ರಾಜ್ಯ ಬಿಜೆಪಿ (Karnataka BJP) ಸರ್ಕಾರ ಜನ ಸ್ವರಾಜ್ ಯಾತ್ರೆಯನ್ನು (Jan Swaraj Yatre) ಮಾಡುತ್ತಿದೆ. ರಾಜ್ಯದಲ್ಲಿ ಅಕಾಲಿಕ ಮಳೆಯಾಗಿ (Unseasonal Rain) ರೈತರು (Farmers_ ಸಂಕಷ್ಟದಲ್ಲಿರುವಾಗ ಈ ಯಾತ್ರೆ ಬೇಕಿತ್ತಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ಪ್ರಶ್ನೆ ಮಾಡಿದ್ದಾರೆ. ಅರ್ಧ ರಾಜ್ಯ ಅಕಾಲಿಕ ಮಳೆಯಿಂದ ತತ್ತರಿಸಿಹೋಗಿದೆ. ಕೈಗೆ ಬಂದ ಬೆಳೆ, ಬಾಯಿಗೆ ಬರದೆ ಗದ್ದೆಯಲ್ಲಿ ಕೊಳೆಯುತ್ತಿದೆ. ರಾಜ್ಯ ಸರ್ಕಾರ ಟೂರಿಂಗ್ ಟಾಕೀಸ್ ರೀತಿ ಜನಸ್ವರಾಜ್ ಎಂಬ ನಾಟಕ ಪ್ರದರ್ಶನ ಮಾಡಿಕೊಂಡು ಹೊರಟಿದೆ. ಜನಸ್ವರಾಜ್ ಅಲ್ಲ, ಇದು ಜನಬರ್ಬಾದ್ ಯಾತ್ರೆ ಎಂದು ಟೀಕಿಸಿದ್ದಾರೆ.
ಮಳೆ-ನೆರೆಗೆ ಸಿಕ್ಕಿ 20ಕ್ಕೂ ಹೆಚ್ಚು ಜನ ಸಾವಿಗೀಡಾಗಿದ್ದಾರೆ. ಹತ್ತು ಸಾವಿರ ಹೆಕ್ಟೇರ್ ಗೂ ಹೆಚ್ಚು ಪ್ರದೇಶದಲ್ಲಿ ಬೆಳೆ ನಾಶವಾಗಿದೆ, ಮನೆ ಬಿದ್ದು ಜನ ಬೀದಿಪಾಲಾಗಿದ್ದಾರೆ. ಇವರ ನೆರವಿಗೆ ಧಾವಿಸಬೇಕಾದ ರಾಜ್ಯ ಸರ್ಕಾರ ಜನಸ್ವರಾಜ್ ಎಂಬ ನಾಟಕ ಮಾಡುತ್ತಾ ತಿರುಗಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ನಿಮ್ಮ ಹನಿಮೂನ್ ಕಾಲ ಮುಗಿದಿದೆ. ನಿಮ್ಮ ಸಚಿವರ ಈ ನಾಟಕ ಪ್ರದರ್ಶನದ ಯಾತ್ರೆಯನ್ನು ಮೊದಲು ನಿಲ್ಲಿಸಿ. ಅವರನ್ನು ಮಳೆಪೀಡಿತ ಜಿಲ್ಲೆಗಳಿಗೆ ಓಡಿಸಿ.
ಇದನ್ನೂ ಓದಿ: ದೇಶದಲ್ಲೇ ತುರ್ತು ಪರಿಸ್ಥಿತಿಗಿಂತ ಅದರ 20 ಪಟ್ಟು ಪರಿಸ್ಥಿತಿ ಈಗ ಇದೆ; SR Hiremath ಟೀಕೆ
ಕಣ್ಣೀರಿಟ್ಟು ಗೋಳಾಡುತ್ತಿರುವ ಜನರ ಕಷ್ಟಗಳನ್ನು ಆಲಿಸಿ ಪರಿಹಾರ ಕಾರ್ಯ ಕೈಗೊಳ್ಳಲು ಹೇಳಿ. ಸಾವಿರಾರು ಎಕರೆ ಭೂಮಿಯಲ್ಲಿ ಭತ್ತ,ರಾಗಿ,ಜೋಳ, ತರಕಾರಿ, ಬಾಳೆ, ತೆಂಗು ಎಲ್ಲವೂ ನಾಶವಾಗಿದೆ. ರೈತರು ಕಣ್ಣೀರಿನಿಂದ ಕೈತೊಳೆದುಕೊಳ್ಳುತ್ತಿದ್ದಾನೆ.
ಸಚಿವರು ಯಾತ್ರೆಯಲ್ಲಿ, ಅಧಿಕಾರಿಗಳು ಬೆಚ್ಚನೆ ಮನೆಯಲ್ಲಿ
ಸಚಿವರು ಯಾತ್ರೆಯಲ್ಲಿದ್ದಾರೆ, ಅಧಿಕಾರಿಗಳು ಬೆಚ್ಚನೆ ಮನೆಯಲ್ಲಿದ್ದಾರೆ. ಜನ ಬೀದಿಪಾಲಾಗಿದ್ದಾರೆ.ಇಲ್ಲೊಂದು ಸರ್ಕಾರ ಇದೆಯೇ? ಮೊದಲು ಅಧಿಕಾರಿಗಳ ತಂಡ ಕಟ್ಟಿಕೊಂಡು ಮಳೆಪೀಡಿತ ಪ್ರದೇಶಗಳಿಗೆ ಸಚಿವರು ಹೋಗಿ ಮಳೆ ನಷ್ಟದ ಅಂದಾಜು ನಡೆಸಿ ತಾತ್ಕಾಲಿಕ ಪರಿಹಾರ ನೀಡಲು ಸೂಚನೆ ನೀಡಿ. ಗಂಜಿ ಕೇಂದ್ರಗಳನ್ನು ತೆರೆಯಲು ಹೇಳಿ. ನಷ್ಟದ ಸಮೀಕ್ಷೆ ನಡೆಸಿ ಹೆಚ್ಚಿನ ಪರಿಹಾರ ನೀಡಲು ಕೇಂದ್ರಕ್ಕೆ ಮನವಿ ಮಾಡಿ.
ಬಿಜೆಪಿ ಯಾತ್ರೆಗೆ HDK ಟೀಕೆ
ರಾಜ್ಯದಲ್ಲಿ ನಿರಂತರ ಮಳೆ (Rain) ಸುರಿಯುತ್ತಿದೆ, ರಾಜ್ಯದ ಎಲ್ಲಾ ಭಾಗದಲ್ಲಿಯೂ ಮಳೆಯಾಗುತ್ತಿದೆ. ಲಕ್ಷಾಂತರ ಎಕ್ಟೇರ್ ಭೂಮಿಯಲ್ಲಿ ಬೆಳೆ ನಾಶವಾಗಿದೆ. ರೈತನಿಗೆ ನಷ್ಟವಾದರೆ, ಗ್ರಾಹಕನಿಗೆ ದರ ಏರಿಕೆಯಾಗಲಿದೆ. ಸರ್ಕಾರ ರೈತನ ಪರವಾಗೂ ಇಲ್ಲ ಗ್ರಾಹಕರ ಪರವಾಗಿಯೂ ಇಲ್ಲ. ಬಿಜೆಪಿ ನಾಯಕರು ಶಂಖ ಊದಲು ಹೋಗಿದ್ದಾರೆ ಎಂದು ಕಿಡಿಕಾರಿದ್ದರು.
ಇದನ್ನೂ ಓದಿ: ತಮಾಷೆಗೆ ಹೇಳಿದ ಮಾತನ್ನು ನಾರಾಯಣ ಗೌಡರು ನಿಜ ಮಾಡಿದ್ರು: ಸಚಿವ ST Somashekhar
ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಕೆರೆ ಕೋಡಿ ಬಿದ್ದಿವೆ. ಸರ್ಕಾರ ವಿಡಿಯೋ ಕಾನ್ಫರೆನ್ಸ್ ಮಾಡಿದ್ದಾರೆ. ಅಧಿಕಾರಿಗಳಿಗೆ ಸ್ಥಳ ಪರಿಶೀಲಿಸಿ ಎಂದು ಹೇಳಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಹೋಗ್ತಾರಾ ಎಂದು ಮಂತ್ರಿಗಳಿಗೆ ಹೇಳಿಲ್ಲ. ಅಧಿಕಾರಿಗಳಿಗೆ ಹೇಳಿದ್ದಾರೆ ಅವರು ಎಷ್ಟರ ಮಟ್ಟಿಗೆ ಇವರ ಮಾತು ಕೇಳ್ತಾರೆ ಎಂದು ಟೀಕಿಸಿದ್ದರು.
ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯವರು ಸ್ವರಾಜ್ ಯಾತ್ರೆ ಮಾಡ್ತಾ ಇದ್ದಾರೆ. ಜನರಿಗಿಂತ ಜನ ಸ್ವರಾಜ್ ಯಾತ್ರೆ ಚುನಾವಣೆ ಮುಖ್ಯವಾಗಿದೆ. ಜನರ ಕೆಂಗಣ್ಣಿಗೆ ಗುರಿಯಾಗುವುದಕ್ಕೂ ಮುಂಚೆ ಎಚ್ಚೆತ್ತುಕೊಳ್ಳಿ. ನಾಳೆನೇ ಚುನಾವಣೆ ಇಲ್ಲ, ಜನರ ಪರಿಸ್ಥಿತಿ ನೋಡಿ. ಚುನಾವಣೆ ಪದ್ದತಿ ನಮಗಿಂತ ನಿಮಗೆ ಗೊತ್ತಿದೆ, ಎಲ್ಲೇ ಕೂತರೂ ಚುನಾವಣೆ ಗೆಲ್ತೀರಾ ಆ ಪದ್ದತಿ ಗೊತ್ತಿದೆ. ಪ್ರಚಾರಕ್ಕೆ ಸರ್ಕಾರ ದುಡ್ಡು ಚೆಲ್ಲುತ್ತಾ ಇದೆಯಲ್ಲ ಅಷ್ಟು ಪ್ರಚಾರ ನಾನು ಮಾಡ್ತಾ ಇಲ್ಲ ಎಂದು ಕುಹಕವಾಡಿದರು.
HDK ಹೇಳಿಕೆಗೆ ತಿರುಗೇಟು ನೀಡಿದ ಅರಗ ಜ್ಞಾನೇಂದ್ರ
ಕುಮಾರಸ್ವಾಮಿ ಹಾಗೇ ದಿನಕ್ಕೆ ಎರಡು ಬಾರಿ ಕ್ಯಾಮರಾ ಮುಂದೆ ನಿಲ್ಲಕ್ಕೆ ಆಗುತ್ತಾ ಎಂದು ಪ್ರಶ್ನಿಸುವ ಮೂಲಕ ತಿರುಗೇಟು ನೀಡಿದ್ದಾರೆ. ನಾವು ನಾಲ್ಕು ಜನರ ತಂಡ ಮಾಡಿಕೊಂಡು ಜನರ ಸಂಕಷ್ಟ ಆಲಿಸಲು ತೆರಳುತ್ತಿದ್ದೇವೆ. ಬೆಂಗಳೂರಲ್ಲಿ (Bengaluru) ಇದ್ರೆ ಬೆಂಗಳೂರಲ್ಲಿ ಇದ್ದೀರಿ ಅಂತ ಹೇಳ್ತಾರೆ. ಹಳ್ಳಿ ಕಡೆ ಬಂದ್ರೆ ಶಂಖ ಊದುತ್ತೀರಿ ಅಂತಾರೆ. ಜನರ ಕಷ್ಟ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಬಾರದಾ ಎಂದು ಅರಗ ಜ್ಞಾನೇಂದ್ರ ಪ್ರಶ್ನೆ ಮಾಡುವ ಮೂಲಕ ತಿರುಗೇಟು ನೀಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ