ಮೈಸೂರು(ಡಿ.02): ಕರ್ನಾಟಕ ಚುನಾವಣೆ (Karnataka Elections) ಸಮೀಪಿಸುತ್ತಿದ್ದಂತೆಯೇ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಹೀಗಿರುವಾಗ ಊಹಿಸಲೂ ಸಾಧ್ಯವಾಗದ ತಿರುವುಗಳೂ ಕಂಡು ಬರುತ್ತಿವೆ. ರಾಜಕೀಯ ನಾಯಕರ ವಾಗ್ದಾಳಿ, ಪಕ್ಷಾಂತರ ನೀತಿ ಹೀಗೆ ಎಲ್ಲವೂ ಸರ್ವೇ ಸಾಮಾನ್ಯವಾಗಿದೆ. ಸದ್ಯ ಮಾಜಿ ಸಿಎಂ ಸಿದ್ದರಾಮಯ್ಯರ (Siddaramaiah) ಪರಮಾಪ್ತ ಕೆ. ಮರೀಗೌಡ (K Marigowda) ಚಾಮುಂಡೇಶ್ವರಿ ವಿಧಾನಸಭಾ ಅಖಾಡಕ್ಕೆ ಇಳಿದಿದ್ದಾರೆ ಎಂಬುವುದು ಭಾರೀ ಸಂಚಲನ ಸೃಷ್ಟಿಸಿದೆ. 2018ರ ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಈ ಕ್ಷೇತ್ರದಿಂದ ಸ್ಪರ್ಧಿಸಿ ಸೋಲನುಭವಿಸಿದ್ದರೆಂಬುವುದು ಉಲ್ಲೇಖನೀಯ.
ಹೌದು ಚಾಮುಂಡೇಶ್ವರಿ ಕ್ಷೇತ್ರದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿರುವ ಕೆ. ಮರೀಗೌಡ ಸಿದ್ದರಾಮಯ್ಯನವರು ಸೂಚಿಸಿದರೆ 2018ರ ಸೋಲಿನ ಕಹಿ ಅಳಿಸುವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಅವರನ್ನು ಸೋಲಿಸಿದ ಚಾಮುಂಡೇಶ್ವರಿ ಜನ ಈಗ ಪಶ್ಚಾತ್ತಾಪ ಅನುಭವಿಸುತ್ತಿದ್ದಾರೆ. ಅವರಂತಹ ಹಿರಿಯ ನಾಯಕರನ್ನ ಸೋಲಿಸಬಾರದಿತ್ತೆಂದು ಹೇಳಲಾರಂಭಿಸಿದ್ದಾರೆ. ನಾನು ಕಟ್ಟಾ ಕಾಂಗ್ರೆಸ್ಸಿಗ. ಪಕ್ಷಕ್ಕಾಗಿ ಕ್ಷೇತ್ರದಲ್ಲಿ ದುಡಿದಿದ್ದೇನೆ. ನನ್ನ ಹಿರಿತನ ಪರಿಗಣಿಸಿ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: Siddaramaiah: ಮೂರು ಕ್ಷೇತ್ರಗಳ ಮೇಲೆ ಸಿದ್ದು ಕಣ್ಣು! ಅಲ್ಲಿ ಬಿಟ್, ಇಲ್ಲಿ ಬಿಟ್ ಸಿದ್ದರಾಮಯ್ಯ ಸ್ಪರ್ಧಿಸೋದೆಲ್ಲಿ?
ಚಾಮುಂಡೇಶ್ವರಿ ಕ್ಷೇತ್ರವನ್ನು ಗೆಲ್ಲಿಸುವ ಪಣ
ಈ ಬಾರಿ ಚಾಮುಂಡೇಶ್ವರಿ ಕ್ಷೇತ್ರವನ್ನು ಗೆಲ್ಲಿಸುವ ಪಣ ತೊಟ್ಟಿರುವ ಕೆ. ಮರೀಗೌಡ ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಈ ಬಾರಿ ಕಾಂಗ್ರೆಸ್ ಗೆಲ್ಲಿಸುತ್ತೇವೆ. ಪಕ್ಷದ್ರೋಹ ಮಾಡಿರುವ ಜಿ.ಟಿ. ದೇವೇಗೌಡರ ಸೋಲು ಈ ಬಾರಿ ಖಚಿತ. ಅವರ ಗೆಲುವಿಗೆ ಶ್ರಮಿಸಿದ್ದ ಬಹುತೇಕ ಮುಖಂಡರು ಜೆಡಿಎಸ್ ತ್ಯಜಿಸಿ ಕಾಂಗ್ರೆಸಿನತ್ತ ಬರುತ್ತಿದ್ದಾರೆ. ಸಿದ್ದರಾಮಯ್ಯ ಅವರನ್ನ ಕೇವಲ ಅಪಪ್ರಚಾರ ಮಾಡಿ ಸೋಲಿಸಲಾಗಿತ್ತು. ಈ ಬಾರಿ ಅದೆಲ್ಲವನ್ನು ಮೀರಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದಲ್ಲಿ 50 ಸಾವಿರ ಡಬಲ್ ಎಂಟ್ರಿ ಮತದಾರರು. ಬೇರೆ ಬೇರೆ ಕಡೆ ವಾಸಿಸುತ್ತಿರುವವರು ಈ ಕ್ಷೇತ್ರದಲ್ಲೂ ಮತದಾರರ ಪಟ್ಟಿಯಲ್ಲಿದ್ದಾರೆ. ಬೆಂಗಳೂರಿನಲ್ಲಿ ಚಿಲುಮೆ ಎಂಟರ್ ಪ್ರೈಸಸ್ ನಡೆಸಿದ ಮತದಾರರ ಪಟ್ಟಿ ಅಕ್ರಮದ ಬಳಿಕ ನಾವು ಎಚ್ಚೆತ್ತುಕೊಂಡಿದ್ದೇವೆ. ಈ ಕ್ಷೇತ್ರದಲ್ಲಿ ಬೂತ್ ಮಟ್ಟದ ಕಾರ್ಯಕರ್ತರ ಪಡೆ ಡಬಲ್ ಎಂಟ್ರಿಯಾಗಿರೋ ಮತದಾರರ ಪಟ್ಟಿ ಪತ್ತೆ ಕಾರ್ಯದಲ್ಲಿ ನಿರತರಾಗಿದ್ದಾರೆ.
ಯಾವುದೇ ಕಾರಣಕ್ಕೂ ಮತದಾರರ ಪಟ್ಟಿಯಲ್ಲಿ ಆಡಳಿತ ಪಕ್ಷದವರು ಅಕ್ರಮ ಮಾಡಲು ನಾವು ಬಿಡಲ್ಲ ಎಂದು ಕೆ. ಮರೀಗೌಡ ಬಿಜೆಪಿಗೆ ಪರೋಕ್ಷ ಟಾಂಗ್ ನೀಡಿದ್ದಾರೆ.
ಇದನ್ನೂ ಓದಿ: Bettanagere Shankara: ಬಿಜೆಪಿ ಸೇರಲು ಮುಂದಾಗಿರುವ ಬೆತ್ತನಗೆರೆ ಯಾರು? ಇಲ್ಲಿದೆ ಶಂಕರನ 'ರಕ್ತ'ಚರಿತ್ರೆ!
ನಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಮತ್ತೆ ಸ್ಪರ್ಧೆ ಮಾಡಲ್ಲ: ಸಿದ್ದರಾಮಯ್ಯ
ಮತ್ತೊಂದೆಡೆ ಖುದ್ದು ಸಿದ್ದರಾಮಯ್ಯರೇ ತಾನು ಚಾಮುಂಡೇಶ್ವರಿ ಕ್ಷೇತ್ರದಿಂದ ಮತ್ತೆ ಸ್ಪರ್ಧೆ ಮಾಡುವುದಿಲ್ಲ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಸಿದ್ದು ಮುಂದಿನ ವಿಧಾನಸಭಾ ಚುನಾವಣೆಗೆ ಚಾಮುಂಡೇಶ್ವರಿ ಕ್ಷೇತ್ರದಿಂದ ನಿಲ್ಲುವ ಪ್ರಶ್ನೆಯೇ ಇಲ್ಲ. ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು. ಇದು ನನ್ನ ಕೊನೆಯ ಚುನಾವಣೆ. ಕೋಲಾರ, ಕೊಪ್ಪಳ, ಹುಣಸೂರು, ವರುಣಾದಿಂದ ಸ್ಪರ್ಧಿಸುವಂತೆ ಕಾರ್ಯಕರ್ತರು ಆಹ್ವಾನ ನೀಡಿದ್ದಾರೆ. ಆದರೆ, ಈಗಲೇ ತೀರ್ಮಾನ ತೆಗೆದುಕೊಂಡಿಲ್ಲ. ಕಳೆದ ಬಾರಿ ಚಾಮುಂಡೇಶ್ವರಿಯಲ್ಲಿ ಮತಗಟ್ಟೆ ಮಟ್ಟದಲ್ಲಿ ಪಕ್ಷದ ಕಾರ್ಯಕರ್ತರು ಕೆಲಸ ಮಾಡದ ಕಾರಣ ನಾನು ಸೋಲಬೇಕಾಯಿತು ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ