ಜನಸೇವೆ ಹೆಸರಲ್ಲಿ ತೆರಿಗೆ ಹಣ ಲೂಟಿ ಮಾಡಲು ನಮ್ಮ ಸಹಕಾರವಿಲ್ಲ; ಸರ್ಕಾರಕ್ಕೆ ಸಿದ್ದರಾಮಯ್ಯ ಎಚ್ಚರಿಕೆ

ಕೊರೋನಾ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದರೂ ವಿರೋಧ ಪಕ್ಷವಾಗಿ ನಮ್ಮ ಜವಾಬ್ದಾರಿ ನಿರ್ವಹಿಸುವುದೂ ತಪ್ಪೇ? ಜನಸೇವೆಯ ಹೆಸರಲ್ಲಿ ತೆರಿಗೆ ಹಣದ ಲೂಟಿಗೆ ನಮ್ಮ ಸಹಕಾರವಿಲ್ಲ. ನಾವು ಜನರ ಪರವೇ ಹೊರತು ನಿಮ್ಮ ಪರ‌ ಅಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಸಿದ್ದರಾಮಯ್ಯ

ಸಿದ್ದರಾಮಯ್ಯ

  • Share this:
ಬೆಂಗಳೂರು (ಜು. 21): ಕೊರೋನಾ ಚಿಕಿತ್ಸೆಗೆ ಸಂಬಂಧಿಸಿದಂತೆ ಹಲವು ದಿನಗಳಿಂದ ಸರ್ಕಾರದ ಬಳಿ ಮಾಹಿತಿ ಕೇಳುತ್ತಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇಂದು ಮತ್ತೆ ಆ ಬಗ್ಗೆ ಸರಣಿ ಟ್ವೀಟ್​ಗಳನ್ನು ಮಾಡಿದ್ದಾರೆ. ನಾನು ಪತ್ರದ ಮೂಲಕ ಕೇಳಲಾದ ಪ್ರಶ್ನೆಗಳಿಗೆ ಇನ್ನು 24 ಗಂಟೆಯೊಳಗೆ ಉತ್ತರ ಸಿಗಬಹುದಾ? ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಪ್ರಶ್ನೆಯನ್ನೂ ಕೇಳಿದ್ದಾರೆ. ಅಲ್ಲದೆ, ಜನರ ತೆರಿಗೆ ಹಣವನ್ನು ಲೂಟಿ ಮಾಡಲು ನಮ್ಮ ಸಹಕಾರವಿಲ್ಲ ಎಂದು ಸಿದ್ದರಾಮಯ್ಯ ಎಚ್ಚರಿಕೆಯನ್ನೂ ನೀಡಿದ್ದಾರೆ.

ಭ್ರಷ್ಟಾಚಾರ ನಡೆದಿದ್ದರೂ ಸುಮ್ಮನಿರಬೇಕೇ? ಕೊರೊನಾ ವಿಚಾರದಲ್ಲಿ ಸರ್ಕಾರ ಕೈಗೊಂಡ ಕ್ರಮಗಳಿಗೆ ನಾವು 3-4 ತಿಂಗಳು ಸಂಪೂರ್ಣವಾಗಿ ಸಹಕಾರ ನೀಡುತ್ತಾ ಬಂದೆವು. ಅದರ ವಿರುದ್ಧ ಎಲ್ಲಿಯೂ ಮಾತನಾಡಿರಲಿಲ್ಲ. ಹಾಗೆಂದು ಕೊರೋನಾ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದರೂ ಸುಮ್ಮನೇ ಕೂರಬೇಕಿತ್ತೇ? ವಿರೋಧ ಪಕ್ಷವಾಗಿ ನಮ್ಮ ಜವಾಬ್ದಾರಿ ನಿರ್ವಹಿಸುವುದೂ ತಪ್ಪೇ ? ಎಂದು ಸಿದ್ದರಾಮಯ್ಯ ಇಂದು ಸರ್ಕಾರವನ್ನು ತರಾಟೆ ತೆಗೆದುಕೊಂಡಿದ್ದರು.

ಅಲ್ಲದೆ, ಆರೋಗ್ಯ ಸಚಿವ ಶ್ರೀರಾಮುಲು ನಿನ್ನೆ ಪತ್ರಿಕಾಗೋಷ್ಠಿ ನಡೆಸಿ ಲೆಕ್ಕ ಕೊಟ್ಟಿರುವುದಾಗಿ ತಿಳಿಸಿದ್ದಾರೆ. ಗುರುವಾರ ಕಾಂಗ್ರೆಸ್ ಪಕ್ಷದಿಂದ ಪತ್ರಿಕಾಗೋಷ್ಠಿ ನಡೆಸಿ ನಾವೂ ದಾಖಲೆಗಳನ್ನು ನೀಡುತ್ತೇವೆ. ಒಂದು ವೆಂಟಿಲೇಟರ್ ಖರೀದಿಗೆ ತಮಿಳುನಾಡು ಸರ್ಕಾರ 4.78 ಲಕ್ಷ ರೂ. ವೆಚ್ಚ ಮಾಡಿದೆ. ಆದರೆ, ಇಲ್ಲಿಯ ಸರ್ಕಾರ 15-18 ಲಕ್ಷ ರೂ. ಕೊಟ್ಟು ಖರೀದಿಸಿದೆ. ಇದನ್ನು ಭ್ರಷ್ಟಾಚಾರ ಎನ್ನದೇ ಏನೆಂದು ಕರೆಯಬೇಕು? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದರು.

ಇದನ್ನೂ ಓದಿ: ‘ಕರ್ನಾಟಕ ಇನ್ನು ಸಂಪೂರ್ಣ ಲಾಕ್​ಡೌನ್​ ಫ್ರೀ ರಾಜ್ಯ: ಇನ್ಮುಂದೆ ಎಲ್ಲೂ, ಎಂದೂ ಲಾಕ್​ಡೌನ್​ ಇಲ್ಲ: ಯಡಿಯೂರಪ್ಪ

ಕೊರೋನಾ ಉಪಕರಣಗಳ ಗುಣಮಟ್ಟದ ಬಗ್ಗೆ ಮಾತನಾಡಲು ನಾನು ತಜ್ಞ ಅಲ್ಲದಿರಬಹುದು. ಆದರೆ, ತಜ್ಞರ ಅಭಿಪ್ರಾಯ ಕೇಳಬಹುದಲ್ಲವೇ? ಮಾಹಿತಿ ಕೋರಿ ಒಂದು ವಾರದ ಹಿಂದೆಯೇ ಪತ್ರ ಬರೆದಿದ್ದರೂ ಮುಖ್ಯ ಕಾರ್ಯದರ್ಶಿಗಳಿಂದ ಇದುವರೆಗೂ ಉತ್ತರ ಬಂದಿಲ್ಲ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದರು.ಟ್ವಿಟ್ಟರ್​ನಲ್ಲೂ ಈ ಬಗ್ಗೆ ಸರ್ಕಾರದ ಮೇಲೆ ಚಾಟಿ ಬೀಸಿರುವ ಸಿದ್ದರಾಮಯ್ಯ, ಮುಖ್ಯಮಂತ್ರಿ ಯಡಿಯೂರಪ್ಪನವರೇ, ಕೊರೊನಾ ಚಿಕಿತ್ಸೆಗೆ ಸಂಬಂಧಿಸಿದ ಸಲಕರಣೆಗಳ ಖರೀದಿಗೆ ಸಂಬಂಧಿಸಿದ ಮಾಹಿತಿಯನ್ನು ಒದಗಿಸುವುದಾಗಿ ಹೇಳಿರುವುದು ಕೇಳಿ ಅಚ್ಚರಿಯಾಯಿತು. ಮಾಹಿತಿ ಕೇಳಿ ನಾನು ಬರೆದ ಕೊನೆಯ ಪತ್ರ ಈ ತಿಂಗಳ ಹತ್ತರಂದು ನಿಮ್ಮ ಕಚೇರಿ ತಲುಪಿದೆ. ಇನ್ನು ಯಾವ ರೀತಿ ಮಾಹಿತಿ ಕೇಳಲಿ? ಎಂದು ಪ್ರಶ್ನಿಸಿದ್ದಾರೆ.ಕೊರೊನಾ ಚಿಕಿತ್ಸೆಗೆ ಸಂಬಂಧಿಸಿದ ಸಲಕರಣೆಗಳನ್ನು ಯಾವ ಯಾವ ಇಲಾಖೆಗಳ ಮೂಲಕ ಖರೀದಿ ಮಾಡಲಾಗಿದೆ? ಅವುಗಳನ್ನು ಎಲ್ಲೆಲ್ಲಿ ಬಳಕೆ ಮಾಡಲಾಗಿದೆ? ಮಾಡಿರುವ ವೆಚ್ಚ ಎಷ್ಟು? ಇದಕ್ಕೆ ಟೆಂಡರ್ ಕರೆಯಲಾಗಿದೆಯೇ? ಕೊಟೇಷನ್ ಪಡೆಯಲಾಗಿದೆಯೇ? ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರೇ24 ಗಂಟೆಯೊಳಗೆ ಈ ಮಾಹಿತಿ ನೀಡಬಹುದೇ? ಎಂದು ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.ಇದನ್ನೂ ಓದಿ: Karnataka Coronavirus: ಕರ್ನಾಟಕದಲ್ಲಿ ಇಂದು 3,649 ಕೊರೋನಾ ಕೇಸ್, 61 ಸಾವು; ಬೆಂಗಳೂರಿನಲ್ಲಿ 1714 ಸೋಂಕಿತರು

ಯಡಿಯೂರಪ್ಪನವರೇ, ಕೊರೊನಾ ಸೋಂಕಿಗೆ ಸಂಬಂಧಿಸಿದ ಮಾಹಿತಿ ‌ಕೋರಿ ನಿಮಗೆ‌ ಮತ್ತು ಅಧಿಕಾರಿಗಳಿಗೆ ಕನಿಷ್ಠ ಹತ್ತು ಪತ್ರ ಬರೆದಿದ್ದೇನೆ. ಅವುಗಳು ಮಾಧ್ಯಮಗಳಲ್ಲಿ‌ ಪ್ರಕಟ-ಪ್ರಸಾರವಾಗಿವೆ. ಹೀಗಿದ್ದರೂ ನಿಮ್ಮ ಗಮನಕ್ಕೆ ಯಾಕೆ ಬಂದಿಲ್ಲ ಎನ್ನುವುದನ್ನು ನೀವೇ ವಿಚಾರಿಸಬೇಕು ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.ಮುಖ್ಯಮಂತ್ರಿ ಯಡಿಯೂರಪ್ಪನವರೇ, ನೀವು ಕೊರೊನಾ ನಿಯಂತ್ರಣಕ್ಕೆ ನನ್ನ ಸಹಕಾರ ಕೇಳಿದ್ದೀರಿ. ಜನರ ಕಷ್ಟ-ದುಃಖಗಳ ನಿವಾರಣೆಯ ನಿಮ್ಮ ಪ್ರಯತ್ನಗಳಿಗೆ ನನ್ನ ಸಹಕಾರ ಸದಾ ಇದೆ. ಆದರೆ, ಜನಸೇವೆಯ ಹೆಸರಲ್ಲಿ ತೆರಿಗೆ ಹಣದ ಲೂಟಿಗೆ ಖಂಡಿತ ಸಹಕಾರ ಇಲ್ಲ. ನಾವು ಜನರ ಪರವೇ ಹೊರತು ನಿಮ್ಮ ಪರ‌ ಅಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.
Published by:Sushma Chakre
First published: