ಪ್ರವಾಸೋದ್ಯಮದಲ್ಲಿ ಸಿದ್ದಗಂಗಾ ಮಠ ನಂ. 1; ಶಿವಕುಮಾರ ಶ್ರೀಗಳ ಲಿಂಗೈಕ್ಯದ ನಂತರ ಪ್ರವಾಸಿಗರ ಸಂಖ್ಯೆಯಲ್ಲಿ ಭಾರೀ ಹೆಚ್ಚಳ

ತುಮಕೂರಿನ ಪ್ರವಾಸೋದ್ಯಮ ಕ್ಷೇತ್ರಗಳಲ್ಲಿ ಸಿದ್ದಗಂಗಾ ಮಠ ಅಗ್ರ ಸ್ಥಾನ ಅಲಂಕರಿಸಿದೆ. ಇಲ್ಲಿ ಬರೋಬ್ಬರಿ 50 ಲಕ್ಷ ಜನರು ಭೇಟಿ ನೀಡಿದ್ದಾರೆ. ಎಡೆಯೂರು ಸಿದ್ದಲಿಂಗೇಶ್ವರ ದೇವಸ್ಥಾನ ಮತ್ತು ದೇವರಾಯನ ದುರ್ಗ ಸ್ಥಳಗಳು ನಂತರದ ಸ್ಥಾನ ಹೊಂದಿವೆ.

ಸಿದ್ದಗಂಗಾ ಮಠ

ಸಿದ್ದಗಂಗಾ ಮಠ

  • News18
  • Last Updated :
  • Share this:
ತುಮಕೂರು(ಜ. 23): ತ್ರಿವಿಧ ದಾಸೋಹಿ ಶಿವಕುಮಾರ ಶ್ರೀಗಳು ಲಿಂಗೈಕ್ಯರಾದ ಬಳಿಕ ಶ್ರೀಮಠಕ್ಕೆ ಪ್ರವಾಸಿಗರ, ಭಕ್ತರ ಭೇಟಿ ಹೇರಳವಾಗಿ ಹೆಚ್ಚಿದೆ. ಜಿಲ್ಲೆಯಲ್ಲಿ ಅತಿಹೆಚ್ಚು ಪ್ರವಾಸಿಗರು ಭೇಟಿ ನೀಡುವ  ಪ್ರವಾಸಿ ತಾಣಗಳಲ್ಲಿ ಸಿದ್ದಗಂಗ ಮಠ ಮುಂಚೂಣಿಯಲ್ಲಿದೆ. 2019, ಜನವರಿ 21 ರಂದು ಶ್ರೀಗಳು ನಿಧನರಾದ ಬಳಿಕ ಶ್ರೀಮಠಕ್ಕೆ ಭಕ್ತರ ಪ್ರವಾಹವೇ ಹರಿದುಬಂದಿತ್ತು. ಶ್ರೀಗಳ ಅಂತಿಮದರ್ಶನಕ್ಕೆ 24 ಗಂಟೆಗಳಲ್ಲಿ 15 ಲಕ್ಷ ಭಕ್ತರು ಶ್ರೀಮಠಕ್ಕೆ ಹರಿದುಬಂದಿದ್ದು ಇತಿಹಾಸ. ಶಿವಕುಮಾರ ಶ್ರೀಗಳ ಕ್ರಿಯಾ ಸಮಾಧಿ ನಡೆದ ಗದ್ದುಗೆ ಈಗ ಧಾರ್ಮಿಕ ಪ್ರವಾಸಿ ತಾಣವಾಗಿ ಮಾರ್ಪಟ್ಟಿದೆ.

ಪ್ರತೀ ತಿಂಗಳು ಸರಾಸರಿ 5 ಲಕ್ಷ ಪ್ರವಾಸಿಗರು, ಭಕ್ತರು ಶ್ರೀಮಠಕ್ಕೆ ಭೇಟಿ ನೀಡಿರುವ ಅಂಕಿ-ಅಂಶವನ್ನು ಪ್ರವಾಸೋದ್ಯಮ ಇಲಾಖೆ ನೀಡಿದೆ. ಶ್ರೀಮಠಕ್ಕೆ ಬರುವ ಭಕ್ತರು ಮೊದಲು ಗದ್ದುಗೆಗೆ ಭೇಟಿ ನೀಡಿ ಬಳಿಕ ಬೆಟ್ಟದ ಮೇಲಿನ ಕ್ಷೇತ್ರದ ಆರಾಧ್ಯದೈವ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ದೇಗುಲ ಹಾಗೂ ಶ್ರೀ ಸಿದ್ದಗಂಗಮ್ಮ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಹೀಗೆ ಒಂದು ವರ್ಷದಲ್ಲಿ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿರುವವರ ಸಂಖ್ಯೆ ಬರೋಬ್ಬರಿ 48 ಲಕ್ಷ ಎಂದು ಪ್ರವಾಸೋದ್ಯಮ ಇಲಾಖೆ ಅಂದಾಜಿಸಿದೆ.

ಇದನ್ನೂ ಓದಿ: ನಾಗಮಂಗಲದಲ್ಲೊಂದು ಅಚ್ಚರಿ; ಬಸಪ್ಪನ ಪವಾಡ ಪರೀಕ್ಷಿಸಲು ಹೋಗಿ ಪೇಚಿಗೆ ಸಿಕ್ಕವರು

2018-19ನೇ ಸಾಲಿನಲ್ಲಿ ಅಂದಾಜು 35-40 ಲಕ್ಷ ಪ್ರವಾಸಿಗರು ಹಾಗೂ ಭಕ್ತರು ಸಿದ್ದಗಂಗಾಮಠಕ್ಕೆ ಭೇಟಿ ನೀಡಿದ್ದರು. ಈ ವರ್ಷ ಹತ್ತಿರಹತ್ತಿರ ಅರ್ಧಕೋಟಿಗೆ ತಲುಪಿದೆ. ಪ್ರವಾಸೋದ್ಯಮ ಇಲಾಖೆ ನಿಗದಿತ ಮಾನದಂಡ ಬಳಸಿ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆಯ ಲೆಕ್ಕ ತಯಾರಿಸಿಲ್ಲ. ಪ್ರತೀ ತಿಂಗಳ ವಿಶೇಷ ಹಬ್ಬ ಹರಿದಿನ, ಜಾತ್ರಾ ಮಹೋತ್ಸವ, ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಹಾಗೂ ವರ್ಷಾಂತ್ಯದಲ್ಲಿ ಶಾಲಾ ಮಕ್ಕಳ ಪ್ರವಾಸ ಎಲ್ಲವನ್ನೂ ಆಧರಿಸಿ ಅಂದಾಜು ಅಂಕಿ-ಅಂಶಗಳನ್ನು ತಯಾರಿಸಲಿದೆ. ಸಿದ್ದಗಂಗಾ ಮಠ ಆಧ್ಯಾತ್ಮಿಕ ತಾಣ ಆಗಿರುವುದರ ಜೊತೆಗೆ ಪ್ರವಾಸಿಗರಿಗೆ ಮೂಲ ಸೌಕರ್ಯ ಸಿಗುತ್ತದೆ. ಅನ್ನ ದಾಸೋಹ  ನಿರಂತರವಾಗಿ ನಡೆಯುತ್ತಿದೆ. ಸಾಹಸಿಗರು ಸಿದ್ದಗಂಗಾ ಬೆಟ್ಟದಲ್ಲಿ ಚಾರಣ ಮಾಡಲೂ ಬಹುದು. ಈ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ.

ಸಿದ್ದಗಂಗೆ ಅಲ್ಲದೆ ತುಮಕೂರು ಜಿಲ್ಲೆಯಲ್ಲಿ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ತಾಣಗಳೆದಂರೆ ಎಡೆಯೂರು ಸಿದ್ದಲಿಂಗೇಶ್ವರ ದೇವಸ್ಥಾನ, ದೇವರಾಯನದುರ್ಗ ಹಾಗೂ ಗೊರವನಹಳ್ಳಿ ಮಹಾಲಕ್ಷ್ಮೀ ದೇವಸ್ಥಾನ. ಈ 4 ತಾಣಗಳು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳೆಂದು ಪ್ರವಾಸೋದ್ಯಮ ಇಲಾಖೆ ಗುರುತಿಸಿದೆ.

ಇದನ್ನೂ ಓದಿ: ಬೇಸಿಗೆ ಆರಂಭಕ್ಕೂ ಮುನ್ನವೇ ಶುರುವಾಯ್ತು ನೀರಿನ ಸಮಸ್ಯೆ; ಡ್ಯಾಂ ತುಂಬಿ ಹರಿದರೂ ತೀರಿಲ್ಲ ಬಳ್ಳಾರಿಯ ದಾಹ

ಎಡೆಯೂರು ಸಿದ್ದಲಿಂಗೇಶ್ವರ ದೇವಸ್ಥಾನಕ್ಕೆ ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ವರ್ಷ 30,10,595 ಪ್ರವಾಸಿಗರು ಸಿದ್ದಲಿಂಗೇಶ್ವರ ಸನ್ನಿಧಿಗೆ ಭೇಟಿ ನೀಡಿದ್ದಾರೆ. ಚಾರಣಪ್ರಿಯರ ಅಚ್ಚುಮೆಚ್ಚಿನ ತಾಣಗಳಲ್ಲೊಂದಾದ ದೇವರಾಯನದುರ್ಗದಲ್ಲಿ ಯೋಗ, ಭೋಗ ನರಸಿಂಹ ದೇವಾಲಯಗಳಿದ್ದು 27,74,371 ಪ್ರವಾಸಿಗರು ವೀಕ್ಷಣೆ ಮಾಡಿದ್ದಾರೆ. ಗೊರವನಹಳ್ಳಿ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಸುಮಾರು 30 ಲಕ್ಷ ಭಕ್ತರು ಭೇಟಿ ನೀಡಿ ಲಕ್ಷ್ಮೀ ಕೃಪೆಗೆ ಪಾತ್ರರಾಗಿದ್ದಾರೆ. ಆದ್ರೆ ಸಿದ್ದಗಂಗಾ ಮಠ ಭಕ್ತಾದಿಗಳು ಹಾಗೂ ಪ್ರವಾಸಿಗರ ಅಚ್ಚುಮೆಚ್ಚಿನ ಸ್ಥಳವಾಗಿದ್ದು ಗಮನಾರ್ಹವಾಗಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: