ಬೆಂಗಳೂರು: ರಾಜ್ಯಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Union Minister Amit Shah) ಭೇಟಿ ಬಿಜೆಪಿ ಕಾರ್ಯಕರ್ತರಲ್ಲಿ (BJP Activist) ಹುಮ್ಮುಸ್ಸು ತಂದಿರೋದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆಗೆ ಬಿಜೆಪಿ ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಿರುವ ಅಮಿತ್ ಶಾ, ಕಾಂಗ್ರೆಸ್ ಮತ್ತು ಜೆಡಿಎಸ್ (Congress And JDS) ವಿರುದ್ಧ ವಾಗ್ದಾಳಿ ನಡೆಸಿದ್ದರು. ಅಮಿತ್ ಶಾ ಹೇಳಿಕೆ ಮತ್ತು ಆರೋಪಗಳಿಗೆ ಮಾಜಿ ಸಿಎಂ ಸಿದ್ದರಾಮಯ್ಯ (Former CM Siddaramaiah) ತಿರುಗೇಟು ನೀಡಿದ್ದಾರೆ. ಪಿಎಫ್ಐ (PFI) ಮೇಲಿನ ಕೇಸುಗಳನ್ನು ನಮ್ಮ ಸರ್ಕಾರ ವಾಪಸ್ಸು ತೆಗೆದುಕೊಂಡಿದೆ ಎಂದು ನಾಜಿ ಸರ್ಕಾರದ ಪ್ರೊಪಗಾಂಡ ಸಚಿವ, ಗೋಬೆಲ್ಸ್ನ ಅಪರಾವತಾರವಾದ ಗೃಹ ಸಚಿವ ಅಮಿತ್ ಶಾ ಸುಳ್ಳು ಉಗುಳಿ ಹೋಗಿದ್ದಾರೆ. ಸನ್ಮಾನ್ಯ ಗೃಹ ಸಚಿವ ಅಮಿತ್ ಶಾ ಅವರು ಒಂದೋ ತಮ್ಮ ಸುಳ್ಳು ಆರೋಪವನ್ನು ಸಾಬೀತುಪಡಿಸಬೇಕು, ಇಲ್ಲವೇ ತಾವು ಹೇಳಿದ್ದು ಸುಳ್ಳು ಎಂದು ಕ್ಷಮೆ ಕೇಳಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಪಕ್ಷದ್ದೇ ಸರ್ಕಾರ ಇದೆ. ಯಾವ ಪಿಎಫ್ಐ ಕಾರ್ಯಕರ್ತರ ಮೊಕದ್ದಮೆಗಳನ್ನು ನಮ್ಮ ಸರ್ಕಾರ ವಾಪಾಸ್ ಪಡೆದಿದೆ ಎನ್ನುವುದನ್ನು ಕಡತ ನೋಡಿ ತಿಳಿದುಕೊಳ್ಳಲು ಅಮಿತ್ ಶಾ ಅವರಿಗೇನು ದಾಡಿ? ಸುಮ್ಮನೆ ಸುಳ್ಳು ಉಗುಳುವುದು ಯಾಕೆ ಎಂದು ಪ್ರಶ್ನೆ ಮಾಡಿದರು.
ನಾನು ಈ ಕುರಿತು ಸರ್ಕಾರಕ್ಕೆ ಪತ್ರ ಬರೆದು ಮಾಹಿತಿ ತರಿಸಿಕೊಂಡಿದ್ದೇನೆ. ಬಿಜೆಪಿ ಸರ್ಕಾರವೇ ನೀಡಿರುವ ಉತ್ತರದಲ್ಲಿ ಪಿಎಫ್ಐ ಕಾರ್ಯಕರ್ತರ ಮೇಲಿನ ಪ್ರಕರಣ ವಾಪಸ್ಸು ತೆಗೆದುಕೊಂಡ ಒಂದೇ ಒಂದು ದಾಖಲೆಯನ್ನೂ ನೀಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಮಾಹಿತಿ ಕೊಡದ ಸರ್ಕಾರ
ಇದಾದ ಮೇಲೆ ಮತ್ತೊಮ್ಮೆ ಪತ್ರ ಬರೆದು ಪಿಎಫ್ಐ ಕಾರ್ಯಕರ್ತರ ಹೆಸರು, ಅವರ ಮೇಲಿದ್ದ ಪ್ರಕರಣ ಇವುಗಳ ಸಮಗ್ರ ದಾಖಲೆ ಕೊಡಿ ಎಂದು ವಿರೋಧ ಪಕ್ಷದ ನಾಯಕನಾಗಿ ಬಿಜೆಪಿ ಸರ್ಕಾರವನ್ನು ಕೇಳಿದ್ದೇನೆ. ಕಳೆದ 6 ತಿಂಗಳಿಂದ ಮಾಹಿತಿಯನ್ನೆ ಕೊಡದೆ ಕಡತವನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ಇಟ್ಟುಕೊಂಡು ಕೂತಿದ್ದಾರೆ. ಆದರೂ ನಾಚಿಕೆಯೇ ಇಲ್ಲದ ನಿರ್ಲಜ್ಜ. ಬಿಜೆಪಿ ಸುಳ್ಳು ಹೇಳಿಕೊಂಡು ಓಡಾಡುತ್ತಿದೆ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಬಿಜೆಪಿ ಮತ್ತು ಎಸ್ಡಿಪಿಐ ಒಳ ಒಪ್ಪಂದ
ಇದೇ ಬಿಜೆಪಿ ಎಸ್ಡಿಪಿಐ ಜೊತೆ ಹಲವಾರು ಕಡೆ ಒಳ ಒಪ್ಪಂದ ಮಾಡಿಕೊಂಡ ಮಾಹಿತಿ ನಮ್ಮ ಬಳಿ ಇದೆ. ಇಷ್ಟಿದ್ದರೂ ನಮ್ಮ ಮೇಲೆ ಆರೋಪ ಮಾಡುತ್ತಾರೆ. ಸದ್ಯದಲ್ಲಿಯೇ ಇವರ ಒಳ ಒಪ್ಪಂದದ ವಿವರಗಳನ್ನು ನಾನೇ ಬಿಡುಗಡೆ ಮಾಡುತ್ತೇನೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ವಿರುದ್ಧ ಅಮಿತ್ ಶಾ ವಾಗ್ದಾಳಿ
ಕಾಂಗ್ರೆಸ್ - ಜೆಡಿಎಸ್ ವೋಟ್ ಬ್ಯಾಂಕ್ಗಾಗಿ ಪಿಎಫ್ಐ, ಭಯೋತ್ಪಾದನೆಯನ್ನು ಬೆಂಬಲಿಸುತ್ತಾರೆ. ಆದರೆ, ನಾವು ಹಾಗಲ್ಲ. ದೇಶದ ಸುರಕ್ಷತೆ, ಸರ್ವತೋಮುಖ ಅಭಿವೃದ್ಧಿ ಮತ್ತು ರಾಜ್ಯದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತೇವೆ. ಕುಟುಂಬ ರಾಜಕೀಯ ಮತ್ತು ಭ್ರಷ್ಟಾಚಾರವನ್ನು ದೂರವಿಡಲು ಬಿಜೆಪಿ ಬೆಂಬಲಿಸಿ ಎಂದು ಅಮಿತ್ ಶಾ ಮನವಿ ಮಾಡಿಕೊಂಡರು.
ಕಾಂಗ್ರೆಸ್ ಪಕ್ಷದವರು ಹೊಸ ವಿಚಾರಗಳನ್ನು ತಂದು ಮತ ಕೇಳುತ್ತಾರೆ. ಕಾಂಗ್ರೆಸ್ಸಿಗೆ ಆಡಳಿತವು ಭ್ರಷ್ಟಾಚಾರಕ್ಕೆ ಸಾಧನ. ಗೆದ್ದರೆ ರಾಜ್ಯವನ್ನು ಎಟಿಎಂ ಮಾಡಿಕೊಳ್ಳುತ್ತಾರೆ. ಜೆಡಿಎಸ್ - ಕಾಂಗ್ರೆಸ್ ಚುನಾವಣೆಯಲ್ಲಿ ಎದುರಾಳಿ ಆಗಿದ್ದರೂ ಬಳಿಕ ಬಿಜೆಪಿ ಎದುರು ಬಂದಾಗ ಜೊತೆಗೂಡುತ್ತವೆ.
2018 ರಲ್ಲೂ ಹೀಗೇ ಆಗಿತ್ತು. ಬಳಿಕ ಭ್ರಷ್ಟಾಚಾರದಿಂದ ಸಮ್ಮಿಶ್ರ ಸರ್ಕಾರ ಕುಸಿದು ಬಿತ್ತು. ಬಳಿಕ ಯಡಿಯೂರಪ್ಪ, ಬೊಮ್ಮಾಯಿಯವರ ನೇತೃತ್ವದಲ್ಲಿ ನಾವು ಉತ್ತಮ ಆಡಳಿತ ಕೊಟ್ಟಿದ್ದೇವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ