news18-kannada Updated:September 19, 2020, 12:42 PM IST
ಮೋದಿ ಮೂರ್ತಿ
ಶಿವಮೊಗ್ಗ (ಸೆಪ್ಟೆಂಬರ್ 19): ಬೆಳ್ಳಿಯಲ್ಲಿ ತಯಾರಿಸಿರುವ ಅತಿ ಚಿಕ್ಕ ಫ್ಯಾನ್, ವರ್ಲ್ಡ್ ಕಪ್ ಕ್ರಿಕೆಟ್ ಸಂದರ್ಭದಲ್ಲಿ ತಯಾರಿಸಿದ ಅತಿ ಚಿಕ್ಕ ಬಂಗಾರದ ವಿಶ್ವ ಕಪ್, ರಂಜಾನ್ ಸಂದರ್ಭದಲ್ಲಿ ರಚಿಸಿದ ಮೆಕ್ಕಾ ಮದೀನಾ, ಇದರ ಜೊತೆಗೆ ಕ್ರಿಸ್ ಮಸ್ ಹಬ್ಬಕ್ಕೆ ಕಲಾವಿದನ ಕೈಯಲ್ಲಿ ಮೂಡಿ ಬಂದ ಬೆಳ್ಳಿಯ ಕ್ರಾಸ್ ಮೇಲೆ ಅತೀ ಸಣ್ಣ ಏಸುಕ್ರಿಸ್ತ, ಇದರ ಜೊತೆಗೊಂದು ಬಂಗಾರದ ಹೆಲ್ಮೆಟ್. ಹೌದು ನೀವು ಇದನ್ನೇಲ್ಲಾ ನೋಡ್ತಿರೋದು ಅಪ್ಪಟ ಬಂಗಾರದಲ್ಲಿ ಮೂಡಿ ಬಂದಿರುವ ಕಲಾಕೃತಿಗಳು. ಅಂದಹಾಗೆ ಈ ಕಲಾಕೃತಿಗಳನ್ನು ರಚಿಸಿದ ಕಲಾವಿದನ ಹೆಸರು ರವಿಚಂದ್ರ. ಶಿವಮೊಗ್ಗ ಜಿಲ್ಲೆ ಭದ್ರಾವತಿ ಪಟ್ಟಣದಲ್ಲಿ ಅಕ್ಕಸಾಲಿಗನ ವೃತ್ತಿ ಮಾಡುತ್ತಿದ್ದಾರೆ. ಇವರಿಗೆ ವಿಭಿನ್ನವಾಗಿ ಏನಾದರೂ ಸಾಧನೆ ಮಾಡಬೇಕು ಎಂಬ ಹಂಬಲ. ಹೀಗಾಗಿ ಅವರು ವೃತ್ತಿಯಲ್ಲೇ ಇಂತಹ ಚಿಕ್ಕ ಕಲಾಕೃತಿ ರಚಿಸುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಈಗ ಸಣ್ಣದರಲ್ಲಿಯೇ, ಅತಿ ಸಣ್ಣ, ಪ್ರಧಾನಿ ಮೋದಿ ಅವರ ಮೂರ್ತಿ ರಚಿಸಿ, ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ ಇವರು.
20 ಮಿ.ಗ್ರಾಂ ಬಂಗಾರದ 3.75 ಮಿ.ಮೀ. ಎತ್ತರದ, 3 ಮಿ.ಮೀ. ಅಗಲದ, ಅಕ್ಕಿ ಕಾಳಿಗಿಂತ ಚಿಕ್ಕ, ಪ್ರಧಾನಿ ನರೇಂದ್ರ ಮೋದಿಯವರ ಕಲಾಕೃತಿಯನ್ನು ರಚಿಸಿ ಸೈ ಎನಿಸಿಕೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬಕ್ಕಾಗಿ ರವಿಚಂದ್ರ ಇದನ್ನು ಸಮರ್ಪಿಸಿದ್ದಾರೆ. ಈಗಾಗಲೇ ಅಕ್ಕಿ ಕಾಳಿಗಿಂತಲೂ ಸಣ್ಣ ಮೋದಿಯ ಕಲಾಕೃತಿಯನ್ನು ರವಿಚಂದ್ರ ಮುಖ್ಯಮಂತ್ರಿ ಯಡಿಯೂರಪ್ಪ ರಿಗೆ ತೋರಿಸಿ, ಬೆನ್ನು ತಟ್ಟಿಸಿಕೊಂಡು ಬಂದಿದ್ದಾರೆ. ಅಲ್ಲದೇ, ಈ ಲಾಕ್ ಡೌನ್ ಸಂದರ್ಭದ ಬಿಡುವನ್ನೇ ಉಪಯೋಗಿಸಿಕೊಂಡು ಈ ಚಿಕ್ಕ ಕಲಾಕೃತಿ ರಚಿಸಲು ಸಾಕಷ್ಟು ಪ್ರಯತ್ನ ಪಟ್ಟು ಕೊನೆಗೆ ಯಶಸ್ಸು ಕಂಡಿದ್ದಾರೆ.
ಕಳೆದ 2 ತಿಂಗಳಿನಿಂದ ಪ್ರತಿದಿನ ಒಂದೆರೆಡು ಗಂಟೆಗಳ ಕಾಲ ಈ ಕಲಾಕೃತಿ ರಚಿಸಲು ಸಮಯ ವ್ಯಯಿಸಿದ್ದು, ಕೊನೆಗೆ ಈ ಸೂಕ್ಷ್ಮ ಕಲಾಕೃತಿ ರಚಿಸುವಲ್ಲಿ ಸಫಲರಾಗಿದ್ದಾರೆ. ಮೋದಿಯವರು ಕಡೆಯಿಂದ ಅನುಮತಿ ಸಿಕ್ಕರೆ ಸಾಕು ದೆಹಲಿಗೆ ಹೋಗಿ ಇದನ್ನು ಕೊಟ್ಟು ಬರುತ್ತೇನೆ ಅನ್ನೋ ಆಶಯ ಹೊಂದಿದ್ದಾರೆ. ಇನ್ನು ರವಿಚಂದ್ರರ ಸಾಧನೆ ಬಗ್ಗೆ ಅವರ ಸ್ನೇಹಿತರು, ಸಾರ್ವಜನಿಕರು ಹೆಮ್ಮೆ ಮತ್ತು ಸಂತಸ ವ್ಯಕ್ತಪಡಿಸುತ್ತಿದ್ದಾರೆ.
ಚಿಕ್ಕ ಕಲಾಕೃತಿಗಳನ್ನು ರಚಿಸುವ ಹವ್ಯಾಸವನ್ನು ರವಿಚಂದ್ರನ್ನು ಹೊಂದಿದ್ದಾರೆ. ತಮ್ಮ ಈ ಅತಿಚಿಕ್ಕ ಕಲಾಕೃತಿಯಾಗಿರುವ ಗೋಲ್ಡ್ ಮೋದಿ, ಮೂಲಕ ಗಿನ್ನೆಸ್ ರೆಕಾರ್ಡ್ ಗೆ ಸೇರಬೇಕು ಎಂಬ ಮಹಾದಾಸೆ ಇಟ್ಟುಕೊಂಡಿದ್ದಾರೆ.
Published by:
Rajesh Duggumane
First published:
September 19, 2020, 12:42 PM IST