ಮೈಸೂರು: ಬಿಲ್ಲಹಳ್ಳಿ ಗ್ರಾಮಕ್ಕೆ ನುಗ್ಗಿ ಗುಂಡು ಹಾರಿಸಿದ ಕಿಡಿಗೇಡಿಗಳು; 7 ಮಂದಿ ಪೊಲೀಸ್ ವಶಕ್ಕೆ

ಬಂಧಿತರಿಂದ 11 ಸಜೀವ ಗುಂಡು 2 ಖಾಲಿ ಗುಂಡು, 2 ‌ಫಾರ್ಚೂನರ್ ಕಾರು, 1 ಮಹೇಂದ್ರ ಸ್ಕಾರ್ಪಿಯೋ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಮೈಸೂರು(ನ.09): ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬಿಲ್ಲಹಳ್ಳಿ ಎಂಬ ಗ್ರಾಮದಲ್ಲಿ ಕಿಡಿಗೇಡಿಗಳು ಕ್ಷುಲ್ಲಕ ಕಾರಣಕ್ಕೆ ಗುಂಡು ಹಾರಿಸಿರುವ ಘಟನೆ ನಡೆದಿದೆ. ಗ್ರಾಮಕ್ಕೆ ನುಗ್ಗಿದ ಕಿಡಿಗೇಡಿಗಳು ಗುಂಡು ಹಾರಿಸಿ ಪರಾರಿಯಾಗಿದ್ದರು. ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದರು. ಸದ್ಯ 7 ಮಂದಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಬೆಂಗಳೂರು ಮೂಲದ ಎಂ.ಮಧುಗೌಡ ಹಾಗೂ ಸಹಚರರು ಈ ಕೃತ್ಯ ಎಸಗಿದ್ದಾರೆ ಎಂದು ತಿಳಿದು ಬಂದಿದೆ. ಸಿನಿಮೀಯ ರೀತಿಯಲ್ಲಿ ಗ್ರಾಮಕ್ಕೆ ನುಗ್ಗಿ ಗಲಾಟೆ ಮಾಡಿ ಗುಂಡು ಹಾರಿಸಿದ ಆರೋಪ ಕೇಳಿ ಬಂದಿದೆ. ಮನೆಯ ಗಲ್ಲಿ ವಿಚಾರವಾಗಿ ಬಿಲ್ಲಹಳ್ಳಿ ಗ್ರಾಮದ ಗುರುಲಿಂಗಪ್ಪ ಕುಟುಂಬ ಮತ್ತು ಚನ್ನಬಸವಪ್ಪ ಕುಟುಂಬದ ನಡುವೆ ಗಲಾಟೆ ನಡೆದಿತ್ತು. ಈ ಬಗ್ಗೆ ಸಾಕಷ್ಟು ನ್ಯಾಯ ಪಂಚಾಯಿತಿ ನಡೆದಿದ್ದರೂ ಸಮಸ್ಯೆ ಮಾತ್ರ ಬಗೆಹರಿದಿರಲಿಲ್ಲ. ಸದ್ಯ ಈ ಪ್ರಕರಣ ನ್ಯಾಯಲಯದಲ್ಲಿದೆ.

  ಏನಿದು ಘಟನೆ?

  ಕೃತ್ಯ ಎಸಗಿದ್ದಾರೆ ಎನ್ನಲಾದ ಮಧುಗೌಡ ಚನ್ನಬಸವಪ್ಪನ ಮೊಮ್ಮಗಳ ಗಂಡ ಸುನಿಲ್‌ಕುಮಾರ್ ಜೊತೆ ಬಿಲ್ಲಹಳ್ಳಿ ಗ್ರಾಮಕ್ಕೆ ಬಂದಿದ್ದ ಎನ್ನಲಾಗಿದೆ. ಸುನಿಲ್ ಕುಮಾರ್​ ತನ್ನ ಗೆಳೆಯ ಮಧುಗೌಡ ಹಾಗೂ ಸ್ನೇಹಿತರನ್ನು ಕರೆತಂದು ಗುರುಲಿಂಗಪ್ಪ ಕುಟುಂಬದೊಂದಿಗೆ ಗಲಾಟೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಇದನ್ನು ಗ್ರಾಮಸ್ಥರು ಪ್ರಶ್ನಿಸಿದಾಗ, ಅವರನ್ನು ಬೆದರಿಸಲು ಮಧುಗೌಡ ಹಾಗೂ ಸಹಚರರು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.

  2007ರಲ್ಲಿ ಉಗ್ರರ ಸೆದೆಬಡಿದು ಹುತಾತ್ಮರಾದ ಕೊಡಗಿನ ವೀರ ಯೋಧನ ಸಾಹಸಗಾಥೆ ಇಲ್ಲಿದೆ

  ತಕ್ಷಣ ಗ್ರಾಮಸ್ಥರು ಪೊಲೀಸರಿಗೆ ಈ ವಿಚಾರವನ್ನು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಪೊಲೀಸರು 7 ಜನರನ್ನು ವಶಕ್ಕೆ ಪಡೆದಿದ್ದಾರೆ. ‌ ಉಳಿದವರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಬಿಲ್ಲಹಳ್ಳಿ ಗ್ರಾಮದ ಬಿ.ಎಂ.ಚನ್ನಬಸಪ್ಪ, ಈತನ ಮೊಮ್ಮಗಳ ಗಂಡ ಬಿ.ಎನ್.ಸುನಿಲ್‌ಕುಮಾರ್,  ಬೆಂಗಳೂರಿನ ಎಂ.ಮಧುಗೌಡ,  ಬೆಂಗಳೂರಿನವರಾದ ಯಾಸೀನ್, ಎಂ.ಪುನೀತ್‌ಕುಮಾರ್, ಸಚಿನ್, ಬಿ.ಡಿ.ಪುನೀತ ಪೊಲೀಸರ ವಶದಲ್ಲಿದ್ದಾರೆ.

  ಇವರ ಜೊತೆಯಲ್ಲಿದ್ದ ಗನ್‌ಮ್ಯಾನ್ ಹಾಗೂ ಇತರರು ಪರಾರಿಯಾಗಿದ್ದಾರೆ. ಬಂಧಿತರಿಂದ 11 ಸಜೀವ ಗುಂಡು 2 ಖಾಲಿ ಗುಂಡು, 2 ‌ಫಾರ್ಚೂನರ್ ಕಾರು, 1 ಮಹೇಂದ್ರ ಸ್ಕಾರ್ಪಿಯೋ ವಾಹನವನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
  Published by:Latha CG
  First published: