HOME » NEWS » State » SHIVAMOGGA BLAST SIDDARAMAIAH SAYS BS YEDIYURAPPA IS THE RESPONSIBLE FOR SHIMOGA HUNASODU BLAST SCT

ಹುಣಸೋಡು ಸ್ಫೋಟ ಪ್ರಕರಣ; ಹೈಕೋರ್ಟ್​ ನ್ಯಾಯಮೂರ್ತಿಗಳಿಂದ ತನಿಖೆಗೆ ಸಿದ್ದರಾಮಯ್ಯ ಒತ್ತಾಯ

Shimoga Blast: ಸಿಎಂ ತವರು ಜಿಲ್ಲೆಯಲ್ಲೇ ಈ ರೀತಿಯ ದುರ್ಘಟನೆ ನಡೆದಿದೆ ಎಂದರೆ ಅದು ಆಡಳಿತದ ವೈಫಲ್ಯ. ಹುಣಸೋಡು ಸ್ಫೋಟದ ಬಗ್ಗೆ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವ ಕೆ.ಎಸ್. ಈಶ್ವರಪ್ಪ ಇದರ ಹೊಣೆ ಹೊರಬೇಕು ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

news18-kannada
Updated:January 23, 2021, 3:12 PM IST
ಹುಣಸೋಡು ಸ್ಫೋಟ ಪ್ರಕರಣ; ಹೈಕೋರ್ಟ್​ ನ್ಯಾಯಮೂರ್ತಿಗಳಿಂದ ತನಿಖೆಗೆ ಸಿದ್ದರಾಮಯ್ಯ ಒತ್ತಾಯ
ಸಿದ್ದರಾಮಯ್ಯ
  • Share this:
ಬೆಂಗಳೂರು (ಜ. 23): ಶಿವಮೊಗ್ಗದ ಹುಣಸೋಡು ಬಳಿ ಗುರುವಾರ ರಾತ್ರಿ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ. ಸಿಎಂ ಯಡಿಯೂರಪ್ಪನವರ ತವರು ಜಿಲ್ಲೆಯಲ್ಲೇ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಅದರ ಬಗ್ಗೆ ನಿರ್ಲಕ್ಷ್ಯ ತಳೆಯಲಾಗಿದೆ. ಅದರಿಂದಲೇ ಈ ಸ್ಪೋಟ ಸಂಭವಿಸಿದೆ. ಸಿಎಂ ತವರು ಜಿಲ್ಲೆಯಲ್ಲೇ ಈ ರೀತಿಯ ದುರ್ಘಟನೆ ನಡೆದಿದೆ ಎಂದರೆ ಅದು ಆಡಳಿತದ ವೈಫಲ್ಯ. ಹುಣಸೋಡು ಸ್ಫೋಟದ ಬಗ್ಗೆ ಹೈಕೋರ್ಟ್ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವ ಕೆ.ಎಸ್. ಈಶ್ವರಪ್ಪ ಇದರ ಹೊಣೆ ಹೊರಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಕ್ರಮ ಗಣಿಗಾರಿಕೆ ಮಾಡುತ್ತಿರುವವರು ಸಕ್ರಮವಾಗಿ ಮಾಡಿ ಎಂಬ ಯಡಿಯೂರಪ್ಪನವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ರಾಜ್ಯದ ಮುಖ್ಯಮಂತ್ರಿಯಾಗಿ ಅವರು ಈ ರೀತಿಯ ಹೇಳಿಕೆಯನ್ನು ನೀಡಬಾರದು. ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಇದರಲ್ಲಿ ಶಾಮೀಲಾಗಿದ್ದಾರೆ ಎಂಬುದು ಇದರರ್ಥ. ಶಿವಮೊಗ್ಗ ಸ್ಫೋಟ ನಡೆದ ಸ್ಥಳಕ್ಕೆ ಜ. 27ಕ್ಕೆ ನಾನು ತೆರಳಲಿದ್ದೇನೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಹುಣಸೋಡಿನಲ್ಲಿ ಕ್ರಷರ್ ನಡೆಯುತ್ತಿದೆ. ಅಲ್ಲಿ ಉಂಟಾದ ಸ್ಫೋಟದಿಂದ 6 ಮಂದಿ ಸಾವನ್ನಪ್ಪಿದ್ದಾರೆ. ಇದು ದೊಡ್ಡ ದುರಂತ. ನನಗಿರೋ ಮಾಹಿತಿ ಪ್ರಕಾರ ಆಂಧ್ರಪ್ರದೇಶದಿಂದ ಹುಣಸೋಡಿಗೆ ಡೈನಮೈಟ್ ತಂದಿದ್ದಾರೆ. ಅದನ್ನು ತರುವ ಮೊದಲು ಯಾರಿಂದಲೂ ಅನುಮತಿ ಪಡೆದಿಲ್ಲ. ಇದು ಮೊದಲ ಅಪರಾಧ. ತಂದ ಡೈನಮೈಟ್​ ಅನ್ನು ಸುರಕ್ಷಿತ ಜಾಗದಲ್ಲಿ ಇಡದೇ ಇರೋದು ಎರಡನೇ ಅಪರಾಧ. ಇದರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ಎದ್ದು ಕಾಣುತ್ತಿದೆ ಎಂದು ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

ಇದನ್ನೂ ಓದಿ: Shivamogga Blast - ಶಿವಮೊಗ್ಗ ಸ್ಫೋಟ: ಘಟನೆಯಲ್ಲಿ ಹಲವು ಅನುಮಾನಾಸ್ಪದ ಸಂಗತಿ; ಉತ್ತರ ಸಿಗದ ಪ್ರಶ್ನೆಗಳು

ಸಿಎಂ ಯಡಿಯೂರಪ್ಪ ತಮ್ಮ ಜಿಲ್ಲೆಯಲ್ಲಿ ನಡೆಯುತ್ತಿರುವುದು ಸಕ್ರಮ ಗಣಿಗಾರಿಕೆ ಎನ್ನುತ್ತಾರೆ. ಆದರೆ, ಅವರದೇ ಪಕ್ಷದ ಎಂಎಲ್​ಸಿ ಆಯನೂರು ಮಂಜುನಾಥ್ ಶಿವಮೊಗ್ಗದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎನ್ನುತ್ತಿದ್ದಾರೆ. ಶಿವಮೊಗ್ಗದಲ್ಲಿ 100ಕ್ಕೂ ಹೆಚ್ಚು ಕಡೆ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಕೆಡಿಪಿ ಸಭೆಯಲ್ಲಿ ಗಣಿ ಅಧಿಕಾರಿಗಳಿಗೆ ನಿಮ್ಮ ಮತ್ತು ನಿಮ್ಮ ಊರಿನ ಒಳ್ಳೆಯದಕ್ಕೆ ಕಣ್ಣುಮುಚ್ಚಿಕೊಂಡಿರಿ ಎಂದು ಸಚಿವ ಕೆಎಸ್​ ಈಶ್ವರಪ್ಪ ಹೇಳಿದ್ದಾರೆ. ಅದರ ವರದಿ ಪತ್ರಿಕೆಯಲ್ಲಿ ಬಂದಿದೆ. ಸಚಿವರು ಮತ್ತು ಜನಪ್ರತಿನಿಧಿಗಳೇ ಈ ರೀತಿ ಹೇಳಿದರೆ ಅಧಿಕಾರಿಗಳು ಬೇಜಾವಾಬ್ದಾರಿಯಿಂದ ಇರದೇ ಏನು ಮಾಡುತ್ತಾರೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯಲ್ಲಿ ಎಲ್ಲ ಗಣಿಗಳು ಸಕ್ರಮವಾಗಿದೆ ಎಂದು ಯಡಿಯೂರಪ್ಪ ಹೇಳುತ್ತಾರೆ. ಆದರೆ, ಬಿಜೆಪಿ ಎಂಎಲ್​ಸಿ ಆಯನೂರು‌ ಮಂಜುನಾಥ್ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎನ್ನುತ್ತಾರೆ. ಹುಣಸೋಡಿನ ಸ್ಫೋಟ ಕ್ರಶರ್ ನಡೆಸುವವರ ನಿರ್ಲಕ್ಷ್ಯದಿಂದ ಆಗಿದೆ. ಇದು ಬಹಳ‌ ಗಂಭೀರ ವಿಚಾರ. ಈ ಘಟನೆ ಕುರಿತು ಕೆಎಸ್​ ಈಶ್ವರಪ್ಪ ಹಾಗೂ ಆಯನೂರು ಮಂಜುನಾಥ್ ಹೇಳಿಕೆ ಬಗ್ಗೆ ಸತ್ಯ ಗೊತ್ತಾಗಬೇಕು. ಘಟನೆಯಲ್ಲಿ ಸಾವನ್ನಪ್ಪಿದ 6 ಜನರಿಗೆ ನ್ಯಾಯಯುತ ಪರಿಹಾರ ಕೊಡಬೇಕು. ಕೇವಲ 5 ಲಕ್ಷ ರೂ. ಮಾತ್ರವಲ್ಲ, ಅವರ ಕುಟುಂಬದವರಿಗೆ ಉದ್ಯೋಗ ಕೊಡಬೇಕು. ಹುಣಸೋಡು ಸ್ಫೋಟದ ಬಗ್ಗೆ ಹೈಕೋರ್ಟ್ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಇದಿಷ್ಟೇ ಅಲ್ಲದೆ, ರಾಜ್ಯದಲ್ಲಿ ಎಲ್ಲೆಲ್ಲಿ ಅಕ್ರಮ ಗಣಿಗಾರಿಕೆ ಎಲ್ಲೆಲ್ಲಿ ನಡೆಯುತ್ತಿದೆಯೋ ಅದೆಲ್ಲವೂ ಕ್ಯಾನ್ಸಲ್ ಆಗಬೇಕು. ಅದು ಯಾವುದೇ ಪಕ್ಷಕ್ಕೆ ಸೇರಿದ್ದರೂ ಅದನ್ನು ಕ್ಯಾನ್ಸಲ್ ಮಾಡಬೇಕು. ಅಕ್ರಮ ಗಣಿಗಾರಿಕೆ ಮಾಡುವವರ ವಿರುದ್ಧ ಸರ್ಕಾರ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಿ. ಒಂದೊಂದು ಪಕ್ಷಕ್ಕೆ ಒಂದೊಂದು ಕಾನೂನು ಎಂದು ಎಲ್ಲೂ ಇರುವುದಿಲ್ಲ. ಮೂರೂ ಪಕ್ಷದಲ್ಲಿ ಯಾರದ್ದೇ ಅಕ್ರಮ ಗಣಿಗಾರಿಕೆ ಇದ್ದರೂ ಅದನ್ನು ಸರ್ಕಾರ ರದ್ದು ಮಾಡಲಿ. ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
Published by: Sushma Chakre
First published: January 23, 2021, 3:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories