ಬೆಂಗಳೂರು: ರಾಜ್ಯಾದ್ಯಂತ ತೀವ್ರ ಸಂಚಲನಕ್ಕೆ ಕಾರಣವಾಗಿದ್ದ ಶಿವಮೊಗ್ಗದ (Shivamogga) ಬಜರಂಗದಳ ಕಾರ್ಯಕರ್ತ (Bajarangadal) ಹರ್ಷ ಹತ್ಯೆ ಕೇಸ್ (Harsha Murder Case) ಬಗ್ಗೆ ನಿಮ್ಮೆಲ್ಲರಿಗೂ ಗೊತ್ತೇ ಇದೆ. ಇದೀಗ ಹತ್ಯೆ ಕೇಸ್ ಆರೋಪಿಗಳು (Accused) ಏನ್ ಮಾಡ್ತಿದ್ದಾರೆ. ಜೈಲಿನಲ್ಲಿ (Jail) ಮುದ್ದೆ ಮುರಿಯುತ್ತಾ ಇರಬಹುದು ಅಂತ ನೀವ್ ಅಂದುಕೊಂಡರೆ ಅದು ನಿಮ್ಮ ತಪ್ಪು. ಯಾಕೆಂದ್ರೆ ಪರಪ್ಪನ ಅಗ್ರಹಾರ ಜೈಲು (Parappana Agrahara) ಸೇರಿರುವ ಆರೋಪಿಗಳು ಜೈಲಲ್ಲೇ ಟಿಕ್ ಟಾಕ್ (TikTok) ಮಾಡುತ್ತಾ, ಜೈಲಿನಿಂದಲೇ ಮನೆಯವರಿಗೆ ವಿಡಿಯೋ ಕಾಲ್ (Video Call) ಮಾಡುತ್ತಾ ಹಾಯಾಗಿದ್ದಾರಂತೆ! ಹೌದು, ಇಂಥದ್ದೊಂದು ಸ್ಫೋಟಕ ಮಾಹಿತಿ ಇದೀಗ ಬಹಿರಂಗವಾಗಿದೆ. ಹಂತಕರ ಟಿಕ್ ಟಾಕ್ ವಿಡಿಯೋ ನೋಡಿ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು (Police) ಎರಡು ದಿನದ ಹಿಂದೆ ದೂರು ದಾಖಲಿಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಪೊಲೀಸರು ದಾಳಿ ಮಾಡಿದ್ರು.
ಹರ್ಷ ಹತ್ಯೆ ಆರೋಪಿಗಳಿಗೆ ಜೈಲಲ್ಲಿ ರಾಜಾತಿಥ್ಯ?
ಶಿವಮೊಗ್ಗದ ಹರ್ಷ ಕೊಲೆ ಪ್ರಕರಣದಲ್ಲಿ ಆರೋಪಿಗಳಾದ ಮಹಮ್ಮದ್ ಖಾಸಿಪ್, ಸಯ್ಯದ್ ನದೀಮ್, ಸೈಯದ್ ಫಾರೂಕ್, ರಿಹಾನ್ ಷರೀಪ್, ಆಸಿಪ್ ಉಲ್ಲಾ ಖಾನ್, ಅಬ್ದುಲ್ ಅಪಾನ್, ಮಹಮ್ಮದ್ ಇರ್ಪಾನ್, ಸಹೀದ್ ಉಲ್ಲಾ ಸಾರ್ಪಿ, ವಾಸಿಮ್ ಖಾನ್, ನಿಹಾರ್, ಮಗ್ದುಬ್ ಎಂಬುವರು ಈಗಾಗಲೇ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದಾರೆ. ಇದೀಗ ಅವರಿಗೆ ಅಲ್ಲಿ ರಾಜಾತಿಥ್ಯ ಸಿಗುತ್ತಿರುವ ಶಂಕೆ ವ್ಯಕ್ತವಾಗಿದೆ.
ಜೈಲಿನಲ್ಲೇ ಟಿಕ್ ಟಾಕ್, ಮನೆಯವರೊಂದಿಗೆ ವಿಡಿಯೋ ಕಾಲ್
ಪರಪ್ಪನ ಅಗ್ರಹಾರ ಜೈಲು ಸೇರಿರುವ ಆರೋಪಿಗಳು ಜೈಲಿಂದಲೇ ಟಿಕ್ ಟಾಕ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಐಷಾರಾಮಿ ಆಟ ಆಡುತ್ತಿದ್ದಾರಾ ಎನ್ನುವ ಪ್ರಶ್ನೆ ಇದೀಗ ಎದ್ದಿದೆ. ಜೈಲಿಂದಲೇ ಮನೆಯವರೊಂದಿಗೆ ವಿಡಿಯೋ ಕಾಲ್ ಮಾಡಿ ಕೂಡ ಮಾತನಾಡುತ್ತಾರೆ ಎನ್ನಲಾಗಿದೆ.
ಇದನ್ನೂ ಓದಿ: PSI ನೇಮಕಾತಿ ಅಕ್ರಮ ಪ್ರಕರಣ; IPS ಅಧಿಕಾರಿ ಅಮೃತ್ ಪೌಲ್ ಬಂಧನ
ಜೈಲಿನ ಮೇಲೆ ದಾಳಿ ನಡೆದ ವೇಳೆ ಸ್ಫೋಟಕ ವಿಚಾರ ಬೆಳಕಿಗೆ
ಟಿಕ್ ಟಾಕ್ ವಿಡಿಯೋ ನೋಡಿ ಪರಪ್ಪನ ಅಗ್ರಹಾರ ಪೊಲೀಸರು ಎರಡು ದಿನದ ಹಿಂದೆ ದೂರು ದಾಖಲಿಸಿಕೊಂಡಿದ್ದರು. ಈ ದೂರಿನ ಅನ್ವಯ ನಿನ್ನೆ ಪರಪ್ಪನ ಅಗ್ರಹಾರ ಜೈಲಿನ ಮೇಲೆ ಪೊಲೀಸರು ದಾಳಿ ಮಾಡಿದ್ರು. ಟವರ್ ಒಂದರ ವ್ಯಾಪ್ತಿಯಲ್ಲಿರುವ ಬ್ಯಾರಕ್ 8ರ ಮೇಲೆ ಏಕಾಏಕಿ ದಾಳಿ ಮಾಡಿದ್ರು. ಬ್ಯಾರಕ್ ಎಂಟರ 2 ಮತ್ತು 4ನೇ ಕೊಠಡಿ ಮೇಲೆ ದಾಳಿ ಮಾಡಿ ತಪಾಸಣೆ ಮಾಡಿದ್ದ ಪೊಲೀಸರಿಗೆ ಅಲ್ಲಿ ಅಕ್ರಮ ನಡೆದಿರೋದು ಗೊತ್ತಾಗಿದೆ.
ರಂಜಾನ್ ಹಬ್ಬಕ್ಕೆ ಜೈಲಿನಿಂದಲೇ ವಿಡಿಯೋ ಕಾಲ್
ಜೈಲಿನಲ್ಲಿರುವ ಹತ್ಯೆ ಆರೋಪಿಗಳು ರಂಜಾನ್ ಹಬ್ಬದಂದು ಟಿಕ್ ಟಾಕ್ ಮಾಡಿ ಸ್ನೇಹಿತರಿಗೆ ಶುಭಾಶಯದ ವಿಡಿಯೋ ಕಳಿಸಿದ್ದಾರೆ ಎನ್ನಲಾಗಿದೆ. ಜೊತೆಗೆ ವಿಡಿಯೋ ಕಾಲ್ ಮೂಲಕ ಸ್ನೇಹಿತರಿಗೆ ಹಾಗೂ ಕುಟುಂಬಸ್ಥರ ಜೊತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ವಿಚಾರಣಾಧೀನ ಕೈದಿಯಿಂದ ಮೊಬೈಲ್ ಪಡೆದಿದ್ದ ಆರೋಪಿಗಳು
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗ್ರಹದಲ್ಲಿದ್ದ ವಿಚಾರಣಾಧೀನ ಕೈದಿ ಮೊಬೈಲ್ ನೀಡಿದ್ದ ಎನ್ನಲಾಗುತ್ತಿದೆ. ವಿಚಾರಣಾಧೀನ ಕೈದಿ ನಿಹಾರ್ ಅಲಿಯಾಸ್ ವಾಲಿಬಾ ಎಂಬಾತ ಮೊಬೈಲ್ ನೀಡಿದ್ದ ಎಂದು ತಿಳಿದು ಬಂದಿದೆ. ಇದೀಗ ಈ ಎಲ್ಲಾ ಆರೋಪದಡಿ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಒಟ್ಟು 11 ಜನರ ಮೇಲೆ ಕೇಸು ದಾಖಲಿಸಿದ್ಗಾರೆ.
ಇದನ್ನೂ ಓದಿ: Heavy Rain: ದಕ್ಷಿಣ ಕನ್ನಡದ ಹಲವೆಡೆ ಭಾರೀ ಮಳೆ, ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ ಮುಳುಗಡೆ
ಹರ್ಷ ಕುಟುಂಬಸ್ಥರ ಆಕ್ರೋಶ
ಇನ್ನು ಹಂತಕರಿಗೆ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿದೆ ಎಂಬ ವಿಚಾರಕ್ಕೆ ಶಿವಮೊಗ್ಗದ ಹರ್ಷ ಕುಟುಂಬಸ್ಥರು ಪ್ರತಿಕ್ರಿಯೆ ನೀಡಿದ್ದಾರೆ. ಜೈಲಿನಲ್ಲಿ ಇಂತಹ ಆತಿಥ್ಯ ಸಿಗುತ್ತಿರುವುದರಿಂದ ಇಂತಹ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲದಂತಾಗಿದೆ. ಈ ಕೂಡಲೇ ಜೈಲು ಅಧಿಕಾರಿಗಳ ಅಮಾನತು ಗೊಳಿಸಬೇಕು ಅಂತ ಆಗ್ರಹಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ