Shivamogga Murder: ಹರ್ಷ ಕೊಲೆ ಆರೋಪಿಗಳು ಬೆಂಗ್ಳೂರಿಗೆ ಎಸ್ಕೇಪ್? ತೀವ್ರ ತಪಾಸಣೆ

ಶಿವಮೊಗ್ಗದ ಹಿಂದೂ ಕಾರ್ಯಕರ್ತನ ಕೊಲೆಗೆ ಸಂಬಂಧಿಸಿ ಬೆಂಗಳೂರಿನಲ್ಲು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹರ್ಷ ಕೊಲೆ ಬಳಿಕ ಆರೋಪಿಗಳು ಬೆಂಗಳೂರು ಕಡೆಗೆ ಎಸ್ಕೇಪ್ ಆಗಿರುವ ಶಂಕೆ ವ್ಯಕ್ತವಾಗಿದ್ದು ನಗರದಲ್ಲಿ ಅನುಮಾನಸ್ಪದ ವ್ಯಕ್ತಿಗಳನ್ನು ಪೊಲೀಸರು ತೀವ್ರವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. 

ಹರ್ಷ

ಹರ್ಷ

  • Share this:
ಶಿವಮೊಗ್ಗ(ಫೆ.21): ನಗರದಲ್ಲಿ ಯುವಕನ ಹತ್ಯೆ ಪ್ರಕರಣ ರಾಜ್ಯಾದ್ಯಂತ ಸುದ್ದಿ ಮಾಡುತ್ತಿದ್ದು, ಬೆಂಗಳೂರಿನಲ್ಲು (Bengaluru) ಪೊಲೀಸರು (Police) ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹರ್ಷ ಕೊಲೆ ಬಳಿಕ ಆರೋಪಿಗಳು ಬೆಂಗಳೂರು ಕಡೆಗೆ ಎಸ್ಕೇಪ್ (Escape) ಆಗಿರುವ ಶಂಕೆ ವ್ಯಕ್ತವಾಗಿದ್ದು ನಗರದಲ್ಲಿ ಅನುಮಾನಸ್ಪದ ವ್ಯಕ್ತಿಗಳನ್ನು ಪೊಲೀಸರು ತೀವ್ರವಾಗಿ ಪರಿಶೀಲನೆ ನಡೆಸುತ್ತಿದ್ದಾರೆ. ಶಿವಮೊಗ್ಗದ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು, ರೈಲು ನಿಲ್ದಾಣ ಮತ್ತು ಬಸ್ ನಿಲ್ದಾಣ ಸೇರಿ ಹಲವು ಕಡೆಗಳಲ್ಲಿ ನಿಗಾ ಇರಿಸಿದ್ದಾರೆ. ಈ ವೇಳೆ ಕೆಲವು ಯುವಕರನ್ನ ವಶಕ್ಕೆ (Custody) ಪಡೆದು ಪೊಲೀಸರ ವಿಚಾರಣೆ ನಡೆಸುತ್ತಿದ್ದಾರೆ. ಶಿವಮೊಗ್ಗದಲ್ಲಿ ಭಜರಂಗದಳದಲ್ಲಿ (Bhajarangdal) ಗುರುತಿಸಿಕೊಂಡಿದ್ದ ಹಿಂದೂ ಕಾರ್ಯಕರ್ತ ಹರ್ಷ ಕೊಲೆಯ ನಂತರ ಶಿವಮೊಗ್ಗದಲ್ಲಿ ಗೊಂದಲದ ವಾತಾವರಣ ಸೃಷ್ಟಿಯಾಗಿದ್ದು ಪೊಲೀಸರು ಪ್ರದೇಶದ ಮೇಲೆ ತೀವ್ರ ನಿಗಾ ಇಟ್ಟಿದ್ದಾರೆ. ಘಟನೆ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದ್ದು ಬಹಳಷ್ಟು ಜನ ಈಗಾಗಲೇ ಪ್ರತಿಭಟನೆ ಮಾಡಿದ್ದಾರೆ.

ಕಾರ್ಯಕರ್ತ ಹರ್ಷ ಅಂತಿಮ ಮೆರವಣಿಗೆ (Procession) ವೇಳೆಯೂ ಕಿರಿಕ್ ನಡೆದಿದ್ದು, ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಯುವಕರು ವಾಹನಗಳಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ, ಕೆಲ ವಾಹನಗಳಿಗೆ ಬೆಂಕಿ ಹಚ್ಚಿದ್ದು, ಬೆಂಕಿ ನಂದಿಸಲು ಅಗ್ನಿಶಾಮಕದಳ (Fire Force) ಸ್ಥಳಕ್ಕಾಗಮಿಸಿದೆ. 10ಕ್ಕೂ ಹೆಚ್ಚು ವಾಹನಗಳು ಹಾನಿಗೊಂಡಿದ್ದು ಹಣ್ಣಿನ ಅಂಗಡಿ ಸೇರಿದಂತೆ ಹಲವು ಅಂಗಡಿಗಳು ಧ್ವಂಸವಾಗಿದೆ. ಶಿವಮೊಗ್ಗ ಓ ಟಿ ರಸ್ತೆಯಲ್ಲಿ ಘಟನೆ ನಡೆದಿದೆ.

ಮೃತದೇಹವನ್ನು ತೆರೆದ ವಾಹನದಲ್ಲಿಟ್ಟು ಮೆರವಣಿಗೆ

ಶಿವಮೊಗ್ಗದ ರೋಟರಿ ಚಿತಾಗಾರದತ್ತ ಪಾರ್ಥಿವ ಶರೀರ ಮೆರವಣಿಗೆ ಮೂಲಕ ಸಾಗಿದ್ದು ವಿದ್ಯಾನಗರದಲ್ಲಿರೋ ರೋಟರಿ ಚಿತಾಗಾರದತ್ತ ಸಾಗಿದೆ. ಮನೆಯಿಂದ ತೆರೆದ ವಾಹನದಲ್ಲಿ ಪಾರ್ಥಿವ ಶರೀರ ಮೆರವಣಿಗೆ ಮಾಡಲಾಗಿದೆ. ಶವಾಗಾರದಿಂದ ಹರ್ಷ ಮನೆಯತ್ತ ಪಾರ್ಥಿವ ಶರೀರ ಕೊಂಡೊಯ್ಯಲಾಗಿತ್ತು, ಶವಗಾರದಿಂದ ಮನೆಯವರೆಗೂ ಮೃತದೇಹವನ್ನು ಮೆರವಣಿಗೆಯಲ್ಲಿ ತರಲಾಗಿತ್ತು.

ಆ ಸಂದರ್ಭ ಮೆರವಣಿಗೆ ಯಲ್ಲಿ ಸಾವಿರಾರು ಹಿಂದೂ ಕಾರ್ಯಕರ್ತರು ಭಾಗಿಯಾಗಿದ್ದರು. ಸೀಗೆಹಟ್ಟಿಯತ್ತ ಸಾಗಿದ ಪಾರ್ಥಿವ ಶರೀರ ಸೀಗೆಹಟ್ಟಿಯ ಕುಂಬಾರಗುಂಡಿಗೆ ಮೆರವಣಿಗೆಯಲ್ಲಿ ಒಯ್ಯಲಾಗಿತ್ತು. ನಂತರ ಅಲ್ಲಿಂದ ರೋಟರಿ ಚಿತಾಗರಾಕ್ಕೆ ಒಯ್ಯಲಾಗಿದೆ.

ಸರ್ಕಾರದ ವಿರುದ್ಧ ಹರ್ಷ ಆಪ್ತೆಯ ಆಕ್ರೋಶ

ಸರ್ಕಾರದ ವಿರುದ್ಧ ಹರ್ಷ ಆಪ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೈ ಶ್ರೀರಾಮ್ ಘೋಷಣೆ ಕೂಗುವುದು ತಪ್ಪಾ, ನಾವು ಎಲ್ಲಿದ್ದೇವೆ ? ಪಾಕಿಸ್ತಾನದಲ್ಲಿಯಾ ? ಎಂದು ಹರ್ಷ ಆಪ್ತೆ ಸೀತಾ ಲಕ್ಷ್ಮಿ ಹೇಳಿಕೆ ಕೊಟ್ಟಿದ್ದಾರೆ. ನಿನ್ನೆ ಸಂಜೆ 5 ಗಂಟೆಗೆ ಒಟ್ಟಿಗೆ ಇದ್ದೆವು. ರಾತ್ರಿ ಸ್ನೇಹಿತರೊಬ್ಬರು ಪೋನ್ ಮಾಡಿ ಹರ್ಷನ ಮೇಲೆ ಹಲ್ಲೆ ಆಗಿದೆ ಎಂದಿದ್ದರು. ನಾನು ಸಣ್ಣಪುಟ್ಟ ಗಾಯ ಆಗಿರಬಹುದು ಅಂದುಕೊಂಡೆ. ನೋಡಿದರೆ ಕೊಚ್ಚಿ ಹಾಕಿದ್ದಾರೆ. ನಾವು ಹಿಂದುವಾಗಿ ಹುಟ್ಟಿದ್ದೆ ತಪ್ಪಾ ಎಂದು ಆಕೆ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: Shivamogga: ಹಿಂದೂ ಸಂಘಟನೆಗೆ ಸೇರಿದ 21 ವರ್ಷದ ಯುವಕನ ಬರ್ಬರ ಕೊಲೆ; ಶಿವಮೊಗ್ಗದಲ್ಲಿ ಬಿಗುವಿನ ವಾತಾವರಣ

ಇವತ್ತು ಸಂಜೆಯೊಳಗೆ ಆರೋಪಿಗಳನ್ನ ಬಂಧಿಸಬೇಕು. ಇಲ್ಲದಿದ್ದರೆ ನಮ್ಮ ತಾಕತ್ತು ಏನು ಅಂತಾ ತೋರಿಸಬೇಕಾಗುತ್ತದೆ ಎಂದು ಆಕೆ ಎಚ್ಚರಿಕೆಯ್ನನ್ನೂ ನೀಡಿದ್ದಾರೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಹಿಂದೂ ಸಂಘಟನೆಯ ಯುವಕನ ಕೊಲೆ, T-20 ಸರಣಿ ಕ್ಲೀನ್-ಸ್ವೀಪ್ ಮಾಡಿದ ಭಾರತ, ಬೆಳಗಿನ ಟಾಪ್​ ನ್ಯೂಸ್​​ಗಳು

ಪುತ್ತೂರು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಪ್ರತಿಕ್ರಿಯೆ:

ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತನ ಕೊಲೆಯನ್ನು ಖಂಡಿಸಿದ ಪುತ್ತೂರು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ. ಪೋಲೀಸರು ಶೀಘ್ರವೇ ಆರೋಪಿಗಳನ್ನು ಬಂಧಿಸಬೇಕು. ರಾಜ್ಯದಲ್ಲಿ ಕೊಲೆ,ಅತ್ಯಾಚಾರ ಪ್ರಕರಣಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಇದು ರಾಜ್ಯಕ್ಕೆ ಒಳ್ಳೆಯದಲ್ಲ. ಅಲ್ಲದೆ ರಾಜ್ಯ ಗೃಹಸಚಿವರ‌ ಜಿಲ್ಲೆಯಲ್ಲೇ ಇಂಥ ಘಟನೆ ನಡೆಯಬಾರದಿತ್ತು ಎಂದು ಅವರು ಹೇಳಿದ್ದಾರೆ.
Published by:Divya D
First published: