ಮಂಗಳೂರು(ಮಾ.10): ರಾಜ್ಯ ರಾಜಧಾನಿ ಬೆಂಗಳೂರು ಮತ್ತು ಕರಾವಳಿ ನಗರಿ ಮಂಗಳೂರು ಹಲವು ಕಾರಣಗಳುಗಾಗಿ ತುಂಬಾ ನಿಕಟ ಸಂಪರ್ಕ ಹೊಂದಿದೆ. ಅದರಲ್ಲೂ ವಾಣಿಜ್ಯ ವಹಿವಾಟು ಪ್ರತಿದಿನ ನಡೆಯುತ್ತಲೇ ಇರುತ್ತದೆ. ಮಂಗಳೂರಿನಿಂದ ಗ್ಯಾಸ್, ಪೆಟ್ರೋಲ್ ಪೂರೈಕೆ ಬೆಂಗಳೂರಿಗೆ ನಡೆಯುತ್ತಲೇ ಇರುತ್ತದೆ. ಪ್ರತಿನಿತ್ಯ ಸರಕು ಸಾಗಾಟದ ವಾಹನದ ಜೊತೆ, ಸಾರಿಗೆ ಸಂಚಾರದ ವಾಹನಗಳು ಜನರ ಖಾಸಗಿ ವಾಹನಗಳೂ ಮಂಗಳೂರಿನಿಂದ ಬೆಂಗಳೂರು ಕಡೆಗೆ ಹೋಗುತ್ತಿರುತ್ತದೆ. ಆದರೆ ರಸ್ತೆ ಸಮಸ್ಯೆ ಸವಾರರನ್ನು ಬಹುವಾಗಿ ಕಾಡುತ್ತಿರುತ್ತದೆ. ಮಂಗಳೂರು-ಬೆಂಗಳೂರನ್ನು ಸಂಪರ್ಕಿಸುವ ಶಿರಾಡಿ ಘಾಟ್ ರಸ್ತೆ ಮಳೆಗಾಲದಲ್ಲಿ ಗುಡ್ಡ ಕುಸಿತಕ್ಕೆ ಒಳಗಾಗುವುದರಿಂದ ಹಲವು ದಿನ ವಾಹನ ಸಂಚಾರವೇ ಸ್ಥಗಿತವಾದ ಉದಾಹರಣೆಗಳಿವೆ. ಈ ಹಿನ್ನಲೆ ಈ ತೊಂದರೆಯನ್ನು ತಪ್ಪಿಸಲು ಕೇಂದ್ರ ಸರ್ಕಾರ ಹೊಸ ಯೋಜನೆಗೆ ಕೈ ಹಾಕಿದೆ. ಅದೇ ಶಿರಾಡಿ ಘಾಟ್ ನಲ್ಲಿ ಸುರಂಗ ರಸ್ತೆ ನಿರ್ಮಾಣ ಯೋಜನೆ.
ಮಂಗಳೂರಿನಿಂದ ಬೆಂಗಳೂರನ್ನು ವೇಗವಾಗಿ ಸಂಪರ್ಕಿಸಲು ಸುರಂಗ ಮಾರ್ಗವೊಂದು ನಿರ್ಮಾಣವಾಗಲಿದೆ. ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿಯಲ್ಲಿ ಸುರಂಗ ಮಾರ್ಗ ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಹಸಿರು ನಿಶಾನೆ ನೀಡಿದೆ.
ಕಳೆದ ಏಳೆಂಟು ವರ್ಷಗಳಿಂದ ಚರ್ಚೆಯಲ್ಲಿದ್ದ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿ ರಸ್ತೆಗೆ ಸುರಂಗ ಮಾರ್ಗ ನಿರ್ಮಿಸುವ ಯೋಜನೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ನೀಡಿದೆ. ಮಂಗಳೂರಿನಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಈ ಶಿರಾಡಿ ಘಾಟ್ ರಸ್ತೆಯಲ್ಲಿ ಸುಮಾರು 23.6 ಕಿ.ಮೀ ಉದ್ದದ ಸುರಂಗ ಮಾರ್ಗ ನಿರ್ಮಾಣವಾಗಲಿದೆ.
ಕೇಂದ್ರ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಈ ವಿಸ್ತೃತ ಯೋಜನಾ ವರದಿಗೆ ಹಸಿರು ನಿಶಾನೆ ನೀಡಿದ್ದಾರೆ. ಯೋಜನೆಗೆ ಒಪ್ಪಿಗೆ ನೀಡಲಾಗಿದ್ದು, ಶೀಘ್ರದಲ್ಲಿ ಇದರ ಟೆಂಡರ್ ಸಹಿತ ಇತರ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ.
ಜಗತ್ತಿನ 38 ದೇಶಗಳಲ್ಲಿ ಗರ್ಭಿಣಿಯರನ್ನು ಕೆಲಸದಿಂದ ತೆಗೆದು ಹಾಕಬಹುದು; ವಿಶ್ವಬ್ಯಾಂಕ್
ಬೆಂಗಳೂರು-ಮಂಗಳೂರು ನಡುವೆ ವಾಣಿಜ್ಯ ವ್ಯವಹಾರದ ದೃಷ್ಟಿಯಿಂದ ನಿತ್ಯ ನೂರಾರು ಟ್ಯಾಂಕರ್, ಟ್ರಕ್, ಬಸ್ ಮತ್ತಿತರ ವಾಹನಗಳು ಸಂಚರಿಸುತ್ತಿವೆ. ವಾಹನ ದಟ್ಟಣೆಗೆ ತಕ್ಕನಾಗಿ ರಸ್ತೆ ವ್ಯವಸ್ಥೆ ಇಲ್ಲದೆ ಪದೇಪದೆ ಅಪಘಾತ, 12ರಿಂದ 16 ಗಂಟೆ ಸಂಚಾರ ಸ್ಥಗಿತದಂತಹ ಘಟನೆಯೂ ನಡೆಯುತ್ತಿದೆ. ಹೀಗಾಗಿ ಸುರಂಗ ಮಾರ್ಗ ನಿರ್ಮಾಣ ಸಂಬಂಧ ಭಾರತೀಯ ವಿಜ್ಞಾನ ಸಂಸ್ಥೆಯ ವರದಿ ಆಧರಿಸಿ ನೀಡಿದ ವಿಸ್ಕೃತ ವರದಿ ಅನ್ವಯ ಕೇಂದ್ರ ಅನುಮೋದನೆ ನೀಡಿದೆ. ಪಶ್ಚಿಮಘಟ್ಟ ಅರಣ್ಯ ಪ್ರದೇಶವನ್ನು ಒಳಗೊಂಡಿರುವ ಶಿರಾಡಿ ರಸ್ತೆಯ ಮೂಲಕ ಮಂಗಳೂರು ಬಂದರು ಸಂಪರ್ಕ, ಧರ್ಮಸ್ಥಳ, ಉಡುಪಿ ಸೇರಿದಂತೆ ದಕ್ಷಿಣ ಕನ್ನಡದ ಧಾರ್ಮಿಕ ಕ್ಷೇತ್ರ ಹಾಗೂ ಪ್ರವಾಸಿ ಕ್ಷೇತ್ರದ ಸಂಪರ್ಕಕ್ಕಾಗಿ ಈ ರಸ್ತೆ ಮುಖ್ಯವಾಗಿದೆ.
ಪಶ್ಚಿಮ ಘಟ್ಟ ವ್ಯಾಪ್ತಿಯಲ್ಲಿ ಈ ಯೋಜನೆ ಬರುವುದರಿಂದ ಹಲವು ಕಾನೂನಾತ್ಮಕ ಸಮಸ್ಯೆಗಳಿಂದ ಈ ಯೋಜನೆ ಕಾರ್ಯಗತಗೊಳ್ಳಲು ವಿಳಂಬ ಆಗಿತ್ತು. ಇದೀಗ ಎಲ್ಲ ಸಮಸ್ಯೆಗಳು ಬಗೆಹರಿದಿದ್ದು, ಕೆಲವೇ ವರ್ಷಗಳಲ್ಲಿ ಯೋಜನೆ ಕಾರ್ಯಗತಗೊಳ್ಳುವ ನಿರೀಕ್ಷೆ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ