Shivamogga Blast: ಶಿವಮೊಗ್ಗ ಡೈನಮೈಟ್ ಸ್ಫೋಟ - ಕ್ರಷರ್ ಮಾಲೀಕ ಸೇರಿ ಮೂವರ ಬಂಧನ

ಶಿವಮೊಗ್ಗದಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಬೃಹತ್ ಜಿಲೆಟಿನ್ ಸ್ಫೋಟ ಘಟನೆ ಸಂಬಂಧ ಎಸ್ ಎಸ್ ಸ್ಟೋನ್ ಕ್ರಷರ್​ನ ಮಾಲೀಕ ಸುಧಾಕರ್, ಕ್ವಾರಿ ಜಮೀನು ಮಾಲೀಕ ಕುಲಕರ್ಣಿ ಸೇರಿ ಮೂವರನ್ನ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಜಿಲಟಿನ್ ಸ್ಫೋಟದಲ್ಲಿ ಛಿದ್ರಗೊಂಡ ಲಾರಿ

ಜಿಲಟಿನ್ ಸ್ಫೋಟದಲ್ಲಿ ಛಿದ್ರಗೊಂಡ ಲಾರಿ

  • Share this:
ಶಿವಮೊಗ್ಗ(ಜ. 22): ಇಲ್ಲಿಯ ಅಬ್ಬಲಗೆರೆ ಹುಣಸೋಡು ಬಳಿ ನಿನ್ನೆ ರಾತ್ರಿ ಸಂಭವಿಸಿದ ಭೀಕರ ಡೈನಮೈಟ್ ಸ್ಫೋಟದಲ್ಲಿ 15ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಈ ಘಟನೆ ಸಂಬಂಧ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕಲ್ಲು ಕ್ವಾರಿ ನಡೆಸುತ್ತಿದ್ದ ಎಸ್ ಎಸ್ ಸ್ಟೋನ್ ಕ್ರಷರ್ ಮಾಲೀಕ ಸುಧಾಕರ್, ಕ್ರಷರ್​ನ ಪಾಲುದಾರ ನರಸಿಂಹ ಹಾಗೂ ಕ್ವಾರಿ ಜಮೀನು ಮಾಲೀಕ ಅವಿನಾಶ್ ಕುಲಕರ್ಣಿ ಅವರನ್ನ ಬಂಧಿಸಲಾಗಿದೆ. ಅಷ್ಟು ದೊಡ್ಡ ಪ್ರಮಾಣದಲ್ಲಿ ಜಿಲೆಟಿನ್ ಕಡ್ಡಿಗಳನ್ನ ಹೇಗೆ ತರಲಾಯಿತು ಇತ್ಯಾದಿ ಬಗ್ಗೆ ಅವರಿಂದ ಮಾಹಿತಿ ಕಲೆಹಾಕಲಾಗುತ್ತಿದೆ.

ಎಸ್ ಎಸ್ ಸ್ಟೋನ್ ಕ್ರಷರ್ ಕಳೆದ 2019 ಏಪ್ರಿಲ್ 12ರಿಂದ 2024ರ ವರ್ಷದವರೆಗೂ ಪರವಾನಗಿ ಇದೆ ಎನ್ನಲಾಗುತ್ತಿದೆ. ಆದರೆ, ಸ್ಫೋಟಗೊಂಡ ಲಾರಿಯಲ್ಲಿ 50 ಬಾಕ್ಸ್​ಗಳಷ್ಟು ಜಿಲೆಟಿನ್ ಕಡ್ಡಿಗಳಿದ್ದವು ಎನ್ನಲಾಗುತ್ತಿದೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಡೈನಮೈಟ್​ಗಳನ್ನ ಯಾಕೆ ತರಿಸಲಾಗಿತ್ತು ಎಂಬಿತ್ಯಾದಿ ಪ್ರಶ್ನೆಗಳಿಗೆ ಬಂಧಿತರಿಂದ ಮಾಹಿತಿ ಪಡೆಯಲಾಗುತ್ತಿದೆ. 21 ಎಕರೆ 16 ಗುಂಟೆ ಜಾಗದಲ್ಲಿ ಜಲ್ಲಿ ಕ್ರಶರ್ ನಡೆಸಲಾಗುತ್ತಿದೆ. ಅದರಲ್ಲಿ 5 ಎಕರೆಗೆ ಸಿ ಫಾರಂ ಸಿಕ್ಕಿದೆ. ಈ 5 ಎಕರೆ ಜಾಗದಲ್ಲಿ ಕ್ರಶಿಂಗ್ ನಡೆಯುತ್ತಿತ್ತು.

ನಿನ್ನೆ ಸಂಭವಿಸಿದ ಸ್ಫೋಟದ ರಭಸದಕ್ಕೆ ಸುತ್ತಲಿನ ಮೂರ್ನಾಲ್ಕು ಜಿಲ್ಲೆಗಳಲ್ಲಿ ಕಂಪನದ ಅನುಭವವಾಗಿದೆ. ಶಿವಮೊಗ್ಗ ಅಲ್ಲದೆ, ದಾವಣಗೆರೆ, ಉತ್ತರ ಕನ್ನಡ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭೂಮಿ ಕಂಪಿಸಿರುವುದು ತಿಳಿದುಬಂದಿದೆ.

ಇದನ್ನೂ ಓದಿ: Shivamogga Blast - ಶಿವಮೊಗ್ಗ ಡೈನಮೈಟ್ ಸ್ಫೋಟ; ಪ್ರಧಾನಿಯಿಂದ ಸಂತಾಪ

ಬೆಂಗಳೂರಿನಿಂದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ತಜ್ಞರು ಶಿವಮೊಗ್ಗಕ್ಕೆ ತೆರಳಿದ್ದಾರೆ. ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ಧಾರೆ. ಮೃತ ದೇಹಗಳನ್ನ ಗುರುತಿಸುವ ಕೆಲಸ, ಸ್ಫೋಟಕ ಇತ್ಯಾದಿ ಮಾಹಿತಿಯನ್ನ ಕಲೆಹಾಕಲಾಗುತ್ತಿದೆ.

ವರದಿ: ಹೆಚ್ ಆರ್ ನಾಗರಾಜ
Published by:Vijayasarthy SN
First published: