ಜಾತಿ ಜನಗಣತಿ ಪ್ರಕಟಿಸುತ್ತೇವೆ ಎಂದ ಈಶ್ವರಪ್ಪ; ನಮೋ ನಮೋ ಎಂದ ಸಿದ್ದರಾಮಯ್ಯ

ಗೋಡ್ವಾನ್ ಹೋಟೆಲ್ನಲ್ಲಿ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಆಯೂಜಿಸಿದ ಹಿಂದುಳಿದ ವರ್ಗಗಳ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ಸಮಾಲೋಚನೆ ಸಭೆಯಲ್ಲಿ ಸಚಿವ ಕೆಎಸ್ ಈಶ್ವರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ಹೆಚ್.ಎಂ. ರೇವಣ್ಣ ಮೊದಲಾದವರು ಭಾಗವಹಿಸಿದ್ದರು.

ಸಿದ್ದರಾಮಯ್ಯ

ಸಿದ್ದರಾಮಯ್ಯ

  • Share this:
ಬೆಂಗಳೂರು(ಅ. 18): ಜಾತಿ ಸಮೀಕ್ಷೆ ವರದಿಯನ್ನು ಜಾರಿಗೆ ತಮ್ಮ ಸರ್ಕಾರ ಜಾರಿಗೆ ತರುತ್ತದೆ. ನಾವು ಈಗಲೇ ಚರ್ಚೆ ಮಾಡಿ ಜಾತಿ ಗಣತಿಯನ್ನು ಪ್ರಕಟಿಸುತ್ತೇವೆ ಎಂದು ಸಚಿವ ಹಾಗೂ ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಹೇಳಿದರು. ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ 160 ಕೋಟಿ ಖರ್ಚು ಮಾಡಿ ಜಾತಿ ಜನಗಣತಿ ಪ್ರಾರಂಭಿಸಲಾಗಿತ್ತು. ಅವರ ಅವಧಿಯಲ್ಲಿ ವರದಿ ಬಹಿರಂಗ ಆಗಲಿಲ್ಲ. ಕುಮಾರಸ್ವಾಮಿ ಸರ್ಕಾರದಲ್ಲೂ ಅದು ಆಗಲಿಲ್ಲ. ಹಿಂದೆ ಈ ವರದಿ ಯಾಕೆ ಪ್ರಕಟ ಆಗಲಿಲ್ಲ, ಯಾರು ತಡೆದು ಅಂದು ಪ್ರಶ್ನೆ ಮಾಡುವುದಿಲ್ಲ, ಟೀಕೆ ಮಾಡುವುದಿಲ್ಲ. ಬದಲಿಗೆ ಈ ವರದಿ ಜಾರಿಗೆ ತರಲು ನಮ್ಮ ಸರ್ಕಾರದಿಂದ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವರೂ ಆದ ಅವರು ತಿಳಿಸಿದರು.

ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಆಯೋಜಿಸಿದ ಹಿಂದುಳಿದ ವರ್ಗಗಳ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ಸಮಾಲೋಚನೆ ಸಭೆಯಲ್ಲಿ ಮಾತನಾಡುತ್ತಿದ್ದ ಈಶ್ವರಪ್ಪ ಅವರು, ಜಾತಿ ಸಮೀಕ್ಷೆ ನಡೆಸಿದ ಸಿದ್ದರಾಮಯ್ಯರ ಕಾರ್ಯವನ್ನು ಪ್ರಶಂಸಿಸಿದರು. ರಾಷ್ಟ್ರದಲ್ಲೇ ಮೊದಲ ಬಾರಿಗೆ ಸಿದ್ದರಾಮಯ್ಯ ಅವರು ಜಾತಿ ಜನಗಣತಿ ನಡೆಸಿದ್ದರು. ಹಿಂದುಳಿದ ವರ್ಗಗಳ ಮೇಲಿನ ಸಿದ್ದರಾಮಯ್ಯನವರ ಕಾಳಜಿ ಮೆಚ್ಚತಕ್ಕದ್ದೇ. ಅವರ ಅಡಳಿತದ ಅವಧಿಯಲ್ಲೇ ವರದಿ ಬಹಿರಂಗ ಆಗಲಿಲ್ಲ ಎನ್ನುವುದು ಬೇಸರ ಎಂದು ಈಶ್ವರಪ್ಪ ವಿಷಾದಿಸಿದ್ದಾರೆ. ಹಾಗೆಯೇ, ಜಾತಿ ಜನಗಣತಿ ವರದಿ ಜಾರಿಗಾಗಿ ಬೀದಿಗೆ ಇಳಿಯುತ್ತೇನೆಂದು ಹೇಳಿದ್ದ ಸಿದ್ದರಾಮಯ್ಯ ಹೇಳಿಕೆಗೆ ಆಕ್ಷೇಪಿಸಿದ ಈಶ್ವರಪ್ಪ, ತಾನು ಈ ವಿಚಾರದಲ್ಲಿ ಸಿದ್ದರಾಮಯ್ಯರನ್ನು ಬೀದಿಗೆ ಇಳಿದು ಹೋರಾಡಲು ಬಿಡುವುದಿಲ್ಲ. ಅವರ ಸರ್ಕಾರ ಇದ್ದಾಗಲೇ ಯಾಕೆ ವರದಿ ಬಿಡುಗಡೆ ಮಾಡಲಿಲ್ಲ ಎಂದು ಪ್ರಶ್ನಿಸಿದರು.

ನಮೋ ನಮೋ ಎಂದ ಸಿದ್ದರಾಮಯ್ಯ: 

ನಂತರ ಮಾತನಾಡಿದ ಸಿದ್ದರಾಮಯ್ಯ, ಜಾತಿ ಜನಗಣತಿ ಜಾರಿಗೆ ತರುತ್ತೇನೆಂದು ಹೇಳಿದ ಈಶ್ವರಪ್ಪಗೆ ನಮೋ ನಮೋ ನಮೋ ಎಂದು ಶ್ಲಾಘಿಸಿದರು. ಈ ವರದಿ ಜಾರಿಗೆ ಬರಲಿಲ್ಲ ಎಂದರೆ ಬೀದಿಗಳಿಯುತ್ತೇನೆ ಎಂದು ಹೇಳಿದ್ದೆನೇ ಹೊರತು, ವರದಿ ಜಾರಿಯಾದರೆ ಬೀದಿಗೆ ಇಳಿತೀನಿ ಎಂದು ಹೇಳಿಲ್ಲ. ಈಶ್ವರಪ್ಪ ಈ ವರದಿ ಜಾರಿಗೆ ತರಿಸಿದರೆ ಅವರಿಗೆ ನಮೋ ನಮೋ ನಮೋ. ಅವರ ಮಾತುಗಳ ಮೇಲೆ ನಂಬಿಕೆ ಇಡುತ್ತೇನೆ. ವರದಿಯ ಸ್ವೀಕಾರ ಮತ್ತು ಜಾರಿಗೆ ಸರ್ಕಾರದ ಮೇಲೆ ಒತ್ತಡ ಹಾಕುತ್ತೇವೆ ಎಂದು ಸಿದ್ದರಾಮಯ್ಯ ತಿಳಿಸಿದರು.

ಇದನ್ನೂ ಓದಿ: ಕಸ ಗುಡಿಸಿ ಎಂದು ದೂರು ಕೊಟ್ಟರೆ ಮನೆ ಮುಂದೆ ಕಸದ ಲಾರಿ ಸಮೇತ ಬಂದು ಬೆದರಿಕೆ

ತಮ್ಮ ಸರ್ಕಾರ ಇದ್ದಾಗ ಯಾಕೆ ವರದಿ ಜಾರಿ ಆಗಲಿಲ್ಲ ಎಂದು ಈಶ್ವರಪ್ಪ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಜಾತಿ ಜನಗಣತಿ ಸಮೀಕ್ಷೆಯ ವರದಿ ನಾನು ಸಿಎಂ ಆಗಿದ್ದಾಗ ಪೂರ್ಣ ಆಗಿದಿದ್ದರೆ ಆಗಲೇ ಜಾರಿಗೆ ಕ್ರಮ ತೆಗೆದುಕೊಳ್ಳುತ್ತಿದ್ದೆ. ಇದನ್ನು ಮತ್ತೆ ಮತ್ತೆ ಸ್ಪಷ್ಟಪಡಿಸುತ್ತೇನೆ. ಇದರಲ್ಲಿ ರಾಜಕೀಯ ಕಾರಣ ಹುಡುಕುವುದು ಸರಿಯಲ್ಲ. ನಾನು ಉಪ ಮುಖ್ಯಮಂತ್ರಿ ಆಗಿದ್ದಾಗಲೇ ಜಾತಿ ಸಮೀಕ್ಷೆಗೆ 25 ಕೋಟಿ ರೂ ಮೀಸಲಿಟ್ಟಿದ್ದೆ. ನಂತರ ಬಂದ ಸರ್ಕಾರಗಳು ಸಮೀಕ್ಷೆ ಮಾಡಲಿಲ್ಲ. ನಾನು ಸಿಎಂ ಆದಾಗಲೇ ಸಮೀಕ್ಷೆ ಆಗಿದ್ದು. ಇದನ್ನೆಲ್ಲಾ ಈಶ್ವರಪ್ಪ ತಿಳಿದುಕೊಳ್ಳಬೇಕು ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.

ಕೇಂದ್ರದಲ್ಲಿ ಮತ್ತು ರಾಜ್ಯದಲ್ಲಿ ಒಂದು ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ಇರಬೇಕು ಎಂದು ಸಂವಿಧಾನದ ಆಶಯವಾಗಿದೆ. ಪ್ರೊ| ರವಿವರ್ಮ ಕುಮಾರ್ ನೇತೃತ್ವದಲ್ಲಿ ನಾನು ಪರ್ಮನೆಂಟ್ ಹಿಂದುಳಿದ ವರ್ಗಗಳ ಆಯೋಗ ರಚಿಸಿದ್ದೆ. ನಂತರ ದ್ವಾರಕಾನಾಥ್ ಅಧ್ಯಕ್ಷರಾಗಿದ್ದರು. ಈಗ ಈ ಆಯೋಗ ರದ್ದು ಆಗಿ ಒಂದು ವರ್ಷ ಆಯಿತು. ಯಾಕೆ ಅದನ್ನು ರದ್ದು ಮಾಡಿದ್ದು? ಇದು ರಾಜಕೀಯ ತಕರಾರಾ? ಇದು ಸಂವಿಧಾನಾತ್ಮಕ ತಕರಾರಾಗಿದೆ. ಇಂದಿರಾ ಸಹಾನಿ ಪ್ರಕರಣದಲ್ಲಿ ವಿಚಾರಣೆ ಮಾಡುವಾಗ ಜಾತಿಗಳ ಅಂಕಿ ಅಂಶದ ಬಗ್ಗೆ ಮಾಹಿತಿ ಇದೆಯಾ ಎಂದು ನ್ಯಾಯಾಧೀಶರು ಕೇಳಿದ ಪ್ರಶ್ನೆಗೆ ವಕೀಲರಿಂದ ಉತ್ತರ ಕೊಡಲು ಸಾಧ್ಯವಾಗಲಿಲ್ಲ. ಜಾತಿ ಜನಗಣತಿಯ ವರದಿ ಯಾವುದೂ ಇರಲಿಲ್ಲ. ಸಾಕ್ಷ್ಯಗಳೂ ಇರಲಿಲ್ಲ. ಇದೆಲ್ಲವನ್ನೂ ನಾನು ನೋಡಿದ್ದೆ. ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ರಚಿಸಿದ ನಂತರ ಜಾತಿ ಸಮೀಕ್ಷೆ ಮಾಡಿಸಲೇಬೇಕು ಎಂದು ಸಂಕಲ್ಪ ತೊಟ್ಟು ಸಮೀಕ್ಷೆ ಮಾಡಿಸಿದೆ ಎಂದು ಸಿದ್ದರಾಮಯ್ಯ ಹೇಳಿಕೊಂಡರು.

ಜಾತಿ ಜನಗಣತಿ ವರದಿ ಈಗ ಹಿಂದುಳಿದ ವರ್ಗಗಳ ಆಯೋಗದ ಕಾರ್ಯದರ್ಶಿ ಬಳಿ ಇದೆ. ಬಿಜೆಪಿ ಈಗ ಅಧಿಕಾರದಲ್ಲಿದೆ. ಸಮೀಕ್ಷೆಯನ್ನು ಸಂಪುಟದಲ್ಲಿಟ್ಟು ಒಪ್ಪಿಗೆ ತೆಗೆದುಕೊಳ್ಳಬಹುದಲ್ವ? ಇವರದ್ದೇ ಸರ್ಕಾರ ಇದ್ದ ಮೇಲೆ ವರದಿ ಒಪ್ಪಿಕೊಳ್ಳೋಕ್ಕಾಗಲ್ವ? ಇದರಲ್ಲಿ ರಾಜಕೀಯ ಎಲ್ಲಿ ಬರುತ್ತೆ. ಬಿಜೆಪಿ ಸರ್ಕಾರ ಈ ವರದಿಯನ್ನು ಒಪ್ಪಿಕೊಳ್ಳಲಿ ಎಂದು ಸಿದ್ದರಾಮಯ್ಯ ಸವಾಲು ಹಾಕಿದರು.

ಇದನ್ನೂ ಓದಿ: Bangalore Crime: ಬೆಂಗಳೂರು; ಗೃಹ ಪ್ರವೇಶಕ್ಕೆ ಬೆಳ್ಳಿ ನಾಣ್ಯ ಕೊಡುವ ನೆಪದಲ್ಲಿ ಬಂದು ಚಿನ್ನದ ಸರದೊಂದಿಗೆ ಎಸ್ಕೇಪ್!

ಅಂಬೇಡ್ಕರ್ ಭಾಷಣಗಳನ್ನ ಓದಬೇಕು: 

ಎಲ್ಲಾ ಶೋಷಿತ ವರ್ಗದ ಜನರು ಡಾ. ಅಂಬೇಡ್ಕರ್ ಭಾಷಣಗಳನ್ನ ಓದಬೇಕು. ಅಧಿಕಾರ ಶ್ರೀಮಂತರ ಕೈಯಲ್ಲಿ ಇದ್ದರೆ ನ್ಯಾಯ ಸಿಗಲ್ಲ. ಶೋಷಿತರಿಗೆ ಆರ್ಥಿಕ, ಸಾಮಾಜಿಕ ಮತ್ತು ಧಾರ್ಮಿಕ ಸ್ವಾತಂತ್ರ್ರಗಳು ಸಿಗಬೇಕು ಎಂದು ಅಂದೇ ಅಂಬೇಡ್ಕರ್ ತಮ್ಮ ಭಾಷಣದಲ್ಲಿ ಹೇಳಿದ್ದರು ಎಂದು ಹೇಳಿದರು.

ಸಂವಿಧಾನದಲ್ಲಿ ಸಾಮಾಜಿಕ, ಶೈಕ್ಷಣಿಕ, ಹಿಂದುಳಿದವರಿಗೆ ಮೀಸಲಾತಿ ಕೊಡಬೇಕು ಅಂತ ಇದೆ. ಈಗ ಆರ್ಥಿಕವಾಗಿ ಹಿಂದುಳಿದವರಿಗೂ ಮೀಸಲಾತಿ ಕೊಟ್ಟಿದ್ಧಾರೆ. ಸಾಮಾನ್ಯ ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ಶೇ. 10ರಷ್ಟು ಮೀಸಲಾತಿ ಕೊಟ್ಟಿದ್ದಾರೆ. ಇದು ಸಂವಿಧಾನ ವಿರೋಧಿ ನಡೆ. ಇದಕ್ಕೆ ಯಾರೂ ವಿರೋಧ ಮಾಡಿಲ್ಲದಿರುವುದು ದುರ್ದೈವ ಎಂದು ಸಿದ್ದರಾಮ್ಯ ಅಸಮಾಧಾನ ವ್ಯಕ್ತಪಡಿಸಿದರು.

ಎಸ್​ಟಿ ಮೀಸಲು ಹೋರಾಟ ವಿಚಾರದ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ, ಒಂದು ನಿರ್ದಿಷ್ಟ ವರ್ಗಕ್ಕೆ ಮೀಸಲಾತಿ ಸಿಗೋದಲ್ಲ. ಎಸ್​ಸಿ ಗುಣಲಕ್ಷಣ ಇರುವ ಎಲ್ಲಾ ವರ್ಗಗಳಿಗೂ ಮೀಸಲಾತಿ ಸಿಗಬೇಕು. ಜನಸಂಖ್ಯೆ ಆಧರಿಸಿ ಮೀಸಲಾತಿ ಕೊಡಲಿ ಎಂದು ಹೇಳಿದ ಸಿದ್ದರಾಮಯ್ಯ, ವಾಲ್ಮೀಕಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳಕ್ಕೆ ತಮ್ಮ ವಿರೋಧ ಇಲ್ಲ ಎಂದು ಸ್ಪಷ್ಟಪಡಿಸಿದರು.

ಲಾಲ್​ಬಾಗ್ ರಸ್ತೆಯ ಗೋಡ್ವಾನ್ ಹೋಟೆಲ್​ನಲ್ಲಿ ನಡೆದ ಹಿಂದುಳೀದ ವರ್ಗಗಳ ಸಾಮಾಜಿಕ ಶೈಕ್ಷಣಿಕ ಸಮೀಕ್ಷೆಯ ಸಮಾಲೋಚನೆ ಸಭೆಯಲ್ಲಿ ಈಶ್ವರಪ್ಪ, ಸಿದ್ದರಾಮಯ್ಯ ಜೊತೆ ಮಾಜಿ ಸಚಿವ ಹೆಚ್.ಎಂ. ರೇವಣ್ಣ ಮೊದಲಾದವರೂ ಪಾಲ್ಗೊಂಡಿದ್ದರು.

ವರದಿ: ಆನಂದ್ ಸಾಲುಂಡಿ
Published by:Vijayasarthy SN
First published: