ಯಡಿಯೂರಪ್ಪ ಶಾಶ್ವತವಾಗಿ ಗೂಟ ಹೊಡ್ಕೊಂಡು ಕೂತಿರಲ್ಲ; ಪೊಲೀಸರಿಗೆ ಸಿದ್ದರಾಮಯ್ಯ ಎಚ್ಚರಿಕೆ

ಬೀದರ್​ನ ಶಾಹೀನ್ ಶಾಲೆಯ ವಿರುದ್ಧ ದೇಶದ್ರೋಹ ಪ್ರಕರಣದಲ್ಲಿ ಸರ್ಕಾರ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಕಾಂಗ್ರೆಸ್​ ನಾಯಕರು ಇಂದು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಗೃಹ ಕಚೇರಿ ಕೃಷ್ಣಕ್ಕೆ ಮುತ್ತಿಗೆ ಹಾಕಲು ವಿಫಲ ಪ್ರಯತ್ನ ನಡೆಸಿದರು. ಪ್ರತಿಭಟನೆ ವೇಳೆ ಸಿದ್ದರಾಮಯ್ಯ ಪೊಲೀಸ್​ ಇಲಾಖೆಗೆ ಎಚ್ಚರಿಕೆ ನೀಡಿದರು.

news18-kannada
Updated:February 15, 2020, 1:15 PM IST
ಯಡಿಯೂರಪ್ಪ ಶಾಶ್ವತವಾಗಿ ಗೂಟ ಹೊಡ್ಕೊಂಡು ಕೂತಿರಲ್ಲ; ಪೊಲೀಸರಿಗೆ ಸಿದ್ದರಾಮಯ್ಯ ಎಚ್ಚರಿಕೆ
ಮಾಜಿ ಸಿಎಂ ಸಿದ್ಧರಾಮಯ್ಯ
  • Share this:
ಬೆಂಗಳೂರು: ಬೀದರ್​ನ ಶಾಹೀನ್ ಶಾಲೆಯ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿರುವ ವಿಚಾರಕ್ಕೆ ಸಂಬಂಧಿಸಿ  ಕಾಂಗ್ರೆಸ್​ ನಾಯಕರು ಇಂದು ಮೌರ್ಯ ಸರ್ಕಲ್​ ಬಳಿ ಪ್ರತಿಭಟನೆ ನಡೆಸಿದರು. ಸರ್ಕಾರ ಪೊಲೀಸ್ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು. 

ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಹರಿಹಾಯ್ದರು. "ಕಳೆದ ಆರು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನ ಹತ್ತಿಕ್ಕುವ ಕೆಲಸ ಮಾಡುತ್ತಿದ್ದಾರೆ. ಸಂವಿಧಾನ, ಪ್ರಜಾಪ್ರಭುತ್ವವನ್ನು ಉಳಿಸುವುದು ಕಾಂಗ್ರೆಸ್ ಜವಾಬ್ದಾರಿ. ನರೇಂದ್ರ ಮೋದಿ, ಅಮಿತ್ ಶಾ ಜೋಡಿ ದೇಶವನ್ನು ನಾಶ ಮಾಡುತ್ತಿದೆ. ಇವರು ಭಾವನಾತ್ಮಕ ವಿಚಾರವನ್ನ ಜನರ ಮುಂದಿಟ್ಟು ಜನರ ದಾರಿ ತಪ್ಪಿಸುತ್ತಿದ್ದಾರೆ. ಕಾನೂನು ದುರುಪಯೋಗ ಪಡಿಸಿಕೊಳ್ತಿದ್ದಾರೆ," ಎಂದು ಅವರು ಆರೋಪಿಸಿದರು.

"ಖಾದರ್ ಮಾತಾಡಿದರೆ ದೇಶದ್ರೋಹದ ಕೇಸ್ ಹಾಕುತ್ತಾರೆ. ಮೈಸೂರಿನಲ್ಲಿ ಯುವತಿ ಫ್ರೀ ಕಾಶ್ಮೀರ ಎಂದರೆ ಕೇಸ್ ಬೀಳುತ್ತದೆ. ಬೀದರನ ಶಾಹೀನ ಶಾಲೆಯಲ್ಲಿ ಸಿಎಎ ಬಗ್ಗೆ ಮಕ್ಕಳು ನಾಟಕ ಮಾಡಿದ್ದರು. ನಾಟಕ ಮಾಡುವಾಗ 'ಹಿರಿಯರ ಮಾಹಿತಿ ಕೇಳಿದರೆ ಅವರು ಎಲ್ಲಿಂದ ತರುತ್ತಾರೆ? ಸಮಾಧಿಯಿಂದ ಬಗೆದು ತರಬೇಕಾ ? ಮಾಹಿತಿ ಕೇಳಲು ಬರೋರಿಗೆ ಚಪ್ಲಿ ತಗೊಂಡು ಹೊಡಿತೀನಿ,' ಎಂದು 11 ವರ್ಷದ ಮಗು ಡೈಲಾಗ್ ಹೇಳುತ್ತದೆ. ಅದು ಮೋದಿ ವಿರುದ್ಧ ಹೇಳಿದ ಮಾತಲ್ಲ. ಮಾಹಿತಿ ಕೇಳಲು ಬರುವವರಿಗೆ ಹೇಳಿದ್ದು ಎಂದರು ಸಿದ್ದರಾಮಯ್ಯ.

ದೆಹಲಿ ಜೆಎನ್​ಯು ಘಟನೆ ನೆನೆದ ಸಿದ್ದರಾಮಯ್ಯ, "ದೆಹಲಿ ಜೆಎನ್​ಯು ವಿವಿಯಲ್ಲಿ ಗೂಂಡಾಗಳು ದಾಳಿ ಮಾಡಿದ್ದರು. ಇಂತಹವರ ಮೇಲೆ ಕೇಸ್ ಹಾಕಿಲ್ಲ. ಇದಕ್ಕಿಂತ ಕ್ರೂರವಾದ ಸರ್ಕಾರ ಮತ್ತೊಂದಿಲ್ಲ. ಯಡಿಯೂರಪ್ಪ, ಬೊಮ್ಮಾಯಿಗೆ ಗೊತ್ತಿಲ್ಲದೆ ಪೊಲೀಸರು ಕೇಸ್ ಹಾಕುವುದಿಲ್ಲ. ಪೊಲೀಸವರಿಗೆ ನಾನು ಹೇಳೋದು ಒಂದೇ, ಯಡಿಯೂರಪ್ಪ ಶಾಶ್ವತವಾಗಿ ಗೂಟ ಹೊಡ್ಕೊಂಡು ಕೂತಿರಲ್ಲ.  ಬಿಜೆಪಿಯ ನಾಯಕರ ಮಾತನ್ನು ಕೇಳಿ ಕಾನೂನು ವಿರುದ್ಧವಾಗಿ ನಡೆದುಕೊಂಡರೆ ಮುಂದಿನ ದಿನದಲ್ಲಿ ತಕ್ಕ ಪಾಠ ಕಲಿಯಬೇಕಾಗುತ್ತೆ," ಎಂದು ಎಚ್ಚರಿಸಿದರು.

ಬಳ್ಳಾರಿ ಕಾರು ಅಪಘಾತದಲ್ಲಿ ಸಚಿವ ಆರ್​. ಅಶೋಕ್​ ಮಗನ ಹೆಸರು ಕೇಳಿ ಬಂದಿತ್ತು. ಈ ಬಗ್ಗೆ ಮಾತನಾಡಿರುವ ಸಿದ್ದರಾಮಯ್ಯ, "ಆರ್ ಅಶೋಕ ಮಗನ ಕೇಸ್ ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಹ್ಯಾರಿಸ್ ಮಗನನ್ನ ಗೂಂಡಾ ಎಂದು ಪ್ರಚಾರ ಮಾಡಲಾಗುತ್ತಿದೆ. ಬಿಜೆಪಿ ತೊಲಗಿಸುವವರೆಗೂ ಹೋರಾಟ ನಿಲ್ಲಲ್ಲ,"ಎಂದು ಶಪಥ ಮಾಡಿದರು.
First published:February 15, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ