Modi Cabinet - ಕೇಂದ್ರ ಸಂಪುಟಕ್ಕೆ ಶೋಭಾ ಕರಂದ್ಲಾಜೆ? ಕೇಂದ್ರ ಸಚಿವ ಡಿವಿ ಸದಾನಂದ ಗೌಡಗೆ ಕೊಕ್?

ಇಂದು ಸಂಜೆ 6ಕ್ಕೆ ಮೋದಿ ಸಂಪುಟದ ಪುನಾರಚನೆಯಾಗಲಿದ್ದು, ಡಿವಿ ಸದಾನಂದ ಗೌಡ ಅವರನ್ನ ಕೈಬಿಟ್ಟು ಶೋಭಾ ಕರಂದ್ಲಾಜೆ ಅವಕಾಶ ಕೊಡುವ ಸುದ್ದಿ ಇದೆ. ಶೋಭಾ ಅವರು ಇಂದು ಮೋದಿ ನಿವಾಸಕ್ಕೆ ಭೇಟಿ ಕೂಡ ಕೊಟ್ಟಿದ್ದಾರೆ.

ಸಂಸದೆ ಶೋಭಾ ಕರಂದ್ಲಾಜೆ

ಸಂಸದೆ ಶೋಭಾ ಕರಂದ್ಲಾಜೆ

 • Share this:
  ಬೆಂಗಳೂರು(ಜುಲೈ 07): ಇಂದು ನಡೆಯಲಿರುವ ಕೇಂದ್ರ ಸಂಪುಟ ಪುನಾರಚನೆಯಲ್ಲಿ ರಾಜ್ಯಕ್ಕೆ ಸಂಬಂಧಿಸಿ ಕೆಲ ಮಹತ್ವದ ಬೆಳವಣಿಗೆ ನಿರೀಕ್ಷಿಸಲಾಗಿದೆ. ರಾಜ್ಯದಿಂದ ಇಬ್ಬರಿಗೆ ಸಂಪುಟದಲ್ಲಿ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಇದೆ. ಕೋವಿಡ್ ಸೋಂಕಿಗೆ ಬಲಿಯಾಗಿ ಸಾವನ್ನಪ್ಪಿದ್ದ ಸುರೇಶ್ ಅಂಗಡಿ ಅವರ ಸ್ಥಾನಕ್ಕೆ ಭಗವಂತ್ ಖೂಬಾ ಹೆಸರು ಕೇಳಿಬರುತ್ತಿದೆ. ಹಾಗೆಯೇ, ಚಿತ್ರದುರ್ಗದ ಎಡಗೈ ದಲಿತ ಸಂಸದ ಎ ನಾರಾಯಣಸ್ವಾಮಿ ಅವರನ್ನ ಸೇರಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಆದರೆ, ಎಲ್ಲಿಯೂ ಯಾರೂ ಅಧಿಕೃತವಾಗಿ ಇದನ್ನ ಹೇಳಿಲ್ಲ. ಆದರೆ, ನಾರಾಯಣ ಸ್ವಾಮಿ ಅವರು ತಮ್ಮ ಕುಟುಂಬ ಸಮೇತ ದೆಹಲಿಗೆ ದೌಡಾಯಿಸಿರುವುದು ಅವರಿಗೆ ಸಚಿವ ಸ್ಥಾನ ಸಿಗಲಿರುವ ಸುದ್ದಿಯನ್ನು ಪುಷ್ಟೀಕರಿಸುವಂತಿದೆ. ಇದೇ ವೇಳೆ, ಡಿ ವಿ ಸದಾನಂದ ಗೌಡ ಅವರನ್ನ ಸಂಪುಟದಿಂದ ಕೈಬಿಡುವ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಡಿವಿಎಸ್ ಸ್ಥಾನಕ್ಕೆ ಶೋಭಾ ಕರಂದ್ಲಾಜೆ ಅವರಿಗೆ ಅವಕಾಶ ಕೊಡಲು ಮೋದಿ ಸರ್ಕಾರ ನಿರ್ಧರಿಸಿದೆ ಎಂಬ ಸುದ್ದಿಯೂ ಇದೆ. ಇದಕ್ಕೆ ಇಂಬು ಕೊಡುವಂತೆ ಶೋಭಾ ಕರಂದ್ಲಾಜೆ ಅವರು ದೆಹಲಿಗೆ ಧಾವಿಸಿ ಅಲ್ಲಿ ಪ್ರಧಾನಿ ಮೋದಿ ನಿವಾಸಕ್ಕೆ ತೆರಳಿರುವ ಖಚಿತ ಸುದ್ದಿ ಇದೆ. ಹೀಗಾಗಿ, ಶೋಭಾ ಅವರಿಗೆ ಸಂಪುಟದಲ್ಲಿ ಸ್ಥಾನ ಸಿಗುತ್ತದೆ ಎಂದು ಬಲವಾಗಿ ನಂಬಬಹುದು.

  ಸದ್ಯ ಕೇಂದ್ರದಲ್ಲಿ ಸುರೇಶ್ ಅಂಗಡಿ ಸಚಿವರಾಗಿದ್ದಾಗ ಮೂವರು ಕೇಂದ್ರ ಸಚಿವರಿದ್ದರು. ಪ್ರಹ್ಲಾದ್ ಜೋಷಿ ಹಾಗೂ ಡಿವಿ ಸದಾನಂದ ಗೌಡ ಇನ್ನಿಬ್ಬರು ಸಚಿವರು. ಲಿಂಗಾಯತ ಸಮುದಾಯದ ಸುರೇಶ್ ಅಂಗಡಿ ಅವರ ಸ್ಥಾನಕ್ಕೆ ಲಿಂಗಾಯತರು ಹಾಗೂ ಅದೇ ಪ್ರದೇಶದವರಾದ ಭಗವಂತ್ ಖೂಬಾ ಅವರಿಗೆ ಅವಕಾಶ ಕೊಡಲಾಗಿದೆ. ದಲಿತರಾದ ಎ ನಾರಾಯಣಸ್ವಾಮಿ ಅವರಿಗೂ ಅವಕಾಶ ನೀಡಲಾಗಿದೆ. ಹಾಗೆಯೇ ಒಕ್ಕಲಿಗ ಸಮುದಾಯದ ಡಿವಿ ಸದಾನಂದ ಗೌಡ ಅವರನ್ನ ಸಂಪುಟದಿಂದ ಕೈಬಿಟ್ಟರೆ ಅದೇ ಸಮುದಾಯದ ಇನ್ನೊಬ್ಬ ಸಂಸದರಿಗೆ ಸಚಿವ ಸ್ಥಾನ ಕೊಡುವುದು ನಿರೀಕ್ಷಿತ. ರಾಜ್ಯದಲ್ಲಿ ಒಕ್ಕಲಿಗ ಸಮುದಾಯದ ಬಿಜೆಪಿ ಸಂಸದರೆಂದರೆ ಪ್ರತಾಪ್ ಸಿಂಹ, ಶೋಭಾ ಕರಂದ್ಲಾಜೆ ಮತ್ತು ಬಿಎನ್ ಬಚ್ಚೇಗೌಡ ಈ ಮೂವರು ಮಾತ್ರವೇ. ಬಚ್ಚೇಗೌಡರಿಗೆ ವಯಸ್ಸಿನ ಕಾರಣಕ್ಕೆ ಸಚಿವ ಸ್ಥಾನ ಕೊಡುವುದು ಕಷ್ಟ. ಇನ್ನುಳಿದವರಾದ ಶೋಭಾ ಕರಂದ್ಲಾಜೆ ಮತ್ತು ಪ್ರತಾಪ್ ಸಿಂಹ ಪೈಕಿ ಯಾರಿಗಾದರೂ ಕೊಡಬಹುದು. ಆದರೆ, ಡಿವಿಎಸ್ ಸ್ಥಾನಕ್ಕೆ ಶೋಭಾ ಕರಂದ್ಲಾಜೆ ಸೂಕ್ತ ಎನಿಸಿರಬಹುದು. ಅಲ್ಲದೇ, ಶೋಭಾ ಕರಂದ್ಲಾಜೆ ಅವರು ಸಿಎಂ ಬಿ ಎಸ್ ಯಡಿಯೂರಪ್ಪ ಅವರಿಗೆ ಅತ್ಯಾಪ್ತರೂ ಹೌದು.

  ಇದನ್ನೂ ಓದಿ: ಬೆಂಗಳೂರಿನಲ್ಲಿ 15 ವರ್ಷಗಳಿಂದ ಮರಗಿಡ ಪೋಷಿಸುತ್ತಿರುವ ‘ಮಿಂಚು ತಿಮ್ಮಕ್ಕ’ ಶೈಲಜಾ

  ಶೋಭಾ ಕರಂದ್ಲಾಜೆ ಅವರಿಗೆ ಸಚಿವ ಸ್ಥಾನ ನೀಡಿ ಯಡಿಯೂರಪ್ಪ ಅವರ ಅಸಮಾಧಾನವನ್ನು ಒಂದಷ್ಟು ಶಮನ ಮಾಡುವ ದೂರಾಲೋಚನೆ ಬಿಜೆಪಿ ವರಿಷ್ಠರಿದ್ದಿರಬಹುದು. ಆದರೆ, ಎ ನಾರಾಯಣಸ್ವಾಮಿ ಮತ್ತು ಶೋಭಾ ಕರಂದ್ಲಾಜೆ ಅವರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಗುತ್ತದೆ ಎಂಬ ಮಾಹಿತಿ ಅಧಿಕೃತವಾಗಿ ಎಲ್ಲಿಯೂ ಸಿಕ್ಕಿಲ್ಲ. ನ್ಯೂಸ್18 ಕನ್ನಡಕ್ಕೆ ಸಿಕ್ಕಿರುವ ಸಂಭಾವ್ಯ ಪಟ್ಟಿಯಲ್ಲಿ 24 ಮಂದಿ ಹೆಸರಿದ್ದು, ಅದರಲ್ಲಿ ಶೋಭಾ ಕರಂದ್ಲಾಜೆ ಹೆಸರಿದೆ. ಎ ನಾರಾಯಣಸ್ವಾಮಿ ಅವರೂ ಕೂಡ ಮೋದಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿರುವ ಸುದ್ದಿ ಈಗ ಕೇಳಿಬಂದಿದೆ. ಮೋದಿ ನಿವಾಸದಿಂದ ಹೊರಬಂದು ಮಾಧ್ಯಮಗಳಿಗೂ ಅವರು ಸಚಿವ ಸಂಪುಟ ಸೇರ್ಪಡೆಯಾಗುತ್ತಿರುವ ವಿಚಾರವನ್ನು ಸ್ಪಷ್ಟಪಡಿಸಿದ್ದಾರೆ. ಇದೇನೇ ಇದ್ದರೂ ಸಂಪುಟ ರಚನೆ, ಚುನಾವಣಾ ಅಭ್ಯರ್ಥಿ ಇತ್ಯಾದಿ ವಿಚಾರದಲ್ಲಿ ಬಿಜೆಪಿ ಬಹಳ ರಹಸ್ಯ ಕಾಪಾಡಿಕೊಳ್ಳುವುದರಿಂದ ಸಂಜೆ 5ರವರೆಗೆ ಯಾವುದನ್ನು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ನಾವು ಊಹಿಸದೇ ಇದ್ದ ಹೆಸರು ದಿಢೀರ್ ಕೇಳಿಬರಬಹುದು.

  ರಾಜ್ಯಸಭಾ ಸಂಸದ ಹಾಗೂ ಉದ್ಯಮಿ ರಾಜೀವ್ ಚಂದ್ರಶೇಖರ್ ಅವರಿಗೂ ಸಂಪುಟ ಭಾಗ್ಯ ಸಿಗಲಿದೆ ಎನ್ನಲಾಗುತ್ತಿದೆ. ಇದೇ ವೇಳೆ, ನರೇಂದ್ರ ಅವರ ಹೊಸ ಮಂತ್ರಿಮಂಡಲದಲ್ಲಿ ಮಹಿಳೆಯರು, ಹಿಂದುಳಿದ ವರ್ಗ ಮತ್ತು ದಲಿತ ವರ್ಗಗಳಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗಲಿದೆ ಎಂಬ ಮಾಹಿತಿ ಕೇಳಿಬರುತ್ತಿದೆ. ಅದರಲ್ಲೂ ಯುವಸಮುದಾಯಕ್ಕೆ ಹೆಚ್ಚಿನ ಮಣೆ ಹಾಕಲಾಗುತ್ತದೆ ಎನ್ನಲಾಗಿದೆ.

  (ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)
  Published by:Vijayasarthy SN
  First published: