ನವದೆಹಲಿ (ಜುಲೈ 20): 'ಸಿದ್ದರಾಮಯ್ಯ ಅವರೇ ಮುಂದಿನ ಮುಖ್ಯಮಂತ್ರಿ' ಎಂಬ ವಿಚಾರ ಚರ್ಚೆಯ ಮುನ್ನೆಲೆಗೆ ಬಂದ ನಂತರ ಮಾಜಿ ಮುಖ್ಯಮಂತ್ರಿ ಹಾಗೂ ಹಾಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಡುವೆ ಸೃಷ್ಟಿ ಆಗಿರುವ ಕಂದಕವನ್ನು ಮುಚ್ಚಲು ಕಾಂಗ್ರೆಸ್ ಹೈಕಮಾಂಡ್ ಇಬ್ಬರನ್ನೂ ದೆಹಲಿಗೆ ಕರೆಸಿಕೊಂಡಿದ್ದು ಮಂಗಳವಾರ ಇಬ್ಬರ ನಡುವೆ ಹೈಕಮಾಂಡ್ ನಾಯಕರ ಸಮ್ಮುಖದಲ್ಲಿ ರಾಜಿ ಸಂಧಾನ ನಡೆಯುವ ಸಾಧ್ಯತೆ ಇದೆ. ಪಂಜಾಬ್ ಕಾಂಗ್ರೆಸ್ ತಲೆನೋವಿನ ಬಳಿಕ ಈಗ ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕ ಕಾಂಗ್ರೆಸ್ ಕಡೆ ಗಮನ ಹರಿಸಿದೆ. ಹೈಕಮಾಂಡ್ ಸೂಚನೆ ಮೇರೆಗೆ ಸೋಮವಾರವೇ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ದೆಹಲಿಗೆ ಬಂದಿದ್ದಾರೆ. ಮಂಗಳವಾರ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಜೊತೆ ಮಹತ್ವದ ಚರ್ಚೆ ನಡೆಯಲಿದೆ. ರಾಹುಲ್ ಗಾಂಧಿ ಜೊತೆಗಿನ ಸಭೆಯಲ್ಲಿ ಎಐಸಿಸಿ ಸಂಘಟನಾ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಕೂಡ ಭಾಗಿ ಆಗಲಿದ್ದಾರೆ.
ಇಬ್ಬರನ್ನೂ ಕೂರಿಸಿಕೊಂಡು ಮುಂದಿನ ಸಿಎಂ ಗೊಂದಲ ಪರಿಹರಿಸಲಿರುವ ಹೈಕಮಾಂಡ್ ನಾಯಕರು ಒಟ್ಟಾಗಿ ಕೆಲಸ ಮಾಡುವಂತೆ ಇಬ್ಬರಿಗೂ ಸೂಚಿಸಲಿದ್ದಾರೆ. ಮುಂದಿನ ಸಿಎಂ ಬಗ್ಗೆ ಚರ್ಚೆ ಮಾಡದಂತೆ ಬೆಂಬಲಿಗರನ್ನು ಹಿಡಿತದಲ್ಲಿಟ್ಟುಕೊಳ್ಳುವಂತೆ ಸೂಚನೆ ನೀಡಲಿದ್ದಾರೆ. ಇದಾದ ಬಳಿಕ ಕೆಪಿಸಿಸಿ ಪದಾಧಿಕಾರಿಗಳ ಆಯ್ಕೆ ಬಗ್ಗೆ ಸಮಾಲೋಚನೆ ನಡೆಯಲಿದೆ. ಬಹುತೇಕ ಇಂದೇ ಕೆಪಿಸಿಸಿ ಪದಾಧಿಕಾರಿಗಳ ಆಯ್ಕೆ ಬಗ್ಗೆ ಅನುಮತಿ ನೀಡುವ ಸಂಭವಗಳು ಕಂಡುಬರುತ್ತಿವೆ. ಇಬ್ಬರೂ ಸೇರಿ ಪದಾಧಿಕಾರಿಗಳನ್ನು ನೇಮಿಸುವಂತೆ ಸೂಚಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: Sumalatha Ambareesh: ಕನ್ನಂಬಾಡಿ ಕಟ್ಟೆ ತನ್ನನ್ನು ಕಾಪಾಡುವಂತೆ ಕೂಗಿ ಹೇಳುತ್ತಿದೆ: ಸುಮಲತಾ
ಮುಂದಿನ ಮುಖ್ಯಮಂತ್ರಿ ಗೊಂದಲದ ವಿಚಾರಕ್ಕೆ ಸಂಬಂಧಿಸಿದಂತೆ ಡಿ.ಕೆ. ಶಿವಕುಮಾರ್ ಈಗಾಗಲೇ ಒಮ್ಮೆ ದೆಹಲಿಗೆ ಧಾವಿಸಿ ಹೈಕಮಾಂಡ್ ನಾಯಕರಾದ ರಾಹುಲ್ ಗಾಂಧಿ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದ್ದರು. ಡಿ.ಕೆ. ಶಿವಕುಮಾರ್ ದೂರಿನ ಆಧಾರದ ಮೇಲೆ ರಣದೀಪ್ ಸುರ್ಜೆವಾಲಾ 'ಯಾರೂ ಮಾತನಾಡಬಾರದು' ಎಂದು ಸೂಚನೆ ನೀಡಿದ್ದರು. ಆದರೆ ರಣದೀಪ್ ಸುರ್ಜೆವಾಲಾ ಸೂಚನೆಯನ್ನು ಕಡೆಗಣಿಸಿದ ಸಿದ್ದರಾಮಯ್ಯ ಬೆಂಬಲಿಗರು 'ಮತ್ತೆ ಸಿದ್ದರಾಮಯ್ಯ ಮುಂದಿನ ಮುಖ್ಯಮಂತ್ರಿ' ಎಂಬ ಮಾತನಾಡತೊಡಗಿದರು.
ನಂತರ 'ತಟಸ್ಥ' ಬಣದ ನಾಯಕರಾದ ಮಾಜಿ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ, ವಿಧಾನ ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ಮತ್ತು ಮಾಜಿ ಸಂಸದ ಕೆ.ಎಚ್. ಮುನಿಯಪ್ಪ ಶನಿವಾರ ಬೆಂಗಳೂರಿನಲ್ಲಿ ಸಭೆ ಸೇರಿ ಸಮಾಲೋಚನೆ ನಡೆಸಿದ್ದರು. ಬಿ.ಕೆ. ಹರಿಪ್ರಸಾದ್ ಮತ್ತು ಕೆ.ಎಚ್. ಮುನಿಯಪ್ಪ ದೆಹಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ದೂರು ನೀಡಿದ್ದರು. ಹೀಗೆ ಸಮಸ್ಯೆ ಹೆಚ್ಚುತ್ತಲೇ ಹೋಗಿದ್ದರಿಂದ ಈಗ ಹೈಕಮಾಂಡ್ ನಾಯಕರು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇಬ್ಬರನ್ನೂ ದೆಹಲಿಗೆ ಕರೆಸಿಕೊಂಡು ಮಾತನಾಡುತ್ತಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ