HOME » NEWS » State » SIDDARAMAIAH ANGRY ON BS YEDIYURAPPA GOVERNMENT AFTER SHARATH BACHE GOWDA SUPPORTS TO CONGRESS SCT

ಡಕೋಟ ಬಸ್​ನಲ್ಲಿ ಕೂತು ಲೂಟಿ ಹೊಡೆಯುತ್ತಿದ್ದೀರ; ಯಡಿಯೂರಪ್ಪ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ನಾನು ಚುನಾವಣೆಯಲ್ಲಿ ಶರತ್ ಬಚ್ಚೇಗೌಡ ವಿರುದ್ಧ ಪ್ರಚಾರ ಮಾಡಿದ್ದೆ. ಆದರೆ ಅವರ ಕ್ಷೇತ್ರದ ಜನರು ಶರತ್‌ನನ್ನು ಗೆಲ್ಲಿಸಿದ್ದಾರೆ. ರಾಜ್ಯದಲ್ಲಿ ಸತ್ತ ಸರ್ಕಾರ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಮಾನ ಮಾರ್ಯಾದೆ ಇಲ್ಲದ ಲಜ್ಜೆಗೆಟ್ಟವರು ಅರ್ಧದಷ್ಟು ಹಣ ನುಂಗಿ ಹಾಕಿದ್ದಾರೆ ಎಂದು ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

news18-kannada
Updated:February 25, 2021, 1:01 PM IST
ಡಕೋಟ ಬಸ್​ನಲ್ಲಿ ಕೂತು ಲೂಟಿ ಹೊಡೆಯುತ್ತಿದ್ದೀರ; ಯಡಿಯೂರಪ್ಪ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ
ಮಾಜಿ ಸಿಎಂ ಸಿದ್ದರಾಮಯ್ಯ.
  • Share this:
ಬೆಂಗಳೂರು (ಫೆ. 25): ಹೊಸಕೋಟೆ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಇಂದು ಕಾಂಗ್ರೆಸ್​ನ ಸಹ ಸದಸ್ಯತ್ವ ಪಡೆದಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಗೆದ್ದು ಬೇರೊಂದು ರಾಜಕೀಯ ಪಕ್ಷಕ್ಕೆ ಸೇರಲು ಸಂವಿಧಾನದಲ್ಲಿ ಅವಕಾಶವಿಲ್ಲದ ಕಾರಣ ಅವರು ಕಾಂಗ್ರೆಸ್​ಗೆ ಸಹ ಸದಸ್ಯರಾಗಿ ಸೇರ್ಪಡೆಗೊಂಡಿದ್ದಾರೆ. ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ನಾನು ಕಳೆದ ಬಾರಿ ಚುನಾವಣೆಯಲ್ಲಿ ಶರತ್​ ವಿರುದ್ಧ ಪ್ರಚಾರ ಮಾಡಿದ್ದೆ. ಈಗ ಅವರು ನಮಗೆ ಬೆಂಬಲ ನೀಡುತ್ತಿದ್ದಾರೆ. ನಾವು ಅವರ ಬೆಂಬಲವನ್ನು ಒಪ್ಪಿದ್ದೇವೆ. ಹೊಸಕೋಟೆಯಲ್ಲಿ ಶರತ್ ಬಚ್ಚೇಗೌಡ ಏಕಾಂಗಿಯಾಗಿ ಹೋರಾಡಲು ಸಾಧ್ಯವಿಲ್ಲ. ಅದಕ್ಕೆ ಕಾಂಗ್ರೆಸ್​​ ಬೆಂಬಲದಿಂದ ಶಕ್ತಿ ಬರಲಿದೆ. ಯಡಿಯೂರಪ್ಪ ನೀನು ನಿಂತಿರುವ ಬಸ್‌ನಲ್ಲಿ ಕೂತಿದ್ದೀಯಪ್ಪ... ಡಕೋಟ ಬಸ್‌ನಲ್ಲಿ ಕೂತು ಲೂಟಿ ಹೊಡೆಯುತ್ತಿದ್ದೀರ ಎಂದು ರಾಜ್ಯ ಸರ್ಕಾರವನ್ನು ಟೀಕಿಸಿದ್ದಾರೆ.

ಎಂಟಿಬಿ ನಾಗರಾಜ್ ಸೋತು ಹಿಂಬಾಗಿಲಿಂದ ಅಧಿಕಾರಕ್ಕೆ ಬಂದವನು. ಈಗೇನೂ ಮಿನಿಸ್ಟರ್ ಆಗಿಬಿಟ್ಟಿದ್ದಾನೆ. ಸಚಿವನಾದ ಮಾತ್ರಕ್ಕೆ ಆತ ಹೊಸಕೋಟೆ ಜನರ ಪ್ರತಿನಿಧಿ ಅಲ್ಲ. ಶರತ್ ಬಚ್ಚೇಗೌಡ ಆ ಕ್ಷೇತ್ರದ ಪ್ರತಿನಿಧಿ. ಹೊಸಕೋಟೆಯಲ್ಲಿ ಶಿಷ್ಟಾಚಾರ ಉಲ್ಲಂಘನೆ ಪ್ರಕರಣ ನಡೆದಿತ್ತು. ಇದು ಒಂದು ಪ್ರಕರಣ ಮಾತ್ರವಲ್ಲ ಬಿಜೆಪಿ ವಿರುದ್ಧ ಹೋರಾಟಕ್ಕೆ ಶರತ್​ಗೆ ನಮ್ಮ ಬೆಂಬಲ‌ ಬೇಕು. ಅದಕ್ಕೆ ನಾವು ಸಂಪೂರ್ಣ ಬೆಂಬಲ‌ ನೀಡುತ್ತೇವೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

ಶರತ್ ಬಚ್ಚೇಗೌಡ ಪಕ್ಷೇತರರಾಗಿ ಸ್ಪರ್ಧೆ ಮಾಡಿ ಆಯ್ಕೆಯಾಗಿದ್ದಾರೆ. ಹೀಗಾಗಿ, ಅವರು ಯಾವುದೇ ಪಕ್ಷ ಸೇರ್ಪಡೆಯಾಗಲು ಸಾಧ್ಯವಿಲ್ಲ. ಅದಕ್ಕೆ ಪಕ್ಷಾಂತರ ನಿಷೇಧ ಕಾಯ್ದೆ ಅಡ್ಡಿ ಬರುತ್ತದೆ. ಹೀಗಾಗಿ ಈ ಅವಧಿಗೆ ಅವರು ಸ್ವತಂತ್ರ ಶಾಸಕರಾಗಿ ಉಳಿಯುತ್ತಾರೆ. ಆದರೆ ಯಾವ ಪಕ್ಷಕ್ಕಾದರೂ ಬಾಹ್ಯ ಬೆಂಬಲ‌ ಕೊಡಬಹುದು. ವಿಧಾನಸಭೆಯಲ್ಲಿ ಬಾಹ್ಯ ಬೆಂಬಲ ನೀಡಬಹುದು. ಹೀಗಾಗಿ, ಅವರು ನಮಗೆ ಬಾಹ್ಯ ಬೆಂಬಲ ಘೋಷಿಸಿ ಪತ್ರವನ್ನು ನೀಡಿದ್ದಾರೆ. ಅವರು ಕಾಂಗ್ರೆಸ್ ಶಾಸಕಾಂಗ ಸಭೆಗೆ ಬೆಂಬಲ ನೀಡುತ್ತಾರೆ. ನಾನು ಅವರ ಬೆಂಬಲ ಸ್ವೀಕರಿಸಿದ್ದೇನೆ ಎಂದಿದ್ದಾರೆ.

ಶರತ್ ಒಬ್ಬರೇ ಹೋರಾಟ ಮಾಡಲು ಕಷ್ಟ. ಅವರು ಕಾಂಗ್ರೆಸ್ ಪಕ್ಷದ ಜೊತೆ ಹೋರಾಟ ಮಾಡಿದರೆ ಶಕ್ತಿ ಬರುತ್ತದೆ. ನಾನು ಚುನಾವಣೆಯಲ್ಲಿ ಶರತ್ ವಿರುದ್ಧ ಪ್ರಚಾರ ಮಾಡಿದ್ದೆ. ಶರತ್‌ಗೆ ಓಟು ನೀಡಬೇಡಿ, ನಮ್ಮ ಅಭ್ಯರ್ಥಿಗೆ ನೀಡಿ ಎಂದಿದ್ದೆ. ಆದರೆ ಅವರ ಕ್ಷೇತ್ರದ ಜನರು ಶರತ್‌ನನ್ನು ಗೆಲ್ಲಿಸಿದ್ದಾರೆ. ರಾಜ್ಯದಲ್ಲಿ ಸತ್ತ ಸರ್ಕಾರ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ದುಡ್ಡು ಕೇಳಿದರೆ ಕೊರೋನಾ ಕಾರಣ ಹೇಳುತ್ತಿದೆ. ಕೊರೋನಾಗಾಗಿ 35ಸಾವಿರ ಕೋಟಿ ಸಾಲ ಮಾಡಿದ್ದಾರೆ. ಅದರಲ್ಲಿ ಕೇವಲ 6 ಸಾವಿರ ಕೋಟಿ ಖರ್ಚು ಮಾಡಿದ್ದಾರೆ. ಮಾನ ಮಾರ್ಯಾದೆ ಇಲ್ಲದ ಲಜ್ಜೆಗೆಟ್ಟವರು ಅರ್ಧದಷ್ಟು ಹಣ ನುಂಗಿ ಹಾಕಿದ್ದಾರೆ ಎಂದು ಸಿದ್ದರಾಮಯ್ಯ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.

ಇದನ್ನೂ ಓದಿ: Bangalore Crime: ಬೆಂಗಳೂರಿನ ವೃಷಭಾವತಿ ಕಾಲುವೆ ಬಳಿ ಕಾಮಗಾರಿ ವೇಳೆ ಮಣ್ಣು ಕುಸಿದು ಕಾರ್ಮಿಕ ಸಾವು

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಹೊಸಕೋಟೆ ಕ್ಷೇತ್ರಕ್ಕೆ ನಾನು ಗಾಳ‌ ಹಾಕುತ್ತಲೇ ಇದ್ದೆ. ನಮ್ಮ ಗಾಳಕ್ಕೆ ನೀವೆಲ್ಲ ಈಗ ಬಿದ್ದಿರಿ ಎಂದು ತಮಾಷೆ ಮಾಡಿದ್ದಾರೆ. ಪಕ್ಷೇತರ ಶಾಸಕರು ಸ್ವತಂತ್ರ ಶಾಸಕರಾಗಿಯೇ ಇರಬೇಕಾಗುತ್ತದೆ. ಹೀಗಾಗಿ ಅವರು ಶಾಸಕಾಂಗ ಪಕ್ಷಕ್ಕೆ ಬೆಂಬಲ ಕೋರಿದ್ದಾರೆ. ಶರತ್ ಬಚ್ಚೇಗೌಡರು ವಿರೋಧ ಪಕ್ಷದ ನಾಯಕರಿಗೆ ಬೆಂಬಲ‌ ಕೋರಿದ್ದಾರೆ. ಅವರ ಬೆಂಬಲವನ್ನು ಸ್ವೀಕರಿಸಿ, ನಾವೂ ಅವರನ್ನು ಬೆಂಬಲಿಸಿದ್ದೇವೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್​ಗೆ ಸಹಸದಸ್ಯರಾಗಿ ಸೇರ್ಪಡೆಯಾದ ಬಳಿಕ ಮಾತನಾಡಿದ ಶರತ್ ಬಚ್ಚೇಗೌಡ, ಯಾರ ಗರ್ಭದಿಂದಲೂ ನಾಯಕರು ಹುಟ್ಟಲು ಸಾಧ್ಯವಿಲ್ಲ. ಜನರ ಆಶೀರ್ವಾದದಿಂದ ಮಾತ್ರ ನಾಯಕನಾಗಲು ಸಾಧ್ಯ. ನಮ್ಮ ಕ್ಷೇತ್ರದ ಜನತೆಯ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇನೆ. 2019ರ ಉಪ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದೆ. ರಾಜ್ಯ ಮತ್ತು ದೇಶದ ಘಟನೆಗಳು ಹೊಸಕೋಟೆ ಮೇಲೆ‌ ಪರಿಣಾಮ ಬೀರುತ್ತಿವೆ. ಹೊಸಕೋಟೆಯಲ್ಲಿ ಅನೇಕ ರೀತಿಯ ಶಿಷ್ಟಾಚಾರ ಉಲ್ಲಂಘನೆ ಆಗುತ್ತಿದೆ ಎಲ್ಲ ರೀತಿಯ ಪರಿಹಾರಗಳಿಗೆ ನಾನು ಈ ನಿರ್ಧಾರ ಮಾಡಿದ್ದೇನೆ. ಕ್ಷೇತ್ರದ ಅಭಿವೃದ್ಧಿಗಾಗಿ‌ ಕಾಂಗ್ರೆಸ್ ಶಾಸಕಾಂಗ ಪಕ್ಷದ ಬೆಂಬಲ‌ ಕೋರುತ್ತಿದ್ದೇನೆ. ವಿರೋಧ ಪಕ್ಷದ ನಾಯಕರಿಗೂ ನಾನು ಬೆಂಬಲ ನೀಡುತ್ತೇನೆ ಎಂದಿದ್ದಾರೆ.
Published by: Sushma Chakre
First published: February 25, 2021, 1:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories