ಬೆಂಗಳೂರು (ಡಿ.6): ಮದುವೆಯಾಗಬೇಕೆಂದುಕೊಂಡಿದ್ದರೂ ಅನೇಕರಿಗೆ ಕಂಕಣಭಾಗ್ಯ ಕೂಡಿ ಬಂದಿರುವುದಿಲ್ಲ. ಇಂಥ ಸಂದರ್ಭಗಳಲ್ಲಿ ವಿವಾಹವಾಗಲೇಬೇಕು ಎನ್ನುವ ಛಲಕ್ಕೆ ಬೀಳುವ ಕೆಲವರು ಮೋಸ ಹೋಗುತ್ತಾರೆ. ಬೆಂಗಳೂರಿನಲ್ಲೂ ಇದೇ ರೀತಿ ಆಗಿದೆ. ವರ್ಷ 42 ತುಂಬಿದ್ದರೂ ಮದುವೆಯಾಗಿಲ್ಲ ಎನ್ನುವ ಕೊರಗಿನಲ್ಲಿದ್ದ ಶಿವಮೊಗ್ಗ ಅರ್ಚಕರು ಯುವತಿಯೊಬ್ಬಳನ್ನು ಮದುವೆಯಾಗಿದ್ದಾರೆ. ಮದುವೆ ನಂತರ ಈ ಅರ್ಚಕ ಬರೋಬ್ಬರಿ 11 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ಶಿವಮೊಗ್ಗದ ಜಿ ಭಟ್ ಎಂಬುವವರು ಮೋಸ ಹೋದವರು. ಇವರಿಗೆ ವಯಸ್ಸು 42 ಆದರೂ ಯಾರೊಬ್ಬರೂ ಕನ್ಯಾದಾನ ಮಾಡಲು ಮುಂದೆ ಬಂದಿರಲಿಲ್ಲ. ಅನೇಕ ಬ್ರೋಕರ್ಗಳನ್ನು ಇವರು ಸಂಪರ್ಕ ಮಾಡಿದ್ದರೂ ಮದುವೆಯಾಗಲು ಹೆಣ್ಣು ಸಿಕ್ಕಿರಲೇ ಇಲ್ಲ. ಕೊನೆಗೆ, ಗಣೇಶ್ ಬಿ ಎನ್ನುವ ಬ್ರೋಕರ್ ಮದುವೆ ಮಾಡಿಸಲು ಮುಂದೆ ಬಂದಿದ್ದ.
“ನಯನ ಕುಮಾರಿ ಎನ್ನುವ ಅನಾಥೆಯನ್ನು ಬೆಳೆಸಿ ದೊಡ್ಡವಳನ್ನಾಗಿ ಮಾಡಿದ್ದೇನೆ. ಆಕೆಗೆ ಇನ್ನೂ 27 ವರ್ಷ. ನನ್ನದೇ ಮನೆಯಲ್ಲಿ ಆಕೆ ಬೆಳೆದಿದ್ದಾಳೆ. ನಾನು, ಶ್ರೀಕಾಂತ್ ಐತಾಳ್, ಅಚ್ಯುತ್ ಹೆಬ್ಬಾರ್ ಹೆಸರಿನ ಬ್ರೋಕರ್ ಜೊತೆಗೂಡಿ ನಿನಗೆ ಮುದವೆ ಮಾಡಿಸುತ್ತೇವೆ. ಇದಕ್ಕಾಗಿ ಮೂರು ಲಕ್ಷ ರೂಪಾಯಿ ನೀಡಬೇಕು,” ಎಂದಿದ್ದರು ಬ್ರೋಕರ್ ಗಣೇಶ್.
ಇದನ್ನೂ ಓದಿ: ಪಶುವೈದ್ಯೆ ಅತ್ಯಾಚಾರಿಗಳನ್ನು ಎನ್ಕೌಂಟರ್ ಮಾಡಿದ ಪೊಲೀಸ್ ಅಧಿಕಾರಿ ಹುಬ್ಬಳಿ ಮೂಲದವರು!
ಕುಂದಾಪುರದ ದೇವಾಲಯದಲ್ಲಿ ಜಿ ಭಟ್ ನಯನಾಳನ್ನು ವಿವಾಹವಾಗಿದ್ದರು. ಮದುವೆಯಾದ ಒಂದು ವಾರದಲ್ಲಿ ಈ ಜೋಡಿ ಬೆಂಗಳೂರಿಗೆ ಆಗಮಿಸಿತ್ತು. ಮದುವೆಯಾದ ಒಂದು ತಿಂಗಳಲ್ಲಿ ನಯನಾ ಭಾರೀ ಬದಲಾಗಿದ್ದಳು. ‘ನನಗೆ ಕಿರಿಕಿರಿ ಉಂಟಾಗುತ್ತಿದೆ. ಒಂದಷ್ಟು ದಿನ ಏಕಾಂತ ಬೇಕೆಂದು,’ ಆಕೆ ಮನೆ ಬಿಟ್ಟು ತೆರಳಿದ್ದಳು. ಈ ವೇಳೆ ನಯನಾ 8 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಹೊತ್ತೊಯ್ದಿದ್ದಳು.
ಪ್ರಕರಣಕ್ಕೆ ಸಂಬಂಧಿಸಿ ಜಿ ಭಟ್ ದೂರು ನೀಡಿದ್ದು, ಶ್ರೀಕಾಂತ್ ಐತಾಳ್ನನ್ನು ಬಂಧಿಸಲಾಗಿದೆ. ಈ ವೇಳೆ ನಯನಾಗೆ ಈ ಮೊದಲು ಎರಡು ಬಾರಿ ಮದುವೆಯಾಗಿತ್ತು ಎನ್ನು ವಿಚಾರ ಹೇಳಿಕೊಂಡಿದ್ದಾನೆ. ಬ್ರೋಕರ್ ಗಣೇಶ್ ಈ ಮೊದಲು ಅನೇಕ ಬಾರಿ ಇದೇ ರೀತಿ ಮಾಡಿದ್ದ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ