ಕಾಂಗ್ರೆಸ್ ಬಿಡುಗಡೆ ಮಾಡಿದ ಸ್ಟಿಂಗ್ ಆಪರೇಷನ್ ಆಡಿಯೋ ನಕಲಿಯೇ? ತಾನ್ಯಾರ ಜೊತೆಯೂ ಮಾತನಾಡಿಲ್ಲವೆಂದ ಶಾಸಕ ಹೆಬ್ಬಾರ್


Updated:May 21, 2018, 2:54 PM IST
ಕಾಂಗ್ರೆಸ್ ಬಿಡುಗಡೆ ಮಾಡಿದ ಸ್ಟಿಂಗ್ ಆಪರೇಷನ್ ಆಡಿಯೋ ನಕಲಿಯೇ? ತಾನ್ಯಾರ ಜೊತೆಯೂ ಮಾತನಾಡಿಲ್ಲವೆಂದ ಶಾಸಕ ಹೆಬ್ಬಾರ್
ಕಾಂಗ್ರೆಸ್ ಮುಖಂಡ ವಿ. ಉಗ್ರಪ್ಪ

Updated: May 21, 2018, 2:54 PM IST
- ಚಿದಾನಂದ ಪಟೇಲ್, ನ್ಯೂಸ್18 ಕನ್ನಡ

ಬೆಂಗಳೂರು(ಮೇ 21): ಯಡಿಯೂರಪ್ಪ ವಿಶ್ವಾಸಮತ ಯಾಚನೆ ದಿನ ಆಪರೇಷನ್ ಕಮಲದ ಸ್ಟಿಂಗ್ ಆಪರೇಷನ್ ಮಾಡಿದ್ದೆನ್ನಲಾದ ಆಡಿಯೋಗಳನ್ನು ಕಾಂಗ್ರೆಸ್ ಪಕ್ಷ ಸರಣಿಯಾಗಿ ಬಿಡುಗಡೆ ಮಾಡಿತ್ತು. ಇದೇ ಆಡಿಯೋ ಇಟ್ಟುಕೊಂಡು ಬಿಜೆಪಿಯನ್ನು ಕಟ್ಟಿಹಾಕುವುದು ಕಾಂಗ್ರೆಸ್​ನ ಗೇಮ್​ಪ್ಲಾನ್ ಆಗಿತ್ತು. ಆದರೆ, ಬಿ.ವೈ. ವಿಜಯೇಂದ್ರ ಅವರಾಗಲೀ, ಬಿ.ಜೆ. ಪುಟ್ಟಸ್ವಾಮಿ ಅವರಾಗಲೀ ತಮ್ಮನ್ನು ಸಂಪರ್ಕಿಸಿಲ್ಲ… ಅಡಿಯೋದಲ್ಲಿರುವ ಧ್ವನಿ ತಮ್ಮದಲ್ಲ ಎಂದು ಶಾಸಕ ಶಿವರಾಮ್ ಹೆಬ್ಬಾರ್ ಮತ್ತು ಅವರ ಪತ್ನಿಯವರೇ ಖುದ್ದಾಗಿ ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ಪಕ್ಷ ಮಾಡಿದ ಈ ಆಪರೇಷನ್ ಕಮಲ ಸ್ಟಿಂಗ್ ಆಪರೇಷನ್​ನ ಧ್ವನಿಮುದ್ರಿಕೆಗಳ ಮೇಲೆಯೇ ಸಂಶಯದ ನೆರಳು ಬಿದ್ದಿದೆ.

ಮೊನ್ನೆ ಆಡಿಯೋಗಳನ್ನು ರಿಲೀಸ್ ಮಾಡಿ ಆರೋಪ ಮಾಡಿದ್ದ ಕಾಂಗ್ರೆಸ್ ಮುಖಂಡ ವಿ. ಉಗ್ರಪ್ಪ, ಈ ಬಗ್ಗೆ ನ್ಯೂಸ್18 ಕನ್ನಡಕ್ಕೆ ಸ್ಪಷ್ಪನೆ ಕೊಟ್ಟಿದ್ಧಾರೆ. ಶಾಸಕ ಹೆಬ್ಬಾರ್ ಅವರ ಪತ್ನಿ ಎಂದು ಭಾವಿಸಿ ಬೇರೊಬ್ಬರಿಗೆ ಪುಟ್ಟಸ್ವಾಮಿ ಫೋನ್ ಕರೆ ಮಾಡಿ ಮಾತನಾಡಿದ್ದಾರೆ. ಆಡಿಯೋದಲ್ಲಿರುವ ಮಹಿಳೆಯ ಧ್ವನಿಯು ಶಾಸಕರ ಪತ್ನಿಯದ್ದಲ್ಲ. ಆದರೆ, ವಿಜಯೇಂದ್ರ ಮತ್ತು ಪುಟ್ಟಸ್ವಾಮಿ ಅವರ ಧ್ವನಿ ಅದರಲ್ಲಿರುವುದು ಸತ್ಯ ಎಂದು ಉಗ್ರಪ್ಪ ಹೇಳಿದ್ದಾರೆ. ಆಡಿಯೋದಲ್ಲಿರುವ ಮಹಿಳೆಯ ಧ್ವನಿ ಯಾರದ್ದೆಂಬುದು ಮುಖ್ಯವಲ್ಲ. ಆದರೆ, ಬಿಜೆಪಿ ಕಡೆಯಿಂದ ಆಪರೇಷನ್ ಕಮಲ ನಡೆದಿರುವುದಕ್ಕೆ ಇದು ಪ್ರಬಲ ಸಾಕ್ಷಿಯಾಗಿದೆ. ಸರಕಾರದ ಅಸ್ತಿತ್ವಕ್ಕೆ ಬಂದ ನಂತರ ನ್ಯಾಯಾಂಗ ತನಿಖೆ ಮಾಡಬೇಕೆಂದು ಮನವಿ ಮಾಡಿದ್ದೇನೆ ಎಂದು ಉಗ್ರಪ್ಪ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಬಿಜೆಪಿ ಮುಖಂಡ ಹಾಗೂ ಬಿಎಸ್​ವೈ ಆಪ್ತ ಬಿ.ಜೆ. ಪುಟ್ಟಸ್ವಾಮಿ, ತಾನು ಯಾರಿಗೂ ಕರೆ ಮಾಡಿಲ್ಲ. ಈ ಆಡಿಯೋ ನಕಲಿಯಾಗಿದೆ. ಯಾರೋ ಮಿಮಿಕ್ರಿ ಕಲಾವಿದರನ್ನು ಕರೆಸಿ ಡಬ್ ಮಾಡಿಸಿದ್ದಾರೆ. ಉಗ್ರಪ್ಪನಿಗೆ ಬೇರೆ ಕೆಲಸ ಇಲ್ಲ… ಇಂಥದ್ದೇ ಕೆಲಸ ಮಾಡಿಕೊಂಡಿರುತ್ತಾರೆ. ಬೇಕಾದರೆ ಯಾವುದೇ ತನಿಖೆಯಾಗಲೀ ಎಂದು ಹೇಳಿದ್ದಾರೆ.

ಮೊನ್ನೆ ಶನಿವಾರದಂದು ವಿ.ಎಸ್. ಉಗ್ರಪ್ಪನವರು ಸಾಲು ಸಾಲಾಗಿ ನಾಲ್ಕಾರು ಆಡಿಯೋಗಳನ್ನು ಬಿಡುಗಡೆ ಮಾಡಿದ್ದರು. ಅದರಲ್ಲಿ ಶ್ರೀರಾಮುಲು, ವಿಜಯೇಂದ್ರ, ಪುಟ್ಟಸ್ವಾಮಿ, ಯಡಿಯೂರಪ್ಪ, ಮುರಳೀಧರ ರಾವ್ ಅವರುಗಳು ಕೆಲ ಕಾಂಗ್ರೆಸ್ ಶಾಸಕರು ಮತ್ತು ಅವರ ಸಂಬಂಧಿಕರೊಂದಿಗೆ ಮಾತನಾಡಿ ಬಿಜೆಪಿಗೆ ಸೇರುವಂತೆ ಆಮಿಷ ಒಡ್ಡಿರುವ ಧ್ವನಿಯು ಈ ಆಡಿಯೋದಲ್ಲಿವೆ.
First published:May 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ