ಗದಗ: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ (Karnataka Assembly Election 2023) ಲೋಕಸಭೆ ಎಲೆಕ್ಷನ್ ನ (Loksabha Election 2024) ದಿಕ್ಸೂಚಿ ಎಂದು ಪರಿಗಣಿಸಲಾಗುತ್ತದೆ. ಈ ಹಿನ್ನೆಲೆ ಇಡೀ ದೇಶದ ಚಿತ್ತ ರಾಜ್ಯದತ್ತಿದೆ. ಇನ್ನು ಕೆಲವು ಪಕ್ಷಗಳು ಈ ಬಾರಿ ರಾಜ್ಯದಲ್ಲಿ ಖಾತೆ ತೆರೆಯಲು ಪ್ರಯತ್ನಿಸುತ್ತಿವೆ. ಸಾಮಾನ್ಯವಾಗಿ ಕರ್ನಾಟಕ ರಾಜಕಾರಣದಲ್ಲಿ ತ್ರಿಕೋನ (ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್) ಸ್ಪರ್ಧೆ ಏರ್ಪಡುತ್ತದೆ. ಈ ನಡುವೆ ಮಾಜಿ ಸಚಿವ ಜನಾರ್ದನ ರೆಡ್ಡಿ (Former Minister Janardhan Reddy) ನೂತನ ಕರ್ನಾಟಕ ರಾಜ್ಯ ಕಲ್ಯಾಣ ಪ್ರಗತಿ ಪಕ್ಷ ಸಹ ಚುನಾವಣ ಕಣದಲ್ಲಿರಲಿದೆ. ಎಎಪಿ, ಪ್ರಜಾಕೀಯ, ಕೆಜೆಪಿ, ಎಐಎಂಐಎಂ ಪಕ್ಷಗಳು ಕರ್ನಾಟಕದಲ್ಲಿ ಖಾತೆ ತೆರೆಯಲು ಪ್ರಯತ್ನಿಸುತ್ತಿವೆ. ಇದೀಗ ಕರ್ನಾಟಕದಲ್ಲಿ ಮಹಾರಾಷ್ಟ್ರದ ಶಿವಸೇನೆ (Shivsena) ಅದೃಷ್ಟ ಪರೀಕ್ಷೆಗೆ ಮುಂದಾಗಿದೆ.
ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ ಭಾಗದಲ್ಲಿ ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ಶಿವಸೇನೆ ಮುಂದಾಗಿದೆ. ಮಾಜಿ ಸಿಎಂ ಉದ್ಧವ್ ಠಾಕ್ರೆ ಬಣದ ಶಿವ ಸೇನೆಯಿಂದ 150 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ಚಿಂತನೆ ನಡೆಸಲಾಗಿದೆ ಎಂದು ರಾಜ್ಯಾಧ್ಯಕ್ಷ ಕುಮಾರ್ ಹಕಾರಿ (Kumar Hakari) ಮಾಹಿತಿ ನೀಡಿದ್ದಾರೆ.
ರೋಣ ಕ್ಷೇತ್ರದಿಂದ ಕುಮಾರ್ ಹಕಾರಿ ಸ್ಪರ್ಧೆ
ಗದಗದಲ್ಲಿ ನ್ಯೂಸ್ 18 ಜೊತೆಗೆ ಮಾತನಾಡಿದ ಕುಮಾರ್ ಹಕಾರಿ, ಪಾರ್ಟಿ ಗೊಂದಲಗಳು ಪರಿಹಾರವಾದ ಕೂಡಲೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ. ಸೋಮವಾರ ಅಥವಾ ಮಂಗಳವಾರ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದರು. ಇದೇ ವೇಳೆ ರೋಣ ಮತ ಕ್ಷೇತ್ರದಿಂದ ತಾವೇ ಸ್ಪರ್ಧೆ ಮಾಡುತ್ತಿರುವ ವಿಷಯವನ್ನು ತಿಳಿಸಿದರು.
ಪಾರ್ಟಿ ಸಿಂಬಲ್ ವಿಷಯವಾಗಿರುವ ಗೊಂದಲಗಳು ನಿವಾರಣೆಯಾದ ಬಳಿಕ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು. ಯಾವುದೇ ಪಾರ್ಟಿಗೆ ಅನುಕೂಲವಾಗಲಿ ಅಂತಾ ಸ್ಪರ್ಧೆ ಮಾಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಮಹಾರಾಷ್ಟ್ರದಲ್ಲಿ ಷಡ್ಯಂತ್ರದಿಂದ ಏಟು ತಿಂದಿದ್ದೇವೆ
ಕಳೆದ ಬಾರಿ 60 ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಾಗಿತ್ತು. ಈ ಬಾರಿ 150 ಕ್ಷೇತ್ರದಲ್ಲಿ ಅಭ್ಯರ್ಥಿಗಳನ್ನ ನಿಲ್ಲಿಸುತ್ತೇವೆ. ಕಾಂಗ್ರೆಸ್ ಹಾಗೂ ಬಿಜೆಪಿಯಿಂದ ಸಮಾನ ಅಂತರ ಕಾಯ್ದುಕೊಂಡು ಚುನಾವಣೆ ಎದುರಿಸುತ್ತೇವೆ. ಮಹಾರಾಷ್ಟ್ರದಲ್ಲಿ ಷಡ್ಯಂತ್ರದಿಂದ ಏಟು ತಿಂದಿದ್ದೇವೆ, ಅವರಿಗೆ ಮರಳಿ ತಕ್ಕ ಉತ್ತರ ಕೊಡುತ್ತೇವೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.
ಹಿಂದುತ್ವದಿಂದ ಬಂದಿದ್ದೇವೆ. ಹೇಗೆ ಪಾಠ ಕಲಿಸಬೇಕೋ ಹಾಗೇಯೇ ಕಲಿಸುತ್ತೇವೆ. ಪಕ್ಷದ ಮುಖಂಡರಾದ ಸಂಜಯ್ ರಾವತ್, ಆದಿತ್ಯ ಠಾಕ್ರೆ ಸೇರಿದಂತೆ ಅನೇಕ ರಾಷ್ಟ್ರೀಯ ನಾಯಕರು ಪ್ರಚಾರಕ್ಕೆ ಬರಲಿದ್ದಾರೆ ಎಂದು ತಿಳಿಸಿದರು.
ಗಡಿ ಭಾಗಗಳಲ್ಲಿ ಪೈಪೋಟಿ ಸಾಧ್ಯತೆ
ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ಭಾಗದಲ್ಲಿ ಶಿವಸೇನೆ ಪೈಪೋಟಿ ನೀಡುವ ಸಾಧ್ಯತೆಗಳಿವೆ. ಬೆಳಗಾವಿ, ವಿಜಯಪುರ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳಿಗೆ ಶಿವಸೇನೆ ಟಫ್ ಫೈಟ್ ನೀಡಬಹುದು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಬೆಳಗಾವಿ ಮೇಲೆ ಶಿವಸೇನೆ ಕಣ್ಣು
ಬೆಂಗಳೂರು ಹೊರತುಪಡಿಸಿ ಅತಿ ಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿಯಲ್ಲಿ ಮರಾಠ ಸಮುದಾಯಗಳು ನಿರ್ಣಾಯಕವಾಗಿವೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ಮರಾಠಿ ಮತಗಳ ಒಲೈಕೆಗೆ ಮುಂದಾಗಿವೆ. ಶಿವಸೇನೆ ಸ್ಪರ್ಧೆಯಿಂದ ಬಿಜೆಪಿ ಮತಗಳು ವಿಭಜಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಇದನ್ನೂ ಓದಿ: Dog Theft: ಬೆಂಗಳೂರಿನ ಶ್ವಾನ ಮಾಲೀಕರೇ ಎಚ್ಚರ, ಸಿನಿಮೀಯ ರೀತಿಯಲ್ಲಿ ಬರ್ತಾರೆ ನಾಯಿಕಳ್ಳರು!
ಒಂದು ವೇಳೆ ಬಿಜೆಪಿ ಮತಗಳು ವಿಂಗಡನೆಯಾದ್ರೆ ಕಾಂಗ್ರೆಸ್ ಗೆ ಲಾಭವಾಗಬಹುದು ಎಂಬ ಲೆಕ್ಕಾಚಾರಗಳು ರಾಜಕೀಯ ಅಂಗಳದಲ್ಲಿ ಶುರುವಾಗಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ