IBPS Exam: ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಕನ್ನಡಕ್ಕಿಲ್ಲ ಮನ್ನಣೆ; ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ, ಹೆಚ್​ಡಿಕೆ ಆಕ್ರೋಶ

IBPS Mosa: ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳ ನೇಮಕಾತಿಗೆ ಸಂಬಂಧಿಸಿದ ಪರೀಕ್ಷೆಗಳನ್ನು 13 ಭಾರತೀಯ ಭಾಷೆಗಳಲ್ಲಿ ಬರೆಯಲು ಅವಕಾಶ ನೀಡಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದರು. ಆದರೆ, ಆ ಮಾತನ್ನು ಉಳಿಸಿಕೊಳ್ಳದ ಸರ್ಕಾರ ಮತ್ತೆ ಹಿಂದಿ, ಇಂಗ್ಲಿಷ್ ಭಾಷೆಗೆ ಮಣೆ ಹಾಕಿದೆ.

Sushma Chakre | news18-kannada
Updated:September 13, 2019, 10:55 PM IST
IBPS Exam: ಬ್ಯಾಂಕಿಂಗ್ ಪರೀಕ್ಷೆಯಲ್ಲಿ ಕನ್ನಡಕ್ಕಿಲ್ಲ ಮನ್ನಣೆ; ಕೇಂದ್ರ ಸರ್ಕಾರದ ವಿರುದ್ಧ ಸಿದ್ದರಾಮಯ್ಯ, ಹೆಚ್​ಡಿಕೆ ಆಕ್ರೋಶ
ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಎಚ್​​.ಡಿ ಕುಮಾರಸ್ವಾಮಿ
Sushma Chakre | news18-kannada
Updated: September 13, 2019, 10:55 PM IST
ಬೆಂಗಳೂರು (ಸೆ. 13): ರಾಷ್ಟ್ರೀಕೃತ ಬ್ಯಾಂಕ್​ಗಳ ವಿವಿಧ ಹುದ್ದೆಗಳ ನೇಮಕಾತಿಗೆ ನಡೆಸಲಾಗುವ  ಐಬಿಪಿಎಸ್ ಪರೀಕ್ಷೆಯನ್ನು ಕನ್ನಡ ಭಾಷೆಯಲ್ಲೂ ಬರೆಯಲು ಅವಕಾಶ ಮಾಡಿಕೊಡಬೇಕೆಂಬ ಕನ್ನಡಿಗರ ಮನವಿಗೆ ಕೊನೆಗೂ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ. ಈ ಬಗ್ಗೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಮತ್ತು ಹೆಚ್​.ಡಿ. ಕುಮಾರಸ್ವಾಮಿ ಕೂಡ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಟ್ವಿಟ್ಟರ್​ನಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ನಿನ್ನೆಯಷ್ಟೇ ರಾಷ್ಟ್ರೀಕೃತ ಬ್ಯಾಂಕ್‌ಗಳ ಕ್ಲರ್ಕ್‌ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿರುವ ಐಬಿಪಿಎಸ್​​ ಸಂಸ್ಥೆ, ಅಭ್ಯರ್ಥಿಗಳಿಗೆ ಹಿಂದಿ ಮತ್ತು ಇಂಗ್ಲೀಷ್​ನಲ್ಲಿ ಮಾತ್ರ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಟ್ಟಿದೆ. ಅಭ್ಯರ್ಥಿಗಳಿಗೆ ಸ್ಥಳೀಯ ಭಾಷೆ ತಿಳಿದಿರಬೇಕು ಎಂದು ಅಧಿಸೂಚನೆಯಲ್ಲಿ ಹೇಳಿದ್ದರೂ, ಅದನ್ನೀಗ ಖಚಿತಪಡಿಸುವುದಕ್ಕೆ ಯಾವುದೇ ಮಾನದಂಡಗಳನ್ನು ಸೂಚಿಸಿಲ್ಲ ಎಂಬುದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಟ್ವಿಟ್ಟರ್​ನಲ್ಲಿ 'ಐಬಿಪಿಎಸ್​ ಮೋಸ' ಎಂಬ ಹ್ಯಾಶ್​ಟ್ಯಾಗ್​ನೊಂದಿಗೆ ಕನ್ನಡಿಗರು ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್​ಗಳನ್ನು ಮಾಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಕನ್ನಡ ನಾಡು-ನುಡಿ ಬಗೆಗಿನ ಮಲತಾಯಿ ಧೋರಣೆಯಿಂದ ಕೇಂದ್ರ ಸರ್ಕಾರ ಕನ್ನಡಿಗರ ಆತ್ಮಾಭಿಮಾನವನ್ನು ಕೆಣಕುತ್ತಿದೆ. ಹಿಂದಿ ಹೇರಿಕೆ, ನಾಡ ಧ್ವಜಕ್ಕೆ ಅಡ್ಡಗಾಲು, ನೆರೆಪರಿಹಾರದಲ್ಲಿ‌ ನಿರ್ಲಕ್ಷ್ಯ...ಹೀಗೆ  ಕರ್ನಾಟಕದ ಕೂಗಿಗೆ ಬೆಲೆಯೇ ಇಲ್ಲದಂತಾಗಿದೆ.

ಕನ್ನಡಿಗರ ಔದಾರ್ಯ ಮತ್ತು ಹೃದಯವಂತಿಕೆಯನ್ನು ದೌರ್ಬಲ್ಯ ಎಂದು ತಿಳಿಯಬೇಡಿ ಎಂದು ಟ್ವೀಟ್ ಮಾಡಿದ್ದಾರೆ.



ಬ್ಯಾಂಕಿಂಗ್ ಪರೀಕ್ಷೆ; ಕನ್ನಡಕ್ಕೆ ಕಿಮ್ಮತ್ತು ನೀಡದ ಕೇಂದ್ರ ಸರ್ಕಾರ; ಹಿಂದಿ-ಇಂಗ್ಲೀಷ್​​ಗೆ ಮಾತ್ರ ಅವಕಾಶ

ಕರ್ನಾಟಕ ರಾಜ್ಯದಿಂದ 25 ಸಂಸದರು ಆಯ್ಕೆಯಾಗಿದ್ದಾರೆ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯದೇ ಸರ್ಕಾರವಿದೆ. ಹೀಗಿದ್ದರೂ ಐಬಿಪಿಎಸ್ ಪರೀಕ್ಷೆಯಲ್ಲಿ ರಾಜ್ಯದ ಪರೀಕ್ಷಾರ್ಥಿಗಳಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿ ಕೊಡಲಾಗದಿರುವುದು ಕನ್ನಡಿಗರಿಗೆ ಬಗೆದ ದ್ರೋಹ. ಕನ್ನಡಿಗರು ಇದನ್ನು ಸಹಿಸರು ಎಂದು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.



ಕೇಂದ್ರದ ಮಲತಾಯಿ ಧೋರಣೆಗೆ ವಿರೋಧ:

ಮಾಜಿ ಸಿಎಂ ಹೆಚ್​.ಡಿ. ಕುಮಾರಸ್ವಾಮಿ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದು, ಕನ್ನಡಿಗರು ಅನೇಕ ಬಾರಿ ಬೇಡಿಕೆಯನ್ನಿಟ್ಟರೂ ಕೇಂದ್ರ ಸರ್ಕಾರ ಐಬಿಪಿಎಸ್​ ಪರೀಕ್ಷೆಯನ್ನು ಕನ್ನಡದಲ್ಲಿ ಬರೆಯಲು ಅವಕಾಶ ನೀಡಿಲ್ಲ. ಇದರ ಜೊತೆಗೆ ಮೊದಲು ಇದ್ದ ಪ್ರಾದೇಶಿಕ ಆದ್ಯತೆಯ ನಿಯಮವನ್ನು ವಾಪಾಸ್​ ತಂದಿಲ್ಲ. ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೇಂದ್ರ ಸರ್ಕಾರದ ಮಲತಾಯಿ ಧೋರಣೆಗೆ ಇದು ಸಾಕ್ಷಿ. ಇದನ್ನು ನಾನು ಖಡಾಖಂಡಿತವಾಗಿ ವಿರೋಧಿಸುತ್ತೇನೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

 ಐಬಿಪಿಎಸ್ ಪರೀಕ್ಷೆಗಳನ್ನು ಕನ್ನಡದಲ್ಲಿಯೂ ಬರೆಯಲು ಅವಕಾಶ ಕಲ್ಪಿಸಬೇಕು ಎಂದು ವಿವಿಧ ಕನ್ನಡ ಸಂಘಟನೆಗಳು ಈ ಹಿಂದಿನಿಂದಲೂ ಒತ್ತಾಯಿಸಿದ್ದವು.  ಕೆಲವು ದಿನಗಳ ಹಿಂದೆ ರಾಜ್ಯದ ಸಂಸದರ ನಿಯೋಗ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಈ ಬಗ್ಗೆ ಮಾತುಕತೆ ನಡೆಸಿದ್ದರು. ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳ ನೇಮಕಾತಿಗೆ ಸಂಬಂಧಿಸಿದ ಪರೀಕ್ಷೆಗಳನ್ನು 13 ಭಾರತೀಯ ಭಾಷೆಗಳಲ್ಲಿ ಬರೆಯಲು ಅವಕಾಶ ನೀಡಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದರು. ಆದರೆ, ಆ ಮಾತನ್ನು ಉಳಿಸಿಕೊಳ್ಳದ ಸರ್ಕಾರ ಮತ್ತೆ ಹಿಂದಿ, ಇಂಗ್ಲಿಷ್ ಭಾಷೆಗೆ ಮಣೆ ಹಾಕಿದೆ.

ಕರ್ನಾಟಕದ ಬ್ಯಾಂಕ್​ಗಳಲ್ಲಿ ಬೇರೆ ರಾಜ್ಯಗಳ ಸಿಬ್ಬಂದಿಯೇ ಹೆಚ್ಚಾಗಿದ್ದಾರೆ. ಪರೀಕ್ಷೆಯನ್ನು ಕನ್ನಡದಲ್ಲೂ ಬರೆಯಲು ಅವಕಾಶ ಕಲ್ಪಿಸಿದರೆ ಕನ್ನಡಿಗರಿಗೂ ಉದ್ಯೋಗ ದೊರೆತಂತಾಗುತ್ತದೆ ಎಂದು ಕನ್ನಡಪರ ಸಂಘಟನೆಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದವು. ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಹಾಗೂ ಸಂಸದ ತೇಜಸ್ವಿ ಸೂರ್ಯ ಕೂಡ ಈ ಬಗ್ಗೆ ಸಂಸತ್​ನಲ್ಲಿ ಧ್ವನಿಯೆತ್ತಿದ್ದರು.

First published:September 13, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...