ದೆಹಲಿಯಲ್ಲಿ ಭೇಟಿಯಾದ ಸಿದ್ದರಾಮಯ್ಯ-ಮಲ್ಲಿಕಾರ್ಜುನ ಖರ್ಗೆ; ರಾಜ್ಯ ರಾಜಕೀಯದಲ್ಲಿ ಗರಿಗೆದರಿದ ಕುತೂಹಲ!

ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ಬಗ್ಗೆ ಮತ್ತು ಅವರೊಂದಿಗೆ ಚರ್ಚಿಸಿದ ವಿಷಯಗಳನ್ನು ಮಾಧ್ಯಮಗಳ ಜೊತೆ ಹಂಚಿಕೊಳ್ಳಲು ಸಿದ್ದರಾಮಯ್ಯ ನಿರಾಕರಿಸಿದರು. ಅಷ್ಟೇ ಅಲ್ಲದೆ ಸಿದ್ದರಾಮಯ್ಯ ಅವರ ದೇಶಭಕ್ತಿ ಬಗ್ಗೆ ಅನುಮಾನ ಇದೆ ಎಂಬ ಪೇಜಾವರ ಶ್ರೀಗಳ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲು ಕೂಡ ಸಿದ್ದರಾಮಯ್ಯ ನಿರಾಕರಿಸಿದರು.

ಸಿದ್ದರಾಮಯ್ಯ-ಮಲ್ಲಿಕಾರ್ಜುನ ಖರ್ಗೆ.

ಸಿದ್ದರಾಮಯ್ಯ-ಮಲ್ಲಿಕಾರ್ಜುನ ಖರ್ಗೆ.

  • Share this:
ನವ ದೆಹಲಿ (ಫೆಬ್ರವರಿ 17); ರಾಜ್ಯಸಭೆಯ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ದೆಹಲಿಯ ಕರ್ನಾಟಕ ಭವನದಲ್ಲಿ ಭೇಟಿಯಾಗಿ ಸುಮಾರು ಒಂದು ಗಂಟೆಗಳ ಕಾಲ ರಾಜ್ಯ ರಾಜಕೀಯದ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ. ಹೀಗಾಗಿ ರಾಜ್ಯದ ಪ್ರಮುಖ ಇಬ್ಬರು ನಾಯಕರಾದ ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಈ ಭೇಟಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಸದ್ಯ ಮೀಸಲಾತಿ ಹೋರಾಟಗಳು ತೀವ್ರವಾಗುತ್ತಿವೆ. ರಾಜ್ಯ ಸರ್ಕಾರ ಅಸ್ಥಿರಗೊಂಡಿದೆ. ಉಪ ಚುನಾವಣೆಗಳು ಬರುತ್ತಿವೆ. ಇವೆಲ್ಲವುಗಳ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರ ಭೇಟಿ ಕುತೂಹಲ ಮೂಡಿಸಿದೆ. ಇಬ್ಬರೂ ನಾಯಕರು ಸೇರಿಕೊಂಡು ತಂತ್ರ ರೂಪಿಸಲು ಮುಂದಾಗಿರಬಹುದು ಎಂದು ಹೇಳಲಾಗುತ್ತಿದೆ.

ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, "ಇದೊಂದು ಸೌಹಾರ್ದಯುತ ಭೇಟಿ. ಎಐಸಿಸಿಯ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬೆಂಗಳೂರಿಗೆ ಬರುತ್ತಿರುವ ಬಗ್ಗೆ ಚರ್ಚೆ ಮಾಡಿದ್ದೇವೆ. ಇದರ ಜೊತೆಗೆ ಇನ್ನೂ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ. ಆದರೆ ಚರ್ಚಿಸಿದ ಎಲ್ಲಾ ವಿಷಯಗಳನ್ನು ಬಹಿರಂಗವಾಗಿ ಮಾಧ್ಯಮಗಳೊಂದಿಗೆ ಹಂಚಿಕೊಳ್ಳಲು ಸಾಧ್ಯವಿಲ್ಲ.‌ ಸಮಯ ಬಂದಾಗ ಏನು ಹೇಳಬೇಕೊ ಅದನ್ನು ತಿಳಿಸುತ್ತೇವೆ" ಎಂದು ಸ್ಪಷ್ಟಪಡಿಸಿದ್ದಾರೆ.

ಮುಂದಿನ ತಿಂಗಳು ತಮ್ಮ ತವರು ಜಿಲ್ಲೆ ಕಲಬುರಗಿಯಲ್ಲಿ ಕುರುಬ ಸಮುದಾಯದ ಸಮಾವೇಶ ಇರುವ ಬಗ್ಗೆ ಚರ್ಚೆ ನಡೆಸಿದ್ದೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮಲ್ಲಿಕಾರ್ಜುನ ಖರ್ಗೆ, "ಕಲಬುರಗಿಯಲ್ಲಿ ಕುರುಬ ಸಮುದಾಯದ ಸಮಾವೇಶ ನಡೆಸುವ ಬಗ್ಗೆ ನನಗೆ ಗೊತ್ತಿಲ್ಲ. ಇದರ ಬಗ್ಗೆ ನೀವು ಸಿದ್ದರಾಮಯ್ಯ ಅವರನ್ನೇ ಕೇಳಿ" ಎಂದು ಹಾರಿಕೆಯ ಉತ್ತರ ನೀಡಿದ್ದಾರೆ.

ಇದೇ ವೇಳೆ ರಾಜ್ಯಸಭೆ ವಿಪಕ್ಷ ನಾಯಕರಾಗಿ ತಾವು ಅಧಿಕೃತವಾಗಿ ಆಯ್ಕೆ ಆದ ಬಗ್ಗೆ ಪ್ರತಿಕ್ರಿಯೆ ನೀಡಿದ ಮಲ್ಲಿಕಾರ್ಜುನ ಖರ್ಗೆ, "ಕಾಂಗ್ರೆಸ್ ಪಕ್ಷ ಪ್ರತಿಪಕ್ಷದ ನಾಯಕನ‌ ಸ್ಥಾನಕ್ಕೆ ನನ್ನ ಹೆಸರನ್ನು ಶಿಫಾರಸು ಮಾಡಿತ್ತು. ಪಕ್ಷ ಹೆಸರನ್ನು ಶಿಫಾರಸು ಮಾಡಿದ ಮೇಲೆ ರಾಜ್ಯಸಭೆಯ ಸಭಾಪತಿ ಆ ಹೆಸರನ್ನು ಅಧಿಕೃತವಾಗಿ ಘೋಷಣೆ ಮಾಡಲೇಬೇಕು. ಇದರಲ್ಲಿ ಹೊಸತು ಇಲ್ಲ, ತಪ್ಪು ಕಂಡು ಹಿಡಿಯುವಂತದ್ದೇನೂ ಇಲ್ಲ. ಹಾಗಾಗಿ ಅಧಿಕೃತವಾಗಿ ವಿಪಕ್ಷ ನಾಯಕನ ಸ್ಥಾನ ಕೊಟ್ಟಿದ್ದಾರೆ. ಇದರಿಂದ ಜವಬ್ದಾರಿ ಮತ್ತಷ್ಟು ಹೆಚ್ಚಾಗಿದೆ, ಜವಾಬ್ದಾರಿಯಿಂದ ಕೆಲಸ‌ ಮಾಡಬೇಕಾಗಿದೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ: ರಾಜ್ಯ ಬಿಜೆಪಿ ನಾಯಕರಲ್ಲಿ ಒಡಕಿಲ್ಲ, ಒಗ್ಗಟ್ಟಾಗಿದ್ದೇವೆ; ಉಸ್ತುವಾರಿ ಅರುಣ್​ ಸಿಂಗ್​​ ಸಮರ್ಥನೆ

ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ಬಗ್ಗೆ ಮತ್ತು ಅವರೊಂದಿಗೆ ಚರ್ಚಿಸಿದ ವಿಷಯಗಳನ್ನು ಮಾಧ್ಯಮಗಳ ಜೊತೆ ಹಂಚಿಕೊಳ್ಳಲು ಸಿದ್ದರಾಮಯ್ಯ ನಿರಾಕರಿಸಿದರು. ಅಷ್ಟೇ ಅಲ್ಲದೆ 'ಸಿದ್ದರಾಮಯ್ಯ ಅವರ ದೇಶಭಕ್ತಿ ಬಗ್ಗೆ ಅನುಮಾನ ಇದೆ' ಎಂಬ ಪೇಜಾವರ ಶ್ರೀಗಳ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲು ಕೂಡ ಸಿದ್ದರಾಮಯ್ಯ ನಿರಾಕರಿಸಿದರು. "ನಾನು ಯಾವ ಸ್ವಾಮಿಗಳ ಬಗ್ಗೆಯೂ ಮಾತನಾಡಲ್ಲ. ಅವರು ಅವರ ಅಭಿಪ್ರಾಯ ಹೇಳಿದ್ದಾರೆ. ನಾನು ನನ್ನ ಅಭಿಪ್ರಾಯ ಹೇಳಿದ್ದಿನಿ" ಎಂದಿದ್ದಾರೆ.

ಮಂಗಳವಾರ ದಿಢೀರನೆ ದೆಹಲಿಗೆ ಆಗಮಿಸಿ ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಹೈಕಮಾಂಡ್ ನಾಯಕರಾದ ಕೆ.ಸಿ. ವೇಣುಗೋಪಾಲ್ ಮತ್ತು ಎ.ಕೆ.‌ ಆ್ಯಂಟನಿ ಅವರನ್ನು ಭೇಟಿಯಾಗಿದ್ದ ಸಿದ್ದರಾಮಯ್ಯ ಬುಧವಾರ ದೆಹಲಿಯಿಂದ ಬೆಂಗಳೂರಿಗೆ ತೆರಳುವಾಗ ದೆಹಲಿಯ ವಿಮಾನ ನಿಲ್ದಾಣದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ  ಅವರನ್ನೂ ಭೇಟಿ ಮಾಡಿ ಚರ್ಚೆ ನಡೆಸಿದರು.
Published by:MAshok Kumar
First published: