ತುಮಕೂರು (ಜ.21): ತ್ರಿವಿಧ ದಾಸೋಹಿ, ಪರಮಪೂಜ್ಯ ಶಿವೈಕ್ಯ ಶಿವಕುಮಾರ ಶ್ರೀಗಳು ಅಗಲಿ ಇಂದಿಗೆ ಒಂದು ವರ್ಷ ಸಂದಿದೆ. ಈ ಹಿನ್ನೆಲೆ ಶಿವಕುಮಾರ ಶ್ರೀಗಳ ಸ್ಮರಣಾರ್ಥ ಅವರ ಗದ್ದುಗೆ ಬಳಿ 50 ಕಿಲೋ ತೂಕದ ಬೆಳ್ಳಿ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಯಿತು.
ಇಂದು ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಬೆಳ್ಳಿ ವಿಗ್ರಹಕ್ಕೆ ಸಿದ್ದಲಿಂಗ ಸ್ವಾಮಿಜಿಗಳು ಸೇರಿದಂತೆ ಹಲವು ಮಠಾಧೀಶರು ಮಂತ್ರಘೋಷಗಳ ಮೂಲಕ ಮಂಗಳಾರತಿ ಮಾಡಿದರು. ಬಳಿಕ ಹಳೇ ಮಠದಿಂದ ಮೆರವಣಿಗೆ ಹೊರಟು ಉದ್ದಾನೇಶ್ವರ ಗದ್ದುಗೆಗೆ ಪೂಜೆ ಸಲ್ಲಿಸಿ ಅಲ್ಲಿಂದ
ಶಿವಕುಮಾರ ಶ್ರೀಗಳ ಗದ್ದುಗೆಗೆ ಮೆರವಣಿಗೆ ತಲುಪಿದೆ. ಅಲ್ಲಿ ಗದ್ದುಗೆ ಸುತ್ತ ಐದು ಪ್ರದಕ್ಷಿಣೆ ಆದ ಬಳಿಕ ನೇರವಾಗಿ ಗದ್ದುಗೆಯ ಪೀಠದ ಮೇಲೆ ಬೆಳ್ಳಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು.
ಪೀಠದ ಕೆಳಭಾಗದಲ್ಲಿ ಶ್ರೀಗಳ ಪಾದುಕೆ , ಶಿವಲಿಂಗದ ಹಿಂಭಾಗದ ಮೇಲ್ಭಾಗದಲ್ಲಿ ಶ್ರೀಗಳ ಭಾವಚಿತ್ರ ಇರಿಸಲಾಗಿತ್ತು. ಈ ಭಾವ ಚಿತ್ರ ತೆರವುಗೊಳಿಸಿ ಅದರ ಜಾಗದಲ್ಲಿ ಬೆಳ್ಳಿ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ.
ಮಠದ ಭಕ್ತರಾದ ದೆಹಲಿ ಮೂಲದ ಉದ್ಯಮಿ ಮುಕೇಶ್ ಗರ್ಗ್ ಈ ಬೆಳ್ಳಿ ವಿಗ್ರಹ ಕಾಣಿಕೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ