ಬೆಳಗಾವಿ ಗಡಿಭಾಗ ಉದ್ವಿಗ್ನ; ಶಿವಸೇನೆ ಪುಂಡಾಡಿಕೆ; ಕನ್ನಡ ಚಿತ್ರ ಪ್ರದರ್ಶನಕ್ಕೆ ಅಡ್ಡಿ; ಬೀದಿಗಿಳಿದ ಕನ್ನಡಪರ ಸಂಘಟನೆಗಳು

ಗಡಿ ವಿವಾದ ಕೆಣಕಿದ ಪುಂಡ ಶಿವಸೇನೆ ತನ್ನ ಪುಂಡಾಟಿಕೆಯನ್ನ ಮುಂದುವರೆಸಿದೆ. ಮಹಾರಾಷ್ಟ್ರದ ಕನ್ನಡಿಗರ ಮೇಲೆ ಮತ್ತೆ ದಬ್ಬಾಳಿಕೆ ನಡೆಸಿದ ಶಿವಸೇನೆ ಕಾರ್ಯಕರ್ತರು ಕನ್ನಡದ ಅವನೇ ಶ್ರೀಮನ್ನಾರಾಯಣ ಚಿತ್ರಕ್ಕೂ ಅಡ್ಡಿಪಡಿಸಿದ್ದಾರೆ. ಸದ್ಯ ಬೆಳಗಾವಿ ಗಡಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ.

ಬೆಳಗಾವಿ ಗಡಿಭಾಗದಲ್ಲಿ ನಿಯೋಜಿತವಾಗಿರುವ ಪೊಲೀಸರು

ಬೆಳಗಾವಿ ಗಡಿಭಾಗದಲ್ಲಿ ನಿಯೋಜಿತವಾಗಿರುವ ಪೊಲೀಸರು

 • News18
 • Last Updated :
 • Share this:
  ಮತ್ತೆ ಬೆಳಗಾವಿಯಲ್ಲಿ ಬುಗಿಲೆದ್ದ ಭಾಷಾ ವಿವಾದ… ಹಲವು ವಿರೋಧದ ನಡುವೆಯೂ ಎನ್​ಸಿಪಿ ಶಾಸಕನಿಗೆ ಸನ್ಮಾನ ಕಾರ್ಯಕ್ರಮ… ಇಂದು ದಿನವಿಡೀ ಎರಡು ರಾಜ್ಯದ ಸಾರಿಗೆ ವ್ಯವಸ್ಥೆ ಸ್ಥಬ್ದ… ಗಡಿಯಲ್ಲಿ ಶಿವಸೇನೆ ಹಾಗೂ ಕನ್ನಡ ಸಂಘಟನೆಗಳ ಪ್ರತಿಭಟನೆ… ಇವೆಲ್ಲಾ ಘಟನೆಗಳಿಗೆ ಸಾಕ್ಷಿಯಾಗಿದ್ದು ಬೆಳಗಾವಿ-ಮಹಾರಾಷ್ಟ್ರ ಗಡಿಭಾಗ.

  ಕರ್ನಾಟಕ ನವ ನಿರ್ಮಾಣ ಸೇನೆ ಅಧ್ಯಕ್ಷ ಭೀಮಾಶಂಕರ್ ಅವರು ಎಂಇಎಸ್ ನಾಯಕರನ್ನ ಗುಂಡಿಕ್ಕಿ ಕೊಲ್ಲಿ ಎಂದು ಇತ್ತೀಚೆಗೆ ಹೇಳಿಕೆ ನೀಡಿದರೆನ್ನಲಾದ ಹಿನ್ನೆಲೆಯಲ್ಲಿ ಬೆಳಗಾವಿ ಗಡಿಯಲ್ಲಿ ಮತ್ತೆ ಭಾಷಾ ವಿವಾದ ಬುಗಿಲೆದ್ದಿದ್ದೆ. ನಿನ್ನೆಯಷ್ಟೆ ಶಿವಸೇನೆ ಕಾರ್ಯಕರ್ತರು ಭೀಮಾಶಂಕರ್ ಪ್ರತಿಕೃತಿ ಜೊತೆ ಕನ್ನಡ ಬಾವುಟಕ್ಕೂ ಬೆಂಕಿ ಹಚ್ಚಿ ಕನ್ನಡಿಗರನ್ನ ಕೆನಕುವ ಕೆಲಸಕ್ಕೆ ಕೈ ಹಾಕಿತ್ತು. ಶಿವಸೇನೆಯ ಈ ಕೃತ್ಯ ಖಂಡಿಸಿ ಬೆಳಗಾವಿ ಗಡಿಯಲ್ಲಿ ಕನ್ನಡ ಸಂಘಟನೆಗಳು ಇಂದು ಬೀದಿಗಿಳಿದು ಪ್ರತಿಭಟನೆ ನಡೆಸಿದವು. ಅತ್ತ ಶಿವಸೇನೆ ಕೂಡ ಪ್ರತಿಭಟನೆ ನಡೆಸಿದೆ. ಬೆಳಗಾವಿ ಮತ್ತು ಕೊಲ್ಲಾಪುರ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾದ ಬೆನ್ನಲ್ಲೇ ಬೆಳಗ್ಗೆಯಿಂದ ಎರಡು ರಾಜ್ಯಗಳ ಸಾರಿಗೆ ಬಸ್​ಗಳನ್ನ ಬಂದ್ ಮಾಡಲಾಗಿತ್ತು. ಗಡಿಯಲ್ಲಿ ಹೆಚ್ಚಿನ ಪೊಲೀಸ್ ಭದ್ರತೆಯನ್ನೂ ಒದಗಿಸಲಾಗಿತ್ತು.

  ಇದನ್ನೂ ಓದಿ: ಅನೇಕಲ್​ನಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ಬೃಹತ್ ಪ್ರತಿಭಟನೆ; ರಿಜ್ವಾನ್ ಅರ್ಷದ್, ರಾಮಲಿಂಗಾ ರೆಡ್ಡಿ ಭಾಗಿ

  ಇಷ್ಟಕ್ಕೆ ಸುಮ್ಮನಾಗದ ಶಿವಸೇನೆ ಒಂದು ಹೆಜ್ಜೆ ಮುಂದೆ ಹೋಗಿ ಕೊಲ್ಲಾಪುರದಲ್ಲಿ ಕನ್ನಡ ಸಿನೆಮಾ ಪ್ರದರ್ಶನಕ್ಕೂ ಅಡ್ಡಿಪಡಿಸಿದೆ. ರಕ್ಷಿತ್ ಶೆಟ್ಟಿ ನಟನೆಯ “ಅವನೇ ಶ್ರೀಮನ್ನಾರಾಯಣ” ಸಿನಿಮಾದ ಪ್ರದರ್ಶವನ್ನು ಅರ್ಧಕ್ಕೆ ನಿಲ್ಲಿಸಿ ಪ್ರೇಕ್ಷಕರನ್ನ ಹೊರಹಾಕಿ ಪುಂಡಾಟಿಕೆ ಮೆರೆದಿದೆ. ಸಾಲದಕ್ಕೆ ಕೊಲ್ಲಾಪುರಲ್ಲಿದ್ದ ಕನ್ನಡ ನಾಮಫಲಕಗಳಿಗೆ ಮಸಿ ಕೂಡ ಬಳೆದಿದೆ.

  ಇತ್ತ, ಬೆಳಗಾವಿಯಲ್ಲೂ ಕನ್ನಡಪರ ಹೋರಾಟಗಾರರ ವಿರೋಧದ ನಡುವೆಯೂ ಗಡಿ ವಿಚಾರದಲ್ಲಿ ಕರ್ನಾಟಕದ ವಿರುದ್ದ ಹೇಳಿಕೆ ನೀಡಿದ್ದ ಮಹಾರಾಷ್ಟ್ರದ ಎನ್​ಸಿಪಿ ಶಾಸಕ ರಾಜೇಶ್ ಪಾಟೀಲ್ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಇದನ್ನ ಖಂಡಿಸಿ ಕರವೇ ಕಾರ್ಯಕರ್ತರು ನಗರದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ, ಕರವೇ ಕಾರ್ಯಕರ್ತರನ್ನ ಪೊಲೀಸರು ಬಂದಿಸಿದರು.

  ಒಟ್ಟಿನಲ್ಲಿ, ಇಷ್ಟು ದಿನ ತನ್ನಗಾಗಿದ್ದ ಭಾಷಾ ವಿವಾದ ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಸಿಎಂ ಆಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಮತ್ತೆ ಶಿವಸೇನೆ ಭಾಷಾ ವಿವಾದ ಕೆಣಕಿದೆ. ಸದ್ಯ ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಈಗಲೂ ಸಹ ಸಾರಿಗೆ ವ್ಯವಸ್ಥೆ ಬಂದ್ ಆಗಿದೆ. ಮುಂದೇನು ಅನ್ನೊದನ್ನ ಕಾದು ನೋಡಬೇಕು.

  (ವರದಿ: ಲೋಹಿತ್ ಶಿರೋಳ, ಚಿಕ್ಕೋಡಿ)

  ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

  Published by:Vijayasarthy SN
  First published: