ಸಾಗರದ ಸುಬ್ಬಣ್ಣ ಹೆಗಡೆ ತೋಟದಲ್ಲಿದೆ 100ಕ್ಕೂ ಹೆಚ್ಚು ವಿಧದ ಅಪ್ಪೆ ಮಿಡಿ ಮಾವಿನ ಮರಗಳು!

Shimoga: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ 84 ವರ್ಷದ ಬೇಲೂರಿನ ಸುಬ್ಬಣ್ಣ ಹೆಗಡೆ 100ಕ್ಕೂ ಹೆಚ್ಚು ಜಾತಿಯ ಅಪ್ಪೆ ಮಿಡಿ ಮಾವಿನ ಕಾಯಿಯ ಮರಗಳನ್ನು ಬೆಳೆಸಿದ್ದಾರೆ.

ಸಾಗರದ ಸುಬ್ಬಣ್ಣ ಹೆಗಡೆ

ಸಾಗರದ ಸುಬ್ಬಣ್ಣ ಹೆಗಡೆ

  • Share this:
ಶಿವಮೊಗ್ಗ (ಫೆ. 11): ಮಲೆನಾಡು ಭಾಗದಲ್ಲಿ ಸಿಗುವ ಅಪ್ಪೆಮಿಡಿ ಉಪ್ಪಿನಕಾಯಿಗೆ (ಮಾವಿನಕಾಯಿಯ ಜಾತಿ) ಎಲ್ಲಿಲ್ಲದ ಬೇಡಿಕೆ. ಈ ಅಪ್ಪೆ ಮಿಡಿಗಳಲ್ಲೂ ಸಾಕಷ್ಟು ವಿಧಗಳಿವೆ. ಒಂದೊಂದು ಮಾವಿನ ಮರದ ಕಾಯಿಯದ್ದೂ ಒಂದೊಂದು ರುಚಿ. ಒಂದೊಂದು ಊರಿನಲ್ಲೂ ಒಂದೊಂದು ಅಪ್ಪೆ ಮಾವಿನ ಮಿಡಿಗಳು ಫೇಮಸ್. ಶಿವಮೊಗ್ಗದ ಸಾಗರ, ಹೊಸನಗರ, ಉತ್ತರ ಕನ್ನಡದ ಸಿದ್ಧಾಪುರ, ಶಿರಸಿ, ಹೊನ್ನಾವರ, ಯಲ್ಲಾಪುರ ಮುಂತಾದ ತಾಲೂಕುಗಳಲ್ಲಿ ಉಪ್ಪಿನಕಾಯಿ ಮಾಡುವ ಮಾವಿನ ಕಾಯಿಯ ಫಸಲು ಹೆಚ್ಚು. ಈ ಭಾಗದಲ್ಲಿ ಪ್ರತಿಯೊಬ್ಬರ ಮನೆ ಸುತ್ತಮುತ್ತಲೂ ಸಾಮಾನ್ಯವಾಗಿ ಒಂದಾದರೂ ಅಪ್ಪೆ ಮಿಡಿ ಮಾವಿನ ಮರಗಳು ಇದ್ದೇ ಇರುತ್ತವೆ. ಆದರೆ, ಸಾಗರದ ಕೃಷಿಕರೊಬ್ಬರು ತಮ್ಮ ತೋಟದಲ್ಲಿ ಬರೋಬ್ಬರಿ 100 ಜಾತಿಯ ಅಪ್ಪೆ ಮಿಡಿ ಮಾವಿನ ಮರಗಳನ್ನು ಬೆಳೆಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ 84 ವರ್ಷದ ಬೇಲೂರಿನ ಸುಬ್ಬಣ್ಣ ಹೆಗಡೆ 100ಕ್ಕೂ ಹೆಚ್ಚು ಜಾತಿಯ ಅಪ್ಪೆ ಮಿಡಿ ಮಾವಿನ ಕಾಯಿಯ ಮರಗಳನ್ನು ಬೆಳೆಸಿದ್ದಾರೆ. ಮಾವಿನಕಾಯಿ ಉಪ್ಪಿನಕಾಯಿಗೆ ಬಳಸುವ ಅಪ್ಪೆ ಮಿಡಿಗಳ ತಳಿಯನ್ನು ಸಂರಕ್ಷಿಸುವ ಸಲುವಾಗಿ ತಾವು ಹೋದ ಎಲ್ಲ ಊರುಗಳಲ್ಲಿ ಸಿಗುವ ಅಪ್ಪೆ ಮಿಡಿ ಮಾವಿನ ಗಿಡಗಳನ್ನು ತಂದು ಅವರು ತಮ್ಮ ತೋಟದಲ್ಲಿ ನೆಟ್ಟಿದ್ದಾರೆ.

ಪಶ್ಚಿಮ ಘಟ್ಟದ ಎಲ್ಲ ಮೂಲೆಗಳಲ್ಲೂ ಅಲೆದಾಡಿರುವ ಇವರು 84ರ ಇಳಿ ವಯಸ್ಸಿನಲ್ಲಿಯೂ ಕಾಡು ಸುತ್ತುವುದನ್ನು ಬಿಟ್ಟಿಲ್ಲ. 100ಕ್ಕೂ ಹೆಚ್ಚು ಊರುಗಳಿಗೆ ಹೋಗಿ ಇವರು ಅಪ್ಪೆ ಮಾವಿನ ತಳಿಗಳನ್ನು ತಂದಿದ್ದಾರೆ. ಈ ಅಪ್ಪೆ ಮಾವಿನಕಾಯಿ ಉಪ್ಪಿನ ಕಾಯಿ ಮಾಡಲು ಹೇಳಿ ಮಾಡಿಸಿದ್ದು. ಬೇರೆ ಮಾವಿನಕಾಯಿಗಿಂತಲೂ ಈ ಮಾವಿನಕಾಯಿಯ ಉಪ್ಪಿನಕಾಯಿ ಬಹಳ ರುಚಿಯಾಗಿರುತ್ತದೆ. ಕಾಡುಗಳಲ್ಲೂ ಹೆಚ್ಚಾಗಿರುವ ಅಪ್ಪೆ ಮಿಡಿ ಒಂದೊಂದು ಮರದ ಕಾಯಿ ಒಂದೊಂದು ರುಚಿಯನ್ನು ಹೊಂದಿರುತ್ತದೆ.

ಇದನ್ನೂ ಓದಿ: ರಾಜಸ್ಥಾನದ ಸರ್ಕಾರಿ ಆಸ್ಪತ್ರೆ ಐಸಿಯುನಲ್ಲಿ ನರ್ಸ್​ಗಳ ಡ್ಯಾನ್ಸ್​ ವಿಡಿಯೋ ವೈರಲ್: ಆಸ್ಪತ್ರೆಯಿಂದ ತನಿಖೆಗೆ ಆದೇಶ

ಅಪ್ಪೆ ಮಾವಿನ ತಳಿಗಳ ಸಂಗ್ರಹದ ಬಗ್ಗೆ ಮಾಹಿತಿ ನೀಡುವ ಬೇಲೂರು ಸುಬ್ಬಣ್ಣ ಹೆಗಡೆ, ನಾನು ಕಳೆದ 12 ವರ್ಷಗಳಿಂದ ನನ್ನ ಹೆಂಡತಿಯ ಜೊತೆ ಸಾಗರದ ಸುತ್ತಮುತ್ತಲಿನ ಬಹುತೇಕ ಎಲ್ಲ ಹಳ್ಳಿಗಳಿಗೂ ಹೋಗಿದ್ದೇನೆ. ಅಲ್ಲಿ ಸಿಗುವ ಅಪ್ಪೆ ಮಿಡಿ ಮಾವಿನ ಗಿಡ, ಅಪ್ಪೆ ಮಾವಿನ ಹಣ್ಣುಗಳನ್ನು ತಂದು ತೋಟದಲ್ಲಿ ನೆಟ್ಟಿದ್ದೇನೆ. ನನಗೆ ವಯಸ್ಸಾಗಿದ್ದರಿಂದ ಮರವೇರಲು ಸಾಧ್ಯವಾಗುವುದಿಲ್ಲ. ಹೀಗಾಗಿ, ಬೇರೆಯವರ ಬಳಿ ಮನವಿ ಮಾಡಿ, ಅವರನ್ನು ಮರ ಹತ್ತಿಸಬೇಕಾಗುತ್ತದೆ. ಹೀಗೆ ಬೇರೆಯವರ ಮನೆಯ ಮಾವಿನ ಮರಗಳಿಂದ ಮಾವಿನ ಮಿಡಿಗಳನ್ನು ತಂದು ನನ್ನ ಹೆಂಡತಿ ಉಪ್ಪಿನಕಾಯಿ ಮಾಡುತ್ತಿದ್ದಳು. ಆ ಉಪ್ಪಿನಕಾಯಿ ಚೆನ್ನಾಗಾದರೆ ಮತ್ತೆ ಅವರ ಮನೆಗೆ ಹೋಗಿ ಆ ಮರದ ಗಿಡಗಳನ್ನು ತರುತ್ತಿದ್ದೆವು ಎಂದು ಹೇಳಿದ್ದಾರೆ.

ಸುಬ್ಬಣ್ಣ ಹೆಗಡೆಯವರ ತೋಟ ತೀರಾ ದೊಡ್ಡದಾಗೇನೂ ಇಲ್ಲ. ನೂರಾರು ಮಾವಿನ ಗಿಡಗಳನ್ನು ನೆಡುವುದಕ್ಕೆ ಬೇಕಾದಷ್ಟು ಜಾಗವೂ ಅಲ್ಲಿಲ್ಲ. ಅದಕ್ಕಾಗಿ ತಮ್ಮ 1 ಎಕರೆ ಜಾಗದ ಸುತ್ತ ತಾವೇ ಒಂದು ಪಾರ್ಕ್ ಮಾಡಿರುವ ಸುಬ್ಬಣ್ಣ ಅಲ್ಲಿ ಅಪ್ಪೆ ಮಿಡಿ ಮಾವಿನ ಗಿಡಗಳನ್ನು ಮಾತ್ರ ಬೆಳೆಸಿದ್ದಾರೆ.

ನಾನು ಬಾಲ್ಯದಿಂದಲೂ ನಮ್ಮ ಮಲೆನಾಡಿನ ಪ್ರಸಿದ್ಧ ಅಪ್ಪೆ ಮಿಡಿ ಉಪ್ಪಿನಕಾಯಿಗಳನ್ನು ತಿಂದುಕೊಂಡೇ ಬೆಳೆದವನು. ಆದರೆ, ಉಪ್ಪಿನಕಾಯಿ ಮಾಲು ಯೋಗ್ಯವಾದ ಎಷ್ಟೋ ಜಾತಿಯ ಅಪ್ಪೆಮಿಡಿಗಳ ಮರಗಳು ಈಗ ನಶಿಸುತ್ತಿವೆ. ಹೀಗಾಗಿ, ಮುಂದಿನ ಪೀಳಿಗೆಗೂ ನಮ್ಮ ಅಪ್ಪೆ ಮಿಡಿಗಳನ್ನು ಪರಿಚಯಿಸಬೇಕು ಮತ್ತು ಉಳಿಸಬೇಕೆಂಬ ಕಾರಣಕ್ಕೆ ಆ ಮಾವಿನ ಮರಗಳದ್ದೇ ಪಾರ್ಕ್ ನಿರ್ಮಿಸಿದ್ದೇವೆ ಎಂದು ಸುಬ್ಬಣ್ಣ ಹೆಗಡೆ ತಿಳಿಸಿದ್ದಾರೆ ಎಂದು ದಿ ಹಿಂದೂ ಪತ್ರಿಕೆ ವರದಿ ಮಾಡಿದೆ.

ಸುಬ್ಬಣ್ಣ ಹೆಗಡೆ ಅವರ ಮಾವಿನ ಮರದ ತೋಪಿನಲ್ಲಿ ದೊಂಬೆಸರ ಜೀರಿಗೆ ಅಪ್ಪೆ, ಗೆಣಸಿನಕುಡಿ ಜೀರಿಗೆ ಅಪ್ಪೆ, ಚೀನಿತೋಟ ಜೀರಿಗೆ ಅಪ್ಪೆ, ಬಾಗಿ ಜೀರಿಗೆ, ಬರಿಗೆ ಜೀರಿಗೆ ಸೇರಿದಂತೆ 10 ಅತಿ ಅಪರೂಪದ ಅಪ್ಪೆ ಮಿಡಿಗಳ ಮರಗಳಿವೆ. ಅಪರೂಪದ ಮಾವಿನ ತಳಿಗಳನ್ನು ಸಂರಕ್ಷಿಸುತ್ತಿರುವ ಸುಬ್ಬಣ್ಣ ಹೆಗಡೆ ಅವರ ಕಾರ್ಯವನ್ನು ಮೆಚ್ಚಿ ಹೆಸರಘಟ್ಟದಲ್ಲಿ ಡನೆದ ರಾಷ್ಟ್ರೀಯ ತೋಟಗಾರಿಕಾ ಉತ್ಸವದಲ್ಲಿ ಅವರನ್ನು ಸನ್ಮಾನಿಸಿ, ಗೌರವಿಸಲಾಗಿದೆ.
Published by:Sushma Chakre
First published: