ನವದೆಹಲಿ(ಮಾ. 24): ಏಪ್ರಿಲ್ 6ರಂದು ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಆಡಳಿತಾರೂಢ ಎಐಎಡಿಎಂಕೆ ನೇತೃತ್ವದ ಮೈತ್ರಿಕೂಟ ಹಾಗೂ ಡಿಎಂಕೆ ನೇತೃತ್ವದ ಮೈತ್ರಿಕೂಟ ಮಧ್ಯೆ ನೇರ ಹಣಾಹಣಿ ಇದೆ. ಇವುಗಳ ಜೊತೆಗೆ ಕಮಲ ಹಾಸನ್ ಅವರ ಮಕ್ಕಳ್ ನೀದಿ ಮೈಯಮ್ ಮೊದಲಾದ ಪಕ್ಷಗಳೂ ಕಣದಲ್ಲಿವೆ. ಬಿಜೆಪಿಯು ಎಐಡಿಎಂಕೆ ನೇತೃತ್ವದ ಮೈತ್ರಿಕೂಟದ ಭಾಗವಾದರೆ, ಡಿಎಂಕೆ ಜೊತೆ ಕಾಂಗ್ರೆಸ್ ಕೈ ಜೋಡಿಸಿದೆ. ತಮಿಳುನಾಡಿನಲ್ಲಿ ಆರಕ್ಕೇರದೆ ಮೂರಕ್ಕಿಳಿಯದೆ ತ್ರಿಶಂಕು ಸ್ಥಿತಿಯಲ್ಲಿರುವ ಕಾಂಗ್ರೆಸ್ ಪಕ್ಷ ಡಿಎಂಕೆ ಜೊತೆಗೆ ಸೇರಿ ಆಡಳಿತವಿರೋಧಿ ಅಲೆಯ ಲಾಭವನ್ನು ಪಡೆಯಲು ಇನ್ನಿಲ್ಲದ ಕಸರತ್ತು ಮಾಡುತ್ತಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷ 30 ಮಂದಿಯ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಿದೆ. ಅದರಲ್ಲಿ ಕರ್ನಾಟಕದ ಐವರು ಮುಖಂಡರೂ ಸೇರಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ದಿನೇಶ್ ಗುಂಡೂರಾವ್ ಮತ್ತು ವೀರಪ್ಪ ಮೊಯಿಲಿ ಅವರು ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದಾರೆ. ಇದರಲ್ಲಿ ತಮಿಳುನಾಡು ರಾಜಕೀಯಕ್ಕೆ ವೀರಪ್ಪ ಮೊಯಿಲಿ ಹಳಬರೇ. ಹಿಂದೆ ಅವರು ತಮಿಳುನಾಡು ಚುನಾವಣೆಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ. ಡಿಕೆ ಶಿವಕುಮಾರ್ ಅವರಿಗೂ ಕೂಡ ಅಲ್ಲಿ ಕೆಲಸ ಮಾಡಿದ ಅನುಭವ ಇದೆ. ಲೋಕಸಭೆ ವಿಪಕ್ಷ ನಾಯಕನಾಗಿ ಮೊನಚು ಮಾತುಗಳಿಂದ ದೇಶಾದ್ಯಂತ ಚಿರಪರಿಚಿತರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವುದು ಗಮನಾರ್ಹ.
ಇನ್ನು, ತಮಿಳುನಾಡಿನಲ್ಲಿ ಬಿಜೆಪಿಯ ಪ್ರಚಾರಕರಲ್ಲಿ ಕರ್ನಾಟಕದ ಮುಖಂಡರೇ ಪ್ರಮುಖವಾಗಿದ್ದಾರೆ. ಈ ದ್ರಾವಿಡ ನೆಲದಲ್ಲಿ ಬಿಜೆಪಿ 20 ಕ್ಷೇತ್ರಗಳಲ್ಲಿ ಸ್ಪರ್ಧಿಸಿದೆ. ಇಲ್ಲಿ ಬಿಜೆಪಿಯ ಚುನಾವಣಾ ಉಸ್ತುವಾರಿಯಾಗಿ ಸಿ.ಟಿ. ರವಿ ಅವರಿದ್ದಾರೆ. ಮಾಜಿ ಐಪಿಎಸ್ ಅಧಿಕಾರಿ ಕೆ ಅಣ್ಣಾಮಲೈ ಸ್ಪರ್ಧಿಸಿರುವ ಅರವಕುರಿಚ್ಚಿ ಕ್ಷೇತ್ರದಲ್ಲಿ ಮುನಿರತ್ನ ಅವರಿಗೂ ಪ್ರಚಾರದ ಹೊಣೆ ಕೊಡಲಾಗಿದೆ. ಕರ್ನಾಟಕದ ರಾಜಕಾರಣಿಗಳು ನೆರೆಯ ತಮಿಳುನಾಡು, ಕೇರಳ ಮತ್ತು ಪುದುಚೇರಿ ಚುನಾವಣೆಗಳಲ್ಲಿ ಮಹತ್ವದ ಜವಾಬ್ದಾರಿ ಹೊತ್ತಿರುವುದು ನಿಜಕ್ಕೂ ಅಚ್ಚರಿಯ ವಿಚಾರ. ಕೆಲ ತಿಂಗಳ ಹಿಂದೆ ನಡೆದ ಹೈದರಾಬಾದ್ ಪಾಲಿಕೆ ಚುನಾವಣೆಯಲ್ಲಿ ಕರ್ನಾಟಕದ ಬಿಜೆಪಿ ನಾಯಕರ ದಂಡೇ ಹೈದರಾಬಾದ್ಗೆ ಹೋಗಿ ಭರ್ಜರಿ ಪ್ರಚಾರ ಮಾಡಿ ಬಿಜೆಪಿಗೆ ಅನಿರೀಕ್ಷಿತ ಸಂಖ್ಯೆಯಲ್ಲಿ ಕ್ಷೇತ್ರ ಗೆಲ್ಲಲು ಸಾಧ್ಯವಾಗುವಂತೆ ಮಾಡಿತು.
ಇದನ್ನೂ ಓದಿ: Assembly Election2021: ತಮಿಳುನಾಡು ಚುನಾವಣೆ; ಪ್ರಚಾರದ ವೇಳೆ ಮತದಾರರ ಬಟ್ಟೆ ಒಗೆದ ಎಡಿಎಂಕೆ ಅಭ್ಯರ್ಥಿ
ತಮಿಳುನಾಡು ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ನ ಸ್ಟಾರ್ ಪ್ರಚಾರಕರು:
1) ಸೋನಿಯಾ ಗಾಂಧಿ
2) ರಾಹುಲ್ ಗಾಂಧಿ
3) ಪ್ರಿಯಾಂಕಾ ಗಾಂಧಿ
4) ಕೆ ಎಸ್ ಅಳಗಿರಿ
5) ಮಲ್ಲಿಕಾರ್ಜುನ ಖರ್ಗೆ
6) ಅಶೋಕ್ ಗೆಹ್ಲೋಟ್
7) ದಿನೇಶ್ ಗುಂಡೂರಾವ್
8) ಪಿ ಚಿದಂಬರಂ
9) ಕೆ ಆರ್ ರಾಮಸ್ವಾಮಿ
10) ವೀರಪ್ಪ ಮೊಯಿಲಿ
11) ಪಲ್ಲಂ ರಾಜು
12) ಡಾ. ನಿತಿನ್ ರಾವತ್
13) ಸಿದ್ದರಾಮಯ್ಯ
14) ಡಿಕೆ ಶಿವಕುಮಾರ್
15) ಮನೀಶ್ ತಿವಾರಿ
16) ಡಾ. ಎ ಚೆಲ್ಲಕುಮಾರ್
17) ಬಿ ಮಾಣಿಕಂ ಠಾಗೂರ್
18) ಸಂಜಯ್ ದತ್
19) ಡಾ. ಶ್ರೀವೆಲ್ಲ ಪ್ರಸಾದ್
20) ಕೆ ವಿ ತಂಗಬಾಲು
21) ಇವಿಕೆಎಸ್ ಇಳಂಗೋವನ್
22) ಡಾ. ಸು ತಿರುಣ್ಣವುಕ್ಕರಸರ್
23) ಡಾ. ಎ.ಎಂ. ಸುದರ್ಶನ ನಾಚಿಯಪ್ಪನ್
24) ದನುಶ್ಕೋಡಿ ಆದಿತನ್
25) ಡಾ. ಕೆ ಜಯಕುಮಾರ್
26) ಡಾ. ಎಂ.ಕೆ. ವಿಷ್ಣು ಪ್ರಸಾದ್
27) ಪೀಟರ್ ಆಲ್ಫೋನ್ಸ್
28) ಜ್ಯೋತಿಮಣಿ
29) ಕಾರ್ತಿ ಚಿದಂಬರಂ
30) ಶಶಿಕಾಂತ್ ಸೆಂದಿಲ್
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ