ರೂ.89, 154 ಕೋಟಿ ಗಳಷ್ಟು ನೀಡಲಾಗಿದ್ದ ಅನುದಾನವನ್ನು 2023-24ರ ಸಾಲಿನಲ್ಲಿ ರೂ.61,032 ಕೋಟಿಗೆ ಇಳಿಸಲಾಗಿದೆ.


    Siddaramaiah on union budget
    ಸಿದ್ಧರಾಮಯ್ಯ


    ಎಲ್.ಪಿ.ಜಿ ಸಬ್ಸಿಡಿ ಕಡಿತ


    ಎಲ್.ಪಿ.ಜಿ ಸಬ್ಸಿಡಿಯನ್ನು ಶೇಕಡಾ 75ರಷ್ಟು ಕಡಿತಗೊಳಿಸಲಾಗಿದೆ. 2022-23ರಲ್ಲಿ ರೂ.9,170 ಕೋಟಿಗಳಷ್ಟಿದ್ದ ಎಲ್‌ಪಿಜಿ ಸಬ್ಸಿಡಿಯನ್ನು 2023-24ರ ಸಾಲಿಗೆ ರೂ.2,257 ಕೋಟಿಗೆ ಇಳಿಸಲಾಗಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನಾ ವೆಚ್ಚವನ್ನು ಶೇಕಡಾ 66ರಷ್ಟು ಹೆಚ್ಚಿಸಲಾಗಿದೆ. ಪ್ರತಿಮನೆ ನಿರ್ಮಾಣ ವೆಚ್ಚವನ್ನು ರೂ.48,000 ರೂಪಾಯಿಗಳಿಂದ ರೂ.79, 590 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಈ ಹೆಚ್ಚಳ ಬಡ ಕುಟುಂಬಗಳಿಗೆ ನೆರವಾಗುವುದಕ್ಕೋ? ಗುತ್ತಿಗೆದಾರರಿಗೆ ಲಾಭ ಮಾಡಿಕೊಡಲಿಕ್ಕಾಗಿಯೇ? ಎಂದು ಪ್ರಶ್ನಿಸಿದ್ದಾರೆ.


    2023ರ ಬಜೆಟ್​ ಮಾಹಿತಿಗಾಗಿ ಇಲ್ಲಿ ಕ್ಲಿಕ್​ ಮಾಡಿ


    ಕರ್ನಾಟಕ  ಕಡೆಗಣನೆ


    ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿ ಹೋಗಿದ್ದರೂ ಅವರು ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ. ಒಂದೆರಡು ಬಾರಿ ಕರ್ನಾಟಕದ ಹೆಸರನ್ನು ಉಲ್ಲೇಖಮಾಡಿದ ಹೊರತಾಗಿ ವಿಶೇಷ ನೆರವಿನ ಘೋಷಣೆಗಳನ್ನು ಮಾಡಿಲ್ಲ ಎಂದು ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


    ಕೇಂದ್ರ ಅಡಿಯಾಳಿನಂತೆ ವರ್ತಿಸುತ್ತಿರುವ ಸರ್ಕಾರ


    ಕೇಂದ್ರ ಸರ್ಕಾರದ ಅಡಿಯಾಳಿನಂತೆ ವರ್ತಿಸುತ್ತಿರುವ ರಾಜ್ಯ ಸರ್ಕಾರ ರಾಜ್ಯದ ಬೇಡಿಕೆಗಳ ಬಗ್ಗೆ ಕೇಂದ್ರ ಸರ್ಕಾರದ ಗಮನಸೆಳೆಯಲು ಸಂಪೂರ್ಣ ವಿಫಲವಾಗಿದೆ.
    ಸಾಮಾನ್ಯವಾಗಿ ಬಜೆಟ್ ಪೂರ್ವದಲ್ಲಿ ಮುಖ್ಯಮಂತ್ರಿಗಳು ದೆಹಲಿಗೆ ತೆರಳಿ ಸಂಸತ್ ಸದಸ್ಯರ ಜೊತೆ ಸಮಾಲೋಚನೆ ನಡೆಸಿ ರಾಜ್ಯದ ಬೇಡಿಕೆಗಳನ್ನು ಕೇಂದ್ರ ಸರ್ಕಾರದ ಮುಂದಿಡುವುದು ರೂಢಿ. ಆದರೆ ಈ ಬಾರಿ ಈ ಸಂಪ್ರದಾಯವನ್ನು ಮುರಿಯಲಾಗಿದೆ.


    ರಾಜ್ಯದಿಂದ ಆರಿಸಿಹೋಗಿರುವ ಬಿಜೆಪಿಯ 25 ಲೋಕಸಭಾ ಸದಸ್ಯರು ಮತ್ತು ಆರು ರಾಜ್ಯಸಭಾ ಸದಸ್ಯರಿದ್ದಾರೆ. ಇವರಲ್ಲಿ ಯಾರೊಬ್ಬರು ರಾಜ್ಯದ ಬೇಡಿಕೆಗಳ ಬಗ್ಗೆಯಾಗಲಿ, ರಾಜ್ಯಕ್ಕೆ ಆಗಿರುವ ಅನ್ಯಾಯದ ಬಗ್ಗೆಯಾಗಲಿ ಎಲ್ಲಿಯೂ ಸೊಲ್ಲೆತ್ತಿಲ್ಲ, ಇದರಿಂದಾಗಿ ಕೇಂದ್ರ ಸರ್ಕಾರ ಕೂಡಾ ಕರ್ನಾಟಕವನ್ನು ಸಂಪೂರ್ಣ ನಿರ್ಲಕ್ಷಿಸಿದೆ.

    Published by:Rajesha B
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು