1907-2019: ಶತಾಯುಷಿ, ಸಂತ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮಿಗಳು ಇನ್ನಿಲ್ಲ

ಇನ್ನು ನಾಳೆ ಮಧ್ಯಾಹ್ನ 3 ಗಂಟೆವರೆಗೂ ಸಾರ್ಜನಿಕರಿಗೆ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗಿದೆ. ನಾಳೆ ಸಂಜೆ 4.30 ಕ್ಕೆ ಸಿದ್ದಗಂಗಾ ಹಳೆ ಮಠದ ಆವರಣದಲ್ಲಿಯೇ ಶ್ರೀಗಳ ಅಂತ್ಯ ಸಂಸ್ಕಾರ ನಡೆಯಲಿದೆ.

ಶ್ರೀ ಶಿವಕುಮಾರ ಸ್ವಾಮೀಜಿ

ಶ್ರೀ ಶಿವಕುಮಾರ ಸ್ವಾಮೀಜಿ

  • News18
  • Last Updated :
  • Share this:
ತುಮಕೂರು (ಜ. 21): ನಡೆದಾಡುವ ದೇವರು ಸಿದ್ಧಗಂಗಾ ಶ್ರೀಗಳು ಚಿಕಿತ್ಸೆ ಫಲಕಾರಿಯಾಗದೇ ಇಂದು ನಮ್ಮನಗಲಿದ್ದಾರೆ. ಇಂದು ಬೆಳಿಗ್ಗೆ 11.45ಕ್ಕೆ ಸರಿಯಾಗಿ ಕೊನೆಯುಸಿರೆಳೆದಿದ್ಧಾರೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಇನ್ನು ನಾಳೆ ಮಧ್ಯಾಹ್ನ 3 ಗಂಟೆವರೆಗೂ ಸಾರ್ಜನಿಕರಿಗೆ ಅಂತಿಮ ದರ್ಶನ ವ್ಯವಸ್ಥೆ ಮಾಡಲಾಗಿದೆ. ನಾಳೆ ಸಂಜೆ 4.30 ಕ್ಕೆ ಸಿದ್ದಗಂಗಾ ಹಳೆ ಮಠದ ಆವರಣದಲ್ಲಿಯೇ ಅಂತ್ಯ ಸಂಸ್ಕಾರ ನಡೆಯಲಿದೆ.

ಶ್ರೀಗಳ ಲಿಂಗೈಕ್ಯವಾದ ಬಗ್ಗೆ ಅಧಿಕೃತವಾಗಿ ಘೋಷಿಸಿದ ಸಿಎಂ ಕುಮಾರಸ್ವಾಮಿ ಅವರು, ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, ಶ್ರೀಗಳು ಪವಾಡ ಪುರುಷರು. ಅವರ ಅಗಲಿಕೆಯಿಂದ ನಾಡಿಗೆ ತುಂಬಾ ನಷ್ಟವಾಗಿದೆ. ರಾಜ್ಯದಲ್ಲಿ ಮೂರು ದಿನಗಳ ಕಾಲ ಶ್ರೀಗಳ ಶೋಕಾಚರಣೆ ಮಾಡಲಾಗುವುದು. ಅಲ್ಲದೇ ನಾಳೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ವಿಧಿವಿಧಾನಗಳು ನಡೆಸಲಾಗುವುದು ಎಂದರು.ಪಿತ್ತನಾಳದ ಸಮಸ್ಯೆ'ಯಿಂದ ಬಳಲುತ್ತಿದ್ದ ಸ್ವಾಮಿಗಳನ್ನು ಬಿ.ಜಿ.ಎಸ್. ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಚನ್ನೈಗೆ ರವಾನಿಸಿ ಅಲ್ಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಅಲ್ಲಿಂದ ಬಂದ ಶ್ರೀಗಳ ಆರೋಗ್ಯದಲ್ಲಿ ಮತ್ತೆ ಏರುಪೇರು ಉಂಟಾಗುತ್ತಿತ್ತು. ಶ್ರೀಗಳ ಆರೋಗ್ಯವನ್ನು ಸುಧಾರಿಸುವ ನಿಟ್ಟಿನಲ್ಲಿ ವೈದ್ಯರ ತಂಡವೊಂದು ಹಗಲಿರುಳು ಶ್ರೀಗಳನ್ನು ಕಣ್ಣಲ್ಲಿ, ಕಣ್ಣಿಟ್ಟು ನೋಡಿಕೊಳ್ಳುತಿತ್ತು. ಆದರೆ, ಇಂದ ಬೆಳಿಗ್ಗೆ 4 ಟಂಗೆ ಸುಮಾರಿಗೆ ಶ್ರೀಗಳ ಉಸಿರಾಟದಲ್ಲಿ ಹಠಾತ್ತನೇ​​ ಕೊಂಚ ಏರುಪೇರು ಕಂಡಿದೆ. ಅಲ್ಲದೇ ಶ್ರೀಗಳ ರಕ್ತದಲ್ಲಿ ಒತ್ತಡವೂ ಹೆಚ್ಚಿದೆ. ಹೀಗಾಗಿ, ಸಿದ್ದಗಂಗಾ ಆಸ್ಪತ್ರೆ ವೈದ್ಯ ಡಾ. ಪರಮೇಶ್ ತಂಡದಿಂದ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೀಗ ಶ್ರೀಗಳ ಚಿಕಿತ್ಸೆ ಫಲಕಾರಿಯಾಗಿದೇ ನಮ್ಮನ್ನಗಲಿದ್ದಾರೆ.

ಪೊಲೀಸ್​​ ಬಂದೋಬಸ್ತ್​​: ಇನ್ನು ಶ್ರೀಗಳ ಸಾವಿನ ಸುದ್ದಿ ತಿಳಿಯುತ್ತಿದ್ಧಂತೆಯೇ ರಾಜಕೀಯ ಗಣ್ಯರು ತುಮಕೂರಿಗೆ ದೌಡಾಯಿಸಿದ್ದಾರೆ. ಇನ್ನು ಬೆಳಗ್ಗೆಯಿಂದಲೇ ಮಠಕ್ಕೆ ಭಕ್ತಸಾಗರ ಹರಿದು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಭದ್ರತೆ ಒದಗಿಸಲಾಗಿದೆ. ಐಜಿಪಿ ನೀಲಮಣಿರಾಜು ಆದೇಶದಂತೆ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ. ಮಠದ ಸುತ್ತಮತ್ತ 2 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಇನ್ನು 1500 ಗೃಹ ರಕ್ಷಕದಳ ಮತ್ತು ಇತರೆ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಪೊಲೀಸರನ್ನು ಕರೆಸಿಕೊಂಡಿದ್ದಾರೆ.

ಸಿದ್ಧಗಂಗಾ ಮಠದ ಸುತ್ತಮುತ್ತ ಒದಗಿಸಲಾದ ಪೊಲೀಸ್ ಭಿಗಿಭದ್ರೆಯನ್ನು ಇದ್ದಕ್ಕಿದ್ದಂತೆ ಹೆಚ್ಚಿಸಲಾಗಿದೆ. ಭಾರೀ ಸಂಖ್ಯೆಯಲ್ಲಿ ಬ್ಯಾರಿಕೇಡ್ ಗಳನ್ನೂ ಅಳವಡಿಸಲಾಗಿದೆ. ತುಮಕೂರು ನಗರದಾದ್ಯಂತ 20 ಸಾವಿರ ಪೊಲೀಸರ ನಿಯೋಜಿಸಿದ್ದಲ್ಲದೇ, ಬೇರೆ ಜಿಲ್ಲೆಗಳಿಂದ ಪೊಲೀಸರನ್ನು ಕರೆಸಿಕೊಳ್ಳಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಸಿದ್ದಗಂಗಾ ಮಠಕ್ಕೆ ಎಸ್ ಪಿ ಕಾರ್ತಿಕ್ ರೆಡ್ಡಿ ನೇತೃತ್ವದಲ್ಲಿ 10 ಪಿಎಸ್‌ಐ, 150 ಸಿವಿಲ್ ಪೇದೆಗಳು, 4 ಡಿಆರ್ ತುಕಡಿಯನ್ನು ಬಂದೊಬಸ್ತ್‌ಗಾಗಿ ನಿಯೋಜಿಸಲಾಗಿದೆ.

ತುಮಕೂರು, ಬೆಂಗಳೂರು ಗ್ರಾಮಾಂತರ, ದೊಡ್ಡ ಬಳ್ಳಾಪುರ, ರಾಮನಗರ, ಚಿತ್ರದುರ್ಗ ಜಿಲ್ಲೆಗಳ ಮಾರ್ಗಗಳಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಇದು ಭಕ್ತರಲ್ಲಿ ಆತಂಕ ಮೂಡುವಂತೆ ಮಾಡಿದೆ. ಇದಲ್ಲದೆ ತುಮಕೂರಿನ ಸಿದ್ಧಗಂಗಾ ಮಠಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗ ಬದಲು ಮಾಡಿದ್ದು, ವಾಹನಗಳಿಗೆ ನಿರ್ಬಂಧ ಹೇರಲಾಗಿದೆ.

ರಾಷ್ಟೀಯ ಹೆದ್ದಾರಿ ಡೈವರ್ಟ್ : ಬೆಂಗಳೂರು, ದಾವಣಗೆರೆ, ಚಿತ್ರದುರ್ಗದಿಂದ ಬರುವ ವಾಹನ ಮಾರ್ಗ ಬದಲಾಯಿಸಲಾಗಿದ್ದು, ಪೂನಾ- ಚೆನ್ನೈ ರಾಷ್ಟೀಯ ಹೆದ್ದಾರಿಯ ಪಥ ಬದಲಿಸಲಾಗಿದೆ. ಶಿರಾದಿಂದ ಹೆದ್ದಾರಿಯ ವಾಹನಗಳನ್ನು ಡೈವರ್ಟ್ ಮಾಡಲಾಗಿದ್ದು ಮಧುಗಿರಿ, ಕೊರಟಗೆರೆ, ದಾಬಸ್ಪೇಟೆ ಮಾರ್ಗದಲ್ಲಿ ಸಂಚಾರ ಕಲ್ಪಿಸಲಾಗಿದೆ.

ಇದನ್ನೂ ಓದಿ: Shivakumara Swamiji Passes Away LIVE: 'ನಡೆದಾಡುವ ದೇವರು' ಲಿಂಗೈಕ್ಯ; ನಾಳೆ ಪ್ರಧಾನಿ ಮೋದಿ ಆಗಮನ ಸಾಧ್ಯತೆ​

ನೀರವ ಮೌನ: ಸದ್ಯ ಸಿದ್ದಗಂಗಾ ಮಠದಲ್ಲಿ ನೀರವ ಮೌನ ಆವರಿಸಿದೆ. ಶೀಗಳ ಅಗಲಿಕೆಯಿಂದ  ವಿದ್ಯಾರ್ಥಿಗಳ ಆಕ್ರಂದನ ಮನ ಮುಟ್ಟಿದೆ. ರಾಜ್ಯದ ವಿವಿಧ ಭಾಗಗಳಿಂದ ಅಪಾರ ಸಂಖ್ಯೆಯ ಗಣ್ಯರು ಮತ್ತು ಭಕ್ತರು ಮಠಕ್ಕೆ ಆಗಮಿಸುತ್ತಿದ್ದಾರೆ. ನಿನ್ನೆ ಸಂಜೆವರೆಗೂ ಸ್ವಾಮೀಜಿಯವರ ಆರೋಗ್ಯ ಸಹಜ ಸ್ಥಿತಿಯಲ್ಲಿತ್ತು. ಇಂದು ಮುಂಜಾನೆ ಅವರ ಶ್ವಾಸಕೋಶ, ರಕ್ತದೊತ್ತಡ, ಹೃದಯ ಬಡಿತ, ಉಸಿರಾಟದಲ್ಲಿ ಏರುಪೇರಾಗಿ ಪ್ರೋಟೀನ್ ಅಂಶ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿತ್ತು.

ಶ್ರೀಗಳ ನಿಧನ ಹಿನ್ನೆಲೆ ಸಿಎಂ ಕುಮಾರಸ್ವಾಮಿಯವರು ಈಗಾಗಲೇ ಮಠದ ಕಿರಿಯ ಸ್ವಾಮೀಜಿಗಳ ಜೊತೆಗೆ ಚರ್ಚಿಸಿದ್ದಾರೆ. ಅಲ್ಲದೇ ಸಾರ್ವಜನಿಕರ ದರ್ಶನಕ್ಕೆ ಹಳೆ ಮಠದ ಆವರಣದಲ್ಲಿಯೇ ಅವಕಾಶ ಮಾಡಲಾಗಿದೆ. ಇಲ್ಲಿ ಆದಿ ಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳು , ಬಸವಣ್ಣ ದೇವರ ಮಠದ ಸಿದ್ಧಲಿಂಗ ಸ್ವಾಮೀಜಿ, ವನಕಲ್ಲು ಮಲ್ಲೇಶ್ವರ ಡಾ.ಬಸವರಮಾನಂದ ಸ್ವಾಮೀಜಿ, ಮೇಲಣಗವಿ ಮಲಯ ಶಾಂತಮುನಿ ದೇಶಿಕೇಂದ್ರ ಸ್ವಾಮೀಜಿ, ಹೊನ್ನಮದೇವಿ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಬಂಡೆಮಠದ ಮಹಾಸ್ವಾಮೀಜಿ ಬಸವಲಿಂಗ ಸ್ವಾಮೀಜಿ, ಗದ್ದಿಗೆ ಮಠದ ಶ್ರೀ ಮಹಂತ ಸ್ವಾಮೀಜಿಗಳು ಅಂತಿಮ ದರ್ಶನಕ್ಕೆ ಆಗಮಿಸಿದ್ದಾರೆ.

ಡಾ|| ಶಿವಕುಮಾರ ಸ್ವಾಮಿಗಳ ಅವರ ಜೀವನ ಪರಿಚಯ

ಸಿದ್ದಗಂಗಾ ಮಠಾಧಿಪತಿಗಳಾದ ಶಿವಕುಮಾರ ಸ್ವಾಮಿಗಳು ಹುಟ್ಟಿದ್ದು 1907 ಏಪ್ರಿಲ್ 1. ಮಾಗಡಿ ತಾಲೂಕಿನ ವೀರಾಪುರದ ಗಂಗಮ್ಮ ಮತ್ತು ಹೊನ್ನೇಗೌಡ ದಂಪತಿಗೆ 13ನೆಯ ಹಾಗೂ ಕೊನೆಯ ಮಗುವಾಗಿ ಜನಿಸಿದ ಇವರ ಪೂರ್ವಾಶ್ರಮ ಹೆಸರು ಶಿವಣ್ಣ. ಚಿಕ್ಕಂದಿನಲ್ಲೇ ಮಾತೃವಿಯೋಗ ಹೊಂದಿ ಪ್ರಾಥಮಿಕ ಶಿಕ್ಷಣವನ್ನು ಸ್ವಂತ ಊರಿನಲ್ಲಿ ಮಾಡಿದ ಬಳಿಕ ಮ್ಯಾಟ್ರಿಕ್ಯುಲೇಶನ್ವರೆಗೂ ತುಮಕೂರಿನಲ್ಲಿ ಮಾಡಿದರು.

ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಓದುವಾಗ ಸಿದ್ದಗಂಗಾ ಮಠದ ಒಡನಾಟ ಅವರಿಗೆ ಲಭಿಸಿತು. ಶಿವಣ್ಣನವರ ಆಸಕ್ತಿ, ನಿಷ್ಠೆಯನ್ನು ಗಮನಿಸಿದ ಸಿದ್ದಗಂಗಾ ಮಠದ ಹಿರಿಯ ಶ್ರೀ ಉದ್ದಾನ ಸ್ವಾಮಿಗಳು 1930ರಲ್ಲಿ ಶಿವಣ್ಣ ಅವರನ್ನು ಮಠದ ಉತ್ತರಾಧಿಕಾರಿ ಎಂದು ಘೋಷಿಸುತ್ತಾರೆ. ಅಲ್ಲಿಂದ ಶಿವಣ್ಣ ಅವರು ಶಿವಕುಮಾರ ಸ್ವಾಮೀಜಿಯಾಗುತ್ತಾರೆ.
ಉದ್ದಾನ ಶ್ರೀಗಳ ಲಿಂಗೈಕ್ಯದ ನಂತರ ಶಿವಕುಮಾರ ಸ್ವಾಮಿಗಳು ಮಠದ ಜವಾಬ್ದಾರಿ ವಹಿಸಿಕೊಂಡಾಗ ಮಠದ ಆದಾಯ ತೀರಾ ಕಡಿಮೆ ಇರುತ್ತದೆ.

ಇದನ್ನೂ ಓದಿ: Siddaganga Shree - ಆತ್ಮಾರ್ಪಣೆಯ ಒಮ್ಮುಖ ದಾರಿ ಹಿಡಿದ ಕಾಯಕಯೋಗಿಯ ಜೀವನ ಪಯಣ

ಅವರು ಮಠದ ಭಕ್ತರ ಮನೆಗೆ ಹೋಗಿ ದವಸ ಧಾನ್ಯಗಳನ್ನು ತಂದು ಮಠವನ್ನು ಮುನ್ನಡೆಸುವ ಪ್ರಯತ್ನ ಮಾಡುತ್ತಾರೆ. ಇವರ ಅವಿರತ ಶ್ರಮದ ಫಲವಾಗಿ ಸಿದ್ದಗಂಗಾ ಮಠಕ್ಕೆ ಸರಕಾರದ ನೆರವು, ಭಕ್ತರ ನೆರವು ಹರಿದುಬರಲು ಪ್ರಾರಂಭವಾಗುತ್ತದೆ.
ಶಿವಕುಮಾರ ಸ್ವಾಮೀಜಿ ಅವರ ಶ್ರಮದಿಂದಾಗಿ ಸಿದ್ದಗಂಗಾ ಮಠದಲ್ಲಿ ಅನ್ನ, ಅಕ್ಷರ, ಜ್ಞಾನ ಇತ್ಯಾದಿ ತ್ರಿವಿಧ ದಾಸೋಹ ನಡೆಸಲು ಸಾಧ್ಯವಾಗುತ್ತಿದೆ.

ಇದನ್ನೂ ಓದಿ: Siddaganga shree: ಸಿದ್ಧಗಂಗಾ ಸ್ವಾಮೀಜಿ ಬಗ್ಗೆ ನೀವು ತಿಳಿಯಬೇಕಾದ ಹತ್ತು ಸಂಗತಿಗಳು

ಮಠಕ್ಕೆ ಬರುವ ಪ್ರತಿಯೊಬ್ಬರಿಗೂ ಮೂರೂ ಹೊತ್ತು ಅನ್ನ ಉಣಬಡಿಸಲಾಗುತ್ತದೆ. ಮಠದಲ್ಲಿ ಯಾವುದೇ ಭೇದವಿಲ್ಲದೆ ಸಾವಿರಾರು ಮಕ್ಕಳಿಗೆ ಉಚಿತ ಶಿಕ್ಷಣ ಕೊಡಲಾಗುತ್ತದೆ. ಈ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದ ಜೊತೆಗೆ ಉಚಿತ ಊಟ ಹಾಗೂ ವಸತಿಯ ವ್ಯವಸ್ಥೆಯನ್ನೂ ಮಠ ಕಲ್ಪಿಸುತ್ತದೆ.

ಪ್ರಶಸ್ತಿ ಮತ್ತು ಗೌರವಗಳು:

* ಸಿದ್ದಗಂಗಾ ಮಠದ ಶ್ರೀಗಳಿಗೆ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಸಿಕ್ಕಿದೆ.
* ಶಿವಕುಮಾರಸ್ವಾಮೀಜಿ ಅವರ 100ನೇ ಜನ್ಮದಿನದ ಸಂಭ್ರಮದಲ್ಲಿ ಕರ್ನಾಟಕ ಸರಕಾರವು ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಿದೆ.|
* 2015ರಲ್ಲಿ ಕೇಂದ್ರ ಸರಕಾರವು ಪದ್ಮಭೂಷಣ ನೀಡಿ ಗೌರವಿಸಿದೆ.
----------------------------
ದೇವರಿಗೆ ಭಾರತರತ್ನ: ನ್ಯೂಸ್​18ಕನ್ನಡ ಮೆಗಾ ಅಭಿಯಾನಕ್ಕೆ ಗಣ್ಯರ ಬೆಂಬಲ

First published: